ಇಸ್ಲಾಮ್ ಬರಹವಿದ್ದ ಜಾಕೆಟ್ ಕಳಚುವಂತೆ ಪ್ರಾಧ್ಯಾಪಕನಿಗೆ ತಾಕೀತು

Update: 2016-07-25 15:19 GMT

    ಲಂಡನ್,ಜು.25: ಮುಸ್ಲಿಮ್ ಅಧ್ಯಾಪಕನೊಬ್ಬನಿಗೆ, ‘ ಇಸ್ಲಾಮ್’ ಎಂಬ ಬರಹವಿದ್ದ ಹೊರಅಂಗಿ (ಜಾಕೆಟ್)ಯನ್ನು ಕಳಚುವಂತೆ ಪಬ್‌ನ ಸಿಬ್ಬಂದಿ ತಾಕೀತು ಮಾಡಿದ ಘಟನೆ ಬ್ರಿಟನ್‌ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.


     ಹಾರ್ಟ್‌ಫೋಲ್ಡ್ ನಗರದಲ್ಲಿ ಕಳೆದ ವಾರ ಈ ಘಟನೆ ನಡೆದಿದೆ. 32 ವರ್ಷ ವಯಸ್ಸಿನ ಅಧ್ಯಾಪಕ ನೂರುಲ್ ಇಸ್ಲಾಮ್ ಅವರು ಕೋಚ್ ಆ್ಯಂಡ್ ಹಾರ್ಸಸ್ ಪಬ್ ಎದುರು ನಿಂತು, ತನ್ನ ವಿದ್ಯಾರ್ಥಿಗಳ ನಿರೀಕ್ಷೆಯಲ್ಲಿದ್ದರು. ಅವರು ಬೋಧಿಸುತ್ತಿರುವ ಶಾಲೆಯ ನಿಯಮದಂತೆ ಆಯಾ ಶಿಕ್ಷಕರ ಕೊನೆಯ ಹೆಸರನ್ನು ಅವರ ಹೊರಅಂಗಿಯಲ್ಲಿ ಬರೆಯಲಾಗುತ್ತಿತ್ತು.

ನೂರುಲ್ ಅವರ ಕೊನೆಯ ಹೆಸರು ಇಸ್ಲಾಮ್ ಎಂದಾಗಿರುವುದರಿಂದ ಅದೇ ಹೆಸರನ್ನು ಬರೆದಿದ್ದ ಜಾಕೆಟ್ ಅವರು ಧರಿಸಿದ್ದರು. ಅವರ ಬಳಿಗೆ ಆಗಮಿಸಿದ ಪಬ್‌ನ ಉದ್ಯೋಗಿ ಒಬ್ಬಾತ ಜಾಕೆಟ್ ತೆಗೆಯುವಂತೆ ಅವರಿಗೆ ಸೂಚನೆ ನೀಡಿದನ್ನೆಲಾಗಿದೆ.
 ಫ್ರಾನ್ಸ್‌ನ ನೈಸ್‌ನಲ್ಲಿ ನಡೆದ ಹತ್ಯಾಕಾಂಡದ ಬಳಿಕ ಪ್ರತಿಯೊಬ್ಬರಲ್ಲಿಯೂ ಅಸುರಕ್ಷತೆಯ ಭಾವನೆ ಮೂಡಿದೆಯೆದು ಹೇಳಿದ ಬಾರ್ ಉದ್ಯೋಗಿಯು, ಜಾಕೆಟ್ ತೆಗೆಯುವಂತೆ ತನಗೆ ತಾಕೀತು ಮಾಡಿದನೆಂದು ನೂರುಲ್ ಇಸ್ಲಾಮ್ ತಿಳಿಸಿದ್ದಾರೆ.

ನೂರುಲ್ ಇಸ್ಲಾಮ್ ಅವರು ಹಾರ್ಟ್‌ಫೋರ್ಡ್‌ಶಯರ್ ಅಕಾಡಮಿಯ ವಿದ್ಯಾರ್ಥಿಗಳ ತಂಡವನ್ನು ಭೇಟಿಯಾಗಲು ಅಲ್ಲಿ ಕಾದು ನಿಂತಿದ್ದರು.
‘‘ನನ್ನ ಉಪನಾಮದಿಂದಾಗಿ ನನ್ನ ವಿರುದ್ಧ ತಾರತಮ್ಯ ಎಸಗಲಾಗಿದೆ. ಈ ಘಟನೆಯ ಬಳಿಕ ನಾನು ನಿಜಕ್ಕೂ ವಿಚಲಿತನಾಗಿದ್ದೇನೆ. ನಮ್ಮ ಶಾಲೆಯ ನಿಯಮದಂತೆ ಎಲ್ಲಾ ಶಿಕ್ಷಕರ ಜಾಕೆಟ್‌ಗಳ ಬೆನ್ನಹಿಂದೆ ಅವರವರ ಉಪನಾಮಗಳನ್ನು ಬರೆದಿರಬೇಕಾಗುತ್ತದೆ.ನನ್ನ ಹೆಸರು ಇಷ್ಟೊಂದು ದ್ವೇಷಕ್ಕೆ ಕಾರಣವಾಗಿದೆಯೆಂಬುದನ್ನು ಯೋಚಿಸಿಯೇ ನನಗೆ ಭಯವಾಗುತ್ತದೆ.

ಇಸ್ಲಾಮ್ ಎಂಬ ಪದದ ಅರ್ಥವೇ ಶಾಂತಿ’’ ಎಂದು ಅವರು ತಿಳಿಸಿದ್ದಾರೆ.
ಈ ಘಟನೆಯ ಬಗ್ಗೆ ಬ್ರಿಟನ್‌ನ ಜನಾಂಗೀಯ ದ್ವೇಷ ಅಪರಾಧ ಪ್ರಕರಣಗಳ ಅಧಿಕಾರಿಯೊಬ್ಬರು ತನಿಖೆ ನಡೆಸುತ್ತಿದ್ದಾರೆ.ಆದಾಗ್ಯೂ, ಈ ಪ್ರಕರಣದ ಬಗ್ಗೆ ಸ್ಥಳೀಯ ಪಬ್ ಮಾಲಕರು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News