ಪಾಕ್ ಉಗ್ರ ಗುಂಪುಗಳಿಂದ ಅಫ್ಘಾನ್‌ನಲ್ಲಿನ ಭಾರತೀಯ ಹಿತಾಸಕ್ತಿ ಮೇಲೆ ದಾಳಿ
ವಿಶ್ವಸಂಸ್ಥೆ, ಜು. 23: ಲಷ್ಕರೆ-ತಯ್ಯಬ, ತಾಲಿಬಾನ್, ಜೈಷೆ-ಮುಹಮ್ಮದ್ ಮತ್ತು ಅಲ್-ಖಾಯಿದ ಮುಂತಾದ ಪಾಕಿಸ್ತಾನದಲ್ಲಿ ನೆಲೆ ಹೊಂದಿರುವ ಭಯೋತ್ಪಾದಕ ಗುಂಪುಗಳು ಅಫ್ಘಾನಿಸ್ತಾನದಲ್ಲಿನ ಭಾರತದ ಹಿತಾಸಕ್ತಿಗಳು ಮತ್ತು ಉದ್ದೇಶಗಳಿಗೆ ಹೊಡೆತ ನೀಡುತ್ತಿವೆ ಹಾಗೂ ಕಾಬೂಲ್ ಮತ್ತು ಇಸ್ಲಾಮಾಬಾದ್‌ಗಳ ನಡುವೆ ಇರುವ ಬುಡಕಟ್ಟು ಪ್ರದೇಶಗಳಲ್ಲಿ ಭಯೋತ್ಪಾದಕರಿಗೆ ಸುರಕ್ಷಿತ ಆಶ್ರಯ ತಾಣಗಳನ್ನು ನಿರ್ಮಿಸುತ್ತಿವೆ ಎಂದು ವಿಶ್ವಸಂಸ್ಥೆಗೆ ಅಫ್ಘಾನಿಸ್ತಾನದ ರಾಯಭಾರಿ ಹೇಳಿದ್ದಾರೆ.
‘‘ಅಫ್ಘಾನಿಸ್ತಾನದಲ್ಲಿ, ಪ್ರಾದೇಶಿಕ ಭಯೋತ್ಪಾದಕ ಗುಂಪುಗಳು ತಮ್ಮ ತಮ್ಮ ಉದ್ದೇಶಗಳು ಮತ್ತು ಪರಸ್ಪರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ತಾಲಿಬಾನ್‌ಗೆ ಸಹಕಾರ ನೀಡುತ್ತಿವೆ. ಲಷ್ಕರೆ-ತಯ್ಯಬ, ತೆಹ್ರಿಕಿ-ತಾಲಿಬಾನ್ ಪಾಕಿಸ್ತಾನ್, ಜೈಷೆ ಮುಹಮ್ಮದ್, ಅಲ್-ಖಾಯಿದ ಮತ್ತು ಲಷ್ಕರೆ-ಇಸ್ಲಾಮ್, ಸಿಪಾಹೆ-ಸಾಹಬ, ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಉಝ್ಬೆಕಿಸ್ತಾನ್, ಈಸ್ಟರ್ನ್ ತುರ್ಕಿಸ್ತಾನ್ ಇಸ್ಲಾಮಿಕ್ ಮೂವ್‌ಮೆಂಟ್ ಈ ಪಟ್ಟಿಯಲ್ಲಿ ಸೇರಿವೆ’’.
‘‘ಈ ಗುಂಪುಗಳು ಅಫ್ಘಾನಿಸ್ತಾನದ ಭದ್ರತೆ ಮತ್ತು ಸ್ಥಿರತೆಗೆ ಬೆದರಿಕೆಯೊಡ್ಡಿವೆ’’ ಎಂದು ವಿಶ್ವಸಂಸ್ಥೆಗೆ ಅಫ್ಘಾನಿಸ್ತಾನದ ಖಾಯಂ ಪ್ರತಿನಿಧಿ ಮಹ್ಮೂದ್ ಸಾಯಿಕಲ್ ಹೇಳಿದರು. ವಿದೇಶಿ ಭಯೋತ್ಪಾದಕರಿಗೆ ಸಂಬಂಧಿಸಿದ ಭಯೋತ್ಪಾದನೆ ನಿಗ್ರಹ ಸಮಿತಿಯ ಕಾರ್ಯಗಳ ಬಗ್ಗೆ ಶುಕ್ರವಾರ ವಿವರಣೆ ನೀಡುತ್ತಿದ್ದ ಅವರು ಈ ಮಾತುಗಳನ್ನು ಹೇಳಿದರು.
‘‘ಈ ಭಯೋತ್ಪಾದಕ ಗುಂಪುಗಳು ಅಫ್ಘಾನಿಸ್ತಾನದಲ್ಲಿ ಕೆಲವೊಂದು ಗುರಿಗಳನ್ನು ಇಟ್ಟುಕೊಂಡಿವೆ. ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ತಾನಕ್ಕೆ ಮರುಜೀವ ನೀಡುವುದು, ಅಫ್ಘಾನಿಸ್ತಾನದಲ್ಲಿನ ಭಾರತದ ಹಿತಾಸಕ್ತಿಗಳು ಮತ್ತು ಗುರಿಗಳನ್ನು ಹಾಳುಗೆಡಹುವುದು ಮತ್ತು ಈ ವಲಯ ಮತ್ತು ಪ್ರಪಂಚದಲ್ಲಿರುವ ಅಂತಾರಾಷ್ಟ್ರೀಯ ಭಯೋತ್ಪಾದಕ ಜಾಲಗಳೊಂದಿಗೆ ಆಯಕಟ್ಟಿನ ಮೈತ್ರಿಗಳನ್ನು ಸ್ಥಾಪಿಸುವುದು ಅವುಗಳಲ್ಲಿ ಕೆಲವು’’ ಎಂದರು.
ಅಫ್ಘಾನಿಸ್ತಾನದಿಂದ ವಿದೇಶಿ ಪಡೆಗಳು ಹೊರಹೋಗಬೇಕು ಎಂದು ಒತ್ತಾಯಿಸುವ ಈ ಉಗ್ರ ಗುಂಪುಗಳು ಉತ್ತರ ಮತ್ತು ಈಶಾನ್ಯದ ಪ್ರಾಂತಗಳಲ್ಲಿ ಭಯೋತ್ಪಾದಕರಿಗೆ ಸುರಕ್ಷಿತ ಅಡಗುದಾಣಗಳನ್ನು ನಿರ್ಮಿಸುತ್ತಿವೆ. ಇವುಗಳನ್ನು ಬಳಸಿಕೊಂಡು ಅಫ್ಘಾನಿಸ್ತಾನದ ‘‘ಜಾತ್ಯತೀತ’’ ಸರಕಾರಗಳನ್ನು ಉರುಳಿಸಲು ಅವುಗಳು ಪ್ರಯತ್ನಿಸುತ್ತಿವೆ ಎಂದು ಸಾಯಿಕಲ್ ಆರೋಪಿಸಿದರು.