×
Ad

ಔರಂಗಾಬಾದ್ ಶಸ್ತ್ರಾಸ್ತ್ರ ಸಾಗಾಟ ಪ್ರಕರಣ: ಅಬುಜುಂದಾಲ್ ಸಹಿತ 12 ಮಂದಿ ದೋಷಿಗಳು: ಮೊಕಾ ನ್ಯಾಯಾಲಯದ ತೀರ್ಪು

Update: 2016-07-28 18:11 IST

ಮುಂಬೈ, ಜು.28: ಮುಂಬೈ ಭಯೋತ್ಪಾದಕ ದಾಳಿಯ(26/11) ಪ್ರಧಾನ ಪಿತೂರಿಗಾರ ಸೈಯದ್ ಝಬಿಯುದ್ದೀನ್ ಅನ್ಸಾರಿ ಅಲಿಯಾಸ್ ಅಬು ಜುಂದಾಲ್‌ನನ್ನು 2006ರ ಔರಂಗಾಬಾದ್ ಶಸ್ತ್ರಾಸ್ತ್ರ ಸಾಗಾಟ ಪ್ರಕರಣದಲ್ಲಿ ಅಪರಾಧಿಯೆಂದು ಗುರುವಾರ ಘೋಷಿಸಲಾಗಿದೆ.
ಪ್ರಕರಣದ ಇತರ 21 ಆರೋಪಿಗಳಲ್ಲಿ 11 ಮಂದಿ ದೋಷಿಗಳೆಂದು ವಿಶೇಷ ಮೊಕಾ ನ್ಯಾಯಾಲಯ ತೀರ್ಪು ನೀಡಿದ್ದು, ಉಳಿದ 10 ಮಂದಿಯನ್ನು ಖುಲಾಸೆಗೊಳಿಸಿದೆ.
ಇದು, 2002ರ ಗುಜರಾತ್ ದಂಗೆಯ ಬಳಿಕ, ಗುಜರಾತ್‌ನ ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ವಿಎಚ್‌ಪಿ ನಾಯಕ ಪ್ರವೀಣ್ ತೊಗಾಡಿಯಾರ ಹತ್ಯೆಗೆ ನಡೆಸಿದ ಪಿತೂರಿಯಾಗಿತ್ತೆಂದು ಮೊಕಾ ನ್ಯಾಯಾಲಯ ಹೇಳಿದೆ.
2006ರ ಮೇ 8ರಂದು ಮಹಾರಾಷ್ಟ್ರ ಎಟಿಎಸ್‌ನ ತಂಡವೊಂದು ಔರಂಗಾಬಾದ್‌ನ ಸಮೀಪ ಚಂದ್ವಾಡ್-ಮಾಲ್ಮಾಡ್ ಹೆದ್ದಾರಿಯಲ್ಲಿ 2 ಕಾರುಗಳನ್ನು ಬೆನ್ನಟ್ಟಿ ಹಿಡಿದು 30 ಕಿ.ಗ್ರಾಂ. ಆರ್‌ಡಿಎಕ್ಸ್, 10 ಎಕೆ-47 ರೈಫಲ್‌ಗಳು ಹಾಗೂ 3,200 ಗುಂಡುಗಳನ್ನು ವಶಪಡಿಸಿಕೊಂಡಿತ್ತು ಹಾಗೂ ಮೂವರು ಶಂಕಿತ ಭಯೋತ್ಪಾದಕರನ್ನು ಬಂಧಿಸಿತ್ತು.
ಲಷ್ಕರೆ ತಯ್ಯಬಾ ಉಗ್ರ ಜುಂದಾಲ್ ಒಂದು ಕಾರನ್ನು ಆ ವೇಳೆ ಚಲಾಯಿಸುತ್ತಿದ್ದು, ಪರಾರಿಯಾಗಿದ್ದನು. ಮಹಾರಾಷ್ಟ್ರದ ಬೀಡ್ ಜಿಲ್ಲೆಯವನಾದ ಆತ ಮಾಲೆಗಾಂವ್‌ಗೆ ಹೋಗಿ ಅಲ್ಲಿಂದ ಬಾಂಗ್ಲಾದೇಶ ಹಾಗೂ ಬಳಿಕ ಪಾಕಿಸ್ತಾನಕ್ಕೆ ಪರಾರಿಯಾಗಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಜುಂದಾಲ್‌ನನ್ನು 2012ರಲ್ಲಿ ಸೌದಿ ಅರೇಬಿಯದಿಂದ ಭಾರತಕ್ಕೆ ಗಡಿಪಾರು ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News