ಉದಾರೀಕರಣದ ಬೆಳ್ಳಿಹಬ್ಬ: ಶ್ರೀಮಂತ ಭಾರತದಲ್ಲಿ ಹೆಚ್ಚಿದ ಕಂದಕ
ನಿಗದಿತ ರಾಷ್ಟ್ರಸಮೂಹದಲ್ಲಿ ಶ್ರಮಶಕ್ತಿಯ ಮುಕ್ತಹರಿವಿಗೆ ಒಲವು ಇಲ್ಲದಿದ್ದರೂ, ಮುಕ್ತ ವ್ಯಾಪಾರ ಹಾಗೂ ಬಂಡವಾಳದ ಅನಿರ್ಬಂಧಿತ ಚಲನೆಗೆ ಯಾವುದೇ ಅಡೆ ತಡೆ ಇಲ್ಲದ ಪ್ರಸ್ತುತ ಸನ್ನಿವೇಶದಲ್ಲಿ ಯೂರೋಪಿಯನ್ ಒಕ್ಕೂಟದಿಂದ ಹೊರಬರಲು ಬ್ರಿಟನ್ ನಿರ್ಧರಿಸಿರುವುದನ್ನು ಜಾಗತೀಕರಣದ ತಿರಸ್ಕಾರ ಎಂದು ಹಲವರು ಪರಿಗಣಿಸುತ್ತಾರೆ. ಇದೇ ವೇಳೆ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾದ ಭಾರತ, ಜಾಗತೀಕರಣದ ಬೆಳ್ಳಿಹಬ್ಬದ ಸಂಭ್ರಮದಲ್ಲಿದೆ. ಜಾಗತೀಕರಣ ರಾಷ್ಟ್ರೀಯ ಒಟ್ಟು ಆದಾಯ (ಜಿಡಿಪಿ) ಹೆಚ್ಚಿಸಿದ್ದರೂ, ದೇಶದಲ್ಲಿ ಅಲ್ಪಸಂಖ್ಯಾತ ಶ್ರೀಮಂತರು ಮತ್ತು ಬಹುಸಂಖ್ಯಾತ ಬಡವರ ನಡುವಿನ ಕಂದಕವನ್ನು ಮತ್ತಷ್ಟು ಹೆಚ್ಚಿಸಲು ಕಾರಣವಾಗಿದೆ.
ಭಾರತ ಸರಕಾರ 1991ರಲ್ಲಿ ಹೊಸ ಆರ್ಥಿಕ ನೀತಿಯನ್ನು ಜಾರಿಗೆ ತಂದ ನಂತರದ ವರ್ಷಗಳಲ್ಲಿ, ಆರ್ಥಿಕ ಉದಾರೀಕರಣ, ಖಾಸಗೀಕರಣ ಹಾಗೂ ವಿಶ್ವಕ್ಕೆ ಮುಕ್ತವಾಗಿ ತೆರೆದುಕೊಳ್ಳುವ ದೇಶಗಳ ಸಮೂಹದಲ್ಲಿ ಸೇರಿತು. ಜಾಗತೀಕರಣಗೊಳ್ಳುತ್ತಿರುವ ವಿಶ್ವಕ್ಕೆ ನವ ಉದಾರೀಕರಣದ ಮೂಲಕ ಭಾರತ ಪ್ರವೇಶಿಸುತ್ತಿದೆ ಎಂದು ಹೊಸ ಆರ್ಥಿಕ ನೀತಿಯನ್ನು ಪರಿಗಣಿಸಲಾಯಿತು. ಇದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಹಾಗೂ ವಿಶ್ವಬ್ಯಾಂಕ್‌ನ ಪರಿಕಲ್ಪನೆ.
ಸರಕಾರದ ಪಾತ್ರ ಸೀಮಿತ, ಸಬ್ಸಿಡಿಗಳ ಮೇಲಿನ ಸರಕಾರಿ ವೆಚ್ಚ ಕಡಿತ; ಬೆಲೆನಿಯಂತ್ರಣ ಪದ್ಧತಿ ರದ್ದತಿ, ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ; ಶುಲ್ಕಗಳ ಇಳಿಕೆ, ವಿದೇಶಿ ನೇರ ಹೂಡಿಕೆಗೆ ಸ್ವಾಗತ ಹಾಗೂ ಹಣಕಾಸು ವಲಯದ ಮೇಲೆ ಲಘು ನಿಯಂತ್ರಣ ಇವು, ವಾಷಿಂಗ್ಟನ್ ಒಮ್ಮತ ಎಂದೂ ಕರೆಯಲಾಗುವ ಈ ಮಾದರಿಯ ಪ್ರಮುಖ ಗುಣಲಕ್ಷಣ.
ಅಪ್ಪಿಕೋ ಚಳವಳಿ
ಭಾರತದಲ್ಲಿ ಹೊಸ ಆರ್ಥಿಕ ನೀತಿಯ ಶಿಲ್ಪಿಮೊದಲು ಹಣಕಾಸು ಸಚಿವ, ನಂತರ ಪ್ರಧಾನಿಯಾದ ಡಾ.ಮನಮೋಹನ್ ಸಿಂಗ್. ಇವರು ವಿಶ್ವಸಂಸ್ಥೆಯ ಕಾನ್ಫರೆನ್ಸ್ ಆನ್ ಟ್ರೇಡ್ ಆ್ಯಂಡ್ ಡೆವಲಪ್‌ಮೆಂಟ್ ಸಂಸ್ಥೆಯಲ್ಲಿ ಮುಖ್ಯ ವ್ಯಾಪಾರ ಅರ್ಥಶಾಸ್ತ್ರಜ್ಞರಾಗಿ, ಐಎಂಎಫ್ ಹಾಗೂ ವಿಶ್ವಬ್ಯಾಂಕ್ ಜತೆ ಗುರುತಿಸಿಕೊಂಡಿದ್ದವರು. ಇಂದಿನ ಪ್ರಧಾನಿ ನರೇಂದ್ರ ಮೋದಿ ಕೂಡಾ ಹೊಸ ಆರ್ಥಿಕ ನೀತಿಯ ಅನುಷ್ಠಾನಕ್ಕೆ ಸಂಪೂರ್ಣ ಬದ್ಧರಾಗಿದ್ದಾರೆ.
ಹೊಸ ನೀತಿ ಅನುಸರಿಸಿದ ಪರಿಣಾಮ, 1991ರ ಪೂರ್ವದಲ್ಲಿದ್ದ ಆರ್ಥಿಕ ಪ್ರಗತಿ ಪ್ರಮಾಣ ಶೇ. 3-5ರ ಪರಿಧಿಯಿಂದ ಹೊರಬರಲು ಸಾಧ್ಯವಾಯಿತು. ಆದರೆ ಹೆಚ್ಚುವರಿ ಆದಾಯದ ಮರುಹಂಚಿಕೆ ಮಾತ್ರ ತಿರುಚಲ್ಪಟ್ಟಿತು. ಇದಕ್ಕೂ ಮುನ್ನ ಸ್ಥಿತಿವಂತರಾಗಿದ್ದವರು ತಮ್ಮ ಜೀವನಮಟ್ಟವನ್ನು ಮತ್ತಷ್ಟು ಸುಧಾರಿಸಿಕೊಂಡರು. ಆದರೆ ಬಡತನದಲ್ಲೇ ಇದ್ದ ದೊಡ್ಡ ಸಮುದಾಯ ಮಾತ್ರ ಅದೇ ಸ್ಥಿತಿಯಲ್ಲಿ ತಟಸ್ಥವಾಯಿತು ಅಥವಾ ಮತ್ತಷ್ಟು ಬಡತನದ ಕೂಪಕ್ಕೆ ತಳ್ಳಲ್ಪಟ್ಟಿತು.
ಭಾರತ ಜಾಗತೀಕರಣವನ್ನು ಅಪ್ಪಿ ಕೊಂಡದ್ದು, ಅಂತಾರಾಷ್ಟ್ರೀಯ ಸಂಕಷ್ಟದ ಪರಿಸ್ಥಿತಿಯ ಹಿನ್ನೆಲೆಯಲ್ಲಿ. 1990ರ ಆಗಸ್ಟ್‌ನಲ್ಲಿ ಕುವೈಟ್‌ನ ಮೇಲೆ ಇರಾಕ್ ದಾಳಿ ನಡೆಸಿ, ವಶಪಡಿ ಸಿಕೊಂಡಿತು. ಇದರಿಂದ ಅವರ ಪೆಟ್ರೋಲಿಯಂ ರಫ್ತು ನಷ್ಟವಾಗಿ, ತೈಲಬೆಲೆ ಗಗನಮುಖಿ ಯಾಯಿತು. ಗಲ್ಫ್‌ದೇಶಗಳಲ್ಲಿ ಬಹುಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದ ಶ್ರಮಿಕ ವರ್ಗದ ಪಾವತಿ ಮಟ್ಟ ಕುಸಿಯಿತು.
1991ರ ವಸಂತದ ವೇಳೆಗೆ, ಭಾರತದ ವಿದೇಶಿ ವಿನಿಮಯ ದಾಸ್ತಾನು 121 ಕೋಟಿ ಡಾಲರ್‌ಗೆ ಕುಸಿಯಿತು. ಅಂದರೆ ಕೇವಲ ಎರಡು ವಾರಗಳ ಆಮದಿಗೆ ಸಾಕಾಗುವಷ್ಟು ಪ್ರಮಾಣ ಮಾತ್ರ ಇತ್ತು. ಸಾಲ ಮರುಪಾವತಿಯ ಸಾಧ್ಯತೆಗಳೂ ಇಲ್ಲದೆ ದೈನ್ಯದಿಂದ ಐಎಂಎಫ್ ಮುಂದೆ ಭಾರತ ಕೈಚಾಚಬೇಕಾಯಿತು. ಸಹಜವಾಗಿಯೇ ಐಎಂಎಫ್ ಒಂದಷ್ಟು ಷರತ್ತುಗಳೊಂದಿಗೆ ಸಹಾಯಹಸ್ತ ಚಾಚಿತು.ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಮುಕ್ತಮಾರುಕಟ್ಟೆ ಪ್ರತಿಪಾದಕರು ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರಿಗೆ, ಆರ್ಥಿಕತೆಯಲ್ಲಿ ದೂರಗಾಮಿ ಪರಿಣಾಮದ ಆಮೂಲಾಗ್ರ ಸುಧಾರಣೆಗಳನ್ನು ತರುವಂತೆ ಒತ್ತಡ ಹೇರಿದರು. ಇದರಿಂದ ಸರಕಾರ ಆಮದು ಮಿತಿಯನ್ನು ರದ್ದು ಮಾಡಿತು. ಶೇ. 100ರಷ್ಟಿದ್ದ ಆಮದು ಸುಂಕವನ್ನು ಶೇ. 25 ರಿಂದ 35ರ ಆಸುಪಾಸಿಗೆ ಇಳಿಸಿತು. ರಕ್ಷಣಾ ವಲಯ ಮತ್ತು ದೇಶದ ಪ್ರಮುಖ ವಲಯ ಹೊರತುಪಡಿಸಿ ಉಳಿದೆಲ್ಲ ಉದ್ದಿಮೆಗಳಿಗೆ ಲೈಸನ್ಸಿಂಗ್ ಪದ್ಧತಿ ರದ್ದು ಮಾಡಿತು. ಸಾರ್ವಜನಿಕ ವಲಯದ ಏಕಸ್ವಾಮ್ಯ ಕೇವಲ ಭದ್ರತೆ, ರಾಷ್ಟ್ರೀಯ ಮಹತ್ವದ ಉದ್ದಿಮೆ, ಅಣುಶಕ್ತಿ ಮತ್ತು ರೈಲ್ವೆ ವಲಯಕ್ಕಷ್ಟೇ ಸೀಮಿತವಾಯಿತು. ಬ್ಯಾಂಕಿಂಗ್, ವಿಮೆ, ದೂರಸಂಪಕರ್ ಮತ್ತು ವಾಯುಯಾನದಲ್ಲಿ ಖಾಸಗಿ ಹೂಡಿಕೆಗೆ ಅವಕಾಶ ನೀಡಲಾಯಿತು. 34 ಕೈಗಾರಿಕೆಗಳಲ್ಲಿ ವಿದೇಶಿ ಕಂಪೆನಿಗಳು ಶೇ. 51ರಷ್ಟು ಪಾಲು ಬಂಡವಾಳ ಹೊಂದಲು ಅವಕಾಶ ನೀಡಲಾಯಿತು.
ಕ್ಷಿಪ್ರ ವಿಸ್ತರಣೆ ಮತ್ತು ಐಟಿ ಉಬ್ಬರ
ಫಲಿತಾಂಶ ಎದ್ದುಕಾಣುವಂತಿತ್ತು. 1991 ರಿಂದ 1996ರ ಅವಧಿಯಲ್ಲಿ ಸರಾಸರಿ ಜಿಡಿಪಿ ವಿಸ್ತರಣೆ ಪ್ರಮಾಣ ಶೇ. 6.7ರಷ್ಟಿತ್ತು. ಭಾರತದ ವಿದೇಶಿ ವಿನಿಮಯ ದಾಸ್ತಾನು 22.74 ಶತಕೋಟಿ ಡಾಲರ್‌ಗೆ ಹೆಚ್ಚಿತು.
ಇಷ್ಟಾಗಿಯೂ, 2000ನೆ ಇಸ್ವಿಯ ಬಳಿಕ ವಿಸ್ತರಣೆ ಮತ್ತಷ್ಟು ವೇಗ ಪಡೆಯಿತು. ಆರ್ಥಿಕ ಉದಾರೀಕರಣದ ಜತೆಗೆ, ಸ್ವತಂತ್ರ ಆಂತರಿಕ ನೀತಿಗಳಲ್ಲದೆ ಇತರ ಹಲವಾರು ಬಾಹ್ಯ ಅಂಶಗಳು ಪ್ರಭಾವ ಬೀರಲು ಆರಂಭಿಸಿದವು. ಒಂದು ಮೊಬೈಲ್ ಫೋನ್ ಆಗಮನ ಹಾಗೂ ಇನ್ನೊಂದು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಹೈಟೆಕ್ ಕ್ರಾಂತಿ.
ಮೊಬೈಲ್ ಬಳಕೆಯ ಪ್ರಗತಿ ಅದ್ಭುತ. 2001ರಲ್ಲಿ 37 ದಶಲಕ್ಷ ಇದ್ದ ಮೊಬೈಲ್ ಗ್ರಾಹಕರ ಸಂಖ್ಯೆ ಹತ್ತು ವರ್ಷದಲ್ಲಿ 846 ದಶಲಕ್ಷಕ್ಕೇರಿತು. ಕಳೆದ ವರ್ಷ ಇದು ನೂರು ಕೋಟಿ ದಾಟಿದೆ. ಮೊಬೈಲ್ ಫೋನ್ ಸಾಂದ್ರತೆ ಸಹಜವಾಗಿಯೇ ಆರ್ಥಿಕ ವಿಸ್ತರಣೆ ಮೇಲೆ ಪ್ರಭಾವ ಬೀರಿತು. ಅಂತಾರಾಷ್ಟ್ರೀಯ ಆರ್ಥಿಕ ಸಂಬಂಧಗಳ ಭಾರತೀಯ ಸಂಶೋಧನಾ ಮಂಡಳಿ ನಡೆಸಿದ ಒಂದು ಅಧ್ಯಯನದ ಪ್ರಕಾರ, ಅಧಿಕ ಮೊಬೈಲ್ ಗ್ರಾಹಕರನ್ನು ಹೊಂದಿದ್ದ ಶೇ. 10ರಷ್ಟು ರಾಜ್ಯಗಳು ಇತರ ರಾಜ್ಯಗಳಿಗಿಂತ ಶೇ. 1.2ರಷ್ಟು ಅಧಿಕ ಆರ್ಥಿಕ ಪ್ರಗತಿ ದಾಖಲಿಸಿದ್ದವು.
ಮಾಹಿತಿ ತಂತ್ರಜ್ಞಾನ ಹಾಗೂ ಸಂಬಂಧಿತ ವಹಿವಾಟು ಪ್ರಕ್ರಿಯೆಗಳಾದ ಹೊರಗುತ್ತಿಗೆ ವಲಯ ಕೂಡಾ ಭಾರತಕ್ಕೆ ವರದಾನವಾಯಿತು. ದೇಶದ ವಿದೇಶಿ ವಿನಿಮಯ ಗಳಿಕೆ ಹೆಚ್ಚಳಕ್ಕೆ ಕಾರಣವಾಯಿತು. ಹೊಸ ಸಹಸ್ರಮಾನದ ಆರಂಭದಲ್ಲಿ ಎಲ್ಲ ಕಂಪ್ಯೂಟರ್ ಮಾಹಿತಿಗಳೂ ವೈ2ಕೆ ಬಗ್‌ನಿಂದ ನಾಶವಾಗುತ್ತವೆ ಎಂಬ ಭೀತಿ ಭಾರತದ ಟೆಕ್ಕಿಗಳಿಗೆ ನೆಲೆ ಒದಗಿಸಿತು. ಈ ಸಹಸ್ರಮಾನದ ವೈರಸ್‌ನಿಂದ ಕಂಪ್ಯೂಟರ್‌ಗಳನ್ನು ರಕ್ಷಿಸಲು ಭಾರತೀಯ ಐಟಿ ಕಂಪೆನಿಗಳು ವಿಧಿಸುವ ಶುಲ್ಕ, ಇತರ ಪಾಶ್ಚಾತ್ಯ ಕಂಪೆನಿಗಳು ವಿಧಿಸುತ್ತಿದ್ದ ಶುಲ್ಕದ ಹತ್ತನೆ ಒಂದು ಪಾಲು ಎಂದು ವಿದೇಶೀಯರು ಕಂಡುಕೊಂಡ ಹಿನ್ನೆಲೆಯಲ್ಲಿ ಭಾರತೀಯ ಟೆಕ್ಕಿಗಳಿಗೆ ಸುಗ್ಗಿಕಾಲ ಬಂತು.
ಇಂತಹ ಅಭೂತಪೂರ್ವ ಬೇಡಿಕೆ ಹಿನ್ನೆಲೆಯಲ್ಲಿ ಭಾರತೀಯ ಕಂಪೆನಿಗಳು, ನಿಗದಿತ ಅವಧಿಯಲ್ಲಿ ಕೆಲಸ ಮುಗಿಸಿಕೊಡಲು ಹಗಲು ರಾತ್ರಿ ಶ್ರಮಿಸಿದವು. 1998-99ರಲ್ಲಿದ್ದ ಭಾರತದ ಐಟಿ ಸೇವೆಗಳ ರಫ್ತು ಪ್ರಮಾಣ ಕೇವಲ ಎರಡು ವರ್ಷಗಳಲ್ಲಿ ದುಪ್ಪಟ್ಟಾಯಿತು. ಆ ಬಳಿಕ ಈ ವಲಯದ ರಫ್ತು, ಒಟ್ಟು ವಹಿವಾಟಿನ ಶೇ. 75ರಷ್ಟಿದೆ. ಐಟಿ ವಲಯ ದೇಶದ ರಫ್ತಿಗೆ 1998-99ರಲ್ಲಿ ಶೇ. 4ರಷ್ಟು ಕೊಡುಗೆ ನೀಡುತ್ತಿದ್ದರೆ, 2012-13ರ ಅವಧಿಯಲ್ಲಿ ಇದು ಶೇ. 25ಕ್ಕೆ ತಲುಪಿದೆ.
ಆದರೆ ಐಟಿ ವಲಯವನ್ನು ಉದ್ಯೋಗಕ್ಕಾಗಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅವಲಂಬಿಸಿರುವವರ ಸಂಖ್ಯೆ 12.5 ದಶಲಕ್ಷ ಆಗಿದ್ದು, ಇದು ದೇಶದ ಒಟ್ಟು ಶ್ರಮಶಕ್ತಿಯ ಶೇ. 2.5ರಷ್ಟು ಮಾತ್ರ. 125 ಕೋಟಿ ಜನಸಂಖ್ಯೆಯ ದೇಶದಲ್ಲಿ ಸುಮಾರು 496 ದಶಲಕ್ಷ ಮಂದಿ ಕೈಗಾರಿಕಾ ವಲಯವನ್ನು ಅವಲಂಬಿಸಿದ್ದಾರೆ.
ವಾಸ್ತವ ಸತ್ಯಗಳು
ಆದರೆ ಗಮನಿಸಬೇಕಾದ ಅಂಶವೆಂದರೆ ಭಾರತ ಕೃಷಿಪ್ರಧಾನ ಸಮಾಜ. ಪ್ರತೀ 10 ಮಂದಿಯ ಪೈಕಿ 7 ಮಂದಿ ಗ್ರಾಮಗಳಲ್ಲಿ ವಾಸಿಸುವವರು. ದೇಶದ ಶ್ರಮಶಕ್ತಿಯ ಅರ್ಧಕ್ಕಿಂತಲೂ ಹೆಚ್ಚು ಮಂದಿ ಕೃಷಿ ಹಾಗೂ ಸಂಬಂಧಿತ ಚಟುವಟಿಕೆಗಳನ್ನು ಅವಲಂಬಿಸಿದ್ದಾರೆ.
ಐಎಂಎಫ್ ಸಾಲದ ಅಂಗವಾಗಿ ಭಾರತ ತನ್ನ ವಿತ್ತೀಯ ಕೊರತೆ ಪ್ರಮಾಣವನ್ನು ಜಿಡಿಪಿಯ ಶೇ. 8.2ಕ್ಕೆ ಇಳಿಸಬೇಕಿತ್ತು. ಇದರಿಂದಾಗಿ ನರಸಿಂಹ ರಾವ್ ಸರಕಾರ ನೀರಾವರಿ, ನೀರು ನಿರ್ವಹಣೆ, ಪ್ರವಾಹ ನಿಯಂತ್ರಣ, ವೈಜ್ಞಾನಿಕ ಸಂಶೋಧನೆ, ವಿದ್ಯುತ್ ಉತ್ಪಾದನೆ ಹಾಗೂ ಗ್ರಾಮೀಣ ಅಗತ್ಯತೆಯ ಯೋಜನೆಗಳಿಗೆ ಅನುದಾನವನ್ನು ಗಣನೀಯವಾಗಿ ಕಡಿಮೆ ಮಾಡಿತು. ಬಳಿಕ ಐಎಂಎಫ್ ಹಾಗೂ ವಿಶ್ವ ವ್ಯಾಪಾರ ಸಂಸ್ಥೆಯ ಒತ್ತಡದಿಂದಾಗಿ, ಭಾರತ ಮಾರುಕಟ್ಟೆ ನಿಯಂತ್ರಣ ಸಡಿಲಿಸಲು ಮತ್ತು ಕೃಷಿ ಪರಿಕರಗಳ, ರಸಗೊಬ್ಬರ ಹಾಗೂ ಡೀಸೆಲ್ ಸಬ್ಸಿಡಿ ಕಡಿತಗೊಳಿಸಲು ಮುಂದಾಯಿತು.
ಐಎಂಎಫ್ ಹಾಗೂ ವಿಶ್ವ ವ್ಯಾಪಾರ ಸಂಸ್ಥೆ ರಫ್ತು ನಿರ್ದೇಶಿತ ಪ್ರಗತಿಗೆ ಒತ್ತು ನೀಡಿದ ಹಿನ್ನೆಲೆಯಲ್ಲಿ ಬೇಸಾಯ ಪದ್ಧತಿ ಕೂಡಾ ಆಹಾರಧಾನ್ಯದಿಂದ ರಸಗೊಬ್ಬರ ಅಧಿಕವಾಗಿ ಬೇಕಾಗುವ ನಗದು ಬೆಳೆಗಳಾದ ಹತ್ತಿ, ಕಾಫಿ, ಕಬ್ಬು, ನೆಲಗಡಲೆ, ಕಾಳುಮೆಣಸು, ವೆನಿಲ್ಲಾದತ್ತ ಬದಲಾಯಿತು. ಇದರ ಪರಿಣಾಮವಾಗಿ 1991ರಲ್ಲಿ ಲಭ್ಯವಾಗುತ್ತಿದ್ದ ತಲಾ ಆಹಾರ ಪ್ರಮಾಣ 510 ಗ್ರಾಂಗಳಿಂದ 2005ರವೇಳೆಗೆ 422 ಗ್ರಾಂಗಳಿಗೆ ಇಳಿಯಿತು. ಗ್ರಾಮೀಣ ಅಭಿವೃದ್ಧಿಯಲ್ಲಿ ಆದ ಕೊರತೆ ಮತ್ತು ಬಡತನ ನಿರ್ಮೂಲನೆ ಯೋಜನೆಯ ನಿರ್ಲಕ್ಷ್ಯದಿಂದಾಗಿ ಸಹಜವಾಗಿಯೇ ಅಪೌಷ್ಟಿಕತೆ ವ್ಯಾಪಕವಾಯಿತು.
ರಾಷ್ಟ್ರೀಯ ಪೌಷ್ಟಿಕಾಂಶ ಮೇಲುಸ್ತುವಾರಿ ಬ್ಯೂರೊ 2009ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ಶೇ. 35ರಷ್ಟು ಮಂದಿ ಭಾರತೀಯರು ತೀವ್ರ ಹಸಿವಿನಿಂದ ಬಳಲುತ್ತಿದ್ದಾರೆ ಎಂಬ ಅಂಶ ಬೆಳಕಿಗೆ ಬಂತು. ದೇಹ- ತೂಕ ಸೂಚಕದಿಂದ ಈ ಅಧ್ಯಯನ ಮಾಡಲಾಯಿತು. ಹೊಸ ಆರ್ಥಿಕ ನೀತಿ ಜಾರಿಗೆ ಬಂದ ಮೊದಲ ಒಂದು ದಶಕದಲ್ಲಿ, ಸಾಲ ಹೊಂದಿದ ಕೃಷಿ ಕುಟುಂಬಗಳು ದುಪ್ಪಟ್ಟಾದವು. ಅಂದರೆ ಶೇ.26ರಿಂದ 48.6ಕ್ಕೆ ಹೆಚ್ಚಿದವು. ಆಸ್ತಿಗಳಿಗೆ ಹೋಲಿಸಿದರೆ ಸಾಲದ ಅನುಪಾತ 1.6ರಿಂದ 2.4ಕ್ಕೆ ಹೆಚ್ಚಿತು. ಈ ಪ್ರವೃತ್ತಿ ಮುಂದುವರಿದಿದ್ದು, ಸಾಲದ ಶೂಲದಲ್ಲಿ ಸಿಕ್ಕಿಹಾಕಿಕೊಂಡ ರೈತರು ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾರೆ.
ಆರ್ಥಿಕತೆಯ ಮತ್ತೊಂದು ಮಗ್ಗುಲಲ್ಲಿ, ಭಾರತದ ಶತಕೋಟಿ ಡಾಲರ್ ಅಧಿಪತಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. 2004ರಿಂದ 2015ರ ಅವಧಿಯಲ್ಲಿ ಈ ಸಂಖ್ಯೆ 13 ರಿಂದ 111ಕ್ಕೆ ಹೆಚ್ಚಿದೆ. ಅಮೆರಿಕ ಹಾಗೂ ಚೀನಾ ಹೊರತುಪಡಿಸಿದರೆ ಭಾರತದಲ್ಲಿ ಅತಿಹೆಚ್ಚಿನ ಸಂಖ್ಯೆಯ ಶತಕೋಟಿ ಡಾಲರ್ ಅಧಿಪತಿಗಳಿದ್ದಾರೆ ಎಂದು ಚೀನಾದ ಹ್ಯೂರನ್ ನಿಯತಕಾಲಿಕ ಬಿಡುಗಡೆ ಮಾಡಿದ ಪಟ್ಟಿಯಿಂದ ತಿಳಿದುಬರುತ್ತದೆ. ಕಳೆದ ವರ್ಷದ ವೇಳೆಗೆ ಭಾರತದಲ್ಲಿ ದಶಲಕ್ಷ ಡಾಲರ್ ಸಂಪತ್ತು ಹೊಂದಿದವರ ಸಂಖ್ಯೆ ಭಾರತ ದಲ್ಲಿ 2.5 ಲಕ್ಷ ಗಡಿ ದಾಟಿದೆ.
ಈ ಗಂಭೀರ ಅಸಮಾನತೆಯಿಂದ ಉದ್ಭವಿಸಿದ ಸಾಮಾಜಿಕ ಸಂಘರ್ಷವನ್ನು ತಣ್ಣಗಾಗಿ ಸುವ ಸಲುವಾಗಿ, ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರಕಾರಗಳು, ನಿಯತವಾಗಿ ಸಂಪತ್ತಿನ ಮರುಹಂಚಿಕೆಗೆ ಮಧ್ಯಪ್ರವೇಶಿಸಲೇಬೇಕಾಗುತ್ತದೆ. ಇದಕ್ಕೆ ಪೂರಕವಾಗಿ ಬಹುಸಂಖ್ಯಾತ ಬಡವರಿಗೆ ಅನುಕೂಲವಾಗುವ ಕಾನೂನುಗಳನ್ನು ಜಾರಿಗೊಳಿಸಬೇಕಾಗುತ್ತದೆ. ಉದಾಹರಣೆಗೆ 2006ರಲ್ಲಿ, 59 ಮಂದಿ ಕಮ್ಯುನಿಸ್ಟ್ ಸಂಸದರ ಒತ್ತಡದಿಂದಾಗಿ, ಸಿಂಗ್ ಸರಕಾರ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕಾಯ್ದೆಯನ್ನು ಅಂಗೀಕರಿಸಿತು. ಇದರ ಅನ್ವಯ ಗ್ರಾಮೀಣ ಮೂಲಸೌಕರ್ಯ ದುರಸ್ತಿಗಾಗಿ ಪ್ರತೀ ಗ್ರಾಮೀಣ ಕುಟುಂಬಗಳಿಗೂ ವಾರ್ಷಿಕ 100 ದಿನಗಳ ಉದ್ಯೋಗ ಖಾತ್ರಿಯನ್ನು ನೀಡುವ ಯೋಜನೆ ಇದು.
2013ರಲ್ಲಿ ಸಿಂಗ್ ಸರಕಾರ, ಎಡಪಕ್ಷಗಳು, ಕಾರ್ಮಿಕ ಸಂಘಟನೆಗಳು ಮತ್ತು ಸ್ವಯಂಸೇವಾ ಸಂಸ್ಥೆಗಳ ಒತ್ತಡದಿಂದಾಗಿ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೆ ತಂದಿತು. ಇದರ ಅನ್ವಯ ಭಾರತದ ಶೇ. 66ರಷ್ಟು ಮಂದಿಗೆ ಸಬ್ಸಿಡಿ ದರದಲ್ಲಿ ಆಹಾರಧಾನ್ಯ ವಿತರಿಸಲಾಗುತ್ತದೆ. ಈ ಯೋಜನೆಗಳನ್ನು ಮೋದಿ ಸರಕಾರ ಕೂಡಾ ಅಲ್ಪಪ್ರಮಾಣದಲ್ಲಾದರೂ ಮುಂದುವರಿಸಿದೆ. ಈ ಮೂಲಕ ಭಾರತದ ಹಳ್ಳಿಗಳಲ್ಲಿ ಋತುಮಾನಕ್ಕೆ ಅನುಗುಣವಾದ ದೊಡ್ಡಪ್ರಮಾಣದ ಹಸಿವಿನ ಸಮಸ್ಯೆಗೆ ಪರಿಹಾರ ಕಲ್ಪಿಸಿದೆ.
ಹೊಸ ಆರ್ಥಿಕ ನೀತಿಯ ಕಾಲು ಶತಮಾನದ ಪಯಣವನ್ನು ಸಿಂಹಾವಲೋಕನ ಮಾಡಿದರೆ, ಆ ಹಾದಿ ಸುಲಲಿತವಲ್ಲ ಎನ್ನುವುದು ಸ್ಪಷ್ಟವಾಗಿ ವೇದ್ಯವಾಗುತ್ತದೆ. ಅಸಮಾನತೆಯ ಬೆಲೆ ತೆತ್ತು ಜಿಡಿಪಿ ಪ್ರಗತಿಯಾಗುತ್ತಿದೆ. ಹೊಸ ಆರ್ಥಿಕ ನೀತಿಗೆ ತಳಮಟ್ಟದ ಪ್ರತಿರೋಧ ಮರುಕಳಿಸುತ್ತಿದೆ. ಇಷ್ಟಾಗಿಯೂ ದೇಶದ ಎರಡು ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಇದೇ ಹಾದಿಯಲ್ಲಿ ಮುನ್ನಡೆಯುತ್ತಿವೆ