×
Ad

ಢಾಕಾ ಭಯೋತ್ಪಾದಕರಿಗೆ ಮನೆ ಬಾಡಿಗೆಗೆ ನೀಡಿದ ಆರೋಪ : ಪ್ರೊಫೆಸರ್ ಸೇರಿದಂತೆ ಮೂವರ ಬಂಧನ

Update: 2016-07-17 22:10 IST

 ಢಾಕಾ, ಜು. 17: ಢಾಕಾದಲ್ಲಿ ಇತ್ತೀಚೆಗೆ ಕೆಫೆಯೊಂದರ ಮೇಲೆ ದಾಳಿ ನಡೆಸಿ 20 ಮಂದಿಯನ್ನು ಹತ್ಯೆಗೈದ ಭಯೋತ್ಪಾದಕರಿಗೆ ಮನೆಯನ್ನು ಬಾಡಿಗೆಗೆ ನೀಡಿದ ಮೂವರನ್ನು ಢಾಕಾ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಬಂಧಿತರಲ್ಲಿ ಓರ್ವ ವಿಶ್ವವಿದ್ಯಾಲಯ ಪ್ರೊಫೆಸರ್ ಸೇರಿದ್ದಾರೆ.
ತಮ್ಮ ಬಾಡಿಗೆದಾರರ ಮಾಹಿತಿಯನ್ನು ಪೊಲೀಸರಿಗೆ ನೀಡಲು ವಿಫಲವಾಗಿರುವುದಕ್ಕಾಗಿ ಅವರನ್ನು ಬಂಧಿಸಲಾಗಿದೆ.
ಢಾಕಾದ ನಾರ್ತ್ ಸೌತ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಗಿಯಾಝುದ್ದೀನ್ ಎಹ್ಸಾನ್, ಅವರ ಅಳಿಯ ಮತ್ತು ಎಹ್ಸಾನ್‌ರ ಅಪಾರ್ಟ್‌ಮೆಂಟ್‌ನ ಮ್ಯಾನೇಜರ್‌ರನ್ನು ಢಾಕಾ ಮೆಟ್ರೊಪಾಲಿಟನ್ ಪೊಲೀಸರು ಬಂಧಿಸಿದ್ದಾರೆ.
ಜುಲೈ 1ರಂದು ನಡೆದ ಕೆಫೆ ದಾಳಿಯಲ್ಲಿ ಪೊಲೀಸರಿಂದ ಹತರಾದ ಐವರು ಭಯೋತ್ಪಾದಕರು ಮೇ ತಿಂಗಳಲ್ಲಿ ಅಪಾರ್ಟ್‌ಮೆಂಟನ್ನು ಬಾಡಿಗೆಗೆ ಪಡೆದುಕೊಂಡಿದ್ದರು ಹಾಗೂ ಜೂನ್ ತಿಂಗಳಿನಿಂದ ಅಲ್ಲಿ ವಾಸಿಸಲು ಆರಂಭಿಸಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಅಲ್ಲಿ ವಾಸಿಸುತ್ತಿದ್ದ ಇತರ ಭಯೋತ್ಪಾದಕರು ದಾಳಿಯ ಬಳಿಕ ಪರಾರಿಯಾಗಿದ್ದಾರೆ.
‘‘ಅವರು ಅಪಾರ್ಟ್‌ಮೆಂಟ್‌ನಲ್ಲಿ ಗ್ರೆನೇಡ್‌ಗಳು ಮತ್ತು ಸ್ಫೋಟಕಗಳನ್ನು ಇಟ್ಟಿರುವುದು ಗೊತ್ತಾಗಿದೆ. ಅವರು ಅಲ್ಲಿ ವಾಸಿಸುವ ಬಗ್ಗೆ ನಮಗೆ ಮಾಹಿತಿಯಿದ್ದರೆ, ಈ ಭೀಕರ ಭಯೋತ್ಪಾದಕ ದಾಳಿ ನಡೆಯುತ್ತಿರಲಿಲ್ಲ. ಅದೂ ಅಲ್ಲದೆ, ಪರಾರಿಯಾಗಿರುವ ಇತರ ಬಯೋತ್ಪಾದಕರನ್ನು ಬಂಧಿಸಲು ನಮಗೆ ಸಾಧ್ಯವಾಗುತ್ತಿತ್ತು’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News