ಕೆಎಸ್ಸಾರ್ಟಿಸಿ ಬಸ್ ಮುಷ್ಕರ: ಪರದಾಡಿದ ಪ್ರಯಾಣಿಕರು

Update: 2016-07-25 18:30 GMT

ಮಂಗಳೂರು/ಉಡುಪಿ, ಜು.25: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೆಎಸ್ಸಾರ್ಟಿಸಿ ನೌಕರರು ಸೋಮವಾರದಿಂದ ರಾಜ್ಯಾದ್ಯಂತ ನಡೆಸುತ್ತಿರುವ ಮುಷ್ಕರದಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪ್ರಯಾಣಿಕರು, ಸಾರ್ವಜನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ತೀವ್ರ ತೊಂದರೆಗೊಳಗಾದರು. ಶಾಲಾ-ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಸಾರದ ಕಾರಣ ವಿದ್ಯಾರ್ಥಿಗಳು ಐದಾರು ಕಿ.ಮೀ.ವರೆಗೂ ನಡೆದುಕೊಂಡು ಹೋಗುವ ದೃಶ್ಯ ಸಾಮಾನ್ಯವಾಗಿತ್ತು.

ಉಡುಪಿ: ಬಸ್‌ಗಳಿಗೆ ಹಾನಿ; ಪ್ರಯಾಣಿಕರಿಗೆ ತೊಂದರೆ
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರವಿವಾರ ರಾತ್ರಿಯಿಂದಲೇ ಕೆಎಸ್ಸಾರ್ಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ನೌಕರರು ರಾಜ್ಯಾದ್ಯಂತ ಪ್ರಾರಂಭಿಸಿರುವ ಮುಷ್ಕರ ಜಿಲ್ಲೆಯಲ್ಲಿ ಯಶಸ್ವಿಯಾಗಿದೆ. ಆದರೆ ಇದರ ಬಿಸಿ ಉಡುಪಿಯ ಪ್ರಯಾಣಿಕರಿಗೆ ವಿಶೇಷವಾಗಿ ತಟ್ಟಲಿಲ್ಲ.
 ಕುಂದಾಪುರ ತಾಲೂಕಿನ ಕೆಲವು ಗ್ರಾಮೀಣ ಭಾಗಗಳನ್ನು ಹೊರತು ಪಡಿಸಿ ಉಳಿದಂತೆ ಜಿಲ್ಲೆಯಲ್ಲಿ ಸರಕಾರಿ ಬಸ್‌ಗಳ ಓಡಾಟವಿರಲಿಲ್ಲ. ಹೀಗಾಗಿ ಕುಂದಾಪುರ ಗ್ರಾಮೀಣ ಭಾಗದಲ್ಲಿ ಪಾಸ್‌ನೊಂದಿಗೆ ಓಡಾಡುವ ಶಾಲಾ, ಕಾಲೇಜು ವಿದ್ಯಾರ್ಥಿಗಳು ಹಾಗೂ ಕೆಲ ನಿತ್ಯಪ್ರಯಾಣಿಕರು ತೊಂದರೆ ಅನುಭವಿಸಿದ್ದನ್ನು ಬಿಟ್ಟರೆ ಉಳಿದಂತೆ ಮುಷ್ಕರ ಪರಿಣಾಮ ಜಿಲ್ಲೆಯ ಜನತೆಯ ಮೇಲೆ ಗೋಚರಿಸಲಿಲ್ಲ.
ಕುಂದಾಪುರ ತಾಲೂಕಿನ ಗಂಗೊಳ್ಳಿ, ಬೈಂದೂರು, ಸಿದ್ಧಾಪುರ, ವಾರಾಹಿ, ಹೊಸಂಗಡಿಗಳಿಗೆ ಒಟ್ಟು 25 ಸರಕಾರಿ ಬಸ್‌ಗಳ ಓಡಾಟವಿದೆ. ಇನ್ನು ಉತ್ತರ ಕನ್ನಡ, ಶಿವಮೊಗ್ಗ ಮುಂತಾದ ಕಡೆಗಳಿಗೆ ಹೋಗುವ ಅಂತರ್‌ಜಿಲ್ಲಾ ಬಸ್‌ಗಳು ಕೆಲವು ನಿರ್ದಿಷ್ಟ ಊರುಗಳಲ್ಲಿ ಪ್ರಯಾಣಿಕರನ್ನು ಇಳಿಸಿ ಹತ್ತಿಸಿಕೊಳ್ಳುತ್ತವೆ. ಇಂಥ ಕಡೆಗಳಲ್ಲಿ ಜನರು ಸ್ವಲ್ಪ ಪರದಾಡಿ, ಖಾಸಗಿ ಬಸ್‌ಗಳನ್ನು ಅವಲಂಬಿಸಬೇಕಾಯಿತು. ಇವುಗಳಿಗೆ ಯಾವುದೇ ಬದಲಿ ವ್ಯವಸ್ಥೆ ಕಲ್ಪಿಸಲಾಗಿರಲಿಲ್ಲ.

*ಪರದಾಡಿದ ಪ್ರಯಾಣಿಕರು: ಸಾರಿಗೆ ಮುಷ್ಕರ ನಿನ್ನೆ ಮಧ್ಯರಾತ್ರಿಯಿಂದ ಎಂದು ಘೋಷಿಸಿ ದ್ದರೂ, ಕುಂದಾಪುರದಲ್ಲಿ ನಿನ್ನೆ ರಾತ್ರಿಯೇ ಯಾವುದೇ ಬಸ್‌ಗಳನ್ನು ಓಡಿಸಲು ಚಾಲಕರು ಮುಂದಾಗದ ಕಾರಣ, ಇವುಗಳನ್ನು ನಂಬಿ ಬೆಂಗಳೂರು, ಮೈಸೂರು ಮುಂತಾದ ದೂರದ ಊರುಗಳಿಗೆ ಟಿಕೆಟ್ ಬುಕ್ ಮಾಡಿದ್ದ ಪ್ರಯಾಣಿಕರು ಪರದಾಡುವ ಸ್ಥಿತಿ ಎದುರಾಯಿತು. ಬಸ್ ಓಡಿಸಿದರೆ ಬೆಳಗಿನ ಜಾವದ ಬಳಿಕ ತೊಂದರೆ ಎದುರಾಗಬಹುದು ಎಂಬ ಭೀತಿಯನ್ನು ಚಾಲಕರು ಹಾಗೂ ನಿರ್ವಾಹಕರು ಮುಂದೊಡ್ಡಿದರು. ಕುಂದಾಪುರದಿಂದ ಸುಮಾರು 14 ಐರಾವತ, ಸ್ಲೀಪರ್, ರಾಜಹಂಸ ಬಸ್ ಗಳು ಬೆಂಗಳೂರಿಗೆ ಹಾಗೂ ಒಂದು ಬಸ್ ಮಂಡ್ಯಕ್ಕೆ ತೆರಳಬೇಕಿತ್ತು. ಆದರೆ ಇವುಗಳು ತಮ್ಮ ಪ್ರಯಾಣವನ್ನು ಹಠಾತ್ತನೆ ರದ್ದುಪಡಿಸಿದ ಕಾರಣ ಇದರಲ್ಲಿ ಟಿಕೆಟ್ ಕಾದಿರಿಸಿದ್ದ 170ಕ್ಕೂ ಅಧಿಕ ಮಂದಿ ಭಾರೀ ತೊಂದರೆ ಅನುಭವಿಸಿದರು. ಇವರಿಗೆ ಟಿಕೆಟ್ ಹಣವನ್ನು ಹಿಂದಿರುಗಿಸಲಾಯಿತಾದರೂ, ಅನಿವಾರ್ಯತೆ ಇದ್ದವರು ಸಿಕ್ಕ ಸಿಕ್ಕ ಖಾಸಗಿ ಬಸ್‌ಗಳಲ್ಲಿ ತೆರಳಲು ಆತಂಕ ದಿಂದ ಓಡಾಡುತಿದ್ದ ದೃಶ್ಯ ಕುಂದಾಪುರದಲ್ಲಿ ನಿನ್ನೆ ರಾತ್ರಿ ಕಂಡುಬಂತು.

ಆದರೆ ಉಡುಪಿಯಿಂದ ಹೊರಡಬೇಕಿದ್ದ ಎಲ್ಲಾ ಬಸ್‌ಗಳು ನಿಗದಿಯಾದಂತೆ ಇಲ್ಲಿಂದ ಹೊರಟು ತಮ್ಮ ಗಮ್ಯಸ್ಥಾನಗಳನ್ನು ಸುರಕ್ಷಿತವಾಗಿ ಸೇರಿವೆ ಎಂದು ಉಡುಪಿ ಕೆಎಸ್ಸಾರ್ಟಿಸಿಯ ಮೂಲಗಳು ತಿಳಿಸಿವೆ. ಉಡುಪಿಗೆ ಇಂದು ಯಾವುದೇ ಬಸ್‌ಗಳು ಬಂದೂ ಇಲ್ಲ, ಇಲ್ಲಿಂದ ತೆರಳಲೂ ಇಲ್ಲ ಎಂದು ಈ ಮೂಲಗಳು ಸ್ಪಷ್ಟಪಡಿಸಿವೆ. ಆದರೆ ನಿನ್ನೆ ರಾತ್ರಿ ಬೆಂಗಳೂರು ಮತ್ತು ಮಂಡ್ಯದಿಂದ ಉಡುಪಿಗೆ ಬರುವ ಮೂರು ಬಸ್‌ಗಳಿಗೆ ಪ್ರತಿಭಟನಾಕಾರರು ಕಲ್ಲು ಎಸೆದು ಹಾನಿಯುಂಟು ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಉಡುಪಿ, ಕುಂದಾಪುರದ 6 ಬಸ್‌ಗಳಿಗೆ ಹಾನಿ

ರವಿವಾರ ರಾತ್ರಿ ಬೆಂಗಳೂರು ಮತ್ತು ಮಂಡ್ಯಗಳಿಂದ ಹೊರಟ ಉಡುಪಿ ಡಿಪೋಗೆ ಸೇರಿದ ಮೂರು ಹಾಗೂ ಕುಂದಾಪುರ ಡಿಪೋಗೆ ಸೇರಿದ ಮೂರು ಕೆಎಸ್ಸಾರ್ಟಿಸಿ ಬಸ್‌ಗಳಿಗೆ ಮಾರ್ಗಮಧ್ಯದಲ್ಲಿ ಪ್ರತಿಭಟನಾಕಾರರು ಕಲ್ಲೆಸೆದು ಹಾನಿಗೊಳಿಸಿದ ಘಟನೆ ನಡೆದಿದೆ.
ಉಡುಪಿ ಡಿಪೋಗೆ ಸೇರಿದ ಎರಡು ರಾಜಹಂಸ ಹಾಗೂ ಒಂದು ನಾನ್ ಎಸಿ ಸ್ಲೀಪರ್ ಬಸ್‌ಗಳಿಗೆ ಕಳೆದ ರಾತ್ರಿ ತುಮಕೂರು, ಭದ್ರಾವತಿ ಹಾಗೂ ಮೈಸೂರುಗಳಲ್ಲಿ ಕಲ್ಲೆಸೆದು ಹಾನಿಗೊಳಿಸಿದ್ದಾರೆ ಎಂದು ಉಡುಪಿ ಡಿಪೋದ ಮ್ಯಾನೇಜರ್ ತಿಳಿಸಿದ್ದಾರೆ. ಇದರಿಂದ ಎರಡು ಬಸ್‌ಗಳ ಮುಂದಿನ ಗಾಜು ಹಾಗೂ ಒಂದು ಬಸ್‌ನ ಬದಿಯ ಗ್ಲಾಸ್‌ಗೆ ಹಾನಿಯಾಗಿದೆ. ಆದರೆ ಬಸ್‌ನಲ್ಲಿದ್ದ ಯಾರಿಗೂ ಗಾಯಗಳಾಗಿಲ್ಲ ಹಾಗೂ ಬಸ್ ಸುರಕ್ಷಿತವಾಗಿ ಉಡುಪಿ ತಲುಪಿದೆ ಎಂದವರು ತಿಳಿಸಿದರು.
ಕುಂದಾಪುರ ಡಿಪೋದಲ್ಲಿ 35 ದೂರದೂರುಗಳಿಗೆ ತೆರಳುವ ಬಸ್‌ಗಳಿದ್ದು, ಅವುಗಳಲ್ಲಿ ಮೂರು ಬಸ್‌ಗಳಿಗೆ ಹಾನಿ ಮಾಡಲಾಗಿದೆ ಎಂದು ಕುಂದಾಪುರ ಡಿಪೋದ ಮ್ಯಾನೇಜರ್ ತಿಳಿಸಿದ್ದಾರೆ. ಇವುಗಳಲ್ಲಿ ಎರಡು ಎಸಿ ಸ್ಲೀಪರ್ ಕೋಚ್ ಹಾಗೂ ಇನ್ನೊಂದು ಸಾಮಾನ್ಯ ಬಸ್ ಆಗಿದೆ. ಎಲ್ಲಾ ಬಸ್‌ಗಳಿಗೆ ತೀವ್ರವಾಗಿ ಹಾನಿಯಾಗಿದೆ. ಇದರಿಂದ ಒಬ್ಬ ಪ್ರಯಾಣಿಕ ಹಾಗೂ ಓರ್ವ ನಿರ್ವಾಹಕರಿಗೆ ಸಾಮಾನ್ಯ ಗಾಯವಾಗಿದ್ದು, ಪ್ರಥಮ ಚಿಕಿತ್ಸೆಯನ್ನು ನೀಡಲಾಗಿದೆ ಎಂದು ತಾರಾನಾಥ ತಿಳಿಸಿದರು.
ಎಲ್ಲಾ ಮೂರು ಬಸ್‌ಗಳು ಬೆಂಗಳೂರಿನಿಂದ ಕುಂದಾಪುರಕ್ಕೆ ಬರುತಿದ್ದು, ಇವುಗಳಿಗೆ ಹಾಸನದಲ್ಲಿ ಎರಡಕ್ಕೆ ಹಾಗೂ ಸಿ.ಆರ್.ಪಟ್ಟಣದಲ್ಲಿ ಒಂದಕ್ಕೆ ಕಲ್ಲು ಎಸೆಯಲಾಗಿದೆ. ಎಲ್ಲಾ ಬಸ್‌ಗಳು ಇಂದು ಸುರಕ್ಷಿತವಾಗಿ ಕುಂದಾಪುರ ತಲುಪಿವೆ ಎಂದವರು ಹೇಳಿದರು.

ಬಂಟ್ವಾಳ: ಜನಜೀವನ ಅಸ್ತವ್ಯಸ್ತ
ಕೆಎಸ್ಸಾರ್ಟಿಸಿ ಬಸ್ ನೌಕರರ ಮುಷ್ಕರಕ್ಕೆ ಬಂಟ್ವಾಳ ತಾಲೂಕಿನಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪರಿಣಾಮ ಜನ ಜೀವನ ಅಸ್ತವ್ಯಸ್ತಗೊಂಡಿತು.

ವಾಮದಪದವು, ಸರಪಾಡಿ, ಕಕ್ಯಪದವು, ಬಿಯಪಾದೆ, ಕೂರಿಯಾಳ ಸಹಿತ ಮಂಗಳೂರಿನಿಂದ ಧರ್ಮಸ್ಥಳ ಮಧ್ಯೆ ಸಂಚರಿಸುವ ನಿತ್ಯ ಪ್ರಯಾಣಿಕರು ಮುಷ್ಕರದಿಂದ ತೊಂದರೆಗೊಳಗಾದರು. ಶಾಲಾ ಕಾಲೇಜುಗಳಿಗೆ ರಜೆ ನೀಡದಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಶಾಲೆಗಳಿಗೆ ತೆರಳಲು ಪರದಾಡುವ ದೃಶ್ಯಗಳು ಕಂಡು ಬಂತು. ಗ್ರಾಮೀಣ ಭಾಗದಲ್ಲಿ ಸರಕಾರಿ ಬಸ್ಸನ್ನೇ ಅವಲಂಬಿಸಿರುವ ಸಾರ್ವಜನಿಕರು, ಶಾಲಾ ವಿದ್ಯಾರ್ಥಿಗಳು ಬಸ್ ಬಾರದೆ ರಸ್ತೆಯಲ್ಲಿ ಕಾಯುತ್ತಿದ್ದ ದೃಶ್ಯವು ಸಾಮಾನ್ಯವಾಗಿತ್ತು. ಕೆಲವರು ಖಾಸಗಿ ವಾಹನಗಳಿಗೆ ಅವಲಂಬಿತ ರಾದರು. ಈ ನಡುವೆ ಬಸ್ ಪಾಸನ್ನು ಹೊಂದಿರುವ ವಿದ್ಯಾರ್ಥಿಗಳು ಹಾಗೂ ಜನ ಸಾಮಾನ್ಯರು ಸಾಕಷ್ಟು ತೊಂದರೆಯನ್ನು ಅನುಭವಿಸುವಂತಾಯಿತು. ಕೆಲವು ಖಾಸಗಿ ವಾಹನಗಳು ಪ್ರಯಾಣಿಕರಿಂದ ದುಬಾರಿ ಬಾಡಿಗೆ ವಸೂಲಿ ಮಾಡಿರುವ ಪ್ರಕರಣಗಳೂ ಬೆಳಕಿಗೆ ಬಂದಿದೆ.

ಪುತ್ತೂರು: ವಿದ್ಯಾರ್ಥಿಗಳಿಗೆ ತಟ್ಟಿದ ಮುಷ್ಕರದ ಕಾವು
ಯಾವುದೇ ಸರಕಾರಿ ಬಸ್‌ಗಳು ಪುತ್ತೂರಿನಲ್ಲಿ ಓಡಾಟ ನಡೆಸಿಲ್ಲ. ಬಸ್ ಮುಷ್ಕರದಿಂದ ಸಾರ್ವಜನಿಕರಿಗೆ ಸಮಸ್ಯೆಯಾಗಿಲ್ಲವಾದರೂ ಕಾಲೇಜು ವಿದ್ಯಾರ್ಥಿಗಳಿಗೆ ಮುಷ್ಕರದ ಬಿಸಿ ತಟ್ಟಿದ್ದು, ನಗರದ ಎಲ್ಲ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿತ್ತು. ಕೆಲವು ಕಾಲೇಜುಗಳಿಗೆ ರಜೆ ಸಾರಲಾಗಿತ್ತು. ಪುತ್ತೂರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಇತರ ಜಿಲ್ಲೆಗಳಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರು, ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಬೆರಳೆಣಿಕೆಯ ಮಂದಿ ಕಂಡು ಬಂದಿದ್ದು, ಬಸ್ಸುಗಳ ಓಡಾಟವಿಲ್ಲದೆ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ಪುತ್ತೂರು ಬಸ್ ನಿಲ್ದಾಣ ಸೇರಿದಂತೆ ನಗರ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತು ವ್ಯವಸ್ಥೆ ಮಾಡಲಾಗಿತ್ತು.

ಬೆಳ್ತಂಗಡಿಯಲ್ಲೂ ಬಸ್ ಬಂದ್

ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಪ್ರದೇಶಗಳ ಏಕೈಕ ಸಂಪರ್ಕ ವ್ಯವಸ್ಥೆಯಾಗಿದ್ದ ಸಾರಿಗೆ ಸಂಸ್ಥೆಯ ಬಸ್‌ಗಳು ಬಾರದ ಹಿನ್ನೆಲೆಯಲ್ಲಿ ಜನರು ಪೇಟೆಗೆ ಬರಲು ಪರದಾಡುವಂತಾಗಿದೆ. ಧರ್ಮಸ್ಥಳದ ರಾಜ್ಯ ಸಾರಿಗೆ ಸಂಸ್ಥೆಯ ಡಿಪೋ ಬಸ್‌ಗಳು ಸಾಲಾಗಿ ನಿಂತಿರುವುದು ಕಂಡು ಬಂತು. ಶಾಲಾ ಕಾಲೇಜುಗಳಿಗೆ ರಜೆ ನೀಡದಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಶಾಲೆಗಳಿಗೆ ಬರಲು ಪರದಾಡುವ ದೃಶ್ಯ ಸಾಮಾನ್ಯವಾಗಿತ್ತು. ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳ ನೌಕರರು ಕಚೇರಿಗಳಿಗೆ ಹೋಗಲು ಪರದಾಟ ಮಾಡುತ್ತಿದ್ದುದು ಕಂಡುಬಂತು.

ಕುಕ್ಕೆಗೂ ತಟ್ಟಿದ ಬಂದ್ ಬಿಸಿ

ಗ್ರಾಮೀಣ ಪ್ರದೇಶವಾದ ಕುಕ್ಕೆಗೂ ಬಂದ್ ಬಿಸಿ ತಟ್ಟಿತ್ತು. ಮುಂಜಾನೆಯಿಂದ ಬಸ್‌ಗಳು ತಮ್ಮ ಓಡಾಟವನ್ನು ಸ್ಥಗಿತಗೊಳಿಸಿತ್ತು.ಇದರಿಂದಾಗಿ ಕ್ಷೇತ್ರಕ್ಕೆ ಆಗಮಿಸಿದ ಭಕ್ತರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ದ.ಕ. ಜಿಲ್ಲೆಯಲ್ಲಿ ಶಾಲೆ ಕಾಲೇಜುಗಳಿಗೆ ರಜೆ ನೀಡದಿದ್ದುದರಿಂದ ದೂರದೂರಿನಿಂದ ಸರಕಾರಿ ಬಸ್‌ನಲ್ಲಿ ಬರುವ ವಿದ್ಯಾರ್ಥಿಗಳು ಖಾಸಗಿ ವಾಹನಗಳ ಮೂಲಕ ಶಾಲೆ ಸೇರಿದರು. *ವಿದ್ಯಾರ್ಥಿಗಳ ಕಾಲ್ನಡಿಗೆ: ಸುಬ್ರಹ್ಮಣ್ಯದಿಂದ ಸುಮಾರು ಐದಾರು ಕಿ.ಮೀ. ದೂರವಿರುವ ಏನೆಕಲ್, ಕೈಕಂಬ, ಐನೆಕಿದು, ಕಲ್ಲಾಜೆ ಮೊದಲಾದ ಪ್ರದೇಶಗಳ ವಿದ್ಯಾರ್ಥಿಗಳು ಖಾಸಗಿ ವಾಹನಗಳು ದೊರಕದಿದ್ದಾಗ ಸುಬ್ರಹ್ಮಣ್ಯಕ್ಕೆ ನಡೆದುಕೊಂಡು ಬಂದರು.

ಸುಳ್ಯ: ಬಸ್ ಮುಷ್ಕರ ಯಶಸ್ವಿ
ಸುಳ್ಯದಲ್ಲಿ ಕೆಎಸ್ಸಾರ್ಟಿಸಿ ಬಸ್‌ಗಳ ಓಡಾಟ ರವಿವಾರ ಮಧ್ಯರಾತ್ರಿಯಿಂದಲೇ ಸಂಪೂರ್ಣ ಸ್ಥಗಿತಗೊಂಡಿದ್ದು, ಮುಷ್ಕರ ಯಶಸ್ವಿಯಾಗಿದೆ.
ಆದರೆ, ಮ್ಯಾಕ್ಸಿಕ್ಯಾಬ್, ಜೀಪು, ಕಾರು, ಖಾಸಗಿ ಬಸ್‌ಗಳು ಹಾಗೂ ಕೇರಳ ರಾಜ್ಯ ಸರಕಾರಿ ಬಸ್‌ಗಳ ಓಡಾಟ ಎಂದಿನಂತಿತ್ತು. ಶಾಲಾ-ಕಾಲೇಜುಗಳಲ್ಲಿ ಹಾಜರಾತಿ ತೀರಾ ಕಡಿಮೆ ಇತ್ತು. ಜಿಲ್ಲಾಡಳಿತ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸದ ಕಾರಣ ವಿದ್ಯಾರ್ಥಿಗಳು ಮ್ಯಾಕ್ಸಿಕ್ಯಾಬ್‌ಗಳಲ್ಲಿ ಪ್ರಯಾಣಿಸಬೇಕಾಯಿತು.

ಮಂಗಳೂರು: ಪ್ರಯಾಣಿಕರಿಂದ ಖಾಸಗಿ ಬಸ್‌ಗಳ ಮೊರೆ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಗಳ ಜಂಟಿ ಸಮಿತಿಯು ಕರೆ ನೀಡಿದ್ದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ಸೂಚಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಕೆಎಸ್ಸಾರ್ಟಿಸಿ ನೌಕರರು ಮುಂಜಾನೆಯಿಂದ ಕೆಲಸಕ್ಕೆ ಹಾಜರಾಗಲಿಲ್ಲ. ಕಾರ್ಮಿಕ ಸಂಘಗಳ ಜಂಟಿ ಸಮಿತಿಯು ರವಿವಾರ ರಾತ್ರಿ 12 ಗಂಟೆ ನಂತರ ಯಾವುದೇ ನೌಕರರು ಕೆಲಸ ಮಾಡದಂತೆ ಕರೆ ನೀಡಿತ್ತು. ಆದರೆ ರಾತ್ರಿ ದೂರದೂರಿಗೆ ಪ್ರಯಾಣಿಸಲು ನೂರಾರು ಪ್ರಯಾಣಿ ಕರು ಬಸ್ ನಿಲ್ದಾಣಕ್ಕೆ ಬಂದ ಹಿನ್ನೆಲೆಯಲ್ಲಿ ಬೆಂಗಳೂರು, ಮೈಸೂರು ಸೇರಿದಂತೆ ದೂರದೂರಿಗೆ ಬಸ್ ಸಂಚಾರ ನಡೆಸಿತು. ಸೋಮವಾರ ಮುಂಜಾನೆಯಿಂದ ಯಾವುದೇ ನೌಕರರು ಕೆಲಸಕ್ಕೆ ಹಾಜರಾಗದಿದ್ದುದರಿಂದ ಜಿಲ್ಲೆಯಲ್ಲಿ ಯಾವುದೇ ಸರಕಾರಿ ಬಸ್‌ಗಳು ಸಂಚಾರ ನಡೆಸಿಲ್ಲ. ಮಂಗಳೂರು ಡಿಪೋದಿಂದ ರವಿವಾರ ರಾತ್ರಿ ದೂರ ದೂರಿಗೆ ತೆರಳಿದ ಕೆಎಸ್ಸಾರ್ಟಿಸಿಯ ಸುಮಾರು 15 ಬಸ್‌ಗಳಿಗೆ ಬೇರೆ ಜಿಲ್ಲೆಗಳಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಕಲ್ಲೆಸೆದು ಹಾನಿಗೊಳಿಸಲಾಗಿದೆ. ಕೆಎಸ್ಸಾರ್ಟಿಸಿ ಬಸ್ ಮುಷ್ಕರದ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ಬಂದಿರಲಿಲ್ಲ. ಕೆೆಎಸ್ಸಾರ್ಟಿಸಿ ಮೂಲಕ ಮಂಗಳೂರಿನಿಂದ ಪ್ರಯಾಣ ಬೆಳೆಸುವವರು ಖಾಸಗಿ ಬಸ್‌ಗಳಲ್ಲಿ ಪ್ರಯಾಣ ಬೆಳೆಸಿದ್ದಾರೆ. ನಗರದಲ್ಲಿ ಖಾಸಗಿ ಬಸ್‌ಗಳ ಓಡಾಟವಿದ್ದುದರಿಂದ ಜನಸಾಮಾನ್ಯರಿಗೆ ಯಾವುದೇ ಸಮಸ್ಯೆಯಾಗಲಿಲ್ಲ.

ಇಂದಿನ ಮುಷ್ಕರ ಶೇ.100 ರಷ್ಟು ಯಶಸ್ವಿಯಾಗಿದೆ. ಅಧಿಕಾರಿಗಳು ಪೊಲೀಸರ ಮೂಲಕ ಕೆಲವು ನೌಕರರ ವಿರುದ್ಧ ಹಳೆ ಪ್ರಕರಣವನ್ನು ಆಧಾರವಾಗಿಟ್ಟುಕೊಂಡು ಕೆಲಸಕ್ಕೆ ಹಾಜರಾಗದಿದ್ದರೆ ವಜಾ ಮಾಡುವ ಬೆದರಿಕೆಯನ್ನೊಡ್ಡುತ್ತಿದ್ದಾರೆ. ಈ ರೀತಿ ಮಾಡಿ ಇಲಾಖೆ ಘರ್ಷಣೆಗೆ ಅವಕಾಶ ನೀಡಬಾರದು. ಬೇಡಿಕೆ ಈಡೇರುವ ತನಕ ನಮ್ಮ ಮುಷ್ಕರ ನಿಲ್ಲುವುದಿಲ್ಲ.

-ಪ್ರವೀಣ್‌ಕುಮಾರ್, ಕೆಎಸ್ಸಾರ್ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್‌ ಫೆಡರೇಶನ್(ಎಐಟಿಯುಸಿ), ಮಂಗಳೂರು ವಿಭಾಗ


 ಮಂಗಳೂರು ಡಿಪೋದಿಂದ ರಾತ್ರಿ ಹೊರಡಬೇಕಾಗಿದ್ದ ಎಲ್ಲಾ ಬಸ್‌ಗಳು ಸಂಚಾರ ನಡೆಸಿದ್ದು ನಿಗದಿತ ಸ್ಥಳ ತಲುಪಿದೆ. ಇಂದು ಮುಂಜಾನೆಯಿಂದ ಯಾವುದೆ ಬಸ್‌ಗಳು ಮಂಗಳೂರು ಡಿಪೋದಿಂದ ತೆರಳಲಿಲ್ಲ. ಇಂದು ಬಸ್‌ಗಳಲ್ಲಿ ತೆರಳಲು ಬಸ್ ಟಿಕೆಟ್ ಬುಕ್ಕಿಂಗ್ ಮಾಡಿದವರಿಗೆ ಪ್ರಯಾಣ ಬೆಳೆಸಲು ಸಾಧ್ಯವಾಗದೆ ಇರುವುದರಿಂದ ಶೇ.100 ರಷ್ಟು ಮರುಪಾವತಿ ಮಾಡಲಾಗುವುದು.
-ವಿನಾಯಕ್ ಹೆಗ್ಡೆ, ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ, ಮಂಗಳೂರು ವಿಭಾಗ
 

ಕಡಬ: ಪ್ರಯಾಣಿಕರ ಪರದಾಟ

ಕೆಎಸ್ಸಾರ್ಟಿಸಿ ಮುಷ್ಕರದಿಂದ ಬಸ್ ಸಂಚಾರವಿಲ್ಲದೆ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ದಿನನಿತ್ಯ ಸರಕಾರಿ ಬಸ್‌ನಲ್ಲಿ ಓಡಾಟ ನಡೆಸುವವರು ಪರದಾಡಿದರು. ಹಲವರು ಖಾಸಗಿ ವಾಹನಗಳಲ್ಲಿ ನೇತಾಡಿಕೊಂಡು ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ, ದರ್ಬೆ-ಕಾಣಿಯೂರು-ಸುಬ್ರಹ್ಮಣ್ಯ ಹೆದ್ದಾರಿಯಲ್ಲಿ ಹಾಗೂ ಇನ್ನಿತರ ಗ್ರಾಮೀಣ ಪ್ರದೇಶದಲ್ಲಿ ಸರಕಾರಿ ಬಸ್ಸುಗಳ ಓಡಾಟ ಸಂಪೂರ್ಣ ಸ್ಥಗಿತಗೊಂಡಿತ್ತು.


ಇಂದು ಎಂದಿನಂತೆ ಶಾಲಾ ಕಾಲೇಜು 
ಕೆಎಸ್ಸಾರ್ಟಿಸಿ ನೌಕರರ ಮುಷ್ಕರದಿಂದ ದ.ಕ. ಜಿಲ್ಲೆಯಲ್ಲಿ ಸೋಮವಾರ ಶಾಲಾ ಕಾಲೇಜುಗಳಿಗೆ ಯಾವುದೇ ಸಮಸ್ಯೆಯಾಗದಿರುವುದರಿಂದ ಮಂಗಳವಾರವು ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳು ಎಂದಿನಂತೆ ತೆರೆದು ಕಾರ್ಯಾಚರಿಸಲಿವೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News