ಟರ್ಕಿ ವಿಫಲ ಕ್ಷಿಪ್ರಕ್ರಾಂತಿ: 6,000 ಬಂಧನ
ಇಸ್ತಾಂಬುಲ್, ಜು. 17: ಟರ್ಕಿಯಲ್ಲಿ ಶುಕ್ರವಾರ ರಾತ್ರಿ ನಡೆದ ಕ್ಷಿಪ್ರ ಕ್ರಾಂತಿ ಯತ್ನ ವಿಫಲಗೊಂಡಿರುವ ಬೆನ್ನಿಗೇ, ಸೇನಾ ಕ್ರಾಂತಿಯಲ್ಲಿ ಭಾಗಿಯಾಗಿದ್ದಾರೆಂದು ಶಂಕಿಸಲಾದ ವ್ಯಕ್ತಿಗಳ ವಿರುದ್ಧ ಬೃಹತ್ ಕಾರ್ಯಾಚರಣೆ ಆರಂಭಗೊಂಡಿದೆ. ಸೇನಾ ಜನರಲ್‌ಗಳು ಸೇರಿದಂತೆ ಸುಮಾರು 6,000 ಮಂದಿಯನ್ನು ರವಿವಾರ ಬಂಧಿಸಲಾಗಿದೆ.
ಸುಮಾರು 6,000 ಮಂದಿಯನ್ನು ಬಂಧಿಸಲಾಗಿದೆ ಹಾಗೂ ಈ ಸಂಖ್ಯೆ ಹೆಚ್ಚಾಗುತ್ತದೆ ಎಂಬುದಾಗಿ ಟರ್ಕಿ ಕಾನೂನು ಸಚಿವ ಬೆಕಿರ್ ಬೊಝ್ಡಾಗ್ ರವಿವಾರ ತಿಳಿಸಿದರು.
‘‘ಶುದ್ಧೀಕರಣ ಕಾರ್ಯಾಚರಣೆ ಚಾಲ್ತಿಯಲ್ಲಿದೆ’’ ಎಂದು ಸಚಿವರು ಹೇಳಿರುವುದಾಗಿ ಸರಕಾರಿ ಒಡೆತನದ ಅನಡೊಲು ವಾರ್ತಾ ಸಂಸ್ಥೆ ವರದಿ ಮಾಡಿದೆ.
ಶುಕ್ರವಾರ ರಾತ್ರಿ ಸೇನೆಯ ಬಣವೊಂದು ದೇಶದ ಅಧಿಕಾರವನ್ನು ವಹಿಸಲು ನಡೆಸಿದ ಕ್ಷಿಪ್ರಕ್ರಾಂತಿಯಲ್ಲಿ 161 ನಾಗರಿಕರು ಮತ್ತು ಸರಕಾರ ನಿಷ್ಠ ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸರಕಾರ ತಿಳಿಸಿದೆ.
ಸೇನಾ ದಂಗೆಯಲ್ಲಿ ಪಾಲ್ಗೊಂಡಿದ್ದ 100ಕ್ಕೂ ಅಧಿಕ ಸಂಚುಕೋರರೂ ಹತರಾಗಿದ್ದಾರೆ ಎಂದು ಸಚಿವರು ಹೇಳಿದರು.
ಪ್ರಧಾನಿಯಾಗಿ ಹಾಗೂ ಈಗ ಅಧ್ಯಕ್ಷರಾಗಿ ಒಟ್ಟು 13 ವರ್ಷಗಳ ಕಾಲ ಆಳ್ವಿಕೆ ನಡೆಸಿದ ರಿಸೆಪ್ ತಯ್ಯಿಪ್ ಎರ್ದೊಗಾನ್‌ಗೆ ಎದುರಾದ ಬಹದೊಡ್ಡ ಸವಾಲು ಈ ಸೇನಾ ದಂಗೆಯಾಗಿದೆ. ಆದರೆ, ಸಂಚುಕೋರರನ್ನು ಎದುರಿಸಲು ತನ್ನ ಬೆಂಬಲಿಗರನ್ನು ಬೀದಿಗಿಳಿಯುವಂತೆ ಮಾಡುವ ಮೂಲಕ ಸಂಚನ್ನು ಅವರು ವಿಫಲಗೊಳಿಸಿದರು.
‘‘ಪ್ರಜಾಸತ್ತೆಯ ವಿಜಯ’’ವನ್ನು ಆಚರಿಸಲು ಶನಿವಾರ ರಾತ್ರಿ ನಗರಗಳ ಚೌಕಗಳಿಗೆ ಹರಿದುಬರುವಂತೆ ತನ್ನ ಬೆಂಬಲಿಗರಿಗೆ ಎರ್ದೊಗಾನ್ ಮತ್ತೆ ಕರೆ ನೀಡಿದ ಹಿನ್ನೆಲೆಯಲ್ಲಿ ಸಾವಿರಾರು ಜನರು ಮತ್ತೆ ಬೀದಿಗಿಳಿದರು. ಅಂಕಾರ, ಇಸ್ತಾಂಬುಲ್, ಇಝ್ಮಿರ್ ಮುಂತಾದ ನಗರಗಳಲ್ಲಿ ಜನರು ಬೃಹತ್ ಸಂಖ್ಯೆಯಲ್ಲಿ ರಾಷ್ಟ್ರಧ್ವಜಗಳನ್ನು ಬೀಸುತ್ತಾ ಬೀದಿಗಿಳಿದರು.
ಪ್ರಜಾಪ್ರಭುತ್ವದ ಕಾವಲಿಗಾಗಿ ಬೀದಿಗಳಲ್ಲೇ ಉಳಿಯುವಂತೆ ಟರ್ಕಿಯ ಯುರೋಪ್ ಸಚಿವ ಉಮರ್ ಸೆಲಿಕ್ ಟ್ವಿಟರ್‌ನಲ್ಲಿ ಜನರನ್ನು ಒತ್ತಾಯಿಸಿದ್ದಾರೆ.
34 ಜನರಲ್‌ಗಳ ಬಂಧನ
ಸೇನೆಯಲ್ಲಿ ವಿವಿಧ ದರ್ಜೆಗಳನ್ನು ಹೊಂದಿರುವ 34 ಜನರಲ್‌ಗಳನ್ನು ಈವರೆಗೆ ಬಂಧಿಸಲಾಗಿದೆ ಎಂದು ಎನ್‌ಟಿವಿ ಟೆಲಿವಿಶನ್ ಹೇಳಿದೆ.
ಬಂಧಿತರಲ್ಲಿ ಥರ್ಡ್ ಆರ್ಮಿಯ ಕಮಾಂಡರ್‌ಎರ್ದಲ್ ಒಝ್‌ಟರ್ಕ್ ಮತ್ತು ಮಲಾತ್ಯದಲ್ಲಿರುವ ಸೆಕಂಡ್ ಆರ್ಮಿಯ ಕಮಾಂಡರ್ ಆದಂ ಹುಡುಟಿ ಸೇರಿದ್ದಾರೆ.
ಇಂದು ಮುಂಜಾನೆ ನಡೆಸಲಾದ ಕಾರ್ಯಾಚರಣೆಯಲ್ಲಿ, ಪಶ್ಚಿಮದ ಪಟ್ಟಣ ಡೆನಿಝ್ಲಿಯಲ್ಲಿರುವ ಗ್ಯಾರಿಸನ್‌ನ ಕಮಾಂಡರ್ ಓಝನ್ ಓಝ್ಬಕಿರ್‌ರನ್ನು ಬಂಧಿಸಲಾಗಿದೆ. ಅವರ ಜೊತೆಗೆ ಇತರ 51 ಸೈನಿಕರನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಅಮೆರಿಕದ ಪಡೆಗಳು ಸಿರಿಯದ ಮೇಲೆ ದಾಳಿ ನಡೆಸಲು ಬಳಸುವ ಮಹತ್ವದ ಸೇನಾ ನೆಲೆಯಲ್ಲಿ ವಿಫಲ ಕ್ಷಿಪ್ರ ಕ್ರಾಂತಿಗೆ ಬೆಂಬಲ ನೀಡಿದ ಆರೋಪದಲ್ಲಿ ಓರ್ವ ಹಿರಿಯ ವಾಯುಪಡೆ ಜನರಲ್ ಮತ್ತು ಇತರ ಹಲವಾರು ಅಧಿಕಾರಿಗಳನ್ನೂ ಬಂಧಿಸಲಾಗಿದೆ.
ನ್ಯಾಯಾಧೀಶರ ಬಂಧನ
ಸೇನಾಧಿಕಾರಿಗಳ ವಿರುದ್ಧ ಮಾತ್ರ ಕಾರ್ಯಾಚರಣೆ ನಡೆಸಲಾಗಿಲ್ಲ. ಟರ್ಕಿಯಾದ್ಯಂತವಿರುವ 2,745 ನ್ಯಾಯಾಧೀಶರು ಮತ್ತು ಪ್ರಾಸಿಕ್ಯೂಟರ್‌ಗಳ ಬಂಧನಕ್ಕಾಗಿ ವಾರಂಟ್‌ಗಳನ್ನು ಹೊರಡಿಸಲಾಗಿದೆ ಎಂದು ಅನಡೊಲು ವಾರ್ತಾ ಸಂಸ್ಥೆ ತಿಳಿಸಿದೆ.
ಕರುಣೆ ತೋರಿಸುವುದಿಲ್ಲ
ಕ್ಷಿಪ್ರಕ್ರಾಂತಿಯ ಪಿತೂರಿಗಾರರಿಗೆ ಕರುಣೆ ತೋರಿಸುವುದಿಲ್ಲ ಎಂದು ಟರ್ಕಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅಧ್ಯಕ್ಷ ಎರ್ದೊಗಾನ್‌ರ ಬದ್ಧ ವೈರಿ ಅಮೆರಿಕದಲ್ಲಿ ನೆಲೆಸಿರುವ ಮುಸ್ಲಿಂ ಧರ್ಮಗುರು ಫತೇವುಲ್ಲಾ ಗುಲನ್‌ರ ಆಣತಿಯಂತೆ ಸೇನಾ ದಂಗೆ ನಡೆಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಕಾನೂನಿನ ಆಡಳಿತದಂತೆ ನಡೆಯಿರಿ: ಒಬಾಮ ಕರೆ
ಕ್ಷಿಪ್ರಕ್ರಾಂತಿಯ ಶಂಕಿತ ಪಿತೂರಿಗಾರರನ್ನು ಟರ್ಕಿ ಸರಕಾರ ಬಂಧಿಸಲು ಮುಂದಾಗಿರುವಂತೆಯೇ, ಕಾನೂನಿನ ಆಡಳಿತಕ್ಕೆ ಅನುಗುಣವಾಗಿ ನಡೆಯಿರಿ ಎಂಬುದಾಗಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಟರ್ಕಿಗೆ ಕರೆ ನೀಡಿದ್ದಾರೆ.
ಟರ್ಕಿಯಲ್ಲಿ ನಡೆದ ವಿಫಲ ಕ್ಷಿಪ್ರಕ್ರಾಂತಿಯ ಹಿನ್ನೆಲೆಯಲ್ಲಿ ನೆಲೆಸಿರುವ ಪರಿಸ್ಥಿತಿಯ ಬಗ್ಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ, ಸಂಬಂಧಪಟ್ಟ ಎಲ್ಲ ಪಕ್ಷಗಳು ಕಾನೂನಿನ ಆಡಳಿತಕ್ಕೆ ಅನುಗುಣವಾಗಿ ನಡೆಯುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.