ಕೃಷಿಯನ್ನು ಅಭಿವೃದ್ಧಿ ಮಾಡುವತ್ತ ಯುವಕರನ್ನು ಪ್ರೋತ್ಸಾಹಿಸಬೇಕು: ತಹಶೀಲ್ದಾರ್ ಎಚ್.ವಿ.ಪ್ರಸನ್ನಮೂರ್ತಿ

Update: 2016-07-28 18:07 GMT

ಬೆಳ್ತಂಗಡಿ, ಜು.28: ಯುವಕರು ಕೃಷಿಯಿಂದ ವಿಮುಖರಾಗುತ್ತಿದ್ದು, ಕೃಷಿ ಜಮೀನುಗಳು ಆಧುನಿಕತೆಯ ಹೆಸರಿನಲ್ಲಿ ಲೇಔಟ್‌ಗಳಾಗಿ ಮಾರ್ಪಾಡಾಗುತ್ತಿದೆ. ಆಧುನಿಕ ಸವಲತ್ತುಗಳನ್ನು ಬಳಸಿಕೊಂಡು ನಮ್ಮ ಹಿರಿಯರು ಮಾಡಿರುವ ಕೃಷಿ ಜಮೀನುಗಳನ್ನು ಉಳಿಸಿಕೊಂಡು ಕೃಷಿಯನ್ನು ಅಭಿವೃದ್ಧಿ ಮಾಡುವತ್ತ ಯುವಕರನ್ನು ಪ್ರೋತ್ಸಾಹಿಸಬೇಕು ಎಂದು ತಹಶೀಲ್ದಾರ್ ಎಚ್.ವಿ.ಪ್ರಸನ್ನಮೂರ್ತಿ ಹೇಳಿದ್ದಾರೆ.

ಅವರು ಗುರುವಾರ ಗೇರುಕಟ್ಟೆಯ ಕಳಿಯ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳ್ತಂಗಡಿ, ಕಳಿಯ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ಗೇರುಕಟ್ಟೆ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಬೆಳ್ತಂಗಡಿ ವಲಯ, ಕೃಷಿ ಹಾಗೂ ತೋಟಗಾರಿಕಾ ಇಲಾಖಾ ಸಹಯೋಗದಲ್ಲಿ ಕೃಷಿ ವಿಚಾರ ಸಂಕಿರಣ ಹಾಗೂ ಆಧುನಿಕ ಕೃಷಿ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆಯನ್ನು ಉದ್ಘಾಟಿಸಿ ಮಾತನಾಡಿದರು.

ಕೃಷಿಕರ ಮಕ್ಕಳು ಕೂಡಾ ಕೃಷಿಯಿಂದ ದೂರ ಸರಿಯುತ್ತಿರುವುದು ಖೇದಕರವಾಗಿದೆ. ಕೃಷಿಕರು ತಮ್ಮ ಮಕ್ಕಳಿಗೆ ಕೃಷಿ ಬಗ್ಗೆ ಮಾಹಿತಿ ನೀಡಿ ಅವರನ್ನು ಕೃಷಿಯತ್ತ ಆಕರ್ಷಿಸುವ ಕೆಲಸ ಮಾಡಬೇಕು ಎಂದರು.

 ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕ ಕೇಶವ ಗೌಡ ಮಾತನಾಡಿ, ಕೃಷಿಗೆ ಅತಿಯಾದ ರಾಸಾಯನಿಕಗಳ ಬಳಕೆಯಿಂದ ಕೃಷಿಗೆ ಪೂರಕವಾದ ಜೀವಿಗಳು ನಾಶವಾಗುತ್ತಿದೆ. ಅದರ ಬದಲು ಸಾವಯವ ಕೃಷಿಯ ಬಗ್ಗೆ ಒಲವು ಹೆಚ್ಚಾಗಬೇಕು. ಮಕ್ಕಳನ್ನು ಕೃಷಿಯತ್ತ ಆಕರ್ಷಿಸಬೇಕಾದರೆ ಶಾಲಾ ಪಠ್ಯದಲ್ಲಿ ಕೃಷಿಯ ಪಾಠವನ್ನು ಅಳವಡಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಳಿಯ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವಸಂತ ಮಜಲು ಮಾತನಾಡಿ, ನಮ್ಮ ಹಿರಿಯರು ಮಾಡಿಕೊಂಡು ಬಂದಿರುವ ಕೃಷಿಯ ಮೂಲತತ್ವವನ್ನು ಉಳಿಸಿಕೊಂಡು ಕೃಷಿಯಲ್ಲಿ ಆಧುನಿಕತೆಯನ್ನು ಅಳವಡಿಸಿದಾಗ ಕೃಷಿಯಲ್ಲಿ ಲಾಭ ಗಳಿಸಲು ಸಾಧ್ಯವಿದೆ ಎಂದರು.

ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಕೆ.ಎಸ್. ಹರಿಪ್ರಸಾದ್, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ಶಾರದಾ ಎಸ್. ಉಪಸ್ಥಿತರಿದ್ದರು.

ಶಿವಶಂಕರ್ ಪ್ರಾರ್ಥಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕ ಸುರೇಶ್ ಗೌಡ ಸ್ವಾಗತಿಸಿ, ಹೈನುಗಾರಿಕಾ ಅಧಿಕಾರಿ ರಾಮ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ನ್ಯಾಯತರ್ಪು ಸೇವಾಪ್ರತಿನಿಧಿ ವಿನೋದ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News