×
Ad

ಜುಲೈ 31ರೊಳಗೆ ಆಸ್ತಿ ವಿವರ ದಾಖಲಿಸುವಂತೆ ಎನ್‌ಜಿಒಗಳಿಗೆ ಸೂಚನೆ

Update: 2016-07-24 23:54 IST

ಹೊಸದಿಲ್ಲಿ, ಜು.24: ಮಿತಿಗಿಂತ ಹೆಚ್ಚು ಅನುದಾನ ಪಡೆಯುವ ದೇಶೀಯ ಹಾಗೂ ವಿದೇಶಿ ನಿಧಿಗಳ ಎನ್‌ಜಿಒಗಳು ಹಾಗೂ ಅವುಗಳ ಕಾರ್ಯವಾಹಿಗಳಿಗೆ ಈ ತಿಂಗಳ ಅಂತ್ಯದೊಳಗೆ ತಮ್ಮ ಆಸ್ತಿ ಹಾಗೂ ಬಾಧ್ಯತೆಗಳ ವಿವರ ದಾಖಲಿಸುವಂತೆ ಸೂಚಿಸಲಾಗಿದೆ.

ರೂ.1 ಕೋಟಿ ಸರಕಾರಿ ಅನುದಾನ ಹಾಗೂ ವಿದೇಶಿಗಳಿಂದ ರೂ. 10 ಲಕ್ಷಕ್ಕಿಂತ ಹೆಚ್ಚು ದೇಣಿಗೆ ಪಡೆಯುತ್ತಿರುವ ಸಂಘಟನೆಗಳನ್ನು ಲೋಕಪಾಲದ ವ್ಯಾಪ್ತಿಗೆ ತರುವ ಆದೇಶವನ್ನು ಸರಕಾರ ಕಳೆದ ತಿಂಗಳು ನೀಡಿದ ಬಳಿಕ ಈ ಸೂಚನೆ ಹೊರಟಿದೆ.
ಸೊಸೈಟಿಯೊಂದರ ನಿರ್ದೇಶಕ, ಪ್ರಬಂಧಕ, ಕಾರ್ಯದಲ್ಲಿ ಅಥವಾ ಇತರ ಯಾವುದೇ ಹುದ್ದೆಯಲ್ಲಿರುವ ಯಾವನೇ ವ್ಯಕ್ತಿ, ಜನರ ಸಂಘಟನೆ ಅಥವಾ ಪ್ರತಿಷ್ಠಾನ(ಹಾಲಿ ಯಾವುದೇ ಕಾನೂನಿನನ್ವಯ ನೋಂದಾಯಿಸಲ್ಪಟ್ಟಿರಲಿ ಅಥವಾ ಇಲ್ಲದಿರಲಿ) ಸಂಪೂರ್ಣವಾಗಿ ಅಥವಾ ಭಾಗಶಃ ಸರಕಾರಿ ನಿಧಿಯಿಂದ ನಡೆಯುತ್ತಿದ್ದರೆ ಹಾಗೂ ವಾರ್ಷಿಕ ಆದಾಯವು ರೂ. 1 ಕೋಟಿಗಿಂತ ಹೆಚ್ಚಿದ್ದರೆ, ಆಸ್ತಿ ಹಾಗೂ ಜವಾಬ್ದಾರಿಯ ವಿವರ ದಾಖಲಿಸಬೇಕೆಂದು ಸಿಬ್ಬಂದಿ ಸಚಿವಾಲಯದ ಹಿರಿಯಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಘೋಷಣೆಗಳನ್ನು ಎನ್‌ಜಿಒಗಳಿಗೆ ಅತಿ ಹೆಚ್ಚು ಮೊತ್ತದ ಅನುದಾನ ನೀಡುತ್ತಿರುವ ಕೇಂದ್ರ ಸರಕಾರದ ಸಂಬಂಧಿತ ಇಲಾಖೆಗಳಲ್ಲಿ ದಾಖಲಿಸಬೇಕು. ಒಂದು ವೇಳೆ ಎನ್‌ಜಿಒಗಳು ರೂ. 10 ಲಕ್ಷಕ್ಕಿಂತ ಹೆಚ್ಚು ವಿದೇಶಿ ಅನುದಾನ ಪಡೆಯುತ್ತಿದ್ದರೆ, ಅಂತಹ ರಿಟರ್ನ್‌ಗಳನ್ನು ಗೃಹ ಸಚಿವಾಲಯದಲ್ಲಿ ದಾಖಲಿಸಬೇಕೆಂದು ಅವರು ಹೇಳಿದ್ದಾರೆ.
ಎನ್‌ಜಿಒಗಳ ಪದಾಧಿಕಾರಿಗಳನ್ನು ಸಾರ್ವಜನಿಕ ಸೇವಕರೆಂದು ಪರಿಗಣಿಸಲು ಸರಕಾರ ನಿರ್ಧರಿಸಿದೆ. ಆದುದರಿಂದ ಅವರು ತಮ್ಮ, ಪತ್ನಿಯರ ಹಾಗೂ ಆಶ್ರಿತ ಮಕ್ಕಳ ಆಸ್ತಿ ಹಾಗೂ ಬಾಧ್ಯತೆಗಳಿಗೆ ಸಂಬಂಧಿಸಿದ ವಿವರವನ್ನು 2016ರ ಜು.31ರೊಳಗೆ ಸಂಬಂಧಿಸಿದ ಕೇಂದ್ರ ಸರಕಾರಿ ಇಲಾಖೆಗೆ ಸಲ್ಲಿಸಬೇಕಾಗುತ್ತದೆಂದು ಅಧಿಕಾರಿ ತಿಳಿಸಿದ್ದಾರೆ.
ಲೋಕಪಾಲ ಹಾಗೂ ಲೋಕಾಯುಕ್ತ ಕಾಯ್ದೆ-2013ರನ್ವಯ ಅಧಿಸೂಚಿಸಲಾಗಿರುವ ನಿಯಮಗಳಂತೆ, ಪ್ರತಿಯೊಬ್ಬ ಸಾರ್ವಜನಿಕ ಸೇವಕನೂ ಪ್ರತಿವರ್ಷ ರೂ. 31ಕ್ಕೆ ಅನ್ವಯವಾಗುವಂತೆ ತನ್ನ ಆಸ್ತಿ ಹಾಗೂ ಬಾಧ್ಯತೆಗಳ ಕುರಿತು ಘೋಷಣೆ, ಮಾಹಿತಿ ಹಾಗೂ ವಾರ್ಷಿಕ ರಿಟರ್ನ್‌ಗಳನ್ನು ಆ ವರ್ಷದ ಜು.31ರೊಳಗೆ ದಾಖಲಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News