×
Ad

ಗೋರಕ್ಷಕರೇ, ನನ್ನ ಮೊರೆ ಕೇಳಿ...

Update: 2016-07-27 22:35 IST

ಆತ್ಮೀಯ ಗೋರಕ್ಷಕರೇ,

ನನ್ನ ವಂಶದ ಸದಸ್ಯರ ಸಂರಕ್ಷಣೆ ಕುರಿತ ನಿಮ್ಮ ಆತಂಕ ಕಂಡು ಅತೀವ ಆನಂದವಾಗುತ್ತಿದೆ. ಸತ್ತ ಹಸುವೊಂದರ ಚರ್ಮ ಸುಲಿಯುತ್ತಿದ್ದ ಬಡವರನ್ನು ಕೂಡಿಹಾಕಿ, ಥಳಿಸಿ, ಮೆರವಣಿಗೆ ಮಾಡಿದ್ದನ್ನು ನಾನು ಕೇಳಿದ್ದೇನೆ. ಅವರನ್ನು ಕೂಡಿಹಾಕಿ, ಕೈಗಳನ್ನು ಹಿಂದಕ್ಕೆ ಕಟ್ಟಿ, ವಾಹನದ ಹಿಂದಕ್ಕೆ ಕಟ್ಟಿ ಮೆರವಣಿಗೆ ಮಾಡಿದ್ದೀರಿ! ನೀವು ನಿಜವಾಗಿಯೂ ನಮ್ಮ ಸುರಕ್ಷೆ ಹಾಗೂ ಕಲ್ಯಾಣದ ಕಳಕಳಿ ಹೊಂದಿದ್ದೀರಿ. ನಿಜಕ್ಕೂ ನೀವು ಒಳ್ಳೆಯ ವ್ಯಕ್ತಿಗಳು, ದಯಾಳುಗಳು. ಇಂಥ ದಯಾಮಯಿಗಳಾದ ನೀವು, ಸತ್ತ ಹಸುವಿನ ಚರ್ಮ ಸುಲಿಯುತ್ತಿದ್ದ ನಿಮ್ಮವರನ್ನೇ ಹೇಗೆ ಕೂಡಿಹಾಕಿ ಥಳಿಸಿದಿರಿ? ಭಾರತವು ಹಲವು ಚರ್ಮ ಸಂಸ್ಕರಣಾ ಘಟಕ ಹಾಗೂ ಚರ್ಮ ಉದ್ದಿಮೆಗಳ ನೆಲ ಎನ್ನುವುದು ನಿಮಗೆ ಗೊತ್ತಿಲ್ಲವೇ? ದನದ ಚರ್ಮದಿಂದ ಹಣ ಸಿಗುತ್ತದೆ ಎಂಬ ಕಾರಣಕ್ಕೆ ಅದನ್ನು ಕೊಂದು ಚರ್ಮ ಸುಲಿಯುತ್ತಾರೆ; ಏಕೆಂದರೆ ನೀವು ಬಹಳಷ್ಟು ಮಂದಿ ನಮ್ಮ ಚರ್ಮದಿಂದ ಮಾಡಿದ ವಸ್ತುಗಳನ್ನು ದಿನ ನಿತ್ಯ ಬಳಸುತ್ತಿದ್ದೀರಿ; ನಮ್ಮ ಚರ್ಮ ಮಾಂಸ ರಫ್ತು ಮಾಡಿ ದೊಡ್ಡ ಲಾಭ ಪಡೆಯುತ್ತಿದ್ದೀರಿ. ನೀವು ಅಂಥ ಉತ್ಪನ್ನಗಳ ಬಳಕೆ ನಿಲ್ಲಿಸಿದರೆ, ಚರ್ಮ- ಮಾಂಸ ಮಾರಾಟದಿಂದ ದೊಡ್ಡ ಲಾಭ ಗಳಿಸುವ ದಂಧೆ ಕೈಬಿಟ್ಟರೆ, ಸಹಜವಾಗಿಯೇ ನಮ್ಮ ಚರ್ಮಕ್ಕೆ ಬೇಡಿಕೆ ಇರುವುದಿಲ್ಲ. ಯಾರೂ ನಮ್ಮನ್ನು ಕೊಂದು ಚರ್ಮ ಸುಲಿಯುವುದಿಲ್ಲ.

ನಾನು ಸ್ಪಷ್ಟವಾಗಿ ಹೇಳಬಯಸುವುದೆಂದರೆ, ಹಸುವನ್ನು ಹತ್ಯೆ ಮಾಡಿ ಚರ್ಮ ಸುಲಿಯುವಾಗ ನಿಮಗೆ ವಾಸ್ತವವಾಗಿ ಸಿಟ್ಟು ಬರಬೇಕಾದ್ದು ಪ್ರತಿಯೊಂದನ್ನೂ ಸರಕು ಎಂದು ಪರಿಗಣಿಸುವ ನಿಮ್ಮ ಆರ್ಥಿಕ ವ್ಯವಸ್ಥೆಯ ಮೇಲೆ. ಹೊಟ್ಟೆಪಾಡಿಗಾಗಿ ಸತ್ತ ದನದ ಚರ್ಮ ಸುಲಿಯುವವರನ್ನು ಹಿಡಿದು ಥಳಿಸುವ ಬದಲು, ಚರ್ಮದ ಉದ್ಯಮ ನಡೆಸುತ್ತಿರುವ ದೊಡ್ಡ ಕುಳಗಳ ಬಳಿಗೆ ಹೋಗಿ, ಕೈಗಾರಿಕೆ ನಿಲ್ಲಿಸುವಂತೆ ಆಗ್ರಹಿಸಿ. ಆ ಧೈರ್ಯ ನಿಮಗಿದೆಯೇ? ಅದು ಸಾಧ್ಯವಿಲ್ಲ ಎಂದಾದರೆ, ನಮ್ಮ ಸಂರಕ್ಷಣೆ ಹೆಸರಲ್ಲಿ ದಲಿತರು, ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಎಸಗುವುದು ನಿಲ್ಲಿಸುತ್ತೀರಾ?
1991ರಿಂದೀಚೆಗೆ ನಿಮ್ಮನ್ನು ಆಳುವವರು ರೈತರ ಬದಲಾಗಿ ಕಾರ್ಪೊರೇಟ್ ಉದ್ಯಮ ಹಿತಾಸಕ್ತಿ ಕಾಪಾಡಲು ಆದ್ಯತೆ ನೀಡಿದ್ದರಿಂದ, ಲಕ್ಷಾಂತರ ಮಂದಿ ರೈತರು ನಿಮ್ಮ ದೇಶದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದು ನಿಮಗೆ ಗೊತ್ತೇ? ಕೃಷಿಗೆ ಪ್ರಾಮುಖ್ಯ ನೀಡಿದರೆ, ಖಂಡಿತವಾಗಿಯೂ ಹಸು ಮತ್ತು ಜನರ ನಡುವೆ ಸಾಂಕೇತಿಕ ಸಂಬಂಧ ಏರ್ಪಡುತ್ತದೆ. ಅದು ಸಹಜವಾಗಿಯೇ ನಮ್ಮ ಸಂರಕ್ಷಣೆಯ ಖಾತ್ರಿ ನೀಡುತ್ತದೆ. ಕೃಷಿ ಕ್ಷೇತ್ರವನ್ನು ನಾಶ ಮಾಡುವ, ನಮ್ಮ- ನಿಮ್ಮ ಸಂಬಂಧವನ್ನು ಹಾಳುಗೆಡಹುವ ಕೇಂದ್ರ ಹಾಗೂ ರಾಜ್ಯ ಸರಕಾರದ ನೀತಿಗಳ ವಿರುದ್ಧ ನೀವೇಕೆ ಬಂಡೇಳುವುದಿಲ್ಲ? ಕಾರ್ಫೊರೇಟ್ ಪರ ನೀತಿಯಿಂದಾಗಿ ಕೃಷಿ ಆರ್ಥಿಕತೆ ತೆವಳುತ್ತಿರುವಾಗ, ನಾವು ಹಸುಗಳು ನಮ್ಮ ಮಾಂಸ ಹಾಗೂ ಚರ್ಮದ ಕೈಗಾರಿಕೆಗಳಿಗೆ ಕಚ್ಚಾವಸ್ತುಗಳಷ್ಟೇ ಆಗಲು ಸಾಧ್ಯ. ಆದ್ದರಿಂದ ದಯವಿಟ್ಟು, ಕೃಷಿ ಆರ್ಥಿಕತೆ ಪುನಶ್ಚೇತನಕ್ಕೆ ಪ್ರಯತ್ನಿಸಿ. ಚರ್ಮದ ಉತ್ಪನ್ನ ಬಳಕೆ ತಡೆಯಲು ಮುಂದಾಗಿ. ನಮ್ಮ ಮಾಂಸ, ಚರ್ಮದಿಂದಾಗಿಯೇ ಉಳಿದುಕೊಂಡ ಕೈಗಾರಿಕೆಗಳನ್ನು ನಿಷೇಧಿಸಲು ಪ್ರಯತ್ನಿಸಿ. ಇಂಥ ಗುರಿ ಬದಲಾವಣೆಗೆ ನಿಮ್ಮ ಸರಕಾರದ ಮೇಲೆ ಒತ್ತಡ ತನ್ನಿ. ಇದನ್ನು ಮಾಡುವ ತಾಕತ್ತು ನಿಮಗಿದೆಯೇ? ಇಲ್ಲದಿದ್ದರೆ ದಯವಿಟ್ಟು, ಅಮಾಯಕರ, ಅಸಹಾಯಕರ ಮೇಲೆ ಗೋರಕ್ಷಣೆ ಹೆಸರಿನಲ್ಲಿ ದಾಳಿ ಮಾಡುವುದು, ಚಿತ್ರಹಿಂಸೆ ನೀಡುವುದು ನಿಲ್ಲಿಸುತ್ತೀರಾ?
ಅಮಾಯಕರನ್ನು ಕೂಡಿ ಹಾಕಿ, ಥಳಿಸುತ್ತಿರುವಾಗ, ಬಹುಶಃ ನಿಮ್ಮಲ್ಲೇ ಬಹಳಷ್ಟು ಮಂದಿ ಚರ್ಮದ ಚಪ್ಪಲಿ ಧರಿಸಿರುತ್ತೀರಿ ಎಂದು ನಾನು ಅಂದುಕೊಳ್ಳುತ್ತೇನೆ. ಬಹುಶಃ ಅದು ನಮ್ಮ ತೊಗಲಿನಿಂದ ಮಾಡಿದ್ದು. ಆದ್ದರಿಂದ ಗೋಸಂರಕ್ಷೆ ಬೂಟಾಟಿಕೆ ದುರ್ಬಲರ ವಿರುದ್ಧ ದೌರ್ಜನ್ಯ ಎಸಗುವ ಅಸ್ತ್ರ ಅಷ್ಟೇ. ನೀವು ನಮ್ಮನ್ನು ‘ರಕ್ಷಿಸಿ’ ದಲಿತರು ಹಾಗೂ ಆದಿವಾಸಿಗಳನ್ನು ಹಿಂಸಿಸುವುದು ನಿಜಕ್ಕೂ ಕೆಟ್ಟ ಕೆಲಸ. ಆದಿವಾಸಿಗಳು ಹಾಗೂ ದಲಿತರು ಕೂಡಾ ನಿಮ್ಮಂಥ ಎಲ್ಲ ಹಕ್ಕುಗಳನ್ನು ಹೊಂದಿರುವ ಮನುಷ್ಯರು ಎಂದು ನೀವು ಪರಿಗಣಿಸಬೇಕು. ಹಸು ಮತ್ತು ಎತ್ತುಗಳ ರಕ್ಷಣೆಗೆ ಮುನ್ನ ಸಮಾಜದಲ್ಲಿ ದುರ್ಬಲರನ್ನು ರಕ್ಷಿಸಿ. ಅವರ ಸುರಕ್ಷತೆ ಮತ್ತು ಅಭ್ಯುದಯವನ್ನು ಖಾತ್ರಿಪಡಿಸಿಕೊಳ್ಳಿ.

ಎಸ್‌ಎಸ್‌ಪಿ ಅಣೆಕಟ್ಟುಗಳಿಂದಾಗಿ ನರ್ಮದಾ ನದಿ ಜಿನುಗುತ್ತಿರು ವುದು ನಿಮಗೆ ಗೊತ್ತೇ? ಈ ದೊಡ್ಡ ನದಿ, ಗುಜರಾತ್‌ನ ಬರೂಚ್ ಬಳಿ 1.5 ಕಿಲೋಮೀಟರ್ ಬದಲಾಗಿ 400 ಮೀಟರ್‌ಗೆ ಕ್ಷೀಣಿಸಿರುವುದು ತಿಳಿದಿದೆಯೇ? ಸಮುದ್ರ ನೀರು 40 ಕಿಲೋಮೀಟರ್ ಒಳಗೆ ನುಗ್ಗಿ ನೀರಾವರಿ ಹಾಗೂ ಕುಡಿಯುವ ನೀರನ್ನು ಉಪ್ಪುನೀರಾಗಿ ಪರಿವರ್ತಿ ಸಿದೆ. ಎಸ್‌ಎಸ್‌ಪಿ ದೊಡ್ಡ ಪರಿಸರ ಹಾಗೂ ಸಾಮಾಜಿಕ ದುರಂತ ಎಂದು ಕಲ್ಪವೃಕ್ಷ ಸಂಘಟನೆಯ ಆಶೀಶ್ ಕೊಥಾರಿ ‘ದ ಹಿಂದೂ’ ಪತ್ರಿಕೆಯಲ್ಲಿ (2016 ಜುಲೈ 19ರ ಸಂಚಿಕೆ) ಬರೆದ ಒಂದು ಲೇಖನದಲ್ಲಿ ಹೇಳಿದ್ದಾರೆ. ನೀವೇಕೆ ಹೋಗಿ ಎಸ್‌ಎಸ್‌ಪಿ ಛಿದ್ರಗೊಳಿಸಬಾರದು? ಒಂದು ನದಿಯನ್ನು ಹತ್ಯೆ ಮಾಡಿರುವ ಅವರ ಕೈಗಳನ್ನೇಕೆ ಕಟ್ಟಿಹಾಕ ಬಾರದು? ಹಾಗೆ ಮಾಡಲು ನಿಮಗೆ ಧೈರ್ಯ ಇದೆಯೇ? ಅಸಹಾಯಕರ ವಿರುದ್ಧ ಅಮಾನವೀಯ ದೌರ್ಜನ್ಯ ಎಸಗಿದಷ್ಟು ಅದು ಖಂಡಿತಾ ಸುಲಭವಲ್ಲ. ನದಿಗಳನ್ನು ಹಾಗೂ ನಾವು- ನೀವು ಬದುಕಿ ಬಾಳುವ ಅರಣ್ಯವನ್ನು ಕೊಲ್ಲುವ ಸರಕಾರಿ ಪ್ರಾಯೋಜಿತ ಹತ್ಯೆಯನ್ನು ತಡೆಯುವ ಬದಲು ಹಸು ಸಂರಕ್ಷಣೆ ಹೆಸರಿನಲ್ಲಿ ಏಕೆ ಬಡವರ ಹೊಟ್ಟೆ ಮೇಲೆ ಹೊಡೆಯುತ್ತೀರಿ? ಗೋ ಸಂರಕ್ಷಣೆ ಹೆಸರಿನಲ್ಲಿ ಬಡವರ ಮೇಲೆ ದೌರ್ಜನ್ಯ ಎಸಗುತ್ತಿರುವ ನಿಮ್ಮ ಬಗ್ಗೆ ನಮಗೆ ಅಸಹ್ಯ ಎನಿಸುತ್ತಿದೆ. ನೀವು ಗೋರಕ್ಷಕರಲ್ಲ. ಸಾಮಾಜಿಕ ಸಾಮರಸ್ಯ ಹಾಗೂ ಶಾಂತಿ ಕದಡುವ ಸಮಾಜಘಾತುಕ ಶಕ್ತಿಗಳು.

ನಿಮ್ಮಂಥ ಜನರೇ ಐನೂರು ವರ್ಷ ಹಳೆಯ, ಐತಿಹಾಸಿಕ ಮಸೀದಿಯನ್ನು 1992ರಲ್ಲಿ ಧ್ವಂಸಗೊಳಿಸಿ, ದೇಶದಲ್ಲಿ ವ್ಯಾಪಕ ಕೋಮು ದಳ್ಳುರಿಗೆ ಕಾರಣರಾದವರು. ಮುಸ್ಲಿಂ ಆಡಳಿತಗಾರರು ದೇಶದ ಮೇಲೆ ದಾಳಿ ನಡೆಸಿದ್ದು ಹಾಗೂ ನಿಮ್ಮ ಧರ್ಮದ ಜನರನ್ನು ಮತಾಂತರ ಮಾಡಿದ್ದಕ್ಕೆ ಪ್ರತೀಕಾರವಾಗಿ ಮಸೀದಿ ಧ್ವಂಸಗೊಳಿಸಿದ್ದಾಗ ಹೇಳಿಕೊಂಡಿರಿ. ಮಧ್ಯಯುಗದಲ್ಲಿ ವಿದೇಶಿ ಆಡಳಿತಗಾರರು ದಾಳಿ ಮಾಡಿ ದೇಶವನ್ನು ವಶಪಡಿಸಿಕೊಳ್ಳಲು ನಿಮ್ಮಲ್ಲಿ ಸಾಮಾಜಿಕ ಸಮನ್ವಯ ಮತ್ತು ಸಾಮರಸ್ಯ ಇಲ್ಲದಿದ್ದುದು ಕಾರಣವಲ್ಲವೇ? ಜನರು ವಿದೇಶಿ ಧರ್ಮಕ್ಕೆ ಸಾಮೂಹಿಕವಾಗಿ ಮತಾಂತರ ಹೊಂದಿದ್ದರೆ ಅದಕ್ಕೆ ಕಾರಣ ನಿಮ್ಮ ಧರ್ಮದಲ್ಲಿ ಅವರಿಗೆ ಉಸಿರಾಡುವ ಅವಕಾಶವನ್ನೂ ನೀಡದೆ, ಕನಿಷ್ಠ ಮಾನವ ಗೌರವವನ್ನೂ ನೀಡದಿದ್ದುದು ಅಲ್ಲವೇ? ನಿಮ್ಮ ಧರ್ಮ ದೊಡ್ಡ ಸಂಖ್ಯೆಯ ಮಂದಿಯನ್ನು ಸೌಲಭ್ಯ ವಂಚಿತರನ್ನಾಗಿ ಮಾಡಿದ ಕಾರಣದಿಂದ ಅಲ್ಲವೇ? ನಿಮ್ಮ ಏಕೈಕ ದೂರದೃಷ್ಟಿಯ ಪ್ರಧಾನಿ ಜವಾಹರಲಾಲ್ ನೆಹರೂ ಅವರು ‘ಡಿಸ್ಕವರಿ ಆಫ್ ಇಂಡಿಯಾ’ ಕೃತಿಯಲ್ಲಿ ಬರೆದದ್ದನ್ನು ನೀವೇಕೆ ಅನುಸರಿಸುವುದಿಲ್ಲ? ‘‘ಭಾರತದ ಮೇಲೆ ಮುಸ್ಲಿಂ ದಾಳಿ ಅಥವಾ ಭಾರತದ ಮುಸ್ಲಿಂ ಅವಧಿ ಎಂದು ಹೇಳುವುದು ತಪ್ಪು. ಬ್ರಿಟಿಷರು ಭಾರತಕ್ಕೆ ಬಂದದ್ದನ್ನು ಕ್ರಿಶ್ಚಿಯನ್ ದಾಳಿ ಎಂದಂತೆ ಅಥವಾ ಬ್ರಿಟಿಷ್ ಆಡಳಿತಾವಧಿಯಲ್ಲಿ ಕ್ರಿಶ್ಚಿಯನ್ ಅವಧಿ ಎಂದು ಹೇಳಿದಂತೆ. ಇಸ್ಲಾಂ ಭಾರತದ ಮೇಲೆ ದಾಳಿ ಮಾಡಿಲ್ಲ’’ ಎಂದು ಅವರು ಸ್ಪಷ್ಟವಾಗಿ ಹೇಳಿದ್ದರು.

ನಿಮ್ಮ ಆಂತರಿಕ ಹುಳುಕುಗಳನ್ನು ಸರಿಪಡಿಸಿಕೊಳ್ಳುವ ಬದಲು, ದುರ್ಬಲ ವರ್ಗದ ಜನರನ್ನು ಮತ್ತು ಅಲ್ಪಸಂಖ್ಯಾತರನ್ನು ಸದ್ದಡಗಿಸು ವುದು ನಿಲ್ಲಿಸಲು ಇದು ಸಕಾಲ. ನಿಮ್ಮಲ್ಲೇ ಅಸಹಾಯಕರಾಗಿರುವ ವರ್ಗವನ್ನು ರಕ್ಷಿಸಲು ಸಮರ್ಥರಲ್ಲದ ನೀವು ಪ್ರಾಣಿಗಳಾದ ನಮ್ಮನ್ನು ಹೇಗೆ ಸಂರಕ್ಷಿಸಬಲ್ಲಿರಿ?
-ಇತೀ ನಿಮ್ಮ ಗೋಮಾತೆ.


                                       ಅಬ್ಬಾ, ಮೋದಿ ಎಷ್ಟು ಪ್ರಾಮಾಣಿಕರು!


ಇಂಥ ರಕ್ಷಕ ಗುಂಪುಗಳಿಂದ ಭಾರತದ ಪ್ರಜಾಪ್ರಭುತ್ವಕ್ಕೆ ಅಪಾಯ ಎದುರಾಗಿದೆ. ಹಸು ಅಥವಾ ಸಂಸ್ಕೃತಿ ಸಂರಕ್ಷಣೆ ಹೆಸರಿನಲ್ಲಿ ಒಂದು ನಿರ್ದಿಷ್ಟ ಧರ್ಮದ ಸಂರಕ್ಷಕರು, ನಿರ್ಭೀತಿಯಿಂದ ಪುಂಡಾಟಿಕೆಯಲ್ಲಿ ತೊಡಗಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಅತಿದುರ್ಬಲ ವರ್ಗದವರು ಕೂಡಾ ಪ್ರಬಲ ಸಮುದಾಯದಷ್ಟೇ ಸುರಕ್ಷತೆ ಹಾಗೂ ಭದ್ರತೆಯನ್ನು ಅನುಭವಿಸುವ ಹಕ್ಕು ಹೊಂದಿದ್ದಾರೆ. ಆದರೆ ಇಂದಿನ ಭಾರತದಲ್ಲಿ, ಹಿಂದಿಗಿಂತಲೂ ರಾಜಾರೋಷವಾಗಿ ದಲಿತರು ಹಾಗೂ ಆದಿವಾಸಿಗಳ ಮೇಲಿನ ದೌರ್ಜನ್ಯ ಹೆಚ್ಚುತ್ತಿದೆ. ಕರ್ನಾಟಕದಲ್ಲಿ ಎಂ.ಎಂ.ಕಲಬುರ್ಗಿ ಹತ್ಯೆ, ಉತ್ತರ ಪ್ರದೇಶದಲ್ಲಿ ಮುಹಮ್ಮದ್ ಅಖ್ಲಾಕ್ ಅವರ ಕೊಲೆ, ಗುಜರಾತ್‌ನಲ್ಲಿ ದಲಿತ ಯುವಕರ ಮೇಲಿನ ಹಲ್ಲೆ ಎಲ್ಲದರ ಮೂಲವೂ ಒಂದೇ- ಸಾಂಸ್ಕೃತಿಕ ಅಸಹಿಷ್ಣುತೆ ಅಥವಾ ಫ್ಯಾಶಿಸಂ. ಇದು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ವಿರುದ್ಧವಾದದ್ದು.

ಮೂಲ ಸಮಸ್ಯೆ ಎಂದರೆ ಮೋದಿ ಸರಕಾರಕ್ಕೆ ಸಮಗ್ರ ಜನ ಕಲ್ಯಾಣಕ್ಕಾಗಿ ನೀಡುವಂಥದ್ದೇನೂ ಇಲ್ಲ. ಅದರಲ್ಲೂ ಮುಖ್ಯವಾಗಿ ದುರ್ಬಲ ವರ್ಗದವರಿಗಾಗಿ. ಸರಕಾರ ಕಾರ್ಪೊರೇಟ್ ವಲಯದ ವ್ಯವಹಾರಗಳ ಬಗ್ಗೆ ಮಾತ್ರ ಗಮನ ಹರಿಸಿರುವ ಸರಕಾರ ಬಡವರ ಬಗ್ಗೆ ಬಾಯಿಮಾತಿನ ಕಾಳಜಿಯಷ್ಟೇ ತೋರುತ್ತಿದೆ. ಆದ್ದರಿಂದಲೇ ಇಂಥ ರಕ್ಷಕ ಗುಂಪುಗಳಿಗೆ ಮನಸೋ ಇಚ್ಛೆ ವರ್ತಿಸಲು ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. 2014ರ ಮೇ 20ರಂದು ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ 32 ನಿಮಿಷಗಳ ನಿರರ್ಗಳ ಭಾಷಣ ಮಾಡಿದ್ದ ಮೋದಿ, ಸರಕಾರ ಬಡವರ ಪರವಾಗಿ ಯೋಚಿಸುತ್ತದೆ. ಬಡವರ ದನಿ ಆಲಿಸುತ್ತದೆ..ಇದು ಬಡವರಿಗಾಗಿಯೇ ಅಸ್ತಿತ್ವದಲ್ಲಿರುತ್ತದೆ... ಹೊಸ ಸರಕಾರ ಬಡವರಿಗೆ ಬದ್ಧವಾಗಿರುತ್ತದೆ. ಸರಕಾರ ಗ್ರಾಮಸ್ಥರಿಗಾಗಿ, ರೈತರಿಗಾಗಿ, ದಲಿತರು ಹಾಗೂ ತುಳಿತಕ್ಕೆ ಒಳಗಾದವರಿಗಾಗಿ. ಅವರ ಆಕಾಂಕ್ಷೆಗಳಿಗಾಗಿ..ಇದು ನಮ್ಮ ಜವಾಬ್ದಾರಿ ಎಂದು ಘೋಷಿಸಿದ್ದರು.

ಮೋದಿ ನಾಯಕತ್ವದಲ್ಲಿ ಎನ್‌ಡಿಎ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ, ದಲಿತರ ಮೇಲಿನ ದೌರ್ಜನ್ಯ ಹಿಂದೆಂದಿಗಿಂತಲೂ ಹೆಚ್ಚುತ್ತಿದೆ. ಈ ಸರಕಾರ ದಲಿತರು ಹಾಗೂ ದುರ್ಬಲರಿಗಾಗಿ ಎಂದು ನಿಜವಾಗಿಯೂ ಹೇಳಬಹುದೇ?
ಅಬ್ಬಾ, ಮೋದಿ ಎಷ್ಟು ಪ್ರಾಮಾಣಿಕರು!

Writer - ಸಿ.ವಿ.ಸುಕುಮಾರನ್

contributor

Editor - ಸಿ.ವಿ.ಸುಕುಮಾರನ್

contributor

Similar News