×
Ad

ಬಿಬಿಸಿಯನ್ನು ಸೆಳೆದ ಕೇರಳದ ಬೀಫ್ ಫ್ರೈ ನಂಟು

Update: 2016-07-19 12:54 IST

ಬಿಬಿಸಿ ತನ್ನ ಆಹಾರದ ಕುರಿತ ಕಾರ್ಯಕ್ರಮದಲ್ಲಿ ಭಾರತಕ್ಕೆ ಸಂಬಂಧಿಸಿದ ಬಹಳಷ್ಟು ವಿಶೇಷ ಆಹಾರ ಪ್ರಕ್ರಿಯೆ ಮತ್ತು ವೈವಿಧ್ಯತೆಗಳ ಬಗ್ಗೆ ಪ್ರಸಾರ ಮಾಡಿದೆ. ಇತ್ತೀಚೆಗೆ ಈ ಆಹಾರ ಕಾರ್ಯಕ್ರಮದಲ್ಲಿ ಕೇರಳದ ಜನರ ದನದ ಮಾಂಸದ ಪ್ರೇಮ ಮತ್ತು ಮುಖ್ಯವಾಗಿ ಬೀಫ್ ಫ್ರೈ ಕುರಿತ ಬಾಯಿ ಚಪಲದ ಬಗ್ಗೆಯೂ ಪ್ರಸಾರ ಮಾಡಿದೆ.

ಬಿಬಿಸಿಯಲ್ಲಿ ಹೇಳಿರುವಂತೆ ಕೇರಳದ ಬೀಫ್ ಫ್ರೈಗಾಥೆಗೆ ದೊಡ್ಡ ಇತಿಹಾಸವೇ ಇದೆ. ಅದರಲ್ಲು ಅತ್ಯುತ್ತಮ ಫ್ರೈಗಳನ್ನು ಸಣ್ಣಪುಟ್ಟ ಬೀದಿ ಬದಿಯ ಅಂಗಡಿಗಳಲ್ಲೇ ಮಾರಲಾಗುತ್ತಿದೆ. ತೆಂಗಿನಕಾಯಿ, ಬೇವಿನೆಲೆ, ದಾಲ್ಚಿನ್ನಿ, ಲವಂಗ, ಕೊತ್ತಂಬರಿ ಹುಡಿ ಮತ್ತು ಕರಿದ ಮೆಣಸು ಸೇರಿಸಿ ಮಾಡಿದ ಈ ಫ್ರೈ ದೂರದಿಂದಲೇ ಮೂಗಿಗೆ ಬಡಿಯುವುದು ಖಚಿತ. ಇಂತಹ ಒಂದು ತಾಣವಾದ ಪಪುಟ್ಟಿ ಹೊಟೇಲಿನಲ್ಲಿ ಈ ಬೀಫ್ ಫ್ರೈ ಅತ್ಯುತ್ತಮವಾಗಿ ಸಿಗುತ್ತದೆ. ಇಲ್ಲಿ ಬೀಫ್ ಫ್ರೈ, ಬೀಫ್ ಸಾಂಬಾರ್, ಬೀಫ್ ರೋಸ್ಟ್‌ಗಳು ಕೇರಳದ ದೋಸೆ, ಮಲಬಾರ್ ಪರೋಟದ ಜೊತೆಗೆ ಸಿಗುತ್ತದೆ. ಅಲ್ಲದೆ ಅಕ್ಕಿಯಲ್ಲಿ ಮಾಡಿದ ಇಡಿಯಪ್ಪಂ ಜೊತೆಗಂತೂ ಇದು ಇನ್ನೂ ರುಚಿಕರ.

ಕೇರಳದಲ್ಲಿ ತೆಂಗಿನಕಾಯಿ ಹಾಕುವ ಕಾರಣದಿಂದ ಮತ್ತು ಕೆಲವು ವಿಶೇಷ ಮಸಾಲೆಗಳ ಕಾರಣ ಬೀಫ್ ಆಹಾರಗಳು ರುಚಿಕರವಾಗಿರುತ್ತವೆ.

ಅತ್ಯುತ್ತಮ ಬೀಫ್ ಫ್ರೈ ತಯಾರಿಸಲು ತಂಗ ಕೊಟ್ಟು ಇರಚಿ ಅಥವಾ ಮಾಂಸವನ್ನು ತೆಂಗಿನ ತುರಿಗಳ ಜೊತೆಗೆ ನಿಧಾನವಾದ ಬೆಂಕಿಯಲ್ಲಿ ಹುರಿಯಲಾಗುತ್ತದೆ. ಬೀಫ್ ಸಾಂಬಾರನ್ನು ಟೊಮ್ಯಾಟೋ ಮತ್ತು ತೆಂಗಿನ ಹಾಲಿನ ಮಿಶ್ರಣದಲ್ಲಿ ತಯಾರಿಸಲಾಗುತ್ತದೆ. ಆದರೆ ಕೇರಳದ ಜನಪ್ರಿಯ ತಿನಿಸು ಬೀಫ್ ಫ್ರೈ ಎಂದು ಬಿಬಿಸಿ ವರದಿ ಹೇಳಿದೆ.

ಬಿಬಿಸಿಯಲ್ಲಿ ಕೇರಳದ ಅಡುಗೆ ವಿಶೇಷಜ್ಞೆ ನಿಮ್ಮಿ ಪೌಲ್ ತಮ್ಮ ಬೀಫ್ ಅಡುಗೆಯ ವಿವರಗಳನ್ನು ನೀಡಿದ್ದಾರೆ. ಆಕೆ ಬೀಫ್ ಫ್ರೈ ಮಾಡಲು ವಿಶೇಷವಾಗಿ ಹುರಿದುಕೊಂಡ ಮಸಾಲೆಗಳನ್ನು ಬಳಸುತ್ತಾರೆ. ಅವುಗಳಲ್ಲಿ ಕೊತ್ತಂಬರಿ ಹುಡಿ, ಮೆಣಸು, ಕರಿಮೆಣಸು, ದಾಲ್ಚಿನ್ನಿ ಮತ್ತು ಲವಂಗಗಳು ಇರುತ್ತವೆ. ಮಾಂಸವನ್ನು ಚೌಕಾಕಾರದಲ್ಲಿ ಕತ್ತರಿಸಿ ತೆಂಗಿನ ತುರಿಯಲ್ಲಿ ಮತ್ತು ಮಸಾಲೆಯಲ್ಲಿ ಇಡಲಾಗುತ್ತದೆ. ನಂತರ ಇದನ್ನು ಅತೀ ಬಲಿಷ್ಠವಾಗಿರುವ ಅಡಿ ಇರುವ ಪ್ಯಾನಲ್ಲಿ ನಿಧಾನವಾಗಿ ಬೇಯಿಸಲಾಗುತ್ತದೆ. ಸಂಪೂರ್ಣ ರೋಸ್ಟ್ ಆಗಿ ಕಪ್ಪು ಬಣ್ಣಕ್ಕೆ ತಿರುಗಿದರೆ ರುಚಿಕರ ಫ್ರೈ ಸಿದ್ಧವಾಗುತ್ತದೆ. ಇದು ಅಗ್ಗದಲ್ಲಿ ಸಿಗುವ ಮಾಂಸಾಹಾರವಾಗಿರುವುದೂ ಬಹಳ ಜನಪ್ರಿಯವಾಗಲು ಕಾರಣ.ಬಹುತೇಕ ಉತ್ತರ, ಮಧ್ಯ ಮತ್ತು ಪಶ್ಚಿಮ ಭಾರತದಲ್ಲಿ ಸ್ವಲ್ಪ ಮಟ್ಟಿಗೆ ಗೋಹತ್ಯೆ ಮತ್ತು ಬೀಫ್ ಸೇವನೆ ವಿರುದ್ಧ ನಿಷೇಧವಿದೆ. ಆದರೆ ಕೇರಳದಲ್ಲಿ ಶೇ. 55ರಷ್ಟು ಹಿಂದೂಗಳಿದ್ದೂ ನಿಷೇಧವಿಲ್ಲ. ಕೇರಳದಲ್ಲಿ ಬೀಫ್ ಅನ್ನು ಜಾತ್ಯಾತೀತ ಅಡುಗೆ ಎಂದೇ ತಿಳಿಯಲಾಗುತ್ತದೆ. ಹಿಂದು, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮೀಯರು ಜೊತೆಯಾಗಿ ಕುಳಿತು ತಿನ್ನುವ ಅಡುಗೆ ಇದು ಎಂದು ಬ್ರಂಟನ್ ಬೋಟ್ಯಾರ್ಡ್ಸ್ ಮುಖ್ಯ ಅಡುಗೆಯಾತ ಮನೋಜ್ ನಾಯರ್ ಬಿಬಿಸಿ ಜೊತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

 ಕೇರಳದ ವಿಶಿಷ್ಟ ಗುರುತಾಗಿರುವ ಬೀಫ್ ರಾಜಕೀಯವಾಗಿ ಗುರುತಿಸಿಕೊಂಡಿಲ್ಲ ಎಂದು ಹೇಳಲಾಗದು. ಕೆಲವು ಯುವಕರು ಫೇಸ್ಬುಕ್ ಪುಟವೊಂದಕ್ಕೆ ಬೀಫ್ ಜನತಾಪಾರ್ಟಿಎಂದು ಹೆಸರಿಟ್ಟು, ರಾಷ್ಟ್ರೀಯ ಪಕ್ಷ ಭಾರತೀಯ ಜನತಾ ಪಾರ್ಟಿಯ ಗೋಹತ್ಯೆ ನಿಷೇಧದಂತಹ ಕಾನೂನುಗಳನ್ನು ವ್ಯಂಗ್ಯವಾಡಿದ್ದಾರೆ ಎಂದೂ ಬಿಬಿಸಿ ಕಾರ್ಯಕ್ರಮ ಹೇಳಿದೆ.

ಕೃಪೆ: www.bbc.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News