×
Ad

ಮುಸ್ಲಿಮರು ಅಮೆರಿಕದ ಅವಿಭಾಜ್ಯ ಅಂಗ : ಒಬಾಮ

Update: 2016-07-22 13:21 IST

ವಾಷಿಂಗ್ಟನ್, ಜು.22: ''ಮುಸ್ಲಿಮರು ಅಮೆರಿಕದ ಅವಿಭಾಜ್ಯ ಅಂಗ. ಅವರು ನಮ್ಮ ಅಗ್ನಿಶಾಮಕ ಅಧಿಕಾರಿಗಳಾಗಿ, ಪೊಲೀಸ್ ಅಧಿಕಾರಿಗಳಾಗಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಾ ನಮ್ಮ ಜೀವನವನ್ನು ಉತ್ತಮವಾಗಿಸಿದ್ದಾರೆ'' ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಈದ್-ಉಲ್-ಫಿತ್ರ್ ಸಂಬಂಧ ತಡವಾಗಿ ಈಸ್ಟ್ ರೂಮ್‌ನಲ್ಲಿ ನಡೆದ ಒಂದು ಸೌಹಾರ್ದ ಕೂಟದಲ್ಲಿ ಮಾತನಾಡುತ್ತಾ ಹೇಳಿದ್ದಾರೆ.

ಸುಮಾರು ಒಂದು ನೂರಕ್ಕೂ ಮಿಕ್ಕಿ ಅಮೆರಿಕನ್ ಮುಸ್ಲಿಮರು ಹಾಗೂ ವಿದೇಶಗಳಿಂದ ಬಂದ ಅತಿಥಿಗಳು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.
ಅಮೆರಿಕದ ಅಭಿವೃದ್ಧಿಗೆ ಮುಸ್ಲಿಮರ ಕೊಡುಗೆಯನ್ನು ಹೊಗಳಿದ ಒಬಾಮ, ''ಇತ್ತೀಚಿಗಿನ ಉಗ್ರ ದಾಳಿಗಳ ನಂತರ ಹಲವರನ್ನು ತಾರತಮ್ಯದಿಂದ ನೋಡಲಾಗುತ್ತಿರುವುದನ್ನು ಉಲ್ಲೇಖಿಸಿ ನಾವು ನಿಮ್ಮ ಮೇಲೆ ವಿಶ್ವಾಸವಿರಿಸಿದ್ದೇವೆ ಎಂದು ಇಲ್ಲಿ ನೆರೆದಿರುವ ಯುವ ಜನರಿಗೆ ಮುಖ್ಯವಾಗಿ ನಾನು ಹೇಳಬಯಸುತ್ತೇನೆ'' ಎಂದು ಒಬಾಮ ನುಡಿದರು.

'ಮುಸ್ಲಿಮ್ ಅಮೆರಿಕನ್ನರು ಕೂಡ ಬಾಕಿ ಅಮೆರಿಕನ್ನರಷ್ಟೇ ದೇಶಭಕ್ತಿಯನ್ನು ಹೊಂದಿದ್ದಾರೆ' ಎಂದು ಸಭಿಕರ ಕರತಾಡನದ ನಡುವೆ ಒಬಾಮ ಹೇಳಿದರು.
ಹದಿನೈದು ವರ್ಷದ ಬಾಲಕಿ ಬೀವರ್ಟನ್‌ನ ಆಯಿಷಾ ಓಸ್ಮಾನ್ ಒಬಾಮರನ್ನು ಸಭೆಗೆ ಪರಿಚಯಿಸಿದರು. ಇತರ ಮಕ್ಕಳು ತನ್ನನ್ನು ಭಯೋತ್ಪಾದಕಿಯೆಂದು ಕರೆದು ಜನಾಂಗೀಯ ನಿಂದನೆ ಕೂಡ ಮಾಡುತ್ತಿದ್ದಾರೆಂದು ಆಕೆ ಒಬಾಮರಿಗೆ ಮೇ ತಿಂಗಳಲ್ಲಿ ಪತ್ರ ಬರೆದಿದ್ದಳು.

''ಆ ಪತ್ರ ಹೃದಯ ಒಡೆಯುವಂತಹದ್ದು'' ಎಂದು ಒಬಾಮ ಹೇಳಿದರು. ''ಪವಿತ್ರ ರಮಝಾನ್ ತಿಂಗಳಲ್ಲಿ ಮಸೀದಿಗಳ ಮೇಲೆ ಕೆಲವೆಡೆ ದಾಳಿ ನಡೆದಿದೆ. ಅಂತಹ ಘಟನೆಗಳು ಅಮೆರಿಕದಲ್ಲಿ ನಡೆಯಕೂಡದು'' ಎಂದು ನುಡಿದ ಒಬಾಮ, ''ಅಮೆರಿಕನ್ ಮುಸ್ಲಿಮರು ಸೇರಿದಂತೆ ಎಲ್ಲಾ ಅಮೆರಿಕನ್ನರೂ ದ್ವೇಷ ಭಾವನೆ ಹಾಗೂ ತಾರತಮ್ಯವನ್ನು ತಿರಸ್ಕರಿಸಬೇಕು'' ಎಂದು ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News