ಸೋಮೇಶ್ವರ ಗ್ರಾಮಸಭೆ: ಪಿಡಿಒ ವಿರುದ್ಧ ಗ್ರಾಮಸ್ಥರ ಆಕ್ರೋಶ

Update: 2016-07-28 17:45 GMT

ಉಳ್ಳಾಲ, ಜು.28: ಸೋಮೇಶ್ವರ ಗ್ರಾಮ ಪಂಚಾಯತ್‌ನ ಅಭಿವೃದ್ಧಿ ಅಧಿಕಾರಿ ಮನೋಹರ್ ಗೌಡರು ಸಮಪರ್ಕವಾಗಿ ಕಾರ್ಯನಿರ್ವಹಿಸದೆ ಜನರ ಮನವಿಗಳಿಗೂ ಸಕರಾತ್ಮವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಪಿಡಿಒರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಸೋಮೇಶ್ವರ ಗ್ರಾಮ ಪಂಚಾಯತ್‌ನ ಗ್ರಾಮ ಸಭೆಯಲ್ಲಿ ನಡೆಯಿತು.

ಗುರುವಾರ ಕೊಲ್ಯದ ನಾರಾಯಣಗುರು ಸಭಾಗೃಹದಲ್ಲಿ ಸೋಮೇಶ್ವರ ಗ್ರಾ.ಪಂನ 2016-17 ನೆ ಸಾಲಿನ 1ನೆ ಹಂತದ ಗ್ರಾಮಸಭೆಯನ್ನು ಏರ್ಪಡಿಸಲಾಗಿತ್ತು.

ಶಿವಶಕ್ತಿನಗರದ ವೆಲ್‌ಫೇರ್ ಸೊಸೈಟಿಯ ಕೊಳವೆಬಾವಿಯ 200 ಮೀಟರ್ ಅಂತರದಲ್ಲೇ ವಾಸುದೇವ ಹೊಳ್ಳ ಎಂಬವರು ಖಾಸಗಿ ಜಾಗದಲ್ಲಿ ಕಾನೂನು ಬಾಹಿರವಾಗಿ ಇನ್ನೊಂದು ಕೊಳವೆ ಬಾವಿಯನ್ನು ಕೊರೆದಿದ್ದು, ಇದರಿಂದ ವೆಲ್‌ಫೇರ್ ಸೊಸೈಟಿಯ ಕೊಳವೆ ಬಾವಿ ನೀರು ಬತ್ತುವಂತಾಗಿದ್ದು ಈ ಬಗ್ಗೆ ಹೊಳ್ಳ ಕೊಳವೆಬಾವಿ ತೋಡಲು ಪಂಚಾಯತ್‌ನಿಂದ ಅನುಮತಿ ಪಡೆದಿದ್ದಾರೆಯೇ...? ಕೊಳವೆಬಾವಿಯಿಂದ ಸುತ್ತಮುತ್ತಲಿನ ನಾಗರಿಕರಿಗೆ ಆಗುವ ತೊಂದರೆಗಳನ್ನು ಪರಿಶೀಲಿಸಿ ಉತ್ತರಿಸಿ ಎಂದು ಪಿಡಿಒಗೆ ಮನವಿ ಪತ್ರ ಸಲ್ಲಿಸಿದರೆ ಇದುವರೆಗೆ ಉತ್ತರಿಸಿಲ್ಲ ಯಾಕೆಂದು ವೆಲ್‌ಫೇರ್ ಸೊಸೈಟಿ ಅಧ್ಯಕ್ಷ ನ್ಯಾಯವಾದಿ ಕೆ.ಸಿ ನಾರಾಯಣ್ ಅವರು ವೇದಿಕೆಯನ್ನೇರಿ ಮನೋಹರ್ ಗೌಡರನ್ನು ಹಿಗ್ಗಾಮುಗ್ಗಾ ತರಾಟೆಗೆ ತಗೊಂಡರು.

ಗ್ರಾಮಸ್ಥರ ಮುಂದೆ ತಬ್ಬಿಬ್ಬಾದ ಪಿಡಿಒ ಒಂದು ವಾರದ ಒಳಗೆ ಕೊಳವೆಬಾವಿ ಬಗೆಗೆ ಪರಿಶೀಲಿಸಿ ವರದಿ ನೀಡುವುದಾಗಿ ಹೇಳಿದರು.

ಪಂಚಾಯತ್‌ನ ಮಾಜಿ ಉಪಾಧ್ಯಕ್ಷ ರಮೇಶ್ ಕೊಲ್ಯ ಮಾತನಾಡಿ, ಪಂಚಾಯತ್ ವ್ಯಾಪ್ತಿಯ ಇಸ್ಲಾಮಿಕ್ ಟ್ರಸ್ಟ್‌ವೊಂದರ ತೆರಿಗೆ ಸಂಗ್ರಹದಲ್ಲೂ ಪಿಡಿಒ ಲೋಪದಿಂದ ಪಂಚಾಯತ್‌ಗೆ ಆಗುವ ನಷ್ಟವನ್ನು ಮನವರಿಸಿದರು.ಅಧಿಕಾರಿಗಳು ಆಡಳಿತಕ್ಕೆ ಮಣಿಯದೆ ಅಧಿಕಾರಿ ನೆಲೆಯಲ್ಲೇ ಕರ್ತವ್ಯ ನಿರ್ವಹಿಸುವಂತೆ ಎಚ್ಚರಿಸಿದರು.

ಅಲ್ಲದೆ ಅರ್ಹ ಬಡವರಿಗೆ ನಿವೇಶನ ಒದಗಿಸುವ ಬಗೆಗೆ ಗ್ರಾಮಸ್ಥರು ಪಂಚಾಯತ್ ಅಧಿಕಾರಿಗಳನ್ನು ಗ್ರಾಮ ಸಭೆಯಲ್ಲಿ ಒತ್ತಾಯಿಸಿದರು. ವಿವಿಧ ಇಲಾಖಾಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು.

ಗ್ರಾ.ಪಂ ಅಧ್ಯಕ್ಷ ರಾಜೇಶ್ ಉಚ್ಚಿಲ್ ಅಧ್ಯಕ್ಷತೆ ವಹಿಸಿದ್ದರು. ಅಕ್ಷರದಾಸೋಹ ಇಲಾಖೆಯ ಸಹಾಯಕ ನಿರ್ದೇಶಕ ಜೆ.ಯಶೋಧರ್ ನೋಡಲ್ ಅಧಿಕಾರಿಯಾಗಿದ್ದರು. ಜಿ.ಪಂ ಸದಸ್ಯೆ ಧನಲಕ್ಷ್ಮೀ ಗಟ್ಟಿ, ತಾಲೂಕು ಪಂಚಾಯತ್ ಸದ್ಯರಾದ ರಾಮಚಂದ್ರ ಕುಂಪಲ, ರವಿಶಂಕರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News