×
Ad

ಚೀನಾದಲ್ಲಿ ಪ್ರವಾಹ: ಕನಿಷ್ಠ 87 ಸಾವು ಸಾವಿರಾರು ಮಂದಿ ನಿರಾಶ್ರಿತರು

Update: 2016-07-23 18:43 IST

ಬೀಜಿಂಗ್, ಜು. 23: ಚೀನಾದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕನಿಷ್ಠ 87 ಮಂದಿ ಸಾವಿಗೀಡಾಗಿದ್ದಾರೆ ಹಾಗೂ ಸಾವಿರಾರು ಮಂದಿ ತಮ್ಮ ಮನೆಗಳನ್ನು ತೊರೆದಿದ್ದಾರೆ ಎಂದು ಸರಕಾರಿ ಮಾಧ್ಯಮ ಶನಿವಾರ ವರದಿ ಮಾಡಿದೆ.

ಉತ್ತರದ ಪ್ರಾಂತ ಹೆಬೆಯ್‌ನಲ್ಲಿ ಭಾರೀ ಮಳೆಯಿಂದಾಗಿ ಉಂಟಾದ ಪ್ರವಾಹ ಮತ್ತು ಭೂಕುಸಿತಗಳಲ್ಲಿ 72 ಮಂದಿ ಮೃತಪಟ್ಟಿದ್ದಾರೆ ಹಾಗೂ 78 ಮಂದಿ ನಾಪತ್ತೆಯಾಗಿದ್ದಾರೆ ಎಂದು ಕ್ಸಿನುವ ವಾರ್ತಾ ಸಂಸ್ಥೆ ನಾಗರಿಕ ವ್ಯವಹಾರಗಳ ಇಲಾಖೆಯನ್ನು ಉಲ್ಲೇಖಿಸಿ ವರದಿ ಮಾಡಿದೆ. ಸುಮಾರು 50,000 ಮನೆಗಳು ಕುಸಿದಿವೆ ಎಂದು ಅದು ತಿಳಿಸಿದೆ. ಮಧ್ಯ ಭಾಗದ ಪ್ರಾಂತ ಹೆನನ್‌ನಲ್ಲಿ 15 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ ಎಂಟು ಮಂದಿ ನಾಪತ್ತೆಯಾಗಿದ್ದಾರೆ. ಇಲ್ಲಿ 18,000 ಮನೆಗಳು ಕುಸಿದಿವೆ ಹಾಗೂ 72,000 ಮಂದಿ ನೆಲೆ ಕಳೆದುಕೊಂಡಿದ್ದಾರೆ. ಒಟ್ಟಾರೆ ಚೀನಾದ್ಯಂತ ಪ್ರವಾಹದಿಂದಾಗಿ 86 ಲಕ್ಷ ಮಂದಿ ಪೀಡಿತರಾಗಿದ್ದಾರೆ ಎಂದು ಸರಕಾರಿ ಮಾಧ್ಯಮ ಮತ್ತು ಸ್ಥಳೀಯ ಆಡಳಿತಗಳ ವರದಿಗಳು ಹೇಳಿವೆ. ಈ ಮಳೆಗಾಲದಲ್ಲಿ ಚೀನಾದಲ್ಲಿ ಈವರೆಗೆ 200ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News