×
Ad

ಭಾರತೀಯ ವಿವಿಗಳಿಗೆ ವಿಶ್ವಮನ್ನಣೆ ಸಿಗುವುದು ಹೇಗೆ?

Update: 2016-07-17 22:52 IST

ಮಾನವ ಸಂಪನ್ಮೂಲ ಖಾತೆ ಸಚಿವರಾಗಿ ಅಧಿಕಾರ ವಹಿಸಿಕೊಂಡ ಪ್ರಕಾಶ್ ಜಾವ್ಡೇಕರ್ ಮೊಟ್ಟಮೊದಲ ಬಾರಿಗೆ ರಾಷ್ಟ್ರೀಯ ವಿಶ್ವವಿದ್ಯಾನಿಲಯಗಳ ರ್ಯಾಂಕಿಂಗ್ ಬಿಡುಗಡೆ ಮಾಡಿದ್ದಾರೆ. ಅವರ ಈ ಮೊದಲ ನಡೆಯೇ ವಿಶ್ವದರ್ಜೆಯ ಭಾರತೀಯ ವಿಶ್ವವಿದ್ಯಾನಿಲಯಗಳು ರೂಪುಗೊಳ್ಳಬೇಕು ಎಂಬ ಪ್ರಧಾನಿ ನರೇಂದ್ರ ಮೋದಿಯವರ ಕನಸಿಗೆ ಅಡ್ಡಿಯುಂಟು ಮಾಡಿದೆ.
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿ ಎನಿಸಿದ ಇಂಡಿಯಾ ರ್ಯಾಂಕಿಂಗ್-2016 ಬಿಡುಗಡೆ ಮಾಡಿದೆ. ಆದರೆ ಜಾಗತಿಕವಾಗಿ 2004ರಿಂದಲೂ ಬಿಡುಗಡೆ ಮಾಡುತ್ತಿರುವ ಪ್ರತಿಷ್ಠಿತ ಟೈಮ್ಸ್ ಹೈಯರ್ ಎಜುಕೇಶನ್ ವರ್ಲ್ಡ್ ಯುನಿವರ್ಸಿಟಿ ರ್ಯಾಂಕಿಂಗ್ ಪ್ರಕ್ರಿಯೆಯ ಪ್ರಮುಖ ಮೂರು ಮಾನದಂಡಗಳನ್ನು ಇದು ಒಳಗೊಂಡಿಲ್ಲ.
 ಭಾರತೀಯ ರ್ಯಾಂಕಿಂಗ್ ಮಾನದಂಡವನ್ನು ರಾಷ್ಟ್ರೀಯ ಸಾಂಸ್ಥಿಕ ರ್ಯಾಂಕಿಂಗ್ ಚೌಕಟ್ಟಿನಲ್ಲಿ ಪಟ್ಟಿಮಾಡಲಾಗಿದ್ದು, ಭಾರತೀಯ ವಿಶ್ವವಿದ್ಯಾನಿಲಯಗಳ ಡಾಕ್ಟರೇಟ್ ಪ್ರದಾನ, ಸಾಂಸ್ಥಿಕ ಆದಾಯ ಹಾಗೂ ಜಾಗತಿಕ ಖ್ಯಾತಿ ಈ ಮೂರೂ ಪ್ರಧಾನ ಅಂಶಗಳ ಮಾಹಿತಿಗಳು ಇಲ್ಲಿ ಮಾಯವಾಗಿವೆ. ಒಟ್ಟಾರೆಯಾಗಿ ಬೋಧಕ ಸಿಬ್ಬಂದಿ-ವಿದ್ಯಾರ್ಥಿ, ಪುರುಷ-ಮಹಿಳೆ, ಅಂತಾರಾಷ್ಟ್ರೀಯ-ಸ್ಥಳೀಯ ವಿದ್ಯಾರ್ಥಿ ಅನುಪಾತದಂಥ ಅಂಶಗಳು ಇಲ್ಲದಿರುವುದು ಇದರ ವಿಶ್ಲೇಷಣೆಯಿಂದ ಸ್ಪಷ್ಟವಾಗುತ್ತದೆ.

ಟೈಮ್ಸ್ ರ್ಯಾಂಕಿಂಗ್ ಪ್ರಕಾರ, ವಿಶ್ವದ ಅಗ್ರಗಣ್ಯ ವಿಶ್ವವಿದ್ಯಾನಿಲಯ ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಥವಾ ಕ್ಯಾಲ್‌ಟೆಕ್. ಭಾರತದ ಅತ್ಯಂತ ಶ್ರೇಷ್ಠ ವಿಶ್ವವಿದ್ಯಾನಿಲಯ ಬೆಂಗಳೂರಿನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್. ಟೈಮ್ಸ್ ಪಟ್ಟಿಯಲ್ಲಿ 251 ರಿಂದ 300ನೆ ರ್ಯಾಂಕಿಂಗ್‌ನಲ್ಲಿ ಐಐಎಸ್‌ಸಿ ಸ್ಥಾನ ಪಡೆದಿದೆ. ವಿಶ್ವದ ಅಗ್ರ 300 ವಿವಿಗಳ ಪೈಕಿ ಸ್ಥಾನ ಪಡೆದ ಏಕೈಕ ಭಾರತೀಯ ಸಂಸ್ಥೆ ಇದು. ಬ್ರಿಕ್ಸ್ ಸದಸ್ಯ ದೇಶಗಳಾದ ಬ್ರೆಝಿಲ್, ರಷ್ಯಾ, ಭಾರತ, ಚೀನಾ ಹಾಗೂ ದಕ್ಷಿಣ ಆಫ್ರಿಕಾ ಪೈಕಿ ಕೇವಲ ಚೀನಾದ ಮೂರು ವಿಶ್ವವಿದ್ಯಾನಿಲಯಗಳಷ್ಟೇ ವಿಶ್ವದ 100 ಅಗ್ರ ಉನ್ನತ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಚೀನಾದ ಪೆಕಿಂಗ್ ವಿವಿ 42ನೆ ಸ್ಥಾನ ಪಡೆದಿದ್ದರೆ ಹಾಂಕಾಂಗ್ ಹಾಗೂ ತ್ಸಿಂಗುವಾ ವಿವಿ ಕ್ರಮವಾಗಿ 44 ಹಾಗೂ 47ನೆ ಸ್ಥಾನದಲ್ಲಿವೆ.
ಮುಂದಿನ ಐದು ವರ್ಷಗಳಲ್ಲಿ ದೇಶದ 10 ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳು ವಿಶ್ವದರ್ಜೆಯ ಬೋಧನಾ ಹಾಗೂ ಸಂಶೋಧನಾ ಸಂಸ್ಥೆಗಳಾಗಿ ಬೆಳೆಯಬೇಕು ಎನ್ನುವುದು ಪ್ರಧಾನಿಯವರ ಕನಸು. ಈ ಮೂಲಕ ಸಾಮಾನ್ಯ ಭಾರತೀಯನಿಗೆ ಕೂಡಾ ವಿಶ್ವದರ್ಜೆಯ ಪದವಿ ಕೋರ್ಸ್‌ಗಳು ಕೈಗೆಟಕುವಂತಾಗಬೇಕು ಎನ್ನುವುದು ಅವರ ಆಶಯ. ಆದರೆ 2014-15ರ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಅಖಿಲ ಭಾರತ ಸಮೀಕ್ಷೆಯ ಪ್ರಕಾರ, 38,056 ಕಾಲೇಜುಗಳು ಹಾಗೂ 716 ವಿಶ್ವವಿದ್ಯಾನಿಲಯಗಳಲ್ಲಿ 33.3 ದಶಲಕ್ಷ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿರುವ ಭಾರತದಲ್ಲಿ ಇದು ಸಾಲದು ಎನ್ನುವುದು ವಾಸ್ತವ.

ಮಾಯವಾದದ್ದೇನು?
ಡಾಕ್ಟರೇಟ್ ಪ್ರದಾನ: ಭಾರತೀಯ ವಿವಿಗಳ ರ್ಯಾಂಕಿಂಗ್‌ನಲ್ಲಿ ನಾಪತ್ತೆಯಾಗಿರುವ ಮುಖ್ಯ ಮಾನದಂಡವೆಂದರೆ, ಡಾಕ್ಟರೇಟ್ ಪ್ರದಾನ ಮಾಡಿದ ಸಂಖ್ಯೆ. ಅಂದರೆ ಡಾಕ್ಟರೇಟ್-ಪದವಿ ಪಡೆದ ಅಭ್ಯರ್ಥಿಗಳ ಅನುಪಾತ ಒಂದು ಹಾಗೂ ಶಿಕ್ಷಣ ಕ್ಷೇತ್ರದ ಬೋಧನಾ ಸಿಬ್ಬಂದಿಯ ಪೈಕಿ ಡಾಕ್ಟರೇಟ್ ಪಡೆದವರ ಅನುಪಾತ ಇನ್ನೊಂದು. ಭವಿಷ್ಯದ ಪೀಳಿಗೆಯ ಬೋಧಕ ಸಿಬ್ಬಂದಿಯನ್ನು ಸಜ್ಜುಗೊಳಿಸುವಲ್ಲಿ ನಮ್ಮ ಸಂಸ್ಥೆಗಳು ಎಷ್ಟರಮಟ್ಟಿಗೆ ಬದ್ಧತೆ ಹೊಂದಿವೆ ಎನ್ನುವುದನ್ನು ಅರಿಯುವ ಪ್ರಮುಖ ಮಾನದಂಡ ಇದು. ಜತೆಗೆ ಅತ್ಯುನ್ನತ ಮಟ್ಟದಲ್ಲಿ ಪದವೀಧರರಿಗೆ ಬೋಧನಾವೃತ್ತಿ ಎಷ್ಟರಮಟ್ಟಿಗೆ ಆಕರ್ಷಕ ಎನ್ನುವುದು ಹಾಗೂ ಅಭಿವೃದ್ಧಿ ಹಂತದಲ್ಲಿ ಇದು ಎಷ್ಟು ಪರಿಣಾಮಕಾರಿ ಎನ್ನುವುದು ಇದರಿಂದ ತಿಳಿಯುತ್ತದೆ ಎನ್ನುವುದು ಟೈಮ್ಸ್ ಹೈಯರ್ ಎಜುಕೇಶನ್ ಮಾನದಂಡದ ವಿವರಣೆ.
ದೇಶದಲ್ಲಿ ಡಾಕ್ಟರೇಟ್ ಗುಣಮಟ್ಟ ಹಾಗೂ ಪ್ರಮಾಣ ಕೂಡಾ ಭಾರತದ ದೃಷ್ಟಿಯಿಂದ ಮಹತ್ವದ್ದು. ಡಾಕ್ಟರೇಟ್ ಪದವೀಧರರು ದೇಶದ ಗುಣಮಟ್ಟ ಹಾಗೂ ಸಂಶೋಧನಾ ಚಟುವಟಿಕೆಗಳ ಮಟ್ಟದ ಚಾಲಕಶಕ್ತಿ. ಈ ಮೂಲಕ ಇವರು ದೇಶದ ಅನುಶೋಧನೆ ಹಾಗೂ ಆರ್ಥಿಕ ಪ್ರಗತಿಗೆ ಕೊಡುಗೆ ನೀಡುತ್ತಾರೆ ಎನ್ನುವುದು ಭಾರತೀಯ ವಿಶ್ವವಿದ್ಯಾನಿಲಯಗಳ ಸಂಘದ ಪ್ರಧಾನ ಕಾರ್ಯದರ್ಶಿ ಪರ್ಖಾನ್ ಖಮರ್ ಅವರ ಅಭಿಪ್ರಾಯ.
ಭಾರತದಲ್ಲಿ 2013ರಲ್ಲಿ ಮಾಸ್ಟರ್ಸ್‌ ಪ್ರೋಗ್ರಾಂನಲ್ಲಿ 20,425 ಮಂದಿ ಹಾಗೂ ಡಾಕ್ಟರೇಟ್ ಪದವಿಗೆ 22,849 ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದು ಒಟ್ಟು ಉನ್ನತ ಶಿಕ್ಷಣ ಪ್ರವೇಶದ ಶೇ.0.67ರಷ್ಟು. ವಾಸ್ತವವಾಗಿ ಈ ಪ್ರಮಾಣ ಶೇ.5ರಷ್ಟಿರಬೇಕು ಎನ್ನುವುದು ಖಮರ್ ಅವರ ವಿವರಣೆ.

ಈ ನೋಂದಾವಣೆಯ ಪೈಕಿ ಇಂಜಿನಿಯರಿಂಗ್ ಹಾಗೂ ತಂತ್ರಜ್ಞಾನ (ಶೇ. 5.9), ವೈದ್ಯಕೀಯ, ಆರೋಗ್ಯ ವಿಜ್ಞಾನ (ಶೇ. 2), ಕೃಷಿ ವಿಜ್ಞಾನ/ ತಂತ್ರಜ್ಞಾನ (ಶೇ.2)ದಂಥ ಕ್ಷೇತ್ರಗಳಲ್ಲಿ ನೋಂದಾಯಿಸಿಕೊಂಡಿರುವವರಸಂಖ್ಯೆ ತೀರಾ ಕಡಿಮೆ. ಬಹುತೇಕ ಮಂದಿ ಅನ್ವಯಿಕ ಸಂಶೋಧನಾ ವಿಭಾಗದಲ್ಲಿ ನೋಂದಾಯಿಸಿಕೊಂಡಿದ್ದಾರೆ. ಅಂದರೆ ಮುಂದಿನ ತಾಂತ್ರಿಕ ಪ್ರಗತಿಗೆ ಈ ವರ್ಗವನ್ನೇ ನೆಚ್ಚಿಕೊಳ್ಳಬೇಕಾಗಿದೆ. ಬಹುತೇಕ ಮಂದಿ ಶುದ್ಧ ವಿಜ್ಞಾನ (ಶೇ. 32) ಹಾಗೂ ಕಲೆ/ ಸಾಮಾಜಿಕ ವಿಜ್ಞಾನ/ ಮಾನವಿಕ ಶಾಸ್ತ್ರ (ಶೇ.35)ದಲ್ಲಿ ಸಂಶೋಧನೆ ಕೈಗೊಳ್ಳುತ್ತಾರೆ.
ಆದಾಯ:
ಭಾರತೀಯ ವಿಶ್ವವಿದ್ಯಾನಿಲಯಗಳ ಚೌಕಟ್ಟಿನಿಂದ ಆದಾಯ ಎನ್ನುವ ಪದವೇ ನಾಪತ್ತೆಯಾಗಿದೆ. ಒಂದು ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ದೊರೆಯುವ ಸೌಲಭ್ಯಗಳು ಮತ್ತು ಮೂಲಸೌಕರ್ಯಗಳ ಸ್ಥೂಲ ಚಿತ್ರಣ ನೀಡಲು ಸಾಂಸ್ಥಿಕ ಆದಾಯ ಪ್ರಮುಖ ಮಾನದಂಡ ಎನ್ನುವುದು ಟೈಮ್ಸ್ ಹೈಯರ್ ಎಜ್ಯುಕೇಶನ್‌ನ ಅಭಿಮತ. ಅಂತೆಯೇ ಆ ಸಂಸ್ಥೆಯಲ್ಲಿ ವಿಶ್ವದರ್ಜೆ ಸಂಶೋಧನೆಯ ಅಭಿವೃದ್ಧಿಗೆ ಸಂಶೋಧನಾ ಆದಾಯ ಮುಖ್ಯ. ಉದ್ಯಮ ಕ್ಷೇತ್ರ ಆ ಉನ್ನತ ಶಿಕ್ಷಣ ಸಂಸ್ಥೆಯ ಸಂಶೋಧನಾ ಕಾರ್ಯಗಳಿಗೆ ಎಷ್ಟರಮಟ್ಟಿಗೆ ಹಣ ತೊಡಗಿಸಲು ಸಿದ್ಧ ಎನ್ನುವುದನ್ನು ತಿಳಿಯಲು ಮತ್ತು ವಾಣಿಜ್ಯ ಮಾರುಕಟ್ಟೆಯಲ್ಲಿ ನೆರವು ಆಕರ್ಷಿಸಲು ವಿಶ್ವವಿದ್ಯಾನಿಲಯ ಎಷ್ಟರಮಟ್ಟಿಗೆ ಸಮರ್ಥವಾಗಿದೆ ಎನ್ನುವುದನ್ನು ಆ ವಿಶ್ವವಿದ್ಯಾನಿಲಯದ ಉದ್ಯಮ ಆದಾಯ ತೋರಿಸುತ್ತದೆ.

ಭಾರತೀಯ ರ್ಯಾಂಕಿಂಗ್‌ನಲ್ಲಿ ವಾಸ್ತವ ಸೌಲಭ್ಯಗಳ ಆಧಾರದಲ್ಲಿ ಕಲಿಕಾ ಸಂಪನ್ಮೂಲಗಳ ವೌಲ್ಯಮಾಪನ ಮಾಡಲಾಗುತ್ತದೆ. ಆದರೆ ಕಾಗದಗಳಲ್ಲಷ್ಟೇ ಅಸ್ತಿತ್ವ ಹೊಂದಿರುವ ಕಾಲೇಜುಗಳನ್ನು ಹೊಂದಿರುವ ಭಾರತದಂಥ ದೇಶದಲ್ಲಿ ಇದು ಖಾತ್ರಿಯಾದ ವಿಧಾನ. ಆದಾಗ್ಯೂ ಸಾಂಸ್ಥಿಕ ಆದಾಯವು ಸಿಬ್ಬಂದಿ ಗೌರವಧನಕ್ಕೆ ಇರುವ ಹೆಚ್ಚುವರಿ ಹಣಕಾಸು ಲಭ್ಯತೆಯ ಸೂಚಕವಾಗುತ್ತದೆ. ಸಹಜವಾಗಿಯೇ ಇದು ಬೋಧನಾ ಸಿಬ್ಬಂದಿ ಹಾಗೂ ಸಂಶೋಧನೆಯ ಗುಣಮಟ್ಟದ ನಿರ್ಧಾರಕ ಅಂಶವಾಗುತ್ತದೆ.
ಸಂಶೋಧನಾ ಆದಾಯವನ್ನು ಪರಿಗಣಿಸುವುದು ಭಾರತದ ಸಂಶೋಧನಾ ಅನುದಾನದ ಕಠೋರ ವಾಸ್ತವತೆಯನ್ನು ಬಿಚ್ಚಿಡುತ್ತದೆ ಎನ್ನುವುದು ಮುಂಬೈನಲ್ಲಿರುವ ನರ್ಸೀ ಮೊಂಜಿ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನ ಕುಲಪತಿ ರಾಜನ್ ಸಕ್ಸೇನಾ ಅವರ ಅಭಿಮತ. ಜಾಗತಿಕ ಮಟ್ಟದಲ್ಲಿ ಸರಕಾರಗಳು ಸಂಶೋಧನೆಗೆ ಅನುದಾನ ನೀಡುವ ದೊಡ್ಡ ಮೂಲ. ಆದರೆ ಭಾರತದಲ್ಲಿ, ರಾಷ್ಟ್ರೀಯ ಮಹತ್ವದ ಸಂಸ್ಥೆಗಳು ಹಾಗೂ ಖಾಸಗಿ ವಲಯದ ನಡುವೆ ಸರಕಾರವೇ ತಾರತಮ್ಯ ಮಾಡುತ್ತದೆ. ಎಲ್ಲೆಲ್ಲಿ ಸಾಮರ್ಥ್ಯ ಹಾಗೂ ಪ್ರತಿಭೆ ಇದೆಯೋ ಅಂಥ ಎಲ್ಲ ಸಂಸ್ಥೆಗಳಿಗೂ ಸಂಶೋಧನಾ ಅನುದಾನ ನೀಡಬೇಕು ಎನ್ನುವುದು ಅವರ ಹಕ್ಕೊತ್ತಾಯ.
ಇದೇ ರೀತಿ ಉದ್ಯಮ ಆದಾಯ ವೌಲ್ಯಮಾಪನದಿಂದ ಭಾರತೀಯ ಶಿಕ್ಷಣ ಸಂಸ್ಥೆಗಳ ಗುರಿ ಹಾಗೂ ಉದ್ಯಮ ವಲಯದ ಅಗತ್ಯತೆಗಳ ನಡುವಿನ ಅಸಮಾನತೆ ಎದ್ದುಕಾಣುತ್ತದೆ.

ಸಕ್ಸೇನಾ ಅವರ ಪ್ರಕಾರ ಭಾರತೀಯ ವಿಶ್ವವಿದ್ಯಾನಿಲಯಗಳಲ್ಲಿ ನಡೆಯುವ ಬಹುತೇಕ ಸಂಶೋಧನೆಗಳು ಸೈದ್ಧಾಂತಿಕ ಸಂಶೋಧನೆಗಳು ಹಾಗೂ ಇವು ಪರಿಷ್ಕರಣೆ ಹೊಂದುವ ಸ್ವಭಾವದವು. ಆದರೆ ಕೈಗಾರಿಕಾ ವಲಯ ಎದುರು ನೋಡುವುದು ಸಂಶೋಧನಾ ಫಲಿತಾಂಶವನ್ನು. ಸದ್ಯದ ಸಮಸ್ಯೆಗಳಿಗೆ ಅದು ಮೂಲಭೂತವಾಗಿ ಎಷ್ಟರಮಟ್ಟಿಗೆ ಪ್ರಯೋಜನಕಾರಿ ಎನ್ನುವುದನ್ನು ಮುಂದುವರಿದ ದೇಶಗಳಲ್ಲಿ, ಭವಿಷ್ಯದಲ್ಲಿ ಬಳಕೆ ಮಾಡಬಹುದಾದ ಹೊಸ ಯೋಚನೆಗಳಿಗಾಗಿ ಉದ್ಯಮಗಳು ವಿಶ್ವವಿದ್ಯಾನಿಲಯಗಳತ್ತ ದೃಷ್ಟಿ ಹರಿಸುತ್ತವೆ. ಭಾರತೀಯ ಕೈಗಾರಿಕೆಗಳಿಗೆ ಇದರ ಬೇಡಿಕೆ ಅಧಿಕ. ಸಮಸ್ಯೆಗಳಿಗೆ ನಿರ್ದಿಷ್ಟವಾದ ಸಂಶೋಧನೆಗಳತ್ತ ಗಮನ ಹರಿಸುತ್ತವೆ. ಒಂದೇ ತೆರನಾದ ಸಾಧನ ಅಥವಾ ಪ್ರಕ್ರಿಯೆಯಲ್ಲಿ ಅಂತ್ಯವಾಗುವ, ಕ್ಷಿಪ್ರವಾಗಿ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವ ಸಂಶೋಧನೆ ಬಯಸುತ್ತವೆ ಎಂದು ಮಹೀಂದ್ರ ಉದ್ಯಮ ಸಮೂಹದ ಇಂಜಿನಿಯರಿಂಗ್ ಕಾಲೇಜಿನ ಸ್ಕೂಲ್ ಆಫ್ ನ್ಯಾಚುರಲ್ ಸೈನ್ಸ್ ಪ್ರಾಧ್ಯಾಪಕ ಬಿಷ್ಣು ಪಿ.ಪಾಲ್ ಅಭಿಪ್ರಾಯಪಡುತ್ತಾರೆ.
ಆದರೆ ಭಾರತೀಯ ವಿಶ್ವವಿದ್ಯಾನಿಲಯಗಳ ಬಹುತೇಕ ಸಂಶೋಧನೆಗಳು ಡಾಕ್ಟರೇಟ್ ವಿದ್ಯಾರ್ಥಿಗಳ ಪದವಿಗಷ್ಟೇ ಸೀಮಿತವಾಗಿರುತ್ತವೆ ಎನ್ನುವುದು ಅವರ ಅನಿಸಿಕೆ.

ಜಾಗತಿಕ ಖ್ಯಾತಿ:
  ಜಾಗತಿಕ ಖ್ಯಾತಿ ಸಮೀಕ್ಷೆಯ ಫಲಿತಾಂಶವು ಟೈಮ್ಸ್ ಸರ್ವೇಯ ಬೋಧನಾ ಅಂಕದ ಶೇ.50ರಷ್ಟನ್ನು ಹಾಗೂ ಸಂಶೋಧನಾ ಅಂಕದ ಶೇ.60ರಷ್ಟು ಅಂಕವನ್ನು ಒಳಗೊಂಡಿರುತ್ತದೆ. ಒಂದು ಸಂಸ್ಥೆಯ ಖ್ಯಾತಿಯನ್ನು ವೌಲ್ಯಮಾಪನ ಮಾಡಲು ಭಾರತೀಯ ರ್ಯಾಂಕಿಂಗ್ ಪದ್ಧತಿ ದೇಶದಲ್ಲಿರುವ ಎಲ್ಲ ಬಗೆಯ ಹಕ್ಕುದಾರರ ಅಭಿಪ್ರಾಯವನ್ನೂ ಪಡೆಯುತ್ತದೆ. ಆದರೆ ಇದು ಸಾಲದು ಎನ್ನುವುದು ತಜ್ಞರ ಅಭಿಪ್ರಾಯ. ಭಾರತೀಯ ವಿಶ್ವವಿದ್ಯಾನಿಲಯಗಳ ಶ್ರೇಷ್ಠತೆ ಸಾಗರೋತ್ತರ ಪ್ರದೇಶಗಳಲ್ಲೂ ತಿಳಿಯುವಂತಾಗಬೇಕು.
ದೌರ್ಬಲ್ಯಗಳು
ಈ ಮೂರು ಮಾನದಂಡಗಳು ಇಂಡಿಯಾ ರ್ಯಾಂಕಿಂಗ್-2016 ಹಾಗೂ ಟೈಮ್ಸ್ ರ್ಯಾಂಕಿಂಗ್‌ಗಳಲ್ಲೂ ಸ್ಥಾನ ಪಡೆದಿವೆ. ಆದರೆ ಇವು ಭಾರತದ ಉನ್ನತ ಶಿಕ್ಷಣ ಕ್ಷೇತ್ರದ ಇತಿಮಿತಿ ಇರುವ ಕ್ಷೇತ್ರಗಳು ಕೂಡಾ ಆಗಿವೆ.

ಬೋಧಕ-ವಿದ್ಯಾರ್ಥಿ ಅನುಪಾತ: ಭಾರತದ ಅಗ್ರಗಣ್ಯ ವಿಶ್ವವಿದ್ಯಾನಿಲಯವಾದ ಬೆಂಗಳೂರು ಐಐಎಸ್‌ಸಿನಲ್ಲಿ ಬೋಧಕ- ಸಿಬ್ಬಂದಿ ಅನುಪಾತ 1: 8.2ರಷ್ಟಿದೆ. ವಿಶ್ವದ ಅತ್ಯುನ್ನತ ವಿಶ್ವವಿದ್ಯಾನಿಲಯ ಎನಿಸಿಕೊಂಡ ಕ್ಯಾಲ್‌ಟೆಕ್‌ನಲ್ಲಿ ಈ ಪ್ರಮಾಣ 1: 6.9 ಇದೆ. ಆದರೆ ಭಾರತದ ಇತರ ವಿಶ್ವವಿದ್ಯಾನಿಲಯಗಳಲ್ಲಿ ಈ ಪ್ರಮಾಣ ತೀರಾ ಕಳಪೆ ಮಟ್ಟದಲ್ಲಿದೆ. ಉದಾಹರಣೆಗೆ ಭಾರತದಲ್ಲಿ ಆರನೆ ಸ್ಥಾನದಲ್ಲಿರುವ ದಿಲ್ಲಿ ವಿಶ್ವವಿದ್ಯಾನಿಲಯದಲ್ಲಿ ಬೋಧಕ-ವಿದ್ಯಾರ್ಥಿ ಅನುಪಾತ 1: 22.9 ಇದೆ. ದೆಹಲಿ ವಿವಿ ಟೈಮ್ಸ್ ರ್ಯಾಂಕಿಂಗ್‌ನಲ್ಲಿ 601-800ರ ಪಟ್ಟಿಯಲ್ಲಿದೆ.
ಭಾರತದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸರಾಸರಿ ಬೋಧಕ-ವಿದ್ಯಾರ್ಥಿ ಅನುಪಾತ, ಮಂಜೂರಾದ ಬೋಧಕ ಹುದ್ದೆಗಳ ಆಧಾರದಲ್ಲಿ ಸುಮಾರು 27 ಆಗಿದೆ. ಆದರೆ ವಾಸ್ತವವಾಗಿ ಇರುವ ಬೋಧಕ ಸಂಖ್ಯೆಯನ್ನು ನೋಡಿದರೆ ಈ ಅನುಪಾತ ದುಪ್ಪಟ್ಟು ಆಗುತ್ತದೆ. ಗುಣಮಟ್ಟದ ಬೋಧಕ ಸಿಬ್ಬಂದಿಯನ್ನು ಆಕರ್ಷಿಸುವ ಸಲುವಾಗಿ ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಈ ಅನುಪಾತವನ್ನು 1: 10ರ ಪ್ರಮಾಣಕ್ಕೆ ಏರಿಸಬೇಕಿದ್ದರೆ, ದೇಶ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ಹೂಡಿಕೆ ಮಾಡುವುದು ಅನಿವಾರ್ಯ ಎನ್ನುವುದು ಖಮರ್ ಅವರ ಸ್ಪಷ್ಟ ಅಭಿಪ್ರಾಯ.
ಜಾಗತಿಕ ವಿದ್ಯಾರ್ಥಿಗಳು: ಟೈಮ್ಸ್ ರ್ಯಾಂಕಿಂಗ್‌ನಲ್ಲಿ ಅಂತಾರಾಷ್ಟ್ರೀಯ ದೃಷ್ಟಿಕೋನವು, ಅಂತಾರಾಷ್ಟ್ರೀಯ-ಆಂತರಿಕ ವಿದ್ಯಾರ್ಥಿಗಳ ಅನುಪಾತ, ಅಂತಾರಾಷ್ಟ್ರೀಯ-ಆಂತರಿಕ ಸಿಬ್ಬಂದಿ ಅನುಪಾತ ಹಾಗೂ ಸಂಶೋಧನಾ ಪ್ರಕಟಣೆಗಳಿಗೆ ಅಂತಾರಾಷ್ಟ್ರೀಯ ಸಹಭಾಗಿತ್ವದ ಮಾಪಕವನ್ನು ಆಧರಿಸಿರುತ್ತದೆ. ಕ್ಯಾಲ್‌ಟೆಕ್ ಈ ವರ್ಗದಲ್ಲಿ 64 ಅಂಕ ಪಡೆದರೆ, ಬೆಂಗಳೂರಿನ ಐಐಎಸ್‌ಸಿ 16.2 ಅಂಕ ಪಡೆದಿದೆ. ಕ್ಯಾಲ್‌ಟೆಕ್‌ನಲ್ಲಿ ಶೇ.27ರಷ್ಟು ವಿದೇಶಿ ವಿದ್ಯಾರ್ಥಿಗಳಿದ್ದರೆ ಐಐಎಸ್‌ಸಿನಲ್ಲಿ ಇರುವ ವಿದೇಶಿ ವಿದ್ಯಾರ್ಥಿಗಳ ಪ್ರಮಾಣ ಶೇ. ಒಂದರಷ್ಟು ಮಾತ್ರ.

ವಿದ್ಯಾರ್ಥಿಗಳು ಹಾಗೂ ಬೋಧಕ ಸಿಬ್ಬಂದಿ ಹೀಗೆ ಎರಡೂ ಕ್ಷೇತ್ರಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಪ್ರಮಾಣದ ಹೆಜ್ಜೆಗುರುತು ಅನಿವಾರ್ಯ. ಏಕೆಂದರೆ ಇದು ಹೊಸ ಯೋಚನೆಗಳನ್ನು ಹಾಗೂ ವಿಭಿನ್ನ ಶ್ರಮ ಸಂಸ್ಕೃತಿಯನ್ನು ವಿಶ್ವದ ಎಲ್ಲೆಡೆಯಿಂದ ತರುತ್ತದೆ ಎಂದು ಮುಂಬೈ ಐಐಟಿಯ ಅಂತಾರಾಷ್ಟ್ರೀಯ ಸಂಬಂಧಗಳ ವಿಭಾಗದ ಡೀನ್ ರಾಜೀವ್ ದುಸಾನ್ ಅಭಿಪ್ರಾಯಪಡುತ್ತಾರೆ. ಇದನ್ನು ಸಾಧಿಸುವ ಸಲುವಾಗಿ ನಮ್ಮ ಸಂಸ್ಥೆ ಇಂಡಿಯನ್ ಕೌನ್ಸಿಲ್ ಆಫ್ ಕಲ್ಚರಲ್ ರಿಲೇಷನ್ ಹಾಗೂ ಭಾರತೀಯ ರಾಯಭಾರ ಕಚೇರಿಗಳ ಜತೆ ಸೇರಿ ಕಾರ್ಯ ನಿರ್ವಹಿಸುತ್ತೇವೆ. ಹೆಚ್ಚಿನ ಸಂಖ್ಯೆಯ ಅಂತಾರಾಷ್ಟ್ರೀಯ ಬೋಧಕ ಸಿಬ್ಬಂದಿಯನ್ನು ಸಂದರ್ಶಕ ಪ್ರಾಧ್ಯಾಪಕರಾಗಿ ತರುವ ಪ್ರಯತ್ನದಲ್ಲಿದ್ದೇವೆ ಎಂದು ಅವರು ಸ್ಪಷ್ಟಪಡಿಸುತ್ತಾರೆ.
ವಿದ್ಯಾರ್ಥಿ-ವಿದ್ಯಾರ್ಥಿನಿ ಅನುಪಾತ: 
ಕ್ಯಾಲ್‌ಟೆಕ್‌ನಲ್ಲಿ ಶೇ.33ರಷ್ಟು ವಿದ್ಯಾರ್ಥಿನಿಯರಿದ್ದರೆ, ಐಐಎಸ್‌ಸಿನಲ್ಲಿ ಇರುವ ವಿದ್ಯಾರ್ಥಿನಿಯರ ಪ್ರಮಾಣ ಶೇ.19. ಉನ್ನತ ಶಿಕ್ಷಣ ಕುರಿತ ಅಖಿಲ ಭಾರತ ಮಟ್ಟದ ಪ್ರಾತಿನಿಧಿ ಸಮೀಕ್ಷೆ ಪ್ರಕಾರ, 2007-2014ರ ಅವಧಿಯಲ್ಲಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ನೋಂದಾಯಿಸಿಕೊಳ್ಳುತ್ತಿರುವ ವಿದ್ಯಾರ್ಥಿನಿಯರ ಪ್ರಮಾಣ ಶೇ.38.6ರಿಂದ ಶೇ.46ಕ್ಕೆ ಹೆಚ್ಚಿದ್ದರೂ, ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೋರ್ಸ್‌ಗಳಿಗೆ ಬರುತ್ತಿರುವ ವಿದ್ಯಾರ್ಥಿನಿಯರ ಸಂಖ್ಯೆ ಕಡಿಮೆ. ಇದು ಪದವಿ ಹಂತದಲ್ಲಿ ಶೇ.29 ಇದ್ದರೆ, ಸ್ನಾತಕೋತ್ತರ ಪದವಿ ಹಂತದಲ್ಲಿ ಶೇ.37 ಇದೆ.

ಐಐಟಿಯಂಥ ಸಂಸ್ಥೆಗಳಲ್ಲಿ ಹೆಚ್ಚಿನ ವಿದ್ಯಾರ್ಥಿನಿ-ವಿದ್ಯಾರ್ಥಿ ಅನುಪಾತ ಏಕೆ ಪ್ರಮುಖವಾಗುತ್ತದೆ ಎಂದರೆ, ತಂತ್ರಜ್ಞಾನ ಹಾಗೂ ಶಿಕ್ಷಣ ವಲಯದಲ್ಲಿ ಅತ್ಯುನ್ನತ ಅರ್ಹತೆ ಹೊಂದಿದ ಮಹಿಳಾ ಇಂಜಿನಿಯರ್‌ಗಳ ಅಗತ್ಯತೆ ಇದೆ ಎಂದು ದುಸಾನ್ ಹೇಳುತ್ತಾರೆ. ಮುಂಬೈ ಐಐಟಿಯಲ್ಲಿ ಸ್ನಾತಕೋತ್ತರ ಹಾಗೂ ಡಾಕ್ಟರೇಟ್ ಪದವಿಗೆ ಹೆಚ್ಚಿನ ಸಂಖ್ಯೆಯ ಮಹಿಳೆಯರು ನೋಂದಣಿಯಾಗುತ್ತಿದ್ದಾರೆ. ಇದೇ ಪ್ರವೃತ್ತಿ ಪದವಿಹಂತದಲ್ಲೂ ಕಂಡುಬರುತ್ತಿದೆ.

Writer - ಚಾರು ಬಾರ್ಹಿ

contributor

Editor - ಚಾರು ಬಾರ್ಹಿ

contributor

Similar News