×
Ad

ಹಿಜಾಬ್ ಧರಿಸಿದ್ದಳೆಂಬ ಕಾರಣಕ್ಕೆ ಮುಸ್ಲಿಂ ಮಹಿಳೆಗೆ ಉದ್ಯೋಗ ನಿರಾಕರಣೆ

Update: 2016-07-24 22:07 IST

    ಮೆಲ್ಬೋರ್ನ್,ಜು.24: ನ್ಯೂಝಿಲ್ಯಾಂಡ್‌ನ ಜ್ಯುವೆಲ್ಲರಿ ಅಂಗಡಿಯೊಂದರಲ್ಲಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದ 25 ವರ್ಷ ವಯಸ್ಸಿನ ಮುಸ್ಲಿಂ ಯುವತಿಗೆ ಹಿಜಾಬ್ ತೆಗೆಯದೆ ಇದ್ದಲ್ಲಿ, ಉದ್ಯೋಗ ಸಿಗಲಾರದೆಂದು ಹೇಳಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ.

      ಮುಸ್ಲಿಂ ಯುವತಿ ಮೋನಾ ಅಲ್‌ಫಾದ್ಲಿ ಅಕ್‌ಲ್ಯಾಂಡ್‌ನ ಸ್ಟಿವಾರ್ಡ್ ಡಾವ್‌ಸನ್ಸ್ ಚಿನ್ನಾಭರಣ ಮಳಿಗೆಯಲ್ಲಿ ಮಾರಾಟ ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಸಂದರ್ಶನದ ವೇಳೆ, ಮಳಿಗೆಯ ಮ್ಯಾನೇಜರ್ ಆಕೆಗೆ ಹಿಜಾಬ್ ಧರಿಸಿರುವ ಕಾರಣ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಅದರಿಂದ ಕೇವಲ ಸಮಯವಷ್ಟೇ ವ್ಯರ್ಥವಾದೀತೇ ಹೊರತು ಉದ್ಯೋಗ ದೊರೆಯಲಾರದು ಎಂದು ವ್ಯಂಗ್ಯವಾಡಿದ್ದರು.

 ಆವೊನ್‌ಡೇಲ್‌ನ ನಿವಾಸಿಯಾದ ಅಲ್‌ಫಾದ್ಲಿ, ಕಂಪ್ಯೂಟರ್ ಸಿಸ್ಟಂ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿದ ಬಳಿಕ ಆಕೆ ಉದ್ಯೋಗದ ಹುಡುಕಾಟದಲ್ಲಿದ್ದಳು. 2008ರಲ್ಲಿ ತನ್ನ ಕುಟುಂಬದೊಂದಿಗೆ ಕುವೈತ್‌ನಿಂದ ನಿರಾಶ್ರಿತಳಾಗಿ ಬಂದ ಆಕೆ ನ್ಯೂಝಿಲ್ಯಾಂಡ್‌ನಲ್ಲಿ ವಾಸ್ತವ್ಯವಿದ್ದಳು.

‘‘ನಾನು ಯಾವುದೇ ಉದ್ಯೋಗವನ್ನು ಮಾಡಬಲ್ಲೆ. ಆ ಬಗ್ಗೆ ನನಗೆ ಚಿಂತೆಯಿಲ್ಲ. ಆದರೆ ನಾನು ಹಿಜಾಬ್ ಧರಿಸುತ್ತೇನೆ. ನಾನು ನನ್ನ ಅಸ್ಮಿತೆಯನ್ನು ಉಳಿಸಿಕೊಳ್ಳುತ್ತೇನೆ ಹಾಗೂ ನನ್ನ ಸಂಸ್ಕೃತಿ ಮತ್ತು ಧರ್ಮವನ್ನು ಗೌರವಿಸುತ್ತೇನೆ’’ ಎಂದು ಅಲ್‌ಫಾದ್ಲಿ ಹೇಳಿರುವುದಾಗಿ ‘ ದಿ ನ್ಯೂಝಿಲ್ಯಾಂಡ್ ಹೆರಾಲ್ಡ್’ ತಿಳಿಸಿದೆ.

ಈ ಜ್ಯುವೆಲ್ಲರಿ ಸಂಸ್ಥೆಯಲ್ಲಿ ಈ ರೀತಿ ನಡೆದಿರುವ ಎರಡನೆ ಘಟನೆ ಇದಾಗಿದೆ. ಕಳೆದ ಅಕ್ಟೋಬರ್‌ನಲ್ಲಿ ಇದೇ ಜ್ಯುವೆಲ್ಲರಿ ಕಂಪೆನಿಯ ಹೆಂಡರ್ಸನ್ ಶಾಖೆಯಲ್ಲಿ ಹಿಝಬ್ ಧರಿಸಿದ್ದಕ್ಕಾಗಿ ಕೆಲ್‌ಸ್ಟನ್ ಮಹಿಳಾ ಕಾಲೇಜ್‌ನ ಉಪಮುಖ್ಯ್ಧಸ್ಥೆ ಫಾತಿಮಾ ಮೊಹಮ್ಮಾದಿ ಅವರನ್ನು ಸಂದರ್ಶನದ ಮೊದಲೇ ಕೈಬಿಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News