ಸಂದೀಪ್ ಯಾದವ್ ಡೋಪಿಂಗ್ ಟೆಸ್ಟ್‌ನಲ್ಲಿ ಫೇಲ್
ಹೊಸದಿಲ್ಲಿ, ಜು.25: ಭಾರತದ ಇನ್ನೋರ್ವ ಕುಸ್ತಿಪಟು ಸಂದೀಪ್ ತುಳಸಿ ಯಾದವ್ ರಾಷ್ಟ್ರೀಯ ಉದ್ದೀಪನಾ ತಡೆ ಘಟಕ(ನಾಡಾ) ನಡೆಸಿರುವ ಉದ್ದೀಪನಾ ಮದ್ದು ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ.
ರಿಯೋ ಒಲಿಂಪಿಕ್ಸ್‌ಗೆ ಭಾರತ ತಂಡದೊಂದಿಗೆ ತೆರಳಿರುವ ನರಸಿಂಗ್ ಯಾದವ್ ರವಿವಾರ ನಿಷೇಧಿತ ದ್ರವ್ಯ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದರು. ಈ ಮೂಲಕ ಅವರು ರಿಯೋ ಗೇಮ್ಸ್‌ನಲ್ಲಿ ಭಾಗವಹಿಸುವುದರಿಂದ ವಂಚಿತರಾಗುವ ಭೀತಿಯಲ್ಲಿದ್ದಾರೆ. ನರಸಿಂಗ್ ಡೋಪಿಂಗ್ ಪರೀಕ್ಷೆಯಲ್ಲಿ ಫೇಲಾದ ಮರುದಿನವೇ ಸೋನೆಪತ್‌ನ ಸಾಯ್ ಕೇಂದ್ರದ ಕೊಠಡಿಯಲ್ಲಿ ನರಸಿಂಗ್ ಯಾದವ್‌ರ ಜೊತೆ ವಾಸಿಸುತ್ತಿದ್ದ ಸಂದೀಪ್ ಯಾದವ್ ಡೋಪಿಂಗ್ ಬಲೆಗೆ ಸಿಲುಕಿದ್ದಾರೆ.
ಗ್ರೀಕೊ-ರೊಮನ್ ಶೈಲಿಯ ಕುಸ್ತಿಪಟು ಸಂದೀಪ್ 2013ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 66 ಕೆಜಿ ತೂಕ ವಿಭಾಗದಲ್ಲಿ ಕಂಚಿನ ಪದಕವನ್ನು ಜಯಿಸಿದ್ದರು. ಸೋನೆಪತ್‌ನ ಸಾಯ್ ಕೇಂದ್ರದಲ್ಲಿ ನರಸಿಂಗ್ ಯಾದವ್‌ರ ರೂಮ್‌ಮೇಟ್ ಆಗಿದ್ದ ಸಂದೀಪ್ ಕೂಡ ಉದ್ದೀಪನಾ ಮದ್ದು ಸೇವನೆ ಪರೀಕ್ಷೆಯಲ್ಲಿ ಫೇಲಾಗಿದ್ದಾರೆ. ಈ ಬೆಳವಣಿಗೆ ಡೋಪಿಂಗ್‌ಪರೀಕ್ಷೆಯ ಹಿಂದೆ ಷಡ್ಯಂತ್ರ ಇರುವುದಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ. ಸಂದೀಪ್ ಹಾಗೂ ನರಸಿಂಗ್ ಯಾದವ್ ಒಂದೇ ಕೊಠಡಿಯಲ್ಲಿದ್ದರು. ಇವರಿಬ್ಬರೂ ಒಂದೇ ರೀತಿಯ ನಿಷೇಧಿತ ದ್ರವ್ಯವನ್ನು ಸೇವಿಸಿರುವುದು ಹಲವು ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಭಾರತದ ಕುಸ್ತಿ ಫೆಡರೇಶನ್(ಡಬ್ಲು ಎಫ್‌ಐ) ಸಹಾಯಕ ಕಾರ್ಯದರ್ಶಿ ವಿನೋದ್ ಥೋಮರ್ ತಿಳಿಸಿದ್ದಾರೆ.
‘‘ಸ್ಯಾಂಪಲ್‌ನಲ್ಲಿ ಭಾರೀ ಪ್ರಮಾಣದ ದ್ರವ್ಯವಿತ್ತು. ಇದನ್ನು ನಂಬಲು ಸಾಧ್ಯವಿಲ್ಲ. ಇದರ ಹಿಂದೆ ಪಿತೂರಿ ಅಡಗಿದೆ. ಯಾವ ಕುಸ್ತಿಪಟು ಕೂಡ ಇಷ್ಟೊಂದು ಡೋಸ್ ತೆಗೆದುಕೊಳ್ಳಲು ಸಾಧ್ಯವಿಲ್ಲ. ಶಿಬಿರದಲ್ಲಿದ್ದ ಇನ್ನುಳಿದ ಯಾವ ಕುಸ್ತಿಪಟುಗಳು ಡೋಪಿಂಗ್ ಟೆಸ್ಟ್‌ನಲ್ಲಿ ಸಿಕ್ಕಿಬಿದ್ದಿಲ್ಲ. ಕೇವಲ ಇವರಿಬ್ಬರು ಮಾತ್ರ ಫೇಲಾಗಿದ್ದಾರೆ. ಕಾಣದ ಕೈ ಕೆಲಸ ಮಾಡಿರುವ ಸಂಕೇತ ಇದಾಗಿದೆ’’ ಎಂದು ಥೋಮರ್ ಆರೋಪಿಸಿದರು.
‘‘ನನ್ನ ವಿರುದ್ಧ ಪಿತೂರಿ ನಡೆಸಲಾಗಿದೆ. ನಾನು ಯಾವುದೇ ನಿಷೇಧಿತ ದ್ರವ್ಯವನ್ನು ಸೇವಿಸಿಲ್ಲ. ನಾನು ಮುಗ್ದ. ಡೋಪಿಂಗ್ ಪರೀಕ್ಷೆಯಲ್ಲಿ ಫೇಲಾದ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು 74 ಕೆಜಿ ವಿಭಾಗದಲ್ಲಿ ಸುಶೀಲ್ ಕುಮಾರ್‌ರನ್ನು ಸ್ಪರ್ಧೆಯಲ್ಲಿ ಹಿಂದಿಕ್ಕಿ ಒಲಿಂಪಿಕ್ಸ್‌ಗೆ ಆಯ್ಕೆಯಾಗಿದ್ದ ನರಸಿಂಗ್ ಯಾದವ್ ಹೇಳಿದ್ದಾರೆ.