ಅರುಣಾಚಲ: ಸೋತು ಗೆದ್ದ ಕಾಂಗ್ರೆಸ್
ಅರುಣಾಚಲ ಪ್ರದೇಶ ರಾಜಕೀಯ ಅಸ್ಥಿರತೆಯ ದೊಡ್ಡ ಇತಿಹಾಸವನ್ನೇ ಹೊಂದಿದ್ದರೂ, ಕಳೆದ ಎಂಟು ತಿಂಗಳ ರಾಜಕೀಯ ಬೆಳವಣಿಗೆಗಳು ಮಾತ್ರ ವಿಶೇಷ. ಕಳೆದ ವಾರವಂತೂ ಕೇವಲ ಮೂರು ದಿನಗಳಲ್ಲಿ, ಇಬ್ಬರು ಮುಖ್ಯಮಂತ್ರಿಗಳ ಏಳು- ಬೀಳುಗಳಿಗೆ ರಾಜ್ಯ ಸಾಕ್ಷಿಯಾಯಿತು. ಅಂತಿಮವಾಗಿ ಮೂರನೆ ಮುಖ್ಯಮಂತ್ರಿ ಅಧಿಕಾರದ ಗದ್ದುಗೆಗೇರಿದರು.
ಅರುಣಾಚಲ ಪ್ರದೇಶದಲ್ಲಿ 2014ರ ಮೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯುವ ಮುನ್ನವೇ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಕಚ್ಚಾಟ ಮಿತಿಮೀರಿತ್ತು. ಇದರ ಪರಿಣಾಮವಾಗಿ ಅವಧಿ ಪೂರ್ಣಗೊಳ್ಳಲು ಆರು ತಿಂಗಳಿರುವ ಮೊದಲೇ ಕಾಂಗ್ರೆಸ್ ನೇತೃತ್ವದ ನಬಮ್ ಟುಕಿ ಸರಕಾರವನ್ನು ವಿಸರ್ಜಿಸಿತು. ಆ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ವಿಜಯದ ನಗೆ ಬೀರಿತು.
ಆದರೆ ಅರುಣಾಚಲಪ್ರದೇಶದ ರಾಜ್ಯಪಾಲ ಜೆ.ಪಿ.ರಾಜ್‌ಖೋವಾ ಬಿಜೆಪಿಯಿಂದ ನೇಮಕಗೊಂಡವರು. ಕಾಂಗ್ರೆಸ್‌ನ ಆಂತರಿಕ ಗುಂಪುಗಾರಿಕೆಯ ಲಾಭ ಪಡೆಯುವ ಸಲುವಾಗಿ ವಿಧಾನಸಭೆ ಅಧಿವೇಶನ ವನ್ನು ಒಂದು ತಿಂಗಳು ಮುಂಚಿತವಾಗಿ ನಡೆಸಲು ಸೂಚಿಸಿದರು. 2016ರ ಜನವರಿ 14ರಂದು ನಡೆಯಬೇಕಿದ್ದ ಅಧಿವೇಶನವನ್ನು ರಾಜ್ಯ ಸಚಿವ ಸಂಪುಟದ ಸಲಹೆ ಪಡೆಯದೆ, 2015ರ ಡಿಸೆಂಬರ್ 16ರಂದೇ ನಡೆಸಲು ನಿರ್ಧರಿಸಿದರು.
ಕಾನೂನುಬಾಹಿರ
ರಾಜ್ಯಪಾಲರ ಈ ನಡೆ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿತು. ಜತೆಗೆ ಅಲ್ಪಾವಧಿಯ ರಾಷ್ಟ್ರಪತಿ ಆಳ್ವಿಕೆಯೂ ಹೇರಿಕೆಯಾಯಿತು. ಗಣರಾಜ್ಯೋತ್ಸವದ ದಿನ ಹೇರಲಾದ ರಾಷ್ಟ್ರಪತಿ ಆಳ್ವಿಕೆಯನ್ನು ಫೆಬ್ರವರಿ ಯಲ್ಲಿ ಹಿಂದಕ್ಕೆ ಪಡೆದು, ಬಂಡುಕೋರ ಕಾಂಗ್ರೆಸ್ ಮುಖಂಡ ಕಲಿಖೊ ಪುಲ್ ನೇತೃತ್ವದ ಸರಕಾರ ಅಧಿಕಾರಕ್ಕೆ ಬರಲು ಅನುವು ಮಾಡಿಕೊಡಲಾಯಿತು.
ಒಡೆದ ಮನೆಯಾದ ರಾಜ್ಯ ಕಾಂಗ್ರೆಸ್ ಹಾಗೂ ದಿಕ್ಕುತೋಚದ ಅಖಿಲ ಭಾರತ ಕಾಂಗ್ರೆಸ್ ಸಮಿತಿ, ರಾಜ್ಯಪಾಲರ ಮತ್ತು ಬಿಜೆಪಿ ಕೇಂದ್ರ ನಾಯಕತ್ವದ ಕ್ಷಿಪ್ರ ನಡೆಯ ಜಾಡು ಹಿಡಿಯಲು ಸಾಧ್ಯವಾಗಲಿಲ್ಲ. ಕ್ರಮೇಣ ಕಾಂಗ್ರೆಸ್ ಪಕ್ಷ ಸುಪ್ರೀಂಕೋರ್ಟ್ ಕದ ತಟ್ಟಿತು. ಇಲ್ಲಿನ ಸಂಘರ್ಷ ಸಾಮಾನ್ಯ ಸ್ವರೂಪದ್ದಲ್ಲ; ಇದರ ಪರಿಣಾಮ ಇತರ ರಾಜ್ಯಗಳ ಮೇಲೂ ಬೀರುವಂಥದ್ದು.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ.ಎಸ್.ಖೆೇಹರ್ ನೇತೃತ್ವದ ಸಂವಿಧಾನಪೀಠ ಕಳೆದ ಬುಧವಾರ, ವಿಧಾನಸಭಾ ಅಧಿವೇಶನವನ್ನು ಹಿಂದೂಡಿದ ರಾಜ್ಯಪಾಲ ರಾಜ್‌ಖೋವಾ ಅವರ ನಿರ್ಧಾರವನ್ನು ಅವಿರೋಧವಾಗಿ ರದ್ದು ಮಾಡಿತು. ರಾಜ್ಯಪಾಲರ ಕ್ರಮ ಕಾನೂನುಬಾಹಿರ ಎಂದು ಛೀಮಾರಿ ಹಾಕಿತು.
ರಾಜ್ಯಪಾಲ ರಾಜ್‌ಖೋವಾ ಸಂವಿಧಾನಾತೀತವಾದ ಅಧಿಕಾರ ಹೊಂದಿದ ವಿಶೇಷ ವ್ಯಕ್ತಿಯಲ್ಲ ಎಂದು ಅಭಿಪ್ರಾಯಪಟ್ಟ ಸಂವಿಧಾನಪೀಠ, 2015ರ ಡಿಸೆಂಬರ್ 15ಕ್ಕೆ ಮುನ್ನ ಇದ್ದ ಯಥಾಸ್ಥಿತಿಯನ್ನು ಕಾಪಾಡಿ ಕೊಳ್ಳುವಂತೆ ಸೂಚನೆ ನೀಡಿತು. ಈ ತೀರ್ಪಿನಿಂದಾಗಿ, ನಾಲ್ಕು ತಿಂಗಳ ಬಿಜೆಪಿ ಬೆಂಬಲಿತ ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ್ ಪ್ರದೇಶ ಪಕ್ಷದ ಕಲಿಖೊ ಪುಲ್ ಸರಕಾರ ಪತನವಾಗಿ, ಟುಕಿ ಸರಕಾರ ಮರುಸ್ಥಾಪನೆಯಾಯಿತು.
ಪುಲ್‌ಗೆ ಕಂಟಕ
ಗುವಾಹಟಿಯಲ್ಲಿ ಬಿಜೆಪಿ ಬೆಂಬಲಿತ ಈಶಾನ್ಯ ಪ್ರಜಾಸತ್ತಾತ್ಮಕ ಮೈತ್ರಿಕೂಟಕ್ಕೆ ಅಮಿತ್ ಶಾ ಚಾಲನೆ ನೀಡುವ ಸಮಾರಂಭದಲ್ಲಿ ಪಾಲ್ಗೊಳ್ಳಲು ಪುಲ್ ತೆರಳಿದ್ದ ದಿನವೇ ಈ ತೀರ್ಪು ಹೊರಬಿತ್ತು. ಈ ಮೈತ್ರಿಕೂಟದ ಕಾರ್ಯಸೂಚಿ ಎಂದರೆ, ಈಶಾನ್ಯ ರಾಜ್ಯಗಳಿಂದ ಕಾಂಗ್ರೆಸ್ ಸರಕಾರಗಳನ್ನು ಕಿತ್ತೊಗೆಯುವುದಾಗಿತ್ತು.
ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ, ತಮ್ಮ ಸರಕಾರಕ್ಕೆ ಯಾವ ಅಪಾಯವೂ ಇಲ್ಲ ಎಂಬ ವಿಶ್ವಾಸದಲ್ಲೇ ಪುಲ್ ಇದ್ದರು. 60 ಶಾಸಕಬಲದ ವಿಧಾನಸಭೆಯಲ್ಲಿ 40ಕ್ಕೂ ಹೆಚ್ಚು ಮಂದಿಯ ಬೆಂಬಲ ತಮಗೆ ಇದೆ ಎಂದು ಹೇಳಿಕೊಂಡಿದ್ದರು. ಆದರೆ ಪುಲ್ ವಾಸ್ತವವಾಗಿ ತಮ್ಮ ಸಹೋದ್ಯೋಗಿಗಳ ಚಂಚಲತೆಯನ್ನು ಅರಿತುಕೊಳ್ಳಬೇಕಿತ್ತು.
ಪುಲ್ ಅವರು ಗುವಾಹಟಿಯಿಂದ ರಾಜಧಾನಿ ಇಟಾನಗರಕ್ಕೆ ಎಂಟು ಗಂಟೆ ರಸ್ತೆ ಪ್ರಯಾಣದಲ್ಲಿ 11 ಮಂದಿ ಬಿಜೆಪಿ ಶಾಸಕರ ಜತೆಗೂಡಿಕೊಂಡು ಬರುವ ವೇಳೆಗೆ ಪರಿಸ್ಥಿತಿ ಬದಲಾಗಿತ್ತು. ಪುಲ್ ತಮ್ಮ ಎಲ್ಲ ಶಾಸಕರನ್ನೂ ಹೋಟೆಲ್ ಒಂದರಲ್ಲಿ ಕಲೆಹಾಕಿದರು. ಆದರೆ ಅವರೆಲ್ಲರೂ ಒಬ್ಬೊಬ್ಬರಾಗಿ ಜಾಗ ಖಾಲಿ ಮಾಡಿದರು. ಅಂತಿಮವಾಗಿ ಕೊನೆಯವರಾಗಿ ಪುಲ್ ಕೂಡಾ ಚೆಕ್ ಔಟ್ ಮಾಡಿದರು.
ಹಿಂದಿನ ರಾತ್ರಿ ನಡೆದ ದಿಢೀರ್ ಬೆಳವಣಿಗೆಯಲ್ಲಿ, ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸಲಹೆಯಂತೆ ಕಾರ್ಯಪ್ರವೃತ್ತರಾದ ಕಾಂಗ್ರೆಸ್ ಶಾಸಕರು, 37 ವರ್ಷದ ಯುವ ರಾಜಕಾರಣಿ ಪೆಮಾ ಖಂಡು ಅವರನ್ನು ಟುಕಿ ಅವರ ಹುದ್ದೆಗೆ ತರಲು ಕಾರ್ಯತಂತ್ರ ರೂಪಿಸಿದ್ದರು. ಬುಧವಾರದ ತೀರ್ಪಿನ ಬಳಿಕ ಮುಖ್ಯಮಂತ್ರಿಯಾಗಿ ಮರುನೇಮಕಗೊಂಡ ಟುಕಿ ಬದಲು ಹೊಸ ನಾಯಕನನ್ನು ಆಯ್ಕೆ ಮಾಡಿದರು. ಇವರ ನಡುವೆ ಪುಲ್ ಲೆಕ್ಕಕ್ಕೇ ಬರಲಿಲ್ಲ.
ಹಂಗಾಮಿ ರಾಜ್ಯಪಾಲ ತಥಾಗತ ರಾಯ್ ಅವರನ್ನು ಭೇಟಿ ಮಾಡಿದ ಖಂಡು, ಸರಕಾರ ರಚನೆಯ ಹಕ್ಕು ಪ್ರತಿಪಾದಿಸಿದರು. 45 ಮಂದಿ ಕಾಂಗ್ರೆಸ್ ಶಾಸಕರು ಹಾಗೂ ಇಬ್ಬರು ಪಕ್ಷೇತರ ಸದಸ್ಯರ ಬೆಂಬಲಪತ್ರವನ್ನು ಪ್ರಸ್ತುತಪಡಿಸಿದರು. ರವಿವಾರ ಖಂಡು ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.
ರಾಜಕೀಯಕ್ಕೆ ಹೊಸಬ
ವಿಮಾನ ಅಪಘಾತದಲ್ಲಿ 2011ರಲ್ಲಿ ನಿಧನರಾದ ಮಾಜಿ ಮುಖ್ಯಮಂತ್ರಿ ದೋರ್ಜಿ ಖಂಡು ಅವರ ಪುತ್ರ ಪೆಮಾ ಖಂಡು ಇದೀಗ ರಾಜ್ಯದ ಸಂಕೀರ್ಣ ರಾಜಕೀಯಕ್ಕೆ ಹೊಸ ದಿಕ್ಕು ತೋರಿಸುವ ಹೊಣೆ ಹೊತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಅವರಿಗೆ ಯಾವ ರಾಜಕೀಯ ಎದುರಾಳಿಯೂ ಇರಲಿಲ್ಲ. ತಂದೆಯ ಕ್ಷೇತ್ರದಿಂದ ಎರಡು ಬಾರಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು. ತಂದೆಯ ಹಠಾತ್ ಸಾವಿನ ಬಳಿಕ ರಾಜಕೀಯಕ್ಕೆ ಧುಮುಕುವುದು ಅವರಿಗೆ ಅನಿವಾರ್ಯವಾಯಿತು. ಹಿಂದೆ ಅವರು ಪ್ರವಾಸೋದ್ಯಮ ಮತ್ತು ಜಲಸಂಪನ್ಮೂಲ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.
ಈಗಾಗಲೇ ತೀವ್ರ ಮಳೆಯ ಹಿನ್ನೆಲೆಯಲ್ಲಿ ಸಂಭವಿಸಿದ ಭೂಕುಸಿತ, ರಸ್ತೆ ಸಂಚಾರಕ್ಕೆ ತಡೆ ಉಂಟಾಗಿರುವುದು ಹಾಗೂ ಪ್ರವಾಹದಿಂದ ಜರ್ಜರಿತವಾಗಿರುವ ಅರುಣಾಚಲ ಪ್ರದೇಶದ ಜನತೆಗೆ ರಾಜಕಾರಣಿಗಳ ಬಗ್ಗೆ ವಿಶ್ವಾಸವೇ ಹೊರಟುಹೋಗಿದೆ. ಇಂಥ ಪರಿಸ್ಥಿತಿಯಲ್ಲಿ, ಖಂಡು ಸರಕಾರ ಪವಾಡಸದೃಶ ಸುಧಾರಣೆ ತರಬೇಕು ಎಂಬ ನಿರೀಕ್ಷೆಯನ್ನೇನೂ ಜನ ಇಟ್ಟುಕೊಂಡಿಲ್ಲ. ಆದರೆ ಸ್ಥಿರತೆಗೆ ಪೆಟ್ಟು ಬೀಳಬಾರದು.
ಇದು ಸಾಧ್ಯವಾಗಬೇಕಾದರೆ, ಕಾಂಗ್ರೆಸ್ ಶಾಸಕರನ್ನು ಒಟ್ಟಾಗಿ ಇಡಲು ಏನು ಮಾಡಬೇಕು ಎಂಬ ಕಾರ್ಯತಂತ್ರವನ್ನು ಪಕ್ಷದ ಹೈಕಮಾಂಡ್ ರೂಪಿಸಬೇಕು. ಬಿಜೆಪಿಗೆ ಬಲವಾದ ಪೆಟ್ಟು ಬಿದ್ದಿದ್ದರೂ, ರಾಜ್ಯ ರಾಜಕೀಯದಿಂದ ವಿರಮಿಸುವ ಸಾಧ್ಯತೆಯಂತೂ ಇಲ್ಲ. ಮುಂದಿನ ಚುನಾವಣೆಗೆ ಇನ್ನೂ ಮೂರು ವರ್ಷ ಇದ್ದು, ಅರುಣಾಚಲ ಪ್ರದೇಶ ರಾಜಕೀಯಕ್ಕೆ ಖಂಡಿತವಾಗಿಯೂ ಇದು ಸುದೀರ್ಘ ಅವಧಿ.
ಸುಪ್ರೀಂಕೋರ್ಟ್ ತೀರ್ಪಿನಿಂದ ಮಂಗಳಾರತಿ ಮಾಡಿಸಿಕೊಂಡ ರಾಜ್ಯಪಾಲರು ವೈದ್ಯಕೀಯ ರಜೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಗೌರವಯುತವಾಗಿ ನಿರ್ಗಮಿಸುತ್ತಾರೋ ಅಥವಾ ಬಿಜೆಪಿಯ ಸಂರಕ್ಷಕರಾಗಿ ಈಶಾನ್ಯ ರಾಜ್ಯದಲ್ಲೇ ಮುಂದುವರಿಯುತ್ತಾರೋ ಎನ್ನುವ ಕುತೂಹಲ ಸೃಷ್ಟಿಯಾಗಿದೆ.
ಕೃಪೆ: scroll.in