×
Ad

ಬಿಳಿಕೋಟಿನವರೆಲ್ಲ ವೈದ್ಯರಲ್ಲ!

Update: 2016-07-22 23:00 IST

ಭಾರತದ ಆರೋಗ್ಯ ಕ್ಷೇತ್ರ ಮುರಿದು ಬಿದ್ದಿರುವುದಷ್ಟೇ ಅಲ್ಲ; ಮರುಜೋಡಿಸಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಛಿದ್ರವಾಗಿದೆ. ಕಿಡ್ನಿ ದಂಧೆ, ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯಲ್ಲಿ ಸಾವು, ಅಂಧತ್ವಕ್ಕೆ ತಳ್ಳುತ್ತಿರುವ ನೇತ್ರ ಶಸ್ತ್ರಚಿಕಿತ್ಸಾ ಶಿಬಿರಗಳಂಥ ಕುಖ್ಯಾತಿಯ ವೈದ್ಯಕೀಯ ರಂಗ ರೋಗಿಗಳ ಪಾಲಿಗೆ ಹಾಲಲ್ಲ; ಹಾಲಾಹಲ! ವೈದ್ಯರು, ನರ್ಸ್ ಹಾಗೂ ಆರೋಗ್ಯ ಕ್ಷೇತ್ರದ ಮಂದಿಯಲ್ಲಿ ಅರ್ಧಕ್ಕಿಂತಲೂ ಹೆಚ್ಚಿನವರು ಅರ್ಹತೆ ಇಲ್ಲದವರು.
ದೇಶದ ಆರೋಗ್ಯ ಕ್ಷೇತ್ರದ ವಿಶ್ಲೇಷಣೆಗೆ 2001ರ ಜನಗಣತಿ ಅಂಕಿ ಅಂಶಗಳ ಬಗ್ಗೆ ಹಲವು ಬಾರಿ ಗುದ್ದಾಡಿದ್ದಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಇತ್ತೀಚಿನ ವರದಿ, ಬೆಚ್ಚಿಬೀಳಿಸುವ ಮಾಹಿತಿಗಳನ್ನು ಬಿಚ್ಚಿಟ್ಟಿದೆ. ನಿರಂತರವಾಗಿ ಏರುತ್ತಿರುವ ಜನಸಂಖ್ಯೆಗೆ ವಿರುದ್ಧವಾಗಿ ನಮ್ಮಲ್ಲಿ ಅತ್ಯಲ್ಪ ವೈದ್ಯರಿದ್ದಾರೆ ಎನ್ನುವುದು ಒಂದು ಮಾಹಿತಿಯಾದರೆ, ಇರುವ ವೈದ್ಯರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಶೈಕ್ಷಣಿಕ ಅರ್ಹತೆ ಇಲ್ಲದವರು ಎನ್ನುವುದು ಇನ್ನೊಂದು.

ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸಿನ ಪ್ರಕಾರ, ಒಂದು ಸಾವಿರ ಜನಸಂಖ್ಯೆಗೆ ಕನಿಷ್ಠ ಒಬ್ಬ ವೈದ್ಯರಿರ ಬೇಕು. ಅಂದರೆ ಒಂದು ಲಕ್ಷ ಜನರಿಗೆ 100 ಮಂದಿ ವೈದ್ಯರು. ಆದರೆ ಭಾರತದಲ್ಲಿ ಈ ಅನುಪಾತ ಇನ್ನೂ ಒಂದು ಲಕ್ಷ ಮಂದಿಗೆ 60 ವೈದ್ಯರ ಮಟ್ಟದಲ್ಲೇ ಇದೆ.
ನಗರ ಪ್ರದೇಶಗಳಲ್ಲಿ ನಾಲ್ವರು ವೈದ್ಯರಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಒಬ್ಬರು ಮಾತ್ರ ಅಂದರೆ ನಗರ ಹಾಗೂ ಗ್ರಾಮೀಣ ಪ್ರದೇಶಗಳ ವೈದ್ಯರ ಅನುಪಾತ 4:1 ಇದೆ. ಒಂದು ಲಕ್ಷ ಮಂದಿ ಗ್ರಾಮೀಣರಿಗೆ ಇರುವ ವೈದ್ಯರು ಕೇವಲ 33. ಗ್ರಾಮೀಣ ಪ್ರದೇಶ ದಲ್ಲಿ ಕಾರ್ಯ ನಿರ್ವಹಿಸುವ ದಾದಿಯರ ಸಂಖ್ಯೆಗೂ ಇದು ಅನ್ವಯಿಸುತ್ತದೆ. ಜಾಗತಿಕ ಆರೋಗ್ಯ ಗುಣ ಮಟ್ಟವನ್ನು ತಲುಪಬೇಕಾದರೆ, ದಾದಿಯರು ಹಾಗೂ ವೈದ್ಯರ ಅನುಪಾತ 2:1 ಇರಬೇಕು. ಆದರೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಸಿಗಬೇಕಾ ದರೆ ಕಾರ್ಯನಿರ್ವಹಿಸುವ ಪ್ರತಿ ವೈದ್ಯರಿಗೆ ನಾಲ್ಕು ಮಂದಿಯಂತೆ ದಾದಿಯರು ಇರಬೇಕು.
ವಿಶ್ವ ಆರೋಗ್ಯ ಸಂಸ್ಥೆ 2013ರಲ್ಲಿ ನಡೆಸಿದ ಭಾರತದ ಆರೋಗ್ಯ ಕ್ಷೇತ್ರದ ವಿಶ್ಲೇಷಣೆಯ ಪ್ರಕಾರ, ದೇಶದಲ್ಲಿ 2000 ಹಾಗೂ 2009ರ ನಡುವೆ ವೈದ್ಯರು, ನರ್ಸ್ ಹಾಗೂ ಸೂಲಗಿತ್ತಿಯರ ಸಂಖ್ಯೆ ಸ್ವಲ್ಪಮಟ್ಟಿಗೆ ಹೆಚ್ಚಿದೆ. ಈ ಬಾರಿಯ ವರದಿಯಲ್ಲಿ ಕೂಡಾ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಶೇ. 57ರಷ್ಟು ಅಲೋಪಥಿ ವೈದ್ಯರಿಗೆ ಸೂಕ್ತ ಶೈಕ್ಷಣಿಕ ಅರ್ಹತೆಗಳು ಇಲ್ಲ ಎಂಬ ಅಂಶ ಬಹಿರಂಗವಾಗಿದೆ. ಪರ್ಯಾಯ ವೈದ್ಯ ಪದ್ಧತಿಯನ್ನು ಪ್ರಾಕ್ಟೀಸ್ ಮಾಡುತ್ತಿರುವವರಲ್ಲೂ ಅರ್ಧದಷ್ಟು ಮಂದಿಗೆ ವೈದ್ಯಕೀಯ ಪದವಿಗಳಿಲ್ಲ.

ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸು ತ್ತಿರುವ ಅಲೋಪಥಿಕ್ ವೈದ್ಯರ ಪೈಕಿ ಶೇ. 19ರಷ್ಟು ವೈದ್ಯರಿಗೆ ಮಾತ್ರ ವೈದ್ಯಕೀಯ ಪದವಿಗಳಿವೆ.ಮಾಹಿತಿಯನ್ನು 15 ವರ್ಷ ಹಿಂದೆ ಸಂಗ್ರಹಿಸಿದ ಹಿನ್ನೆಲೆಯಲ್ಲಿ ಈಗ ಪರಿಸ್ಥಿತಿ ಬದಲಾಗಿರಬಹುದೇ? ಭಾರತದ ವೈದ್ಯಕೀಯ ವ್ಯವಸ್ಥೆಯಲ್ಲಿ ಆಗಿರುವ ಅತಿದೊಡ್ಡ ಬದಲಾವಣೆ ಎಂದರೆ, ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ದೇಶದಲ್ಲಿ ವ್ಯಾಪಕವಾಗಿ ಬೆಳೆದಿರುವುದು. ಅದರಲ್ಲೂ ಮುಖ್ಯವಾಗಿ ಖಾಸಗಿ ವೈದ್ಯಕೀಯ ಹಾಗೂ ನರ್ಸಿಂಗ್ ಕಾಲೇಜುಗಳು.
2013ರ ಅಧ್ಯಯನದಿಂದ ತಿಳಿದುಬಂದ ಅಂಶ ವೆಂದರೆ, 1991ರಿಂದ 2013ರ ಅವಧಿಯಲ್ಲಿ, ಪ್ರತಿ ವರ್ಷ ವೈದ್ಯಕೀಯ ಕಾಲೇಜುಗಳ ಪ್ರವೇಶ ಪಡೆಯುವವರ ಸಂಖ್ಯೆ 22,438ರಿಂದ 49,508ಕ್ಕೆ ಹೆಚ್ಚಿದ್ದು, ಈ ಪ್ರಮಾಣ ದುಪ್ಪಟ್ಟಾಗಿದೆ. ಅಂತೆಯೇ ನರ್ಸಿಂಗ್‌ಗೆ ಪ್ರವೇಶ ಪಡೆಯುವವರ ಸಂಖ್ಯೆ 3,100 ರಿಂದ 23,800ಕ್ಕೆ ಹೆಚ್ಚಿದ್ದು, ಶೇ.66.8ರಷ್ಟು ಹೆಚ್ಚಳವಾಗಿದೆ.

ದೇಶದಲ್ಲಿ 1997ರಿಂದ 2012ರವರೆಗೆ ಜನರಲ್ ನರ್ಸಿಂಗ್ ತರಬೇತಿ ಸಂಸ್ಥೆಗಳ ಸಂಖ್ಯೆ 659ರಿಂದ 1997ಕ್ಕೆ ಹೆಚ್ಚಿದ್ದರೆ, ಸೂಲಗಿತ್ತಿ ತರಬೇತಿ ಕೇಂದ್ರಗಳ ಸಂಖ್ಯೆ 485ರಿಂದ 1997ಕ್ಕೆ ಏರಿದೆ. ಅಂತೆಯೇ ಪೂರಕ ನರ್ಸಿಂಗ್ ಹಾಗೂ ಸೂಲಗಿತ್ತಿ ತರಬೇತಿ ಸಂಸ್ಥೆಗಳ ಸಂಖ್ಯೆ 1,307ರಿಂದ 2,012 ಆಗಿದೆ. 2004ರಲ್ಲಿ ಇದ್ದ ಮಾನ್ಯತೆ ಪಡೆದ ನರ್ಸಿಂಗ್ ಕಾಲೇಜುಗಳ ಸಂಖ್ಯೆಗೆ ಹೋಲಿಸಿದರೆ 2012ರಲ್ಲಿ ಇಂಥ ಮಾನ್ಯತೆ ಪಡೆದ ನರ್ಸಿಂಗ್ ಕಾಲೇಜುಗಳ ಸಂಖ್ಯೆ ಒಂಬತ್ತು ಪಟ್ಟು ಅಧಿಕವಾಗಿದೆ.
ಆದರೆ ಈ ಪೈಕಿ ಬಹುತೇಕ ಸಂಸ್ಥೆಗಳ ವೈದ್ಯಕೀಯ ಶಿಕ್ಷಣ ಗುಣಮಟ್ಟ ಪ್ರಶ್ನಾರ್ಹ. ಈ ವರ್ಷದ ಜೂನ್‌ನಲ್ಲಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಬಗ್ಗೆ ರಾಯ್ಟರ್ಸ್‌ ನಡೆಸಿದ ಒಂದು ಅಧ್ಯಯನದಲ್ಲಿ, ಆಸ್ಪತ್ರೆ ಬೆಡ್‌ಗಳನ್ನು ಭರ್ತಿ ಮಾಡುವ ಸಲುವಾಗಿ ನಕಲಿ ರೋಗಿಗಳನ್ನು ಕರೆ ತರುವುದು, ಸರಕಾರಿ ಅಧಿಕಾರಿಗಳು ತಪಾಸಣೆಗೆ ಬಂದಾಗ, ಖಾಸಗಿ ವೈದ್ಯರನ್ನು ಪೂರ್ಣಾವಧಿ ಬೋಧಕ ಸಿಬ್ಬಂದಿ ಎಂದು ಬಿಂಬಿಸುವುದು ಮುಂತಾದ ಅನೈತಿಕ ವಿಧಾನಗಳನ್ನು ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಅನುಸರಿಸುತ್ತಿರುವುದು ಬೆಳಕಿಗೆ ಬಂದಿತ್ತು. 2010ರಿಂದೀಚೆಗೆ ಕನಿಷ್ಠ 69 ವೈದ್ಯಕೀಯ ಕಾಲೇಜುಗಳ ವಿರುದ್ಧ ಅಕ್ರಮಗಳನ್ನು ಎಸಗಿದ್ದಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ. ಇದರಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆ ತಿದ್ದಿರುವುದು, ಪ್ರವೇಶಕ್ಕಾಗಿ ಲಂಚ ಸ್ವೀಕರಿಸುವುದು ಮುಂತಾದ ಅಕ್ರಮಗಳು ಸೇರಿವೆ.

ಹೀಗೆ ದೇಶದ ಆರೋಗ್ಯ ವ್ಯವಸ್ಥೆಯಲ್ಲೇ ಇಷ್ಟೊಂದು ಸಮಸ್ಯೆಗಳು ತುಂಬಿ ತುಳುಕುತ್ತಿದ್ದರೂ, ಭಾರತ ಜಾಗತಿಕ ಆರೋಗ್ಯ ಕ್ಷೇತ್ರಕ್ಕೆ ವೈದ್ಯರನ್ನು ಹಾಗೂ ಅರೆವೈದ್ಯಕೀಯ ಸಿಬ್ಬಂದಿಯನ್ನು ಕಳುಹಿಸಿಕೊಡುವಲ್ಲಿ ಮುಂಚೂಣಿಯಲ್ಲಿದೆ. ಬಹಳಷ್ಟು ಮಂದಿ ವೈದ್ಯರು ಹಾಗೂ ದಾದಿಯರು ವಿದೇಶಿ ಆರೋಗ್ಯ ಸೇವೆಗೆ ಹೋಗುತ್ತಿದ್ದಾರೆ.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News