ಗುಜರಾತ್ ದಲಿತರ ಮೇಲೆ ಹಲ್ಲೆ: ಪ್ರಧಾನಿ ಮೌನ ಪ್ರಶ್ನಿಸಿದ ಕಾರಾಟ್
Update: 2016-07-23 23:28 IST
ರಾಜಕೋಟ್,ಜು.23: ಗುಜರಾತಿನ ಉನಾದಲ್ಲಿ ಸತ್ತ ದನವೊಂದರ ಚರ್ಮವನ್ನು ಸುಲಿದಿದ್ದಕ್ಕಾಗಿ ದಲಿತ ಯುವಕರ ಮೇಲೆ ಗೋರಕ್ಷಕರ ಅಮಾನುಷ ಹಲ್ಲೆಯ ಕುರಿತು ಗಾಢ ವೌನವನ್ನು ವಹಿಸಿರುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಶನಿವಾರ ಟೀಕಿಸಿದ ಸಿಪಿಎಂ ನಾಯಕಿ ಬೃಂದಾ ಕಾರಾಟ್ ಅವರು, ಇದು ಗೋರಕ್ಷಕ ಸಮಿತಿಗಳ ಕ್ರಿಮಿನಲ್ ಚಟುವಟಿಕೆಗಳಿಗೆ ಪ್ರಧಾನಿಯವರ ಬೆಂಬಲವನ್ನು ತೋರಿಸುತ್ತಿದೆ ಎಂದು ಹೇಳಿದರು.
ಉನಾ ತಾಲೂಕಿನ ಮೋಟಾ ಸಮಾಧಿಯಾಲಾ ಗ್ರಾಮದಲ್ಲಿ ಸಂತ್ರಸ್ತ ಯುವಕರು ಮತ್ತು ಅವರ ಕುಟುಂಬ ಸದಸ್ಯರ ಭೇಟಿಗಾಗಿ ಪಕ್ಷದ ಸಂಸದ ಪಿ.ಕೆ.ಬಿಜು ಅವರೊಂದಿಗೆ ಬೆಳಿಗ್ಗೆ ಇಲ್ಲಿಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಕಾರಾಟ್ ಸುದ್ದಿಗಾರರೊಡನೆ ಮಾತನಾಡಿದರು. ತಾನಿಲ್ಲಿ ವಿಷಯವನ್ನು ರಾಜಕೀಕರಿಸಲು ಬಂದಿಲ್ಲ. ಮೋಟಾ ಸಮಾಧಿಯಾಲಾ ಗ್ರಾಮದ ದಲಿತರೊಂದಿಗೆ ನಾವಿದ್ದೇವೆ ಎನ್ನುವುದನ್ನು ವ್ಯಕ್ತಪಡಿಸುವುದು ನಮ್ಮ ಭೇಟಿಯ ಉದ್ದೇಶವಾಗಿದೆ ಎಂದರು.