×
Ad

ಮರಣ ದಂಡನೆ ಕಾನೂನು ಮತ್ತೆ ಅಸ್ತಿತ್ವಕ್ಕೆ: ಟರ್ಕಿ ಅಧ್ಯಕ್ಷ

Update: 2016-07-18 09:00 IST

ಇಸ್ತಾಂಬೂಲ್, ಜು.18: ದೇಶದಲ್ಲಿ ಮರಣ ದಂಡನೆ ಕಾನೂನನ್ನು ಮರು ಜಾರಿಗೊಳಿಸುವ ಬಗ್ಗೆ ಸರಕಾರ ಪರಿಶೀಲನೆ ನಡೆಸುತ್ತಿದೆ ಎಂದು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯೀಪ್ ಎರ್ದೋಗಾನ್ ಪ್ರಕಟಿಸಿದ್ದಾರೆ.

ಕ್ಷಿಪ್ರಕ್ರಾಂತಿಯಲ್ಲಿ ತಮ್ಮನ್ನು ಪದಚ್ಯುತಗೊಳಿಸುವ ಹುನ್ನಾರ ವಿಫಲವಾದ ಬಳಿಕ ಮಾತನಾಡಿದ ಅವರು ರವಿವಾರ ಈ ವಿಷಯವನ್ನು ಪ್ರಕಟಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ಏನು ಹೇಳುತ್ತಾರೋ ಆ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ನಮ್ಮ ಸರಕಾರ ವಿರೋಧ ಪಕ್ಷಗಳ ಜೊತೆ ಚರ್ಚಿಸಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು. ಇದನ್ನು ಜಾರಿಗೊಳಿಸುವಲ್ಲಿ ವಿಳಂಬ ಮಾಡುವಂತಿಲ್ಲ. ಏಕೆಂದರೆ ಕ್ಷಿಪ್ರಕ್ರಾಂತಿಯ ಪ್ರಯತ್ನ ನಡೆಸಿದವರು ಅದಕ್ಕೆ ಬೆಲೆ ತೆರಲೇಬೇಕಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

ಶುಕ್ರವಾರದ ಸೇನಾದಂಗೆಯ ಹಿನ್ನೆಲೆಯಲ್ಲಿ ದೇಶದಲ್ಲಿ ಮರಣ ದಂಡನೆಯನ್ನು ಮರು ಜಾರಿ ಮಾಡಬೇಕು ಎಂದು ಅಧ್ಯಕ್ಷರನ್ನು ಸಾವಿರಾರು ಬೆಂಬಲಿಗರು ಕರೆ ಮಾಡಿ ಆಗ್ರಹಿಸುತ್ತಿದ್ದಾರೆ. ಯೂರೋಪಿಯನ್ ಯೂನಿಯನ್‌ನ ಸದಸ್ಯತ್ವ ದೃಷ್ಟಿಯಲ್ಲಿಟ್ಟುಕೊಂಡು 2004ರಲ್ಲಿ ಜಾರಿಗೆ ತಂದ ಸುಧಾರಣೆಗಳ ವೇಳೆ ಟರ್ಕಿಯಲ್ಲಿ ಮರಣ ದಂಡನೆ ರದ್ದು ಮಾಡಲಾಗಿತ್ತು.

ಆದರೆ ಮತ್ತೆ ಮರಣ ದಂಡನೆ ಜಾರಿಗೆ ತಂದಲ್ಲಿ, ಸದಸ್ಯತ್ವ ತಡೆದಿರುವ ಬಗೆಗಿನ ಮಾತುಕತೆಗೆ ಮತ್ತೆ ಹಿನ್ನಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News