ವಿಕಲಚೇತನರ ಕೇಂದ್ರದ ಮೇಲೆ ದುಷ್ಕರ್ಮಿಯೊಬ್ಬನಿಂದ ಚಾಕು ದಾಳಿ ; 19 ಸಾವು
ಟೋಕಿಯೊ, ಜು.26: ವಿಕಲಚೇತನರು ವಾಸವಾಗಿರುವ ಆಶ್ರಮವೊಂದಕ್ಕೆ ನುಗ್ಗಿದ ದುಷ್ಕರ್ಮಿಯೊಬ್ಬ ಚಾಕುವಿನಿಂದ ಇರಿದು 19 ಮಂದಿಯನ್ನು ಸಾಯಿಸಿದ ಘಟನೆ ಜಪಾನ್‌ನಲ್ಲಿ ನಡೆದಿದೆ.
ಜಪಾನ್‌ನ ರಾಜಧಾನಿ ಟೋಕಿಯೊದ ಸಾಗಾಮಿಹಾರ ಎಂಬಲ್ಲಿರುವ ವಿಕಚೇತನರು, ಮಾನಸಿಕ ಅಸ್ವಸ್ಥರು ವಾಸವಾಗಿರುವ ಕನಾಗಾವ ಕಿಯೊಡೊಕಾಯ್ ಕೇಂದ್ರಕ್ಕೆ ಇಂದು ಬೆಳಗ್ಗಿನ ಜಾವ ದುಷ್ಕರ್ಮಿಯೊಬ್ಬ ನುಗ್ಗಿದ್ದಾನೆ. ಅಲ್ಲಿರುವ ಮಂದಿಗೆ ಮನ ಬಂದಂತೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ದುಷ್ಕರ್ಮಿಯ ಚಾಕು ದಾಳಿಯಿಂದಾಗಿ 19 ಮಂದಿ ಸ್ಥಳದಲ್ಲೇ ಮೃತಪಟ್ಟರು. ಗಾಯಗೊಂಡಿರುವ 20 ಅಧಿಕ ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಪ್ಪತ್ತಾರರ ಹರೆಯದ ಸಾಟೊಶಿ ಯೆಮಾಸ್ಟು ಎಂಬಾತ ಈ ಕೃತ್ಯ ನಡೆಸಿದ್ದಾನೆ. ಈತ ಇದೇ ಸಂಸ್ಥೆಯ ಮಾಜಿ ನೌಕರ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಧಾವಿಸಿರುವ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಸಾಟೊಶಿ ಯೆಮಾಸ್ಟುನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಖಾಸಗಿ ಸಂಸ್ಥೆಯೊಂದರ ಉದ್ಯೋಗಿಯಾಗಿದ್ದ ಈತ ಕೆಲಸ ಕಳೆದುಕೊಂಡು ನಿರುದ್ಯೋಗಿಯಾಗಿರುವ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿರುವುದಾಗಿ ಹೇಳಿದ್ದಾನೆ. ಒಂದೊಮ್ಮೆ ಇದೇ ಸಂಸ್ಥೆಯ ಉದ್ಯೋಗಿಯಾಗಿದ್ದ ಎಂದು ತಿಳಿದು ಬಂದಿದೆ.
ಮೂವತ್ತು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಕನಾಗಾವ ಕಿಯೊಡೊಕಾಯ್ ಕೇಂದ್ರದಲ್ಲಿ 149 ಮಂದಿ ವಿಕಲಚೇತನರು ವಾಸವಾಗಿದ್ದಾರೆ.