×
Ad

LPGಯಲ್ಲಿ 22,000 ಕೋಟಿ ರೂ. ಉಳಿತಾಯ: ಪ್ರಧಾನಿ

Update: 2016-07-21 16:02 IST

ಕೇಂದ್ರ ಸರ್ಕಾರವು 2014-15 ಮತ್ತು 2015-16ರ ವಿತ್ತೀಯ ವರ್ಷದಲ್ಲಿ ರೂ. 22,000 ಕೋಟಿಯನ್ನು ಎಲ್‌ಪಿಜಿ ಸಬ್ಸಿಡಿ ಕಾರ್ಯಕ್ರಮದಲ್ಲಿ ಉಳಿಸಿದೆ ಎಂದು ಹೇಳಿಕೊಂಡಿದೆ. ಸಬ್ಸಿಡಿಯನ್ನು ಬ್ಯಾಂಕ್ ಖಾತೆಗೆ ನೇರ ವರ್ಗಾವಣೆ ಮತ್ತು ಗ್ರಾಹಕರಿಗೆ ತಮ್ಮ ಸಬ್ಸಿಡಿ ಬಿಡುವಂತೆ ಹೇಳುವ ಮೂಲಕ ಈ ಲಾಭವಾಗಿದೆ ಎಂದು ಸರ್ಕಾರ ಹೇಳಿದೆ.

 ಆದರೆ ಈ ಅಧಿವೇಶನದಲ್ಲಿ ಸಂಸತ್ತಿನಲ್ಲಿ ಇಡಲಾದ ಕ್ಯಾಗ್ ವರದಿ ಈ ಹೇಳಿಕೆಗೆ ತದ್ವಿರುದ್ಧವಾಗಿದೆ. ಜನರು ಸ್ವಯಂ ಆಗಿ ಸಬ್ಸಿಡಿ ಬಿಟ್ಟ ಕಾರಣ ಮತ್ತು ನೇರ ಹಣ ವರ್ಗಾವಣೆಯಿಂದ ಕೇವಲ ರೂ. 2000 ಕೋಟಿ ಮಾತ್ರ ಉಳಿಸಲಾಗಿದೆ ಎಂದು ಕ್ಯಾಗ್ ಹೇಳಿದೆ. ಉಳಿದ ಉಳಿತಾಯವು ವಾರ್ಷಿಕವಾಗಿ ಏಕಾಏಕಿ ಎಲ್‌ಪಿಜಿ ಬೆಲೆಗಳು ಇಳಿದ ಕಾರಣದಿಂದಾಗಿ ಆಗಿದೆ ಎನ್ನಲಾಗಿದೆ.

ಅಲ್ಲದೆ ಎಲ್‌ಪಿಜಿ ಯೋಜನೆಯ ನೇರ ಸಬ್ಸಿಡಿ ವರ್ಗಾವಣೆ ಯೋಜನೆಯಲ್ಲಿ ಹಲವು ಸಮಸ್ಯೆಗಳಿರುವುದನ್ನು ಕ್ಯಾಗ್ ಹೇಳಿದೆ. ಅವುಗಳಲ್ಲಿ ಗೃಹ ಸಬ್ಸಿಡಿಯನ್ನು ವಾಣಿಜ್ಯ ಬಳಕೆಗೆ ವರ್ಗಾಯಿಸಿರುವುದು ಮತ್ತು ವಾಣಿಜ್ಯ ಬಳಕೆಯನ್ನು ಗೃಹ ಬಳಕೆಗೆ ವರ್ಗಾಯಿಸಿರುವುದೂ ಸೇರಿದೆ. ಮೋದಿ ಸರ್ಕಾರ ಸಬ್ಸಿಡಿ ಬಿಡುವಂತೆ ಎಲ್‌ಪಿಜಿ ಗ್ರಾಹಕರಿಗೆ ತೀವ್ರ ಪ್ರಚಾರ ಮಾಡುತ್ತಿದೆ. ಜೊತೆಗೆ ನೇರ ಸಬ್ಸಿಡಿ ವರ್ಗಾವಣೆಯಿಂದಲೂ ಲಾಭವಾಗಿದೆ ಎಂದಿದೆ. ಒಟ್ಟಾರೆ ರೂ. 22,000 ಕೋಟಿ ಉಳಿತಾಯವಾಗಿದೆ ಎಂದೂ ಹೇಳಿದೆ.

ಸೋರಿಕೆ ತಪ್ಪಿಸಲು 2014 ನವೆಂಬರಿನಲ್ಲಿ ಸಬ್ಸಿಡಿಯನ್ನು ನೇರವಾಗಿ ಗ್ರಾಹಕರ ಖಾತೆಗೆ ನೀಡುವ ಯೋಜನೆ ಜಾರಿಯಾಗಿತ್ತು. ಈ ಯೋಜನೆ ಇಲ್ಲದಿದ್ದರೆ ಸರ್ಕಾರ ರೂ. 15,000 ಕೋಟಿ ಹೆಚ್ಚು ವೆಚ್ಚ ಮಾಡಬೇಕಾಗುತ್ತಿತ್ತು ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಇತ್ತೀಚೆಗೆ ಹೇಳಿದ್ದರು. ಪ್ರಧಾನಿ ಕೂಡ ಇದೇ ಮಾತನ್ನು ತಮ್ಮ ಪ್ರಚಾರಗಳ ವೇಳೆ ಹೇಳಿದ್ದಾರೆ. ಮಧ್ಯವರ್ತಿಗಳನ್ನು ತಪ್ಪಿಸುವ ಉತ್ತಮ ಕ್ರಮ ಕೈಗೊಂಡಿದ್ದಾಗಿ ಅವರು ಸ್ವತಃ ಪ್ರಶಂಸಿಸಿಕೊಂಡಿದ್ದರು. ಆದರೆ ಕ್ಯಾಗ್ ವರದಿ ಹೇಳಿರುವಂತೆ ಜಾಗತಿಕವಾಗಿ ಎಲ್‌ಪಿಜಿ ಬೆಲೆ ಇಳಿದಿರುವುದೇ ಉಳಿತಾಯಕ್ಕೆ ಕಾರಣವಾಗಿದೆ. ಭಾರತದ ಎಲ್‌ಪಿಜಿ ಆಮದು 2014-15ರಲ್ಲಿ ರೂ. 36,571 ಕೋಟಿ ಮತ್ತು 2015-16ರಲ್ಲಿ ರೂ. 25,626ಕ್ಕೆ ಇಳಿದಿದೆ. ಹೀಗಾಗಿ ಒಂದೇ ವರ್ಷದಲ್ಲಿ ರೂ. 10,945 ಕೋಟಿ ಉಳಿತಾಯವಾಗಿದೆ. ಆದರೆ ಆಮದು ಮಾಡಿಕೊಂಡ ಎಲ್‌ಪಿಜಿ ಪ್ರಮಾಣವು 2014-15ರ 8,313 ಸಾವಿರ ಮೆಟ್ರಿಕ್ ಟನ್‌ಗಳಿಂದ 2015-16ರಲ್ಲಿ 8,885 ಸಾವಿರ ಮೆಟ್ರಿಕ್ ಟನ್‌ಗಳಿಗೆ ಏರಿದೆ.

ಕೃಪೆ: www.thehindu.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News