29 ಜನರಿದ್ದ ವಾಯುಪಡೆಯ ವಿಮಾನ ನಾಪತ್ತೆ
ಚೆನ್ನೈ/ಹೊಸದಿಲ್ಲಿ,ಜು.22: 29 ಜನರಿದ್ದ ಭಾರತೀಯ ವಾಯುಪಡೆಯ ಸಾರಿಗೆ ವಿಮಾನವೊಂದು ಶುಕ್ರವಾರ ಚೆನ್ನೈನಿಂದ ಅಂಡಮಾನ್-ನಿಕೋಬಾರ್ ದ್ವೀಪ ಸಮೂಹದ ರಾಜಧಾನಿ ಪೋರ್ಟ್‌ಬ್ಲೇರ್‌ಗೆ ಪ್ರಯಾಣಿಸುತ್ತಿದ್ದಾಗ ನಿಗೂಢವಾಗಿ ನಾಪತ್ತೆಯಾಗಿದೆ.
ಬಂಗಾಳ ಕೊಲ್ಲಿಯ ಮೇಲಿನಿಂದ ಸಾಗುತ್ತಿದ್ದಾಗ ನಾಪತ್ತೆಯಾಗಿದೆ ಎಂದು ನಂಬಲಾಗಿರುವ ರಷ್ಯಾ ನಿರ್ಮಿತ ಎಎನ್-32 ವಿಮಾನವು ಬೆಳಿಗ್ಗೆ 8:30ಕ್ಕೆ ಚೆನ್ನೈನ ತಾಂಬರಂ ವಾಯುನೆಲೆಯಿಂದ ಹಾರಾಟವನ್ನು ಪ್ರಾರಂಭಿಸಿತ್ತು. ಪೂರ್ವಾಹ್ನ 11:45ಕ್ಕೆ ಅದು ಪೋರ್ಟ್ ಬ್ಲೇರ್ ತಲುಪಬೇಕಾಗಿತ್ತು. 9:16ಕ್ಕೆ ಚೆನ್ನೈನ ಪೂರ್ವಕ್ಕೆ 151 ನಾಟಿಕಲ್ ಮೈಲು ದೂರದಲ್ಲಿದ್ದಾಗ ಅದು ಕೊನೆಯ ಬಾರಿಗೆ ಭೂ ನಿಯಂತ್ರಣ ಕೇಂದ್ರದೊಂದಿಗೆ ಸಂಪರ್ಕ ಸಾಧಿಸಿತ್ತು. ಭೂ ನಿಯಂತ್ರಣ ಕೇಂದ್ರದೊಡನೆ ಸಂಪರ್ಕ ಕಡಿತಗೊಂಡಾಗ ವಿಮಾನವು 23,000 ಅಡಿಗಳಷ್ಟು ಎತ್ತರದಲ್ಲಿ ಹಾರಾಡುತ್ತಿತ್ತು ಮತ್ತು ಅದು ತನ್ನ ಎತ್ತರವನ್ನು ಕಳೆದುಕೊಳ್ಳತೊಡಗಿತ್ತು ಎಂದು ರಕ್ಷಣಾ ಮೂಲಗಳು ತಿಳಿಸಿದವು.
ಇಂಧನ ಮರುಪೂರೈಕೆಯಿಲ್ಲದೆ ನಾಲ್ಕು ಗಂಟೆಗಳ ಕಾಲ ಅದು ಹಾರಾಟ ನಡೆಸಬಲ್ಲುದು ಎಂದೂ ಅವು ಹೇಳಿದವು.
ವಿಮಾನದಲ್ಲಿ ಆರು ಚಾಲಕ ಸಿಬ್ಬಂದಿಗಳಿದ್ದರು. ಅದು ವಾಯುಪಡೆಯ ಸಿಬ್ಬಂದಿಗಳನ್ನು ಮಲಕ್ಕಾ ಜಲಸಂಧಿ ಸಮೀಪದ ಆಯಕಟ್ಟಿನ ದ್ವೀಪಕ್ಕೆ ಸಾಗಿಸುತ್ತಿತ್ತು. ಭಾರತವು ಅಲ್ಲಿ ಸೇನಾನೆಲೆಯೊಂದನ್ನು ಹೊಂದಿದೆ.
ನಾಪತ್ತೆಯಾಗಿರುವ ವಿಮಾನಕ್ಕಾಗಿ ಐಎಎಫ್,ನೌಕಾಪಡೆ ಮತ್ತು ತಟರಕ್ಷಣಾ ಪಡೆಗಳು ವ್ಯಾಪಕ ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿವೆ.
ಎ ಪಿ-81 ಕಣ್ಗಾವಲು ವಿಮಾನ,ಒಂದು ಡಾರ್ನಿಯರ್ ಮತ್ತು ಐಎನ್‌ಎಸ್ ಸಹ್ಯಾದ್ರಿ,ಐಎನ್‌ಎಸ್ ರಜಪೂತ್ ಮತ್ತು ಐಎನ್‌ಎಸ್ ರಣವಿಜಯ ಸೇರಿದಂತೆ ಹಲವಾರು ಹಡಗುಗಳನ್ನು ಚೆನ್ನೈನಿಂದ ಪೂರ್ವಕ್ಕೆ 200 ನಾಟಿಕಲ್ ಮೈಲು ದೂರದಲ್ಲಿ ನಡೆಯುತ್ತಿರುವ ಶೋಧ ಕಾರ್ಯಾಚರಣೆಯಲ್ಲಿ ತೊಡಗಿಸಲಾಗಿದೆ. ರಷ್ಯಾ ನಿರ್ಮಿತ ಎನ್-32 ಮಿಲಿಟರಿ ಸಾರಿಗೆ ವಿಮಾನ 1984ರಿಂದಲೂ ಭಾರತೀಯ ವಾಯುಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ವಾಯುಪಡೆಯು ಪ್ರಸ್ತುತ 100ಕ್ಕೂ ಅಧಿಕ ಎಎನ್-32 ವಿಮಾನಗಳನ್ನು ಹೊಂದಿದ್ದು, ಸದ್ಯ ಇವುಗಳನ್ನು ಅತ್ಯಾಧುನಿಕ ವ್ಯವಸ್ಥೆಗಳೊಂದಿಗೆ ಮೇಲ್ದರ್ಜೆಗೇರಿಸಲಾಗುತ್ತಿದೆ.