ಟರ್ಕಿ : ಪ್ರಜಾಪ್ರಭುತ್ವಕ್ಕಾಗಿ ಜನರನ್ನು ಒಗ್ಗೂಡಿಸಲು 85,000 ಮಸೀದಿಗಳಿಂದ ಏಕಕಾಲಕ್ಕೆ ಕರೆ, ಪ್ರಾರ್ಥನೆ
ಅಂಕಾರ, ಜು. 17: ತನ್ನ ಪ್ರಜಾಸತ್ತೆಯನ್ನು ರಕ್ಷಿಸಿಕೊಳ್ಳಲು ಟರ್ಕಿಗೆ ಶಕ್ತಿ ನೀಡುವಂತೆ ಕೋರಿ ಹಾಗೂ ವಿಫಲ ಕ್ಷಿಪ್ರಕ್ರಾಂತಿಯಲ್ಲಿ ಮೃತಪಟ್ಟವರ ಗೌರವಾರ್ಥವಾಗಿ ದೇಶದ 85,000 ಮಸೀದಿಗಳಲ್ಲಿ ರವಿವಾರ ಮಧ್ಯಾಹ್ನ ಏಕಕಾಲದಲ್ಲಿ ಪ್ರಾರ್ಥನೆ ನಡೆಸಲಾಯಿತು.
ಸಾಮಾನ್ಯವಾಗಿ ಶವ ಸಂಸ್ಕಾರಗಳ ವೇಳೆ ಸೆಲ ಪ್ರಾರ್ಥನೆಗಳನ್ನು ನಡೆಸಲಾಗುತ್ತದೆ. ಆದಾಗ್ಯೂ, ಜನರನ್ನು ಒಗ್ಗೂಡಿಸುವುದಕ್ಕಾಗಿಯೂ ಅಂಥ ಪ್ರಾರ್ಥನಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ.
ಶುಕ್ರವಾರ ರಾತ್ರಿ ನಡೆದ ವಿಫಲ ಕ್ಷಿಪ್ರ ಕ್ರಾಂತಿಯ ವೇಳೆಯೂ, ದಂಗೆಕೋರರ ವಿರುದ್ಧ ಜನರನ್ನು ಸಂಘಟಿಸುವುದಕ್ಕಾಗಿ ರಾತ್ರಿಯಿಡೀ ಸೆಲಾ ಪ್ರಾರ್ಥನೆಗಳನ್ನು ದೇಶಾದ್ಯಂತದ ಮಸೀದಿಗಳಿಂದ ನಡೆಸಲಾಗಿತ್ತು.
‘‘ಜನರತ್ತ ಗುರಿಯಿರಿಸಲಾದ ಟ್ಯಾಂಕ್‌ಗಳ ಅಬ್ಬರದಿಂದ ಹಾಗೂ ತಲೆಯ ಮೇಲೆ ಹಾರಾಡಿದ ಎಫ್-16 ವಿಮಾನಗಳ ಸದ್ದಿನಿಂದ ಬೆಚ್ಚದ ಈ ದೇಶದಲ್ಲಿ ಸೆಲ ಪ್ರಾರ್ಥನೆಯ ಸದ್ದಿನಿಂದ ಕಸಿವಿಸಿಗೊಳ್ಳುವವರು ಯಾರೂ ಇಲ್ಲ. ಈ ಸಂಪ್ರದಾಯ ಮುಂದುವರಿಯುತ್ತದೆ’’ ಎಂದು ಧಾರ್ಮಿಕ ವ್ಯವಹಾರಗಳ ನಿರ್ದೇಶನಾಲಯದ ಅಧ್ಯಕ್ಷ ಮುಹಮ್ಮದ್ ಗೋರ್ಮೆಝ್ ಖಾಸಗಿ ಟಿವಿಯೊಂದಕ್ಕೆ ಹೇಳಿದರು.
ಶುಕ್ರವಾರ ರಾತ್ರಿ ಲಕ್ಷಾಂತರ ಜನರು ಪ್ರಜಾಸತ್ತೆಯ ಪರವಾಗಿ ಹಾಗೂ ದೇಶದ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್‌ಗೆ ಬೆಂಬಲ ಸೂಚಿಸಿ ದೇಶದ ಬೀದಿಗಳಲ್ಲಿ ಘೋಷಣೆಗಳನ್ನು ಕೂಗುತ್ತಾ, ಕುಣಿಯುತ್ತಾ ಹಾಗೂ ಧ್ವಜಗಳನ್ನು ಬೀಸುತ್ತಾ ಸಾಗಿದರು.