ಸಾರ್ಕ್ ಸಭೆಯಲ್ಲಿ ಪಾಲ್ಗೊಳ್ಳಲು ಮುಂದಿನ ತಿಂಗಳು ರಾಜ್‌ನಾಥ್ ಸಿಂಗ್ ಪಾಕಿಸ್ತಾನಕ್ಕೆ ಭೇಟಿ
ಹೊಸದಿಲ್ಲಿ, ಜು.28: ಗೃಹ ಹಾಗೂ ಆಂತರಿಕ ಸಚಿವರ ಸಾರ್ಕ್ ಸಭೆಯಲ್ಲಿ ಭಾಗವಹಿಸಲು ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್ ಮುಂದಿನ ತಿಂಗಳಾರಂಭದಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ.
ಸಾರ್ಕ್ ಸಭೆ ಆಗಸ್ಟ್ 3 ಹಾಗೂ 4 ರಂದು ನಿಗದಿಯಾಗಿದೆ. ಸಾರ್ಕ್ ಸಭೆಯಲ್ಲಿ ಗೃಹ ಸಚಿವ ಸಿಂಗ್ ಅವರು ಗಡಿಯಾಚೆಗಿನ ಭಯೋತ್ಪಾದಕ ಚಟುವಟಿಕೆಯ ಬಗ್ಗೆ ಧ್ವನಿ ಎತ್ತಲಿದ್ದಾರೆ ಎಂದು ನ್ಯೂಸ್ ಏಜೆನ್ಸಿ ತಿಳಿಸಿದೆ.
ಕಾಶ್ಮೀರದ ವಿಷಯಕ್ಕೆ ಸಂಬಂಧಿಸಿ ನೆರೆಯ ರಾಷ್ಟ್ರ ಪಾಕಿಸ್ತಾನ ಮಧ್ಯಪ್ರವೇಶಿಸುತ್ತಿರುವ ಬಗ್ಗೆ ಕಳೆದ ವಾರವಷ್ಟೇ ರಾಜ್‌ನಾಥ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದರು. ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರಕ್ಕೆ ಪಾಕ್ ನೇರ ಹೊಣೆ ಯಾಗಿದೆ ಎಂದೂ ಶ್ರೀನಗರದಲ್ಲಿ ಇತ್ತೀಚೆಗೆ ನಡೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಆರೋಪಿಸಿದ್ದರು. ಇದೀಗ ಪಾಕಿಸ್ತಾನದಲ್ಲೇ ಗೃಹ ಸಚಿವರುಗಳ ಸಾರ್ಕ್ ಸಭೆ ನಡೆಯುತ್ತಿರುವ ಕಾರಣ ಸಿಂಗ್ ಹೇಳಿಕೆ ಅತ್ಯಂತ ಮಹತ್ವ ಪಡೆದಿದೆ.
13ನೆ ಆವೃತ್ತಿಯ ಸಾರ್ಕ್ ಸಮ್ಮೇಳನ 2015ರ ನವೆಂಬರ್‌ನಲ್ಲಿ ಢಾಕಾದಲ್ಲಿ ನಡೆದಿತ್ತು. ಆಗ ಆ ಸಮ್ಮೇಳನದಲ್ಲಿ ಪ್ರತಿ ವರ್ಷ ಆಂತರಿಕ/ಗೃಹ ಸಚಿವರುಗಳ ಸಭೆಯನ್ನು ನಡೆಸುವ ಬಗ್ಗೆ ರಾಜ್ಯ ಪ್ರಮುಖರು ನಿರ್ಧರಿಸಿದ್ದರು. ಭಯೋತ್ಪಾದನಾ ವಿರುದ್ಧ ಹೋರಾಡಲು ಸಹಕಾರದ ಬಲವರ್ಧನೆಗೆ ಈ ಸಭೆ ನಡೆಸಲು ನಿರ್ಧರಿಸಲಾಗಿತ್ತು.
ಆಂತರಿಕ/ಗೃಹ ಸಚಿವರುಗಳ ಮೊದಲ ಸಾರ್ಕ್ ಸಭೆ 2006ರ ಮೇ 11 ರಮದು ಢಾಕಾದಲ್ಲಿ ನಡೆದಿತ್ತು. ಆ ನಂತರ 2007ರಲ್ಲಿ ಹೊಸದಿಲ್ಲಿಯಲ್ಲಿ ನಡೆದಿತ್ತು.