ವಿದ್ಯಾರ್ಥಿಗಳೇ ಬಾರದಿದ್ದರೂ ಇಲ್ಲಿ ನಡೆಯುತ್ತವೆ ಶಾಲೆಗಳು!

Update: 2016-07-29 07:23 GMT

 ಪಾಟ್ನಾ, ಜು.29: ಬಿಹಾರದಲ್ಲಿ ಇತ್ತೀಚೆಗೆ ಬಹಿರಂಗಗೊಂಡ ಟಾಪರ್ಸ್‌ ಹಗರಣ ರಾಜ್ಯಾದ್ಯಂತ ಕೋಲಾಹಲ ಸೃಷ್ಟಿಸಿ ದೇಶದಾದ್ಯಂತ ಸಾಕಷ್ಟು ಚರ್ಚೆಗೆ ಕಾರಣವಾದ ವಿಷಯವಂತೂ ಹೌದು. ವೈಶಾಲಿಯ ವಿಷ್ಣು ರಾಯ್ ಕಾಲೇಜಿನ ಮೂವರು ಟಾಪರ್ಸ್‌ ಕೆಲ ಮೂಲಭೂತ ಪ್ರಶ್ನೆಗಳಿಗೇ ಉತ್ತರಿಸಲು ವಿಫಲರಾಗಿ ರಾಜ್ಯದ ಜೆಡಿ(ಯು)-ಆರ್‌ಜೆಡಿ ಸರಕಾರಕ್ಕೆ ದೊಡ್ಡ ಅವಮಾನವಾಗಿದ್ದೂ ನಿಜ.

ಇಂಡಿಯನ್ ಎಕ್ಸ್ ಪ್ರೆಸ್ ಇತ್ತೀಚೆಗೆ ರಾಜ್ಯಾದ್ಯಂತ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸಂದರ್ಶಿಸಿ ತನಿಖಾ ವರದಿಯೊಂದನ್ನು ಸಿದ್ಧಪಡಿಸಿದ್ದು ಎಂಟು ಜಿಲ್ಲೆಗಳಲ್ಲಿ ಕನಿಷ್ಠ 25 ಸಂಸ್ಥೆಗಳನ್ನು ಗುರುತಿಸಿದೆ. ಇವುಗಳಲ್ಲಿ ಒಂದು ಸಂಸ್ಥೆಯ ಕಟ್ಟಡದಲ್ಲಿ ಮೂವರ ಕುಟುಂಬವೊಂದು ವಾಸವಾಗಿದ್ದರೆ, ಇನ್ನೊಂದು ಸಂಸ್ಥೆಯ ದಾಖಲೆಗಳಲ್ಲಿ 844 ವಿದ್ಯಾರ್ಥಿಗಳೆಂದು ಬರೆದಿದ್ದರೆ, ಅಲ್ಲಿದ್ದದ್ದು ಕೇವಲ ಇಬ್ಬರು ವಿದ್ಯಾರ್ಥಿಗಳು.

ಪ್ಲಸ್ ಟು ವಿದ್ಯಾಲಯ, ಪಾನ್ಸಲ್ವ ಚೌಕ್, ಮೋತಿಪುರ್

ಸಂತೋಷ್ ಕುಮಾರ್ ಸಿಂಗ್ ಎಂಬ ವಕೀಲನ ಒಡೆತನದಲ್ಲಿರುವ ಈ ಇಂಟರ್ ಕಾಲೇಜಿಗೆ ನಾಲ್ಕು ಟಿನ್ ಶೀಟಿನ ಕೋಣೆಗಳಿರುವ ಕಟ್ಟಡವಿದೆ. ಎಲ್ಲಾ ಬಾಗಿಲುಗಳು ಮುಚ್ಚಿವೆ. ತರಗತಿ ಕೊಠಡಿ ಎಂದು ಬರೆದಿರುವ ಕೋಣೆಯಲ್ಲಿ ಬೆಂಚು-ಡೆಸ್ಕುಗಳೇ ಇರಲಿಲ್ಲ. ವಾರದ ದಿನವಾದರೂ ಈ ಸಂಸ್ಥೆಯಲ್ಲಿ ಯಾರೂ ಇರಲಿಲ್ಲ. ಈ ಸಂಸ್ಥೆಗೆ ಬಿಹಾರ ಸ್ಕೂಲ್ ಎಕ್ಸಾಮಿನೇಶನ್ ಬೋರ್ಡ್ 2016-17 ನೆ ಸಾಲಿನ ತರಗತಿಗಳಿಗೆ ಅನುಮತಿಸಲಾಗಿದೆಯೆನ್ನಲಾಗಿದೆ.

ರಘುನಾಥ್ ಸಾಹ್ ಇಂಟರ್ ಕಾಲೇಜು, ಹರ್ ಚಂದ್

ಸ್ಥಳೀಯ ಜೆಡಿ(ಯು) ನಾಯಕ ಸುಜಿತ್ ಕುಮಾರ್ ಒಡೆತನದಲ್ಲಿರುವ ಈ ಕಾಲೇಜು ಕಟ್ಟಡದಲ್ಲಿರುವ ಶಿಲಾಫಲಕದಲ್ಲಿ ಅದನ್ನು ಮಾಜಿ ಉಪ ಮೇಯರ್ ವಿವೇಕ್ ಕುಮಾರ್ 2015ರ ಮೇ 25ರಂದು ಉದ್ಘಾಟಿಸಿದರೆಂದು ಬರೆಯಲಾಗಿದೆ. ಶಿಕ್ಷಣ ಮಂಡಳಿ ಈ ಕಾಲೇಜಿಗೆ 2016 ರಲ್ಲಿ ಅನುಮತಿ ನೀಡಿದೆ ಎಂದು ದಾಖಲೆಗಳು ಹೇಳುತ್ತವೆಯಾದರೂ ವಾರದ ದಿನ ಅಲ್ಲಿ ಯಾರೂ ಇರಲಿಲ್ಲ. ಸಂಸ್ಥೆಯ ಎಲ್ಲಾ ಕೋಣೆಗಳೂ ಮುಚ್ಚಿದ್ದವು. ‘‘ಇದು ಕೇವಲ 12ನೆ ತರಗತಿಯ ಪರೀಕ್ಷೆಗಳಿಗೆ ಅರ್ಜಿ ತುಂಬಿಸುವ ಕೇಂದ್ರವಷ್ಟೇ’’ ಎಂದು ಸ್ಥಳೀಯ ನಾಗರಿಕರೊಬ್ಬರು ಹೇಳಿದ್ದಾರೆ.


ಬಾಲಾಜಿ ಇಂರ್ ಮಹಾವಿದ್ಯಾಲಯ, ಪಣಪುರ್ 

ಬಿಎಸ್‌ಇಬಿ ದಾಖಲೆಗಳ ಪ್ರಕಾರ ಈ ಸಂಸ್ಥೆಯಲ್ಲಿ 2015-17 ನೆ ಅವಧಿಗೆ 844 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಆದರೆ ಅಲ್ಲಿ ಕೇವಲ ಇಬ್ಬರು ವಿದ್ಯಾರ್ಥಿನಿಯರು ಹಾಗೂ ಎಂಟು ಮಂದಿ ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಪ್ರಿನ್ಸಿಪಾಲ್ ರಾಜೇಂದ್ರ ಕುಮಾರ್ ಕೂಡ ಹಾಜರಿರಲಿಲ್ಲ. ಸಂಸ್ಥೆಯ ತಪಾಸಣೆಗೆ ಯಾರೋ ಬಂದಿದ್ದಾರೆಂಬ ಮಾಹಿತಿ ಮೇರೆಗೆ ಇತಿಹಾಸ ಶಿಕ್ಷಕಿ ತಾನೆಂದು ಹೇಳಿಕೊಂಡ ಮಹಿಳೆಯೊಬ್ಬರ ಪ್ರವೇಶವಾಗಿತ್ತು.

ಹಿರಾಲಾಲ್ ರಾಯ್ ಉಚ್ಛತರ್ ಮಾಧ್ಯಮಿಕ್ ವಿದ್ಯಾಲಯ, ಪ್ರಭಾತ್ ನಗರ

ಇಂಡಿಯನ್ ಎಕ್ಸ್ ಪ್ರೆಸ್ ತಂಡ ಈ ಎರಡು ಮಹಡಿ ಕಟ್ಟಡದ ಶಾಲೆಗೆ ಭೇಟಿ ನೀಡಿದಾಗ ಶಾಲಾ ನಿರ್ದೇಶಕ ಮನೋಜ್ ಕುಮಾರ್ ಯಾದವ್ ಉಪಸ್ಥಿತರಿರಲಿಲ್ಲ. ಈ ಸಂಸ್ಥೆಗೆ 2015 ರಲ್ಲಿ 120 ವಿದ್ಯಾರ್ಥಿಗಳನ್ನು ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳಿಗೆ ಪ್ರವೇಶಾತಿ ನೀಡಲು ಅನುಮತಿ ನೀಡಲಾಗಿದೆಯೆಂದು ಯಾದವ್ ಸಹಾಯಕ ಮನೀಶ್ ಕುಮಾರ್ ತಿಳಿಸಿದರು. ಆದರೆ ಸಂಸ್ಥೆಯಲ್ಲಿ ಒಬ್ಬನೇ ಒಬ್ಬ ವಿದ್ಯಾರ್ಥಿ ಯಾ ಶಿಕ್ಷಕ ಉಪಸ್ಥಿತರಿರಲಿಲ್ಲ.

ಬಿಂದುಸಿಂಗ್ ಕನ್ಯಾ ಉಚ್ಛತರ್ ಮಾಧ್ಯಮಿಕ್ ವಿದ್ಯಾಲ, ಭಗವಾನ್ ಪುರ್ 

ಈ ಶಾಲಾ ಕಟ್ಟಡದ ಮುಖ್ಯ ಗೇಟ್‌ಗೆ ಬೀಗ ಹಾಕಲಾಗಿದ್ದರೂ ಒಳಗೆ ಒಬ್ಬಳು ಮಹಿಳೆ ಮತ್ತು ಆಕೆಯ ಪುಟ್ಟ ಮಗಳಿದ್ದರು. ತನ್ನ ಪತಿ ಮನೆಯಲಿಲ್ಲ ಎಂದು ಮಗಳ ಮೂಲಕ ಹೇಳಿಸಿದ ಮಹಿಳೆ ಪತ್ರಿಕಾ ಪ್ರತಿನಿಧಿಗಳನ್ನು ನೋಡಿ ಬಾಗಿಲು ಮುಚ್ಚಿದ್ದಳು. ಈ ಶಾಲೆಗೆ ಕೆಲವು ಮಕ್ಕಳು ಬರುತ್ತಾರಾದರೂ ಹೆಚ್ಚಿನ ಮಾಹಿತಿ ನಮಗಿಲ್ಲ ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದ್ದಾರೆ. ಬಿಂದು ಸಿಂಗ್ ಎಜುಕೇಶನಲ್ ಟ್ರಸ್ಟ್ ನಡೆಸುವ ಈ ಸಂಸ್ಥೆಗೆ 2014 ರಲ್ಲಿ ಅನುಮತಿ ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News