ಯುಎಇಯಲ್ಲಿ ಹೆಚ್ಚುತ್ತಿದೆ ಉದ್ಯೋಗಾವಕಾಶ

Update: 2016-07-20 07:06 GMT

ಗಲ್ಫ್ ಕಾರ್ಪೊರೇಶನ್ ಕೌನ್ಸಿಲ್ (ಜಿಸಿಸಿ) ಪ್ರಾಂತ ಸೇರಿದಂತೆ ಹಲವು ದೇಶಗಳಲ್ಲಿ ಉದ್ಯೋಗ ಅವಕಾಶಗಳು ಕಡಿಮೆಯೇ ಇವೆ. ಆದರೆ ಯುಎಇಯಲ್ಲಿ ಉದ್ಯೋಗಾವಕಾಶ ಹೆಚ್ಚಾಗುತ್ತಿದೆ ಎಂದು ಅಂತರ್ಜಾಲ ಉದ್ಯೋಗ ಟ್ರಾಕರ್ ಹೇಳಿದೆ.

ಮಧ್ಯಪ್ರಾಚ್ಯದಲ್ಲಿ ಉದ್ಯೋಗಾವಕಾಶಗಳ ವಿವರ ನೀಡುವ ಮಾನ್‌ಸ್ಟರ್ ಎಂಪ್ಲಾಯ್ಮೆಂಟ್ ಇಂಡೆಕ್ಸ್ ಪ್ರಕಾರ ಯುಎಇಯಲ್ಲಿ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದಲ್ಲಿ 2016 ಜೂನ್‌ನಲ್ಲಿ ಉದ್ಯೋಗ ಅವಕಾಶಗಳು ಶೇ. 10ರಷ್ಟು ಹೆಚ್ಚಾಗಿದೆ. ಹಾಗೆಯೇ ಬಹರೈನ್ ಮತ್ತು ಓಮನ್‌ನಲ್ಲೂ ಶೇ. 10 ಮತ್ತು ಶೇ. 23ರಷ್ಟು ಉದ್ಯೋಗಾವಕಾಶ ಏರಿದೆ.

ಈ ಸಕಾರಾತ್ಮಕ ಟ್ರೆಂಡ್ ಮುಂದುವರಿಯುವ ನಿರೀಕ್ಷೆ ಇದೆ. ಮುಖ್ಯವಾಗಿ ಯುಎಇಯನ್ನು ಅರ್ಥಶಾಸ್ತ್ರಜ್ಞರು ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾದಲ್ಲಿಯೇ ಅತೀ ಭರವಸೆಯ ದೇಶವಾಗಿ ನೋಡುತ್ತಿದ್ದಾರೆ ಎಂದು ಮಾನ್‌ಸ್ಟರ್ ಡಾಟ್ ಕಾಂನ ಏಷ್ಯಾ ಪೆಸಿಫಿಕ್ ಮತ್ತು ಮಧ್ಯಪ್ರಾಚ್ಯ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಮೋದಿ ಹೇಳಿದ್ದಾರೆ.

ಆದರೆ ಜಿಸಿಸಿ ಪ್ರಾಂತದಲ್ಲಿ ಒಟ್ಟಾರೆ ಉದ್ಯೋಗಾವಕಾಶಗಳು ಈಗಲೂ ನಕಾರಾತ್ಮಕವಾಗಿಯೇ ಇವೆ. ಈಜಿಪ್ತ್, ಕತಾರ್, ಸೌದಿ ಅರೇಬಿಯ ಮತ್ತು ಕುವೈತ್‌ನಲ್ಲಿ ಶೇ. 30, ಶೇ. 25, ಶೇ. 18 ಮತ್ತು ಶೇ.9ರಷ್ಟು ಇಳಿದಿವೆ. ಹೀಗೆ ಉದ್ಯೋಗಾವಕಾಶಗಳು ಕೆಳಮಟ್ಟದಲ್ಲಿರುವ ದೇಶಗಳು ಹೆಚ್ಚಾಗಿರುವ ಕಾರಣದಿಂದ ಒಟ್ಟಾರೆ ಪ್ರಾಂತದ ಉದ್ಯೋಗಾವಕಾಶಗಳು ಕಳೆದ ಬಾರಿಗೆ ಹೋಲಿಸಿದಲ್ಲಿ ಶೇ. 21ರಷ್ಟು ಕೆಳಗಿಳಿದಿದೆ. ಮಾಲೀಕರು ಸಾಕಷ್ಟು ಜಾಗರೂಕತೆಯಿಂದ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ ಎಂದು ಮೋದಿ ಹೇಳಿದ್ದಾರೆ.

ಇತರ ವಿಶ್ಲೇಷಕರು ಹೇಳುವಂತೆ ಯುಎಇ ಉದ್ಯೋಗ ನಿರೀಕ್ಷಿಸುವವರಿಗೆ ಸವಾಲಿನ ಸ್ಥಳ. ಏಕೆಂದರೆ ಇಲ್ಲಿ ಕೆಲವೇ ಕಂಪನಿಗಳಷ್ಟೇ ಇವೆ. ಮಾರ್ಗನ್ ಮೆಕ್‌ಕಿನ್ಲೀ ಯುಎಇ ಎಂಪ್ಲಾಯ್ಮೆಂಟ್ ಮಾನಿಟರ್ ಪ್ರಕಾರ ಈ ದೇಶದಲ್ಲಿ ಉದ್ಯೋಗಾವಕಾಶ ಶೇ. 9ರಷ್ಟು ಇಳಿದಿದೆ. 2015ರ ಕೊನೆಯ ಭಾಗದಲ್ಲಿ 7,899 ಅವಕಾಶವಿದ್ದರೆ 2016ರ ಮೊದಲ ಅವಧಿಯಲ್ಲಿ 7,212 ಅವಕಾಶಗಳಿದ್ದವು.

ಆದರೆ ಮೋದಿ ಪ್ರಕಾರ ಗಲ್ಫ್‌ನಲ್ಲಿ ಇತರ ದೇಶಗಳಿಗೆ ಹೋಲಿಸಿದರೆ ಯುಎಇ ಉತ್ತಮ ಜಾಗ. ಕೆಲವು ಉದ್ಯಮಗಳು ಇಲ್ಲಿ ಆರ್ಥಿಕ ಹಿಂಜರಿತವನ್ನು ಮತ್ತು ಕಡಿಮೆ ತೈಲ ಬೆಲೆಗಳ ಹೊರತಾಗಿಯೂ ಬೆಳೆದಿವೆ. ಆರೋಗ್ಯ ಕ್ಷೇತ್ರ ಅತೀ ಹೆಚ್ಚು ಉದ್ಯೋಗವನ್ನು ನೀಡುತ್ತಿದೆ. ಮಾನ್‌ಸ್ಟರ್ ಸೂಚ್ಯಂಕ ಪ್ರಕಾರ ಆರೋಗ್ಯ ಕ್ಷೇತ್ರದಲ್ಲಿ ಕಳೆದ ಅವಧಿಗೆ ಹೋಲಿಸಿದಲ್ಲಿ 2016 ಜೂನ್‌ನಲ್ಲಿ ಉದ್ಯೋಗಗಳು ಶೇ. 46ರಷ್ಟು ಏರಿದೆ. ಎರಡನೆ ಸ್ಥಾನದಲ್ಲಿರುವುದು ರಿಟೇಲ್/ವ್ಯಾಪಾರ ಮತ್ತು ಲಾಜಿಸ್ಟಿಕ್ ಕ್ಷೇತ್ರ. ಇದರಲ್ಲಿ ಶೇ. 32ರಷ್ಟು ಉದ್ಯೋಗ ಏರಿಕೆಯಾಗಿದೆ. ಮೂರನೆ ಅತ್ಯುತ್ತಮ ಕ್ಷೇತ್ರವೆಂದರೆ ಗ್ರಾಹಕ ಸರಕುಗಳು, ಆಹಾರ, ಗೃಹೋತ್ಪನ್ನಗಳು, ಬಟ್ಟೆ/ಜವಳಿ/ಚರ್ಮ, ಆಭರಣ ಉದ್ಯಮ. ಇದರಲ್ಲಿ ಶೇ. 29ರಷ್ಟು ಪ್ರಗತಿ ನಮೂದಾಗಿದೆ.

ಕೃಪೆ: http://gulfnews.com/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News