×
Ad

ದಯಾಶಂಕರ್ ಇನ್ನೂ ಪತ್ತೆಯಿಲ್ಲ : ಬಿಎಸ್ಪಿ ನಾಯಕರ ವಿರುದ್ಧ ಎಫ್‌ಐಆರ್‌ಗೆ ಕುಟುಂಬದ ನಿರ್ಧಾರ

Update: 2016-07-22 18:24 IST

ಲಕ್ನೊ, ಜು.22: ಉಚ್ಚಾಟಿತ ಬಿಜೆಪಿ ನಾಯಕ ದಯಾಶಂಕರ್ ಸಿಂಗ್‌ರ ಪತ್ತೆಗಾಗಿ ಪೊಲೀಸರು ಹಗಲು ರಾತ್ರಿ ದಾಳಿಗಳನ್ನು ನಡೆಸುತ್ತಿದ್ದಾರೆ. ಇದೇ ವೇಳೆ, ಸಿಂಗ್‌ರ ವಿರುದ್ಧ ಮಾನ ಹಾನಿಕರ ಭಾಷೆ ಬಳಸಿದುದಕ್ಕಾಗಿ ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಹಾಗೂ ಪಕ್ಷದ ಹಿರಿಯ ನಾಯಕರ ವಿರುದ್ಧ ಎಫ್‌ಐಆರ್ ದಾಖಲಿಸುವ ಬೆದರಿಕೆಯನ್ನು ಅವರ ಕುಟುಂಬವು ಹಾಕಿದೆ.
ನಿನ್ನೆ ರಾತ್ರಿಯೂ ದಾಳಿಗಳನ್ನು ನಡೆಸಲಾಗಿದೆ. ಆದರೆ, ಸಿಂಗ್ ಎಲ್ಲಿದ್ದಾರೆಂಬ ಕುರಿತು ಯಾವುದೇ ಸುಳಿವು ಸಿಕ್ಕಿಲ್ಲವೆಂದು ಪೊಲೀಸ್ ಅಧೀಕ್ಷಕ ಮನೋಜ್ ಕುಮಾರ್ ಝಾ ಹೇಳಿದ್ದಾರೆ.
ಸಿಂಗ್, ಲಕ್ನೊದ ನ್ಯಾಯಾಲಯಕ್ಕೆ ಶರಣಾಗಬಹುದೆಂದು ಖಚಿತವಲ್ಲದ ವರದಿಗಳು ತಿಳಿಸಿವೆ.
ಸಿಂಗ್‌ರ ಸೋದರ ಧರ್ಮೇಂದ್ರ ಎಂಬವರನ್ನು ವಿಚಾರಣೆಗಾಗಿ ವಶಪಡಿಸಿಕೊಳ್ಳಲಾಗಿದೆ. ಆದರೆ, ಅವರಿಂದ ಯಾವುದೇ ಮಾಹಿತಿ ದೊರೆತಿಲ್ಲ. ಸಿಂಗ್, ಜು.21ರಂದು ಗೋರಖಪುರಕ್ಕೆ ಹೋಗಿದ್ದಾರೆ. ಆ ಬಳಿಕ ಅವರು ಸಂಪರ್ಕಕ್ಕೆ ದೊರೆತಿಲ್ಲವೆಂದಷ್ಟೇ ಅವರು ತಿಳಿಸಿದರೆಂದು ಝಾ ಹೇಳಿದ್ದಾರೆ.
ನಿನ್ನೆ ರಾತ್ರಿ ಬರಿಯದಲ್ಲಿರುವ ಸಿಂಗ್‌ರ ಸೋದರ ಸಂಬಂಧಿಯೊಬ್ಬರ ಮನೆಗೂ ದಾಳಿ ನಡೆಸಲಾಗಿತ್ತು. ಆದರೆ ಅಲ್ಲಿ ಏನೂ ಪತ್ತೆಯಾಗಿಲ್ಲ. ಜು.20ರ ರಾತ್ರಿಯಿಂದೀಚೆ ಅವರ ಮೊಬೈಲ್ ಸ್ಥಗಿತಗೊಳಿಸಲ್ಪಟ್ಟಿದೆಯೆಂದು ಅವರು ತಿಳಿಸಿದ್ದಾರೆ.
ನಿನ್ನೆ ಹಜ್ರತ್‌ಗಂಜ್‌ನಲ್ಲಿ ಅಂಬೇಡ್ಕರ್ ಪ್ರತಿಮೆಯ ಬಳಿ ಪ್ರತಿಭಟನೆ ನಡೆಸಿದ್ದ ಬಿಎಸ್ಪಿ ಕಾರ್ಯಕರ್ತರು, ಮಾನಹಾನಿಕರ ಭಾಷೆಯ ಬ್ಯಾನರ್‌ಗಳನ್ನು ಹಿಡಿದಿದ್ದರು. ಅವರ ಮಾತು ನಡವಳಿಕೆಯನ್ನೆಲ್ಲ ಇಡೀ ದೇಶವೇ ಕೇಳಿದೆ-ಕಂಡಿದೆ. ಅದರಿಂದ ತನ್ನ 80ರ ಹರೆಯದ ಅತ್ತೆಗೆ ಹೇಗಾಗಿರಬೇಡ? ಎಂದಿರುವ ಸಿಂಗ್‌ರ ಪತ್ನಿ ಸ್ವಾತಿ ಸಿಂಗ್, ಮಾಯಾವತಿ ಹಾಗೂ ಬಿಎಸ್ಪಿ ನಾಯಕರ ವಿರುದ್ಧ ಎಫ್‌ಐಆರ್ ದಾಖಲಿಸುವ ಬೆದರಿಕೆ ಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News