ಅಮೆರಿಕನ್ ಹಿಂದೂ ದೇವಾಲಯಕ್ಕೆ ಮುಸ್ಲಿಂ ಭದ್ರತಾಧಿಕಾರಿ!
ಇಂಡಿಯಾನಾಪೊಲೀಸ್, ಜು.24: ಅಮೆರಿಕದ ಇಂಡಿಯಾನಾಪೊಲೀಸ್‌ನಲ್ಲಿರುವ ಅತಿದೊಡ್ಡ ಹಿಂದೂ ದೇವಾಲಯಕ್ಕೆ ಭದ್ರತೆ ಒದಗಿಸುವ ಹೊಣೆ ಹೊತ್ತ ಅಧಿಕಾರಿ ಯಾರು ಗೊತ್ತೇ? ಭಾರತ ಮೂಲದ ಹೆಮ್ಮೆಯ ಮುಸ್ಲಿಂ ಅಧಿಕಾರಿ ಜಾವೆದ್ ಖಾನ್!
ದೇಶದಲ್ಲಿ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆಯಲ್ಲಿ ಧಾರ್ಮಿಕ ಅಸಹಿಷ್ಣುತೆ ಎದುರಾಗಿರುವ ಪ್ರಸ್ತುತ ಸನ್ನಿವೇಶದಲ್ಲಿ ಈ ಅಪರೂಪದ ಅಂತರ್‌ಧರ್ಮೀಯ ಸಹಕಾರ ಮಾದರಿಯಾಗಿದೆ. ಎಂಟನೆ ಡಿಗ್ರಿ ಬ್ಲ್ಯಾಕ್ ಬೆಲ್ಟ್ ಟೆಕ್ವಾಂಡೊ ಮತ್ತು ಕಿಕ್ ಬಾಕ್ಸಿಂಗ್ ಚಾಂಪಿಯನ್ ಲೆಫ್ಟಿನೆಂಟ್ ಜಾವೆದ್ ಖಾನ್, ಸ್ಥಳೀಯ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಅವರು ಈಗ ಇಲ್ಲಿನ ಹಿಂದೂ ದೇವಾಲಯದ ಭದ್ರತಾ ವಿಭಾಗದ ನಿರ್ದೇಶಕರಾಗಿರುತ್ತಾರೆ.
ಸಾವಿರಾರು ಮಂದಿ ಇಲ್ಲಿಗೆ ಪ್ರತಿದಿನ ಭೇಟಿ ನೀಡುತ್ತಾರೆ. ಅದರಲ್ಲೂ ಮುಖ್ಯವಾಗಿ ವಾರಾಂತ್ಯದಲ್ಲಿ ಜನಪ್ರವಾಹವೇ ಇರುತ್ತದೆ. ಮುಂಬೈನಲ್ಲಿ ಹುಟ್ಟಿನ ಖಾನ್, ಪುಣೆಯಲ್ಲಿ ಬೆಳೆದವರು. ಇದೀಗ ಹಿಂದೂ ದೇವಸ್ಥಾನದ ಅವಿಭಾಜ್ಯ ಅಂಗವಾಗಿದ್ದಾರೆ.
ನನ್ನ ಸಂದೇಶ ಇಷ್ಟೇ; ನಾವೆಲ್ಲರೂ ಒಂದು. ಎಲ್ಲರೂ ದೇವರ ಮಕ್ಕಳು. ದೇವರು ಒಬ್ಬನೇ. ವಿವಿಧ ರೂಪ, ಹೆಸರು ಆತನಿಗೆ. ನಾವು ಪ್ರಾರ್ಥನೆ ರೂಢಿಸಿಕೊಂಡಿದ್ದೇವೆ ಎಂದು ಖಾನ್ ಹೇಳಿದ್ದಾರೆ.
ನಾವು ಭಾರತೀಯರು. ನಮ್ಮ ಅರ್ಧ ಕುಟುಂಬ ಹಿಂದೂ ಸಂಪ್ರದಾಯದ್ದು. ನನಗೆ, ಹಿಂದೂ ಅಥವಾ ಮುಸ್ಲಿಂ ಎನ್ನುವುದರಲ್ಲಿ ನಂಬಿಕೆ ಇಲ್ಲ. ನಾನು ನನ್ನ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಇದರಲ್ಲಿ ವಿಶೇಷವೇನೂ ಇಲ್ಲ ಎಂದು ಅವರು ಹೇಳುತ್ತಾರೆ. 1986ರಿಂದಲೂ ವಿವಿಧ ಯುದ್ಧಕೌಶಲ ಸ್ಪರ್ಧೆಗಳಿಗಾಗಿ ಅಮೆರಿಕಕ್ಕೆ ಭೇಟಿ ನೀಡುತ್ತಿದ್ದ ಅವರು, 2001ರಲ್ಲಿ ಅಮೆರಿಕಕ್ಕೆ ವಲಸೆ ಬಂದು ಇಂಡಿಯಾನಾದಲ್ಲಿ ನೆಲೆ ನಿಂತರು.
ಖಾನ್ ತಮ್ಮ ಪುತ್ರಿಯ ವಿವಾಹವನ್ನು ಈ ದೇವಸ್ಥಾನದಲ್ಲಿ ತೆಲುಗು ಹುಡುಗನೊಬ್ಬನ ಜತೆ ನೆರವೇರಿಸಿದ್ದರಿಂದ ಇಲ್ಲಿನ ಸಂಪರ್ಕಕ್ಕೆ ಬಂದಿದ್ದಾಗಿ ಹೇಳಿಕೊಂಡಿದ್ದಾರೆ. ಆ ಬಳಿಕ ದೇವಸ್ಥಾನಕ್ಕೆ ಸಂಬಂಧಪಟ್ಟ ಎಲ್ಲರ ಪರಿಚಯವಾಯಿತು ಎಂದು ಖಾನ್ ವಿವರಿಸಿದರು.