×
Ad

ಸಾವಿರಾರು ಶಾಲೆ, ಸೇವಾಸಂಸ್ಥೆಗಳ ಮುಚ್ಚುಗಡೆಗೆ ಎರ್ದೊಗಾನ್ ಆದೇಶ

Update: 2016-07-24 21:35 IST

   ಅಂಕಾರಾ,ಜು.24: ವಿಫಲ ಸೇನಾ ಕ್ರಾಂತಿಯ ಬಳಿಕ ಟರ್ಕಿ ಅಧ್ಯಕ್ಷ ತಯ್ಯಿಪ್ ಎರ್ದೊಗಾನ್ ಆಡಳಿತದ ಮೇಲೆ ತನ್ನ ಹಿಡಿತವನ್ನು ಬಿಗಿಗೊಳಿಸಿದ್ದು, ದೇಶಾದ್ಯಂತ ಸಹಸ್ರಾರು ಖಾಸಗಿಶಾಲೆಗಳು, ಸೇವಾಸಂಸ್ಥೆಗಳು ಮತ್ತಿತರ ಸಂಸ್ಥಾಪನೆಗಳನ್ನು ಮುಚ್ಚುಗಡೆಗೊಳಿಸುವಂತೆ ಆದೇಶಿಸಿದ್ದಾರೆ.

 ಮುಚ್ಚುಗಡೆಗೆ ಆದೇಶಿಸಲಾದ ಶಾಲೆಗಳು ಹಾಗೂ ಸೇವಾ ಸಂಸ್ಥೆಗಳು ವಿಫ ಸೇನಾ ಕ್ರಾಂತಿಯ ಸೂತ್ರಧಾರಿಯೆನ್ನಲಾದ ಇಸ್ಲಾಮಿಕ್ ಧರ್ಮಗುರು ಫತೇವುಲ್ಲಾ ಗುಲೆನ್ ಜೊತೆ ನಂಟು ಹೊಂದಿವೆಯನ್ನಲಾಗಿದೆ. ಟರ್ಕಿಯಲ್ಲಿ ಅಪಾರ ಸಂಖ್ಯೆಯ ಬೆಂಬಲಿಗರನ್ನು ಹೊಂದಿರುವ ಗುಲೆನ್, ಸೇನಾ ಬಂಡಾಯದ ಹಿಂದೆ ತನ್ನ ಯಾವುದೇ ಪಾತ್ರ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ.ಗುಲೆನ್ ಪ್ರಸ್ತುತ ಅಮೆರಿಕದಲ್ಲಿ ನೆಲೆಸಿದ್ದಾರೆ.

ಗುಲೆನ್ ಅವರ  ಸೋದರಳಿಯನ್ನು ಕೂಡಾ ಟರ್ಕಿಯ ಭದ್ರತಾ ಅಧಿಕಾರಿಗಳು ಬಂಧಿಸಿದ್ದಾರೆ. ಗುಲೆನ್ ಸೋದರಳಿಯ ಮುಹಮ್ಮದ್ ಸಯೀದ್ ಗುಲೆನ್‌ನನ್ನು ಟರ್ಕಿಯ, ಎರ್ಝುರುಮ್‌ನಲ್ಲಿ ಬಂಧಿಸಲಾಗಿದ್ದು, ವಿಚಾರಣೆಗಾಗಿ ಅಂಕಾರಕ್ಕೆ ಕರೆತರಲಾಗಿದೆ.

 ಈ ಮಧ್ಯೆ ಸೇನಾ ಬಂಡಾಯದ ವೇಳೆ ಅಂಕಾರಾದಲ್ಲಿರುವ ವಿಶೇಷ ಪಡೆಗಳ ನೆಲೆಯ ಮೇಲೆ ಬಾಂಬ್ ದಾಳಿ ನಡೆಸಿ, 42 ಪೊಲೀಸ್ ಅಧಿಕಾರಿಗಳನು ಹತ್ಯೆಗೈದ ಆರೋಪ ಎದುರಿಸುತ್ತಿರುವ ವಾಯುಪಡೆ ಪೈಲಟ್ ಹಸನ್ ಕಾರಾಕುಸ್‌ನನ್ನು ಕೂಡಾ ಟರ್ಕಿಯಲ್ಲಿ ಬಂಧಿಸಲಾಗಿದೆಯೆಂದು ಮೂಲಗಳು ತಿಳಿಸಿವೆ.

  ವಿಫಲ ಸೇನಾ ಬಂಡಾಯದ ಹೆಸರಿನಲ್ಲಿ ಎರ್ದೊಗಾನ್ ಅವರು ತನ್ನ ವಿರುದ್ಧದ ಭಿನ್ನಮತವನ್ನು ಮಟ್ಟಹಾಕುತ್ತಿದ್ದಾರೆಂದು ಅನೇಕ ಮಂದಿ ರಾಜಕೀಯ ವೀಕ್ಷಕರು ಕಳವಳ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಎರ್ದೊಗಾನ್ ಜಾರಿಗೊಳಿಸಿದ ನ್ಯಾಯಾಂಗ ಮಸೂದೆಯ ಕರಡನ್ನು ನ್ಯಾಯಾಧೀಶರು ಹಾಗೂ ಪ್ರಾಸಿಕ್ಯೂಟರ್‌ಗಳ ಅಸೋಸಿಯೇಶನ್ ಬಲವಾಗಿ ಟೀಕಿಸಿತ್ತು.

  ಸೇನಾಕ್ರಾಂತಿಯ ಯತ್ನವನ್ನು ಖಂಡಿಸಿ ಟರ್ಕಿಯ ಪ್ರಧಾನ ಪ್ರತಿಪಕ್ಷವಾದ ಸಿಎಚ್‌ಪಿಯ ಸಹಸ್ರಾರು ಬೆಂಬಲಿಗರು ರವಿವಾರ ಇಸ್ತಾಂಬುಲ್‌ನ ಹೃದಯಭಾಗವಾದ ತಾಕ್ಸಿಮ್ ಚೌಕದಲ್ಲಿ ಪ್ರತಿಭಟನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News