ಅಭಯಾರಣ್ಯದಲ್ಲಿ ದಂಪತಿಯ ಜಗಳ, ಪತ್ನಿ ಹುಲಿಗೆ ಬಲಿ

Update: 2016-07-25 10:10 GMT

ಬೀಜಿಂಗ್, ಜು.25: ಬೀಜಿಂಗ್‌ನ ಬಡಾಲಿಂಗ್ ಅಭಯಾರಣ್ಯದಲ್ಲಿ ಶನಿವಾರ ನಡೆದ ಘಟನೆಯೊಂದರಲ್ಲಿ ದಂಪತಿಯ ಜಗಳವೊಂದು ದುರಂತದಲ್ಲಿ ಪರ್ಯಾವಸಾನಗೊಂಡಿದೆ.

ದಂಪತಿ ಅಭಯಾರಣ್ಯ ಪ್ರದೇಶದಲ್ಲಿ ಕಾರಿನೊಳಗೆ ಜಗಳ ಮಾಡಿದ ತರುವಾಯ ಪತ್ನಿ ಕೋಪಗೊಂಡು ಕಾರಿನಿಂದ ಹೊರಗಿಳಿದಾಗ ಹುಲಿಯೊಂದು ಆಕೆಯ ಮೇಲೆ ಆಕ್ರಮಣ ಮಾಡಿದೆ. ಇದನ್ನು ನೋಡಿದ ಕಾರಿನಲ್ಲಿದ್ದ ಇನ್ನೊಬ್ಬ ಮಹಿಳೆ ಆಕೆಗೆ ಸಹಾಯ ಮಾಡಲೆಂದು ಕಾರಿನಿಂದಿಳಿದಿದ್ದು, ಹುಲಿ ಆಕೆಯನ್ನೂ ಗಾಯಗೊಳಿಸಿದೆ.

ಕಾರಿನಲ್ಲಿದ್ದ ಪುರುಷ ಹಾಗೂ ಮಗು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಅಲ್ಲಿನ ಸಿಬ್ಬಂದಿ ಸಹಾಯಕ್ಕೆ ಧಾವಿಸಿದರೂ ಹುಲಿ ಮಹಿಳೆಯ ದೇಹವನ್ನು ಎಳೆದುಕೊಂಡು ಹೋಗುವುದನ್ನು ಅವರ ಕೈಯ್ಯಿಂದ ತಪ್ಪಿಸಲಾಗಲಿಲ್ಲ. ಗಾಯಗೊಂಡಿರುವ ಇನ್ನೊಬ್ಬ ಮಹಿಳೆ ಆಸ್ಪತ್ರೆಯಲ್ಲಿ ಚೇತರಿಸುತ್ತಿದ್ದಾಳೆ.

ಈ ಅಭಯಾರಣ್ಯದಲ್ಲಿ ಪ್ರಾಣಿಗಳು ಅತ್ತಿತ್ತ ಸಂಚರಿಸುತ್ತಿರುವಂತೆಯೇ ಪ್ರವಾಸಿಗರಿಗೆ ತಮ್ಮ ವಾಹನಗಳಲ್ಲಿ ಅಲ್ಲಿಗೆ ಹೋಗಲು ಅವಕಾಶವಿದೆ. ಆದರೆ ಯಾರೂ ವಾಹನಗಳಿಂದ ಕೆಳಗಿಳಿಯಬಾರದೆಂಬ ನಿಯಮವಿದೆ. ಈ ಘಟನೆಯ ನಂತರ ಈ ಪ್ರದೇಶವನ್ನು ಪ್ರವಾಸಿಗರಿಗೆ ಮುಚ್ಚಲಾಗಿದೆ.

ಕಳೆದ ಆಗಸ್ಟ್ ತಿಂಗಳಲ್ಲಿ ಇದೇ ಸ್ಥಳದಲ್ಲಿ ಹುಲಿಯೊಂದು ಸೆಕ್ಯುರಿಟಿ ಗಾರ್ಡ್ ಒಬ್ಬನ ಮೇಲೆ ದಾಳಿ ನಡೆಸಿ ಆತನನ್ನು ಕೊಂದಿತ್ತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News