‘ಫ್ರೀಡಮ್ ಮೊಬೈಲ್’ಗೆ ಸೌದಿ ನಾಗರಿಕನಿಂದ 2.6 ಲಕ್ಷ ಡಾಲರ್ ಆಫರ್!
ಇಸ್ತಾಂಬುಲ್, ಜು.25: ಟರ್ಕಿಯಲ್ಲಿ ಇತ್ತೀಚೆಗೆ ನಡೆದ ವಿಫಲ ಸೇನಾ ದಂಗೆ ಆರಂಭವಾಗುತ್ತಿದ್ದಂತೆಯೇ ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ಅವರೊಂದಿಗೆ ಪ್ರಥಮವಾಗಿ ಫೇಸ್‌ಟೈಮ್ ಆ್ಯಪ್ ಮೂಲಕ ಸಂದರ್ಶನ ನಡೆಸಿದ ಸಿಎನ್‌ಎನ್ ಟರ್ಕ್ ಟೆಲಿವಿಷನ್‌ನ ಮಹಿಳಾ ಆ್ಯಂಕರ್ ಹಂದೆ ಫಿರಟ್ ಅವರ ಆ್ಯಪಲ್ ಐಫೋನ್‌ನ್ನು 1,000,000 ಸೌದಿ ರಿಯಾಲ್‌ಗಳಿಗೆ (ಅಂದಾಜು 2,60,000 ಡಾಲರ್) ಖರೀದಿಸುವ ಆಫರ್‌ನ್ನು ಸೌದಿ ನಾಗರಿಕ ಅಬು ರಕನ್ ಎಂಬವರು ನೀಡಿದ್ದಾರಾದರೂ, ಫಿರಟ್ ಈ ಆಫರ್ ಅನ್ನು ತಿರಸ್ಕರಿಸಿದ್ದಾರೆಂದು ರಸ್ಸ್‌ದ್.ಕಾಮ್ ವರದಿ ಮಾಡಿದೆ.
ಅಬು-ರಕನ್ ಈ ಐಫೋನನ್ನು ‘ಫ್ರೀಡಮ್ ಮೊಬೈಲ್’ ಎಂದು ಕರೆದಿದ್ದಾರೆ. ಆದರೆ, ತಾನು ಈ ಮೊಬೈಲ್ ಫೋನನ್ನು ಮಾರಾಟ ಮಾಡುವ ಬದಲು ಅದನ್ನು ಟರ್ಕಿಯ ರಾಷ್ಟ್ರೀಯ ಮ್ಯೂಸಿಯಂಗೆ ದಾನ ಮಾಡಲಿಚ್ಛಿಸುವುದಾಗಿ ಫಿರಟ್ ಹೇಳಿಕೊಂಡಿದ್ದಾರೆ.
ಸೇನಾ ದಂಗೆಯಾದಾಗ ತಾನು ಅಧ್ಯಕ್ಷರ ಜತೆ ಹೇಗೆ ಮಾತನಾಡಿದೆಯೆಂಬುದನ್ನು ಅವರು ಬಾಲ್ಕನ್ ನ್ಯೂಸ್ ಏಜನ್ಸಿಗೆ ವಿವರಿಸಿದ್ದಾರೆ. ದಂಗೆ ಆರಂಭವಾದಾಗ ಅವರು ಅಧ್ಯಕ್ಷರ ಕಾರ್ಯದರ್ಶಿಗೆ ಫೋನ್ ಮಾಡಿ ಅವರೆಲ್ಲಿದ್ದಾರೆ ಮತ್ತು ಅಧ್ಯಕ್ಷರು ಹೇಳಿಕೆಯನ್ನೇನಾದರೂ ನೀಡಬಹುದೇ ಎಂದು ಕೇಳಿದ್ದರು. ಅತ್ತ ಕಡೆಯಿಂದ ಅಧ್ಯಕ್ಷರ ಕಾರ್ಯದರ್ಶಿ ಮಾತನಾಡಿ, ಅಧ್ಯಕ್ಷರು ಪತ್ರಿಕಾ ಹೇಳಿಕೆ ನೀಡುವರಾದರೂ ಅವರಿರುವ ಕಡೆಯಲ್ಲಿ ಹೋರಾಟ ನಡೆಯುತ್ತಿದೆಯೆಂದು ತಿಳಿಸಿದ್ದರೆಂದು ಫಿರಟ್ ವಿವರಿಸಿದ್ದಾರೆ. ಆದರೆ ಅಲ್ಲಿಗೆ ಪತ್ರಕರ್ತರಿಗೆ ಹೋಗಲು ಅಸಾಧ್ಯ ಹಾಗೂ ಅಧ್ಯಕ್ಷರಿಗೆ ಹೇಳಿಕೆ ನೀಡುವುದೂ ಅಸಾಧ್ಯ ಎಂದು ಫಿರಟ್ ಹೇಳಿದಾಗ ಅಧ್ಯಕ್ಷರು ಪೆರಿಸ್ಕೋಪ್ ಮುಖಾಂತರ ಹೇಳಿಕೆ ನೀಡುವರೆಂದು ಕಾರ್ಯದರ್ಶಿ ಹೇಳಿದ್ದರು. ಆದರೆ, ಅದನ್ನು ಇತರರು ನೋಡಲು ಸಾಧ್ಯವಿಲ್ಲವೆಂದು ಸ್ಟುಡಿಯೋದಲ್ಲಿದ್ದ ಫಿರಟ್ ಹೇಳುತ್ತಿದ್ದಂತೆಯೇ, ಅಧ್ಯಕ್ಷರು ಫೇಸ್ ಟೈಮ್ ಆ್ಯಪ್ ಮುಖಾಂತರ ಕಾಣಿಸಿಕೊಂಡಿದ್ದರು. ಇದನ್ನು ಅಲ್ಲಿದ್ದ ಯಾರೂ ನಂಬುವ ಸ್ಥಿತಿಯಲ್ಲಿರದಿದ್ದರೂ ಫಿರಟ್ ಸಾವರಿಸಿಕೊಂಡು ಅಧ್ಯಕ್ಷರ ಜತೆ ಮಾತನಾಡಿ ವರದಿ ಸಿದ್ಧಪಡಿಸಿದ್ದರು.
ಈ ಹಿಂದೆ ಕೂಡ ಸೇನಾ ದಂಗೆಗಳು ನಡೆದಿದ್ದರೂ ಈ ಬಾರಿ ಅದು ವಿಭಿನ್ನವಾಗಿತ್ತು. ನಮ್ಮ ಕಟ್ಟಡದ ಮೇಲೆ ಯುದ್ಧ ವಿಮಾನಗಳು ಹಾರಾಡುತ್ತಿದ್ದ ಸದು ಕೇಳಿಸುತ್ತಿತ್ತು. ನನ್ನ ಪುತ್ರಿ ನನಗೆ ಆಗಾಗ ಫೋನ್ ಮಾಡಿ ನಾನು ಸುರಕ್ಷಿತಳಾಗಿದ್ದೇನೆಯೇ ಎಂದು ವಿಚಾರಿಸುತ್ತಿದ್ದಳು. ನಾನು ನನ್ನ ದೇಶದ ಬಗ್ಗೆ ಕೂಡ ಚಿಂತಿಸುತ್ತಿದ್ದೆ ಹಾಗೂ ದಂಗೆಯ ಸಂದರ್ಭ ಅಧ್ಯಕ್ಷರ ಸ್ಥಿತಿಯ ಬಗ್ಗೆ ಭಯವೂ ಇತ್ತು. ಅದೇ ಕಾರಣಕ್ಕೆ ನಾನು ಅವರ ಕಾರ್ಯದರ್ಶಿಗೆ ಫೋನ್ ಮಾಡಿದೆ. ಅದರ ಪರಿಣಾಮ ನಾನು ಅಧ್ಯಕ್ಷರ ಜೊತೆ ಮಾತನಾಡುವಂತಾಯಿತು, ಎಂದು ಫಿರಟ್ ವಿವರಿಸುತ್ತಾರೆ.