ನೀತಾ ಅಂಬಾನಿಗೆ ' ವೈ' ದರ್ಜೆ ಭದ್ರತೆ

Update: 2016-07-26 17:14 GMT



 

ಹೊಸದಿಲ್ಲಿ, ಜು.26: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿಯವರ ಪತ್ನಿ, ನೀತಾ ಅಂಬಾನಿ ಭಾರತದ ಅತ್ಯಂತ ಗರಿಷ್ಠ ಭದ್ರತೆಯಿರುವವರ ಪಟ್ಟಿಗೆ ಸೇರಿದ್ದಾರೆ. ಇದರೊಂದಿಗೆ ಈ ಪಟ್ಟಿಯಲ್ಲಿರುವವರ ಸಂಖ್ಯೆ ಸಾರ್ವಕಾಲಿಕ ಗರಿಷ್ಠ 450ಕ್ಕೇರಿದೆ.
ಮಾನವತಾವಾದಿ ನೀತಾರಿಗೆ 'ವೈ' ಶ್ರೇಣಿಯ ಭದ್ರತೆ ಒದಗಿಸಲಾಗಿದೆ.ಅಂದರೆ, 10 ಮಂದಿ ಸಶಸ್ತ್ರ ಅಂಗರಕ್ಷಕರು ಅವರ ಭದ್ರತೆಯ ಹೊಣೆ ಹೊತ್ತಿದ್ದಾರೆ.
ತನ್ನ ದತ್ತಿ ಕೆಲಸಗಳಿಗಾಗಿ ವ್ಯಾಪಕ ಸಂಚಾರ ನಡೆಸುವ 52ರ ಹರೆಯದ ನೀತಾ ಅಂಬಾನಿಯವರಿಗೆ ಅಪಹರಣ ಬೆದರಿಕೆಯಿರುವುದನ್ನು ಅಂದಾಜಿಸಿ ಭದ್ರತಾ ಸಂಸ್ಥೆಗಳು ವರದಿಯೊಂದನ್ನು ನೀಡಿದ ಬಳಿಕ, ಕೇಂದ್ರ ಗೃಹ ಸಚಿವಾಲಯ ಅವರಿಗೆ ಭದ್ರತೆಯನ್ನು ಮಂಜೂರು ಮಾಡಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಪತಿ ಮುಕೇಶ್‌ರಂತೆಯೇ, ನೀತಾ ಕೂಡ ಭದ್ರತೆಯ ಸಂಪೂರ್ಣ ವೆಚ್ಚ ಭರಿಸುತ್ತಾರೆ. ಅವರನ್ನು ಭದ್ರತಾ ವಾಹನದೊಂದಿಗೆ 10 ಮಂದಿ ಸಿಆರ್‌ಪಿಎಫ್ ಜವಾನರು ಕಾವಲು ಕಾಯಲಿದ್ದಾರೆಂದು ಅಧಿಕಾರಿಗಳನ್ನುಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
ಅಂಬಾನಿ ದಂಪತಿ ಬಹುಶಃ ವಿವಿಐಪಿ ಭದ್ರತೆ ನೀಡಲಾಗಿರುವ ಏಕೈಕ ಕಾರ್ಪೊರೇಟ್ ವ್ಯಕ್ತಿಗಳಾಗಿದ್ದಾರೆ.
2013ರಲ್ಲಿ ಮುಕೇಶ್ ಅಂಬಾನಿಯವರಿಗೆ 'ಝಡ್' ಶ್ರೇಣಿಯ ಭದ್ರತೆ ಒದಗಿಸಲಾಗಿತ್ತು. ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಗೆ 'ಸಂಭಾವ್ಯ' ಬೆದರಿಕೆಯಿದೆ. ಆದರೆ, ಖಾಸಗಿ ಭದ್ರತಾ ಸಿಬ್ಬಂದಿಗೆ ಅತ್ಯುನ್ನತ ಹಾಗೂ ಅತ್ಯಾಧುನಿಕ ದರ್ಜೆಯ ಶಸ್ತ್ರಾಸ್ತ್ರಗಳನ್ನು ಒಯ್ಯಲು ಅವಕಾಶವಿಲ್ಲದುದರಿಂದ ಅವರಿಂದ ಈ ಕೆಲಸವನ್ನು ಸೂಕ್ತವಾಗಿ ನಡೆಸಲು ಸಾಧ್ಯವಾಗದೆಂದು ಸರಕಾರ ಹೇಳಿತ್ತು.
ಇದಕ್ಕಾಗಿ ಇಂದು ಮುಂಜಾನೆ ದಿಲ್ಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸರಕಾರವನ್ನು ಟ್ವೀಟ್ ಮೂಲಕ ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News