ಟರ್ಕಿ ಸೇನಾ ದಂಗೆಯ ‘ರೂವಾರಿ’ಗೆ ಇಸ್ರೇಲ್ ಕನೆಕ್ಷನ್ ?
ಇಸ್ತಾಂಬುಲ್, ಜು.18: ಶುಕ್ರವಾರ ರಾತ್ರಿಯ ವಿಫಲ ಸೇನಾ ದಂಗೆಯ ಸಂಬಂಧ ಬಂಧಿತರಾಗಿರುವ ಆರು ಹಿರಿಯ ಸೇನಾ ಕಮಾಂಡರುಗಳಲ್ಲಿ ಇಸ್ರೇಲ್ ನ ಟೆಲ್ ಅವೀವ್‌ನ ಟರ್ಕಿ ರಾಯಭಾರ ಕಚೇರಿಯಲ್ಲಿ ಮಿಲಿಟರಿ ಅಧಿಕಾರಿಯಾಗಿ 1998 ರಿಂದ 2000 ತನಕ ಸೇವೆ ಸಲ್ಲಿಸಿದ್ದ ಜನರ್ ಅಕಿನ್ ಓಝ್ಟುಕ್ ಕೂಡ ಸೇರಿದ್ದಾರೆ.
ಇಸ್ರೇಲ್‌ನಲ್ಲಿ ಸೇವೆ ಸಲ್ಲಿಸಿದ ನಂತರ ಟರ್ಕಿಯ ವಾಯು ಪಡೆ ಕಮಾಂಡರ್ ಆಗಿದ್ದ 64 ರ ಹರೆಯದ ಅಕಿನ್ ಕಳೆದ ವರ್ಷ ಈ ಹುದ್ದೆ ತ್ಯಜಿಸಿದ್ದರೂ ಟರ್ಕಿಯ ಅತ್ಯುನ್ನತ ಮಿಲಿಟರಿ ಕೌನ್ಸಿಲ್ ಸದಸ್ಯರಾಗಿ ಮುಂದುವರಿದಿದ್ದರು.
ಇದೀಗ ಟರ್ಕಿಯ, ವಿಶೇಷವಾಗಿ ಅಧ್ಯಕ್ಷ ತಯ್ಯಿಪ್ ಎರ್ದೊಗಾನ್ ಅವರ ಪ್ರಮುಖ ವೈರಿಯಾಗಿ ಪರಿಗಣಿತರಾಗಿರುವ ಅಕಿನ್ ಶುಕ್ರವಾರದ ಸೇನಾ ದಂಗೆ ಯತ್ನ ನಡೆಯುವ ಮೊದಲು ಖ್ಯಾತ ಮಿಲಿಟರಿ ನಾಯಕರಾಗಿದ್ದರಲ್ಲದೆ ತಮಗೆ ದೇಶದ ವಾಯುಪಡೆ ಹಾಗೂ ನ್ಯಾಟೋದಿಂದ ದೊರೆತ ಪದಕಗಳನ್ನು ಪ್ರದರ್ಶಿಸುವುದರಲ್ಲಿ ಖುಷಿ ಕಾಣುತ್ತಿದ್ದರು ಎಂದು ಇಸ್ರೇಲಿ ಸುದ್ದಿ ತಾಣ ವೈನೆಟ್ ವರದಿ ಮಾಡಿದೆ.
ಜನರಲ್ ಅಕಿನ್ ಹಾಗೂ ಅವರೊಂದಿಗೆ ಈ ಸೇನಾ ದಂಗೆ ನಡೆಸುವಲ್ಲಿ ಶಾಮೀಲಾದವರನ್ನು ದೇಶದ್ರೋಹದ ಆರೋಪದ ಮೇಲೆ ವಿಚಾರಣೆ ನಡೆಸಲಾಗುವುದು ಎಂದು ತಿಳಿದು ಬಂದಿದೆ. ದೇಶದ ಸಂವಿಧಾನ ಮರಣದಂಡನೆಯನ್ನು ನಿಷೇಧಿಸಿರುವುದರಿಂದ ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗುವುದಿಲ್ಲವಾದರೂ, ಮುಂದೆ ಇಂತಹ ದಂಗೆಗಳಾಗದಂತೆ ತಡೆಯಲು ಸಾಂವಿಧಾನಿಕ ತಿದ್ದುಪಡಿಗಳನ್ನು ಪರಿಶೀಲಿಸಲಾಗುವುದೆಂದು ಟರ್ಕಿ ಪ್ರಧಾನಿ ಬಿನಾಲಿ ಯಿಲ್ ಡಿರಿಮ್ ಹೇಳಿದ್ದಾರೆಂದು, ಟರ್ಕಿ ಪಬ್ಲಿಕ್ ಟೆಲಿವಿಷನ್ ವರದಿಯೊಂದು ತಿಳಿಸಿದೆ.
ಅಕಿನ್ ಹೊರತಾಗಿ ಎರಡನೆ ಸೇನಾ ಕಮಾಂಡರ್ ಜನರಲ್ ಆದಮ್ ಹುದುತಿ ಮಲಟ್ಯ ಗ್ಯಾರಿಸನ್ ಕಮಾಂಡರ್ ಅವ್ನಿ ಅಂಗುನ್ ಕೂಡ ಬಂಧಿತರಲ್ಲಿ ಸೇರಿದ್ದಾರೆ. ದೇಶದ ಅತ್ಯುನ್ನತ ಮಿಲಿಟರಿ ಕೌನ್ಸಿಲ್ ಮುಂದಿನ ತಿಂಗಳು ಸಭೆ ಸೇರಿದಾಗ ತಮ್ಮನ್ನು ತಮ್ಮ ಹುದ್ದೆಗಳಿಂದ ಕೆಳಗಿಳಿಸಬಹುದೆಂಬ ಭಯದಿಂದ ಈ ಸೇನಾ ದಂಗೆಯ ನೇತೃತ್ವವನ್ನು ಅವರು ವಹಿಸಿದ್ದರೆನ್ನಲಾಗಿದೆ.