×
Ad

ಕ್ರಿಕೆಟ್: ಲೋಧಾ ಬೌಲಿಂಗ್‌ಗೆ ಸುಪ್ರೀಂಕೋರ್ಟ್ ಬೌಲ್ಡ್

Update: 2016-07-19 23:53 IST

ದೇಶದಲ್ಲಿ ಕ್ರಿಕೆಟ್ ಆಟ ಕೇವಲ ಕ್ರೀಡೆಯಾಗಿಯಷ್ಟೇ ಉಳಿದಿಲ್ಲ. ಅದರೊಂದಿಗೆ ವಿಶ್ವದ ಮಾರುಕಟ್ಟೆ ಜಾಲಗಳು ನೇರ ಸಂಬಂಧವನ್ನು ಹೊಂದಿವೆೆ. ಅಂದರೆ ಕ್ರಿಕೆಟ್ ವಿವಿಧ ಉದ್ಯಮಗಳ ತಲೆಹಿಡುಕನಾಗಿಯೂ ಕೆಲಸ ಮಾಡುತ್ತಿದೆ. ಆದುದರಿಂದಲೇ, ಒಂದು ಕ್ರಿಕೆಟ್‌ನ ಸೋಲು ಗೆಲುವು ವಿಶ್ವದ ಕೆಲವು ಉತ್ಪಾದನೆಗಳ ಸೋಲು ಗೆಲುವಾಗಿಯೂ ಪರಿವರ್ತ ನೆಯಾಗಬಹುದು. ಯಾವುದೇ ಸಿನೆಮಾ ನಟರಿಗಿಂತ ಕ್ರಿಕೆಟ್ ತಾರೆಯರೇ ಜಾಹೀರಾತುಗಳಲ್ಲಿ ಹೆಚ್ಚು ಹಣವನ್ನು ತಮ್ಮದಾಗಿಸುತ್ತಾರೆ. ಯಾವುದೋ ಉತ್ಪಾದನೆಯನ್ನು ಸಾರ್ವಜನಿಕವಾಗಿ ಹರಾಜು ಹಾಕುವಂತೆ ಈ ಕ್ರಿಕೆಟ್ ಆಟಗಾರರನ್ನು ಹರಾಜು ಹಾಕಲಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಕ್ರಿಕೆಟ್ ಕೇವಲ ಸ್ಫೂರ್ತಿದಾಯಕ ಆಟವಾಗಿಯಷ್ಟೇ ಉಳಿಯದೇ ಅದು ಜೂಜಿನ ರೂಪದಲ್ಲಿ ವಿಶ್ವಾದ್ಯಂತ ಹರಡಿಕೊಂಡಿದೆ. ಕ್ರಿಕೆಟ್ ಪಂದ್ಯ ಒಂದು ಮೈದಾನದಲ್ಲಿ ನಡೆಯುತ್ತಿದ್ದರೆ ಅದನ್ನು ಕೇಂದ್ರೀಕರಿಸಿ ವಿಶ್ವಾದ್ಯಂತ ಕೋಟ್ಯಂತರ ರೂಪಾಯಿ ಬೆಟ್ಟಿಂಗ್‌ಗಳು ನಡೆಯುತ್ತ್ತವೆ. ಇವುಗಳನ್ನು ಬೃಹತ್ ಪಾತಕಿಗಳು ನಿಯಂತ್ರಿಸುತ್ತಾರೆ.

ಯಾವನೇ ಆಟಗಾರನ ಆಟದ ಹಿಂದಿರುವ ಯಶಸ್ಸನ್ನು, ವೈಫಲ್ಯವನ್ನು ಸಾಧನೆ ಅಥವಾ ಆಕಸ್ಮಿಕ ಎಂದು ಭಾವಿಸುವಂತಿಲ್ಲ. ಆತ ಯಾರದೋ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾನೆ ಎನ್ನುವ ಅನುಮಾನವನ್ನು ಕ್ರಿಕೆಟ್ ಅಭಿಮಾನಿಗಳೆಲ್ಲರೂ ತಮ್ಮಿಳಗೆ ಇಟ್ಟುಕೊಂಡೇ ಕ್ರಿಕೆಟ್‌ನ್ನು ವೀಕ್ಷಿಸುತ್ತಾರೆ ಮತ್ತು ಆಸ್ವಾದಿಸುತ್ತಾರೆ. ಕ್ರಿಕೆಟ್‌ನ ಸುತ್ತ ಈ ಪರಿಯಲ್ಲಿ ಹಣದ ಚೆಲ್ಲಾಟವಾಗುತ್ತಿರುವಾಗ ಭಾರತದಲ್ಲಿ ಬಿಸಿಸಿಐಯ ಅಧ್ಯಕ್ಷ ಸ್ಥಾನಕ್ಕೆ ರಾಜಕಾರಣಿಗಳು, ಅಧಿಕಾರಿಗಳು ಹಪಹಪಿಸಿದರೆ ಅದರಲ್ಲಿ ಅಚ್ಚರಿಯಾದರೂ ಏನಿದೆ. ಬಿಸಿಸಿಐ ನೇರವಾಗಿ ಭಾರತವನ್ನು ಪ್ರತಿನಿಧಿಸುವುದಿಲ್ಲ. ಅದರ ಮೇಲೆ ನಿಯಂತ್ರಣವನ್ನು ಹೇರಲು ಹೋದಾಗಲೆಲ್ಲ, ತಾನು ಖಾಸಗಿ ಸಂಸ್ಥೆ ಎಂದೇ ಹೇಳಿಕೊಳ್ಳುತ್ತದೆ. ಅಂದರೆ ಕ್ರಿಕೆಟ್ ಆಟಗಾರರು ವಾಸ್ತವದಲ್ಲಿ ಭಾರತದ ಪರವಾಗಿ ಆಡದೆ, ಖಾಸಗಿ ಸಂಸ್ಥೆಯಾಗಿರುವ ಬಿಸಿಸಿಐ ಪರವಾಗಿ ಆಡುತ್ತಾರೆ. ಭಾರತೀಯರಾದ ನಾವು ಮಾತ್ರ ತಂಡ ನಮ್ಮದು ಎಂದು ಸಂಭ್ರಮ ಪಟ್ಟುಕೊಳ್ಳುತ್ತೇವೆ. ಆಟದ ಹೆಸರಿನಲ್ಲಿ ಸೋತರೂ, ಗೆದ್ದರೂ ಕೋಟಿ ಕೋಟಿ ಬಾಚಿಕೊಳ್ಳುವ ಆಟಗಾರನ ಕುರಿತಂತೆ ನಾವು ಸಂಭ್ರಮಿಸುತ್ತೇವೆ. ಆದರೆ ಇದೇ ಬಿಸಿಸಿಐಯೊಳಗಿನ ಅಕ್ರಮಗಳು, ಹಣದ ಅವ್ಯವಹಾರಗಳನ್ನು ತನಿಖೆ ನಡೆಸಲು ಮುಂದಾದರೆ ತಕ್ಷಣ, ನಾವು ಭಾರತ ಸರಕಾರದ ವ್ಯವಸ್ಥೆಗೆ ಸಂಬಂಧಪಟ್ಟವರಲ್ಲ ಎಂದು ನುಣುಚಿಕೊಳ್ಳುತ್ತದೆ.

ಬಿಸಿಸಿಐ ಕೇವಲ ಕ್ರೀಡೆಯ ಜೊತೆಗೆ ಸಂಬಂಧ ಪಟ್ಟಿಲ್ಲ, ಅದನ್ನು ತಳಕು ಹಾಕಿಕೊಂಡಿರುವ ಹಣದ ಜೊತೆಗೆ ಸಂಬಂಧವನ್ನು ಹೊಂದಿದೆ ಎನ್ನುವುದಕ್ಕೆ ಈವರೆಗೆ ಅದರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರ ಹಿನ್ನೆಲೆಯನ್ನು ನೋಡಿದರೆ ಸಾಕು. ಬಿಸಿಸಿಐ ಅಧ್ಯಕ್ಷರಾಗಲು ಕ್ರಿಕೆಟ್ ಜೊತೆಗೆ ಯಾವ ರೀತಿಯ ಸಂಬಂಧವೂ ಇರಬೇಕೆಂದಿಲ್ಲ. ಬಿಸಿಸಿಐ ಅಧ್ಯಕ್ಷರಾಗಿ ಬಹುತೇಕ ರಾಜಕಾರಣಿಗಳು, ಉದ್ಯಮಿಗಳು ಮತ್ತು ಮಾಜಿ ಅಧಿಕಾರಿಗಳೇ ಕಾರ್ಯ ನಿರ್ವಹಿಸಿದ್ದಾರೆ. ಯುಪಿಎ ಅಧಿಕಾರದ ಕಾಲದಲ್ಲಿ ಈ ದೇಶದ ಕೃಷಿ ಸಚಿವರಾಗಿದ್ದ ಶರದ್ ಪವಾರ್ ಬಿಸಿಸಿಐ ಅಧ್ಯಕ್ಷರಾಗಿದ್ದರು. ಎತ್ತಣ ಕ್ರಿಕೆಟ್, ಎತ್ತಣ ಕೃಷಿ ಖಾತೆ? ಈ ದೇಶದ ರೈತರು ಬರಗಾಲದಿಂದ ತತ್ತರಿಸಿದ್ದಾಗ ಈ ಸಚಿವರು ಬಿಸಿಸಿಐ ಅಧ್ಯಕ್ಷರಾಗಿ ವಿದೇಶಗಳಲ್ಲಿ ಬಿಜಿಯಾಗಿದ್ದರು. ಕ್ರಿಕೆಟ್‌ನ ಗಂಧಗಾಳಿಯೂ ಗೊತ್ತಿಲ್ಲದ ಶರದ್ ಪವಾರ್ ಭಾರತದ ಕ್ರಿಕೆಟನ್ನು ಯಾವ ರೀತಿಯಲ್ಲಿ ನಿಭಾಯಿಸುತ್ತಾರೆ ಎನ್ನುವುದೇ ದೊಡ್ಡ ಪ್ರಶ್ನೆ. ಯಾವುದೇ ಸರಕಾರ ಅಧಿಕಾರಕ್ಕೆ ಬರಲಿ, ಅದರಲ್ಲಿರುವ ನಾಯಕರಿಗೆ ಬಿಸಿಸಿಐ ಹುದ್ದೆಯ ಮೇಲೆ ಒಂದು ಕಣ್ಣಿರುತ್ತದೆ. ಯಾವುದೇ ಮಹತ್ತರ ಸಚಿವ ಖಾತೆಗಿಂತಲೂ ಹಿರಿದಾದ ಸ್ಥಾನ ಅದು ಎನ್ನುವುದು ಅವರಿಗೆ ಗೊತ್ತು. ಯಾಕೆಂದರೆ ಕೋಟ್ಯಂತರ ಹಣ ಓಡಾಡುವ ಮೈದಾನ ಅದು. ಈಗಿನ ಬಿಸಿಸಿಐ ಅಧ್ಯಕ್ಷರ ಹಿನ್ನೆಲೆಯನ್ನು ಗಮನಿಸಿ. ಅವರೂ ರಾಜಕಾರಣಿ. ಜೊತೆಗೆ ಬಲಾಢ್ಯ ಉದ್ಯಮಿ ಕೂಡ. ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾಗೂ ಈ ಸಂಸ್ಥೆಯ ಅಧ್ಯಕ್ಷರಾಗುವ ಹುಮ್ಮಸ್ಸು ಇತ್ತು. ಆದರೆ ಪಕ್ಷದಲ್ಲಿ ಜವಾಬ್ದಾರಿ ದೊಡ್ದದಿದ್ದುದರಿಂದ ಅದನ್ನು ಬಿಟ್ಟುಕೊಟ್ಟರು. ಹೀಗೆ ಕ್ರಿಕೆಟ್-ರಾಜಕಾರಣ-ಭೂಗತ ಮಾಫಿಯಾ ಒಂದರ ಜೊತೆಗೊಂದು ಬೆಸೆದಿದೆ. ಇದೀಗ ಬಿಸಿಸಿಐ ಆಡಳಿತದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ನಿವೃತ್ತ ನಾಯಮೂರ್ತಿ ಆರ್. ಎಂ. ಲೋಧಾ ಅವರ ನೇತೃತ್ವದ ಸಮಿತಿ ಮಾಡಿದ್ದ ಶಿಫಾರಸುಗಳಲ್ಲಿ ಬಹುಮುಖ್ಯವಾದ ಕೆಲವುಗಳನ್ನು ಒಪ್ಪಿಕೊಂಡಿರುವುದು ಕ್ರಿಕೆಟ್ ಆಟದ ಪಾಲಿಗೆ ಶುಭದಾಯಕ ಸಂಗತಿ. ಲೋಧಾ ಸಮಿತಿಯ ಕೆಲವು ಶಿಫಾರಸುಗಳಿಗೆ ಸುಪ್ರೀಂಕೋರ್ಟ್ ತನ್ನ ಸಮ್ಮತಿಯನ್ನು ಸೂಚಿಸಿದೆ.

ಈ ಶಿಫಾರಸುಗಳು ಜಾರಿಯಾದರೆ, ಮುಖ್ಯವಾಗಿ ರಾಜಕಾರಣಿಗಳು ಮತ್ತು ಅಧಿಕಾರಿಗಳು ಬಿಸಿಸಿಐ ಆಡಳಿತದಲ್ಲಿ ಇರುವಂತಿಲ್ಲ. ವೃದ್ಧ ಮುಖಂಡರ ಆಶ್ರಯ ತಾಣವಾಗಿರುವ ಬಿಸಿಸಿಐ, ಅವರಿಂದಲೂ ಮುಕ್ತಿ ಕಾಣಬಹುದು. ಸದ್ಯ ಕ್ರಿಕೆಟ್, ಉದ್ಯಮಿಗಳು ಮತ್ತು ರಾಜಕಾರಣಿಗಳ ಹಿಡಿತದಿಂದ ಒಂದಿಷ್ಟಾದರೂ ಮುಕ್ತವಾಗಬೇಕಾದರೆ ರಾಜಕಾರಣಿಗಳು ಮತ್ತು ಅಧಿಕಾರಿಗಳು ಬಿಸಿಸಿಐನಿಂದ ಹೊರಗಿರುವಂತಾಗಬೇಕು. ಸರಕಾರದಲ್ಲೂ, ಬಿಸಿಸಿಐಯಲ್ಲೂ ಅಧಿಕಾರ ಹೊಂದಿ ಹಣ ಹೂಡುವ ಪ್ರವೃತ್ತಿ ಈ ಮೂಲಕ ನಿಲ್ಲುತ್ತದೆ. ಕ್ರೀಡೆಯನ್ನು ಕಲುಷಿತಗೊಳಿಸುವ ರಾಜಕೀಯಕ್ಕೂ ಒಂದಿಷ್ಟು ಕಡಿವಾಣ ಬೀಳುವಂತಾಗುತ್ತದೆ. ಒಬ್ಬ ವ್ಯಕ್ತಿ ಬಿಸಿಸಿಐನಲ್ಲಿ ಒಂದೇ ಸಲ ಎರಡು ಹುದ್ದೆಗಳನ್ನು ಹೊಂದಿರಬಾರದು ಮತ್ತು ಲಾಭದಾಯಕ ಹುದ್ದೆಯಲ್ಲಿರುವವರು ಕ್ರಿಕೆಟ್ ಆಡಳಿತದಲ್ಲಿ ಇರಬಾರದು ಎನ್ನುವುದನ್ನೂ ಸುಪ್ರೀಂಕೋರ್ಟ್ ಅಂಗೀಕರಿಸಿರುವುದು ಸರಕಾರದೊಳಗಿರುವ ಕೆಲವರಿಗೆ ನುಂಗಲಾರದ ತುತ್ತಾಗಲಿದೆ. ಆದರೆ ಇದೇ ಸಂದರ್ಭದಲ್ಲಿ ಬಿಸಿಸಿಐಯನ್ನು ಮಾಹಿತಿ ಹಕ್ಕು ಕಾಯ್ದೆಯಡಿ ತರುವ ಮತ್ತು ಬೆಟ್ಟಿಂಗ್ ಅನ್ನು ಕಾನೂನು ಬದ್ಧಗೊಳಿಸುವ ಶಿಫಾರಸು ಜಾರಿ ಬಗ್ಗೆ ಸುಪ್ರೀಂಕೋರ್ಟ್ ವೌನತಾಳಿದೆ. ಇದು ಸಂಸತ್ತಿಗೆ ಸಂಬಂಧಪಟ್ಟ ವಿಷಯ ಎಂದು ಹೇಳಿದೆ.

ಕ್ರಿಕೆಟ್‌ನಲ್ಲಿ ಬೆಟ್ಟಿಂಗ್‌ನ್ನು ಕಾನೂನು ಬದ್ಧಗೊಳಿಸುವುದು ಎಂದರೆ, ಕ್ರಿಕೆಟ್‌ನ್ನು ಅಧಿಕೃತವಾಗಿಯೇ ಜೂಜು ಎಂದು ಘೋಷಿಸಿದಂತೆ. ಲೋಧಾ ಸಮಿತಿಯ ಈ ಶಿಫಾರಸು ಕ್ರಿಕೆಟ್‌ನ ಕ್ರೀಡಾ ಸ್ಫೂರ್ತಿಗೆ ಅವಮಾನವನ್ನು ಮಾಡಬಹುದು. ಆದರೆ ಇದೇ ಸಂದರ್ಭದಲ್ಲಿ ದೇಶದ ಜನರಿಂದಲೇ ಕೋಟಿ ಕೋಟಿ ದೋಚುವ, ಸರಕಾರದಿಂದ ಅಪಾರ ಸವಲತ್ತುಗಳನ್ನು ಪಡೆಯುವ ಬಿಸಿಸಿಐಯನ್ನು ಮಾಹಿತಿ ಹಕ್ಕು ಕಾಯ್ದೆಯಡಿ ತಂದರೆ ಕ್ರಿಕೆಟ್ ವ್ಯವಹಾರ ಇನ್ನಷ್ಟು ಪಾರದರ್ಶಕವಾಗುವುದಕ್ಕೆ ಸಾಧ್ಯವಾಗಬಹುದು. ಅಂತೆಯೇ ಕೇಳುವವರೇ ಇಲ್ಲದ ಬಿಸಿಸಿಐ ಒಳಗಿನ ಅವ್ಯವಹಾರಗಳು ಸುಲಭವಾಗಿ ಬೆಳಕಿಗೆ ಬರಬಹುದು. ಈ ನಿಟ್ಟಿನಲ್ಲಿ ಬಿಸಿಸಿಐ ಮಾಹಿತಿ ಹಕ್ಕು ಕಾಯ್ದೆಯಡಿ ಬರುವಂತೆ ನೋಡಿಕೊಳ್ಳುವುದು ಸರಕಾರದ ಹೊಣೆಯಾಗಿದೆ. ಆದರೆ ಅದರಿಂದ ರಾಜಕಾರಣಿಗಳ ಬಂಡವಾಳಗಳು ಬಯಲಾಗುವ ಸಾಧ್ಯತೆಗಳಿರುವುದರಿಂದ ಮತ್ತು ಬಿಸಿಸಿಐ ಒಳಗಿರುವ ಹೆಗ್ಗಣಗಳಿಗೆ ತೊಂದರೆಯಾಗುವುದರಿಂದ ಸಂಸತ್ತಿನಲ್ಲಿ ಕಾನೂನು ಜಾರಿಗೊಳಿಸಲು ರಾಜಕಾರಣಿಗಳು ಆಸಕ್ತಿ ವಹಿಸಲಾರರು. ಜೊತೆಗೆ ಸುಪ್ರೀಂ ಸಮ್ಮತಿಯನ್ನೇ ಎಷ್ಟರಮಟ್ಟಿಗೆ ಜಾರಿಗೆ ತರಬಹುದು ಎನ್ನುವ ಅನುಮಾನವೂ ಇದೆ. ಅದೇನೇ ಇರಲಿ. ಭಾರತದಲ್ಲಂತೂ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಕ್ರಿಕೆಟ್, ತನ್ನನ್ನು ಸುತ್ತಿರುವ ಬಂದಣಿಕೆಗಳಿಂದ ಕಳಚಿಕೊಂಡು ನೈಜ ಆಟವಾಗಿ ಮಾರ್ಪಾಡುಗೊಳ್ಳುವ ಅಗತ್ಯವಂತೂ ಇದೆ. ಈ ನಿಟ್ಟಿನಲ್ಲಿ ಲೋಧಾ ಸಮಿತಿಯ ಶಿಫಾರಸನ್ನು ಜಾರಿಗೊಳಿಸುವುದು ಸರಕಾರದ ಕರ್ತವ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News