×
Ad

ಮ.ಪ್ರ.:ಬಜರಂಗದಳದ ಕುಮ್ಮಕ್ಕಿನಿಂದಲೇ ಹಲ್ಲೆ ನಡೆದಿದೆ: ಬೀಫ್ ಸಾಗಾಟದ ಶಂಕೆಯಲ್ಲಿ ಥಳಿತಕ್ಕೊಳಗಾದ ಮಹಿಳೆಯ ಆರೋಪ

Update: 2016-07-28 19:46 IST

ಭೋಪಾಲ್,ಜು.17: ತಮ್ಮ ಮೇಲೆ ಹಲ್ಲೆ ನಡೆಸುವಂತೆ ಬಜರಂಗದಳ ಕಾರ್ಯಕರ್ತರೇ ಪ್ರಚೋದನೆ ನೀಡಿದ್ದರೆಂದು ಗೋಮಾಂಸ ಸಾಗಾಟ ಮಾಡುತ್ತಿದ್ದರೆಂಬ ಶಂಕೆಯಲ್ಲಿ ಮಧ್ಯಪ್ರದೇಶದ ಮಾಂಡ್‌ಸೌರ್ ರೈಲ್ವೆ ನಿಲ್ದಾಣದಲ್ಲಿ ಬರ್ಬರವಾಗಿ ಥಳಿಸಲ್ಪಟ್ಟ ಇಬ್ಬರು ಮುಸ್ಲಿಂ ಮಹಿಳೆಯರು ಆರೋಪಿಸಿದ್ದಾರೆ.
 ‘‘ ನಾವು ಮಾಂಡ್‌ಸೌರ್‌ಗೆ ಬರುತ್ತಿದ್ದಾಗ, ಕೆಲವು ಬಜರಂಗದಳ ಕಾರ್ಯಕರ್ತರು ನಮ್ಮನ್ನು ತಡೆದು ನಿಲ್ಲಿಸಿದರು ಹಾಗೂ ನಾವು ಏನನ್ನು ಒಯ್ಯುತ್ತಿದ್ದೇವೆಂದು ಅವರು ಪ್ರಶ್ನಿಸಿದರು. ನಾವು ಅವರಿಗೆ ಅದು ‘ ಎಮ್ಮೆ ಕರುವಿನ ಮಾಂಸ’ ಎಂದು ಹೇಳಿದಾಗ ಅವರು ಅದನ್ನು ಒಪ್ಪದೆ, ಅದು ದನದ ಮಾಂಸವೆಂದೇ ಪಟ್ಟು ಹಿಡಿದರು’’ ಹಲ್ಲೆಗೊಳಗಾದ ಮಹಿಳೆಯರಲ್ಲೊಬ್ಬರಾದ ಸಲ್ಮಾ ತಿಳಿಸಿದ್ದಾರೆ.
    ‘‘ ಆನಂತರ, ನಾವು ಅವರಿಗೆ ಬೇಕಾದರೆ ಪಶುವೈದ್ಯರಿಂದ ಮಾಂಸವನ್ನು ಪರೀಕ್ಷಿಸುವಂತೆಯೂ ತಿಳಿಸಿದೆವು. ಆದರೂ ಅವರು ನಮ್ಮ ಮಾತು ಕೇಳಲಿಲ್ಲ. ಅವರು ತಮ್ಮ ಜೊತೆಗಿದ್ದ ಮಹಿಳೆಯರಿಗೆ, ನಮ್ಮನ್ನು ಥಳಿಸುವಂತೆ ಸೂಚಿಸಿದರು’’ ಎಂದು ಸಲ್ಮಾ ಆಪಾದಿಸಿದ್ದಾರೆ.
ಹಲ್ಲೆಗೊಳಗಾದ ತಮ್ಮನ್ನು ರಕ್ಷಿಸಲು ಧಾವಿಸಿದ ಪೊಲೀಸರಿಗೂ ಬಜರಂಗದಳ ಕಾರ್ಯಕರ್ತರು ಬೆದರಿಕೆಯೊಡ್ಡಿದರೆಂದು ಆಕೆ ಆಪಾದಿಸಿದ್ದಾರೆ.
   ಸಲ್ಮಾ ಮೇವಾಟಿ (35) ಹಾಗೂ ಶಮೀಂ ಅಖ್ತರ್ ಹುಸೈನ್ (30) ಮೇಲೆ ತಥಾಕಥಿತ ಗೋ ಸಂರಕ್ಷಕರು ಹಿಗ್ಗಾಮಗ್ಗಾ ಥಳಿಸಿದ್ದರು. ಆನಂತರ ಪೊಲೀಸರು ಕೂಡಾ ಗೋಮಾಂಸ ಸಾಗಾಟ ಮಾಡುತ್ತಿದ್ದರೆಂಬ ಶಂಕೆಯಲ್ಲಿ ಈ ಇಬ್ಬರು ಮಹಿಳೆಯರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.
 ಆದರೆ ವೈದ್ಯಕೀಯ ಪರೀಕ್ಷೆಯಲ್ಲಿ ಅದು ಎಮ್ಮೆಯ ಮಾಂಸವೆಂದು ದೃಢಪಟ್ಟ ಬಳಿಕ ಪೊಲೀಸರು ಮೊಕದ್ದಮೆಯನ್ನು ಹಿಂತೆಗೆದುಕೊಂಡಿದ್ದರು.
ಆರಂಭದಲ್ಲಿ ಈ ಪ್ರಕರಣವನ್ನು ಮಾಂಡ್‌ಸೌರ್ ಠಾಣಾ ಪೊಲೀಸರು ದಾಖಲಿಸಿಕೊಂಡಿದ್ದರು.ಘಟನೆಯು ರೈಲು ನಿಲ್ದಾಣದಲ್ಲಿ ನಡೆದ ಕಾರಣ ಆನಂತರ ಪ್ರಕರಣವನ್ನು ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು. ಮಹಿಳೆಯರ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿ ಪೊಲೀಸರು ಗೋವಿಂದ್‌ರಾವ್ ಚೌಹಾಣ್, ದಿಲೀಪ್ ದೇವ್‌ಡಾ,ಸ್ವದೇಶ್ ಚನಾಲ್ ಹಾಗೂ ವಿಕಾಸ್ ಅಹಿರ್ ಎಂಬ ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.
ಆರೋಪಿಗಳ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್‌ಗಳಾದ 323 (ಸ್ವಯಂಪ್ರೇರಿತವಾಗಿ ಹಲ್ಲೆ ನಡೆಸಿದ), 341 ( ಸಮಾನ ಉದ್ದೇಶದಿಂದ ಗುಂಪಿನಿಂದ ಹಲ್ಲೆ)ರ ಅನ್ವಯ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News