×
Ad

ನೂತನ ಬಾಲಕಾರ್ಮಿಕ ಕಾಯ್ದೆ ಈ ಕಾಯ್ದೆಯಿಂದ ಮಕ್ಕಳಿಗೆ ನ್ಯಾಯ ಸಿಕ್ಕ್ಕೀತೆ?

Update: 2016-07-29 22:38 IST

ಜುಲೈ 16, 2016ರಂದು ಸದ್ಯ ಇರುವ ಬಾಲಕಾರ್ಮಿಕ ಕಾಯ್ದೆ 1986ಕ್ಕೆ ತಿದ್ದುಪಡಿ ಮಾಡಲಾದ ನೂತನ ಮಸೂದೆಯನ್ನು ರಾಜ್ಯ ಸಭೆಯಲ್ಲಿ ಅಂಗೀಕರಿಸಲಾಯಿತು. ಈ ಕಾಯ್ದೆಯನ್ನು ಶೀಘ್ರದಲ್ಲೇ ‘ಬಾಲ ಮತ್ತು ಎಳೆವಯಸ್ಸಿನ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ’ ಎಂಬ ಹೆಸರಿನಿಂದ ಮಂಡಿಸಲು ಲೋಕಸಭೆಯ ಮುಂದೆ ಇಡಲಾಗುವುದು. ನೂತನ ತಿದ್ದುಪಡಿಯು 14 ವರ್ಷಕ್ಕಿಂತ ಕೆಳಗಿನ ಮಕ್ಕಳನ್ನು ಎಲ್ಲಾ ರೀತಿಯ ಉದ್ಯೋಗಗಳಲ್ಲಿ ದುಡಿಯುವುದನ್ನು ನಿಷೇಧಿಸುವ ಮೂಲಕ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಮಕ್ಕಳ ಹಕ್ಕು ಕಾಯಿದೆ 2009ರಡಿ ಶಿಕ್ಷಣದ ಮೂಲಭೂತ ಹಕ್ಕನ್ನು ಸವಿಯುವಂತೆ ಮಾಡಲಾಗಿದೆ.

ಇನ್ನು, ಈ ಕಾಯ್ದೆ 14-18ರ ಹರೆಯದ, 2011ರಲ್ಲಿ 15-19ರ ಹರೆಯದ ತರುಣರ ಗಣತಿಯ ಸಂದರ್ಭದಲ್ಲಿ 32.3 ಮಿಲಿಯನ್‌ನಷ್ಟಿದ್ದಾರೆ ಎಂದು ತಿಳಿಸಲಾಗಿರುವ ತರುಣಾವಸ್ಥೆಯ ಮಕ್ಕಳನ್ನೂ ಒಳಗೊಂಡಿದೆ. ಕಾಯ್ದೆಯು ಮಕ್ಕಳನ್ನು ದುಡಿಸುವುದು ಶಿಕ್ಷಾರ್ಹ ಅಪರಾಧವೆಂದೂ ಆರು ತಿಂಗಳಿಂದ ಎರಡು ವರ್ಷಗಳವರೆಗಿನ ಕಾರಾಗೃಹ ಶಿಕ್ಷೆ ಅಥವಾ ರೂ. 20,000ದಿಂದ 50,000 ದಂಡ ಅಥವಾ ಎರಡನ್ನೂ ಅನುಭವಿಸಬೇಕಾಗಬಹುದು. ಕಾಯ್ದೆಯು ಭಾರತದಲ್ಲಿ ಮಕ್ಕಳ ಜೀವನವನ್ನು ಸುಧಾರಿಸುವ ಒಂದು ಪರಿಣಾಮಕಾರಿ ಹೆಜ್ಜೆಯೆಂದು ನಾವು ಸಂಭ್ರಮಿಸಬಹುದು. ಆದರೆ, ಅನುಷ್ಠಾನಕ್ಕೆ ಬಂದಾಗ, ದೇಶದ ಮಕ್ಕಳ, ಅವರ ಬಾಲ್ಯಾವಸ್ಥೆಯ ಮತ್ತು ಘನತೆಯ ಬಗ್ಗೆ ಸರಕಾರಕ್ಕೆ ಇರುವ ಅರ್ಧ ಮನಸ್ಸನ್ನು ಇದು ತೋರಿಸುತ್ತದೆ.

ಶಿಕ್ಷಣದ ಹಕ್ಕನ್ನು ಪಡೆಯುವ ಸಲುವಾಗಿ 14 ವರ್ಷದ ವರೆಗಿನ ಮಕ್ಕಳನ್ನೂ ಎಲ್ಲ ರೀತಿಯಲ್ಲಿ ದುಡಿಯುವುದನ್ನು ಈ ಮಸೂದೆ ನಿಷೇಧಿಸಿದರೂ ಶಾಲಾ ಸಮಯದ ನಂತರ ಈ ಮಕ್ಕಳು ಕುಟುಂಬದ ಜೊತೆ ಗದ್ದೆಯಲ್ಲಿ, ಮನೆಯಲ್ಲೇ ಮಾಡುವ ಕೆಲಸಗಳಲ್ಲಿ ಅಥವಾ ಕಾಡಿನಲ್ಲಿ ಕೆಲಸ ಮಾಡಬಹುದು ಎಂಬ ಅವಕಾಶವನ್ನು ಒದಗಿಸಿದೆ. ತರುಣಾವಸ್ಥೆಯಲ್ಲಿರುವವರನ್ನೂ ಈ ಮಸೂದೆ ತನ್ನ ವ್ಯಾಪ್ತಿಗೆ ಒಳಪಡಿಸಿದರೂ, ಇದರಿಂದ ಕೇವಲ ಕೆಲವೊಂದು ರೀತಿಯ ಬಾಲಕಾರ್ಮಿಕರ ಮೇಲೆ ಮಾತ್ರ ಪರಿಣಾಮ ಬೀರುತ್ತದೆ. ಶೋಷಣೆಯನ್ನು ಶಾಶ್ವತವಾಗಿಸಿದೆ
ಕುಟುಂಬದ ಜೊತೆ ಕೆಲಸ ಮಾಡುವ ಅವಕಾಶದ ಬಗ್ಗೆ ಯಾವುದೇ ತಕರಾರು ಇರಲು ಸಾಧ್ಯವಿಲ್ಲ. ಎಲ್ಲ ಕುಟುಂಬಗಳಲ್ಲಿ, ಶ್ರೀಮಂತರಾಗಲಿ, ಬಡವರಾಗಲಿ ಮಕ್ಕಳು ಮನೆಯ ದೈನಂದಿನ ಕೆಲಸಗಳಲ್ಲಿ ಸಹಾಯ ಮಾಡುವುದು ನಿರೀಕ್ಷಿತ ಮತ್ತು ಸಹಜ ಕೂಡ ಅಲ್ಲವೇ? ಹಾಗಾದರೆ ಮತ್ಯಾಕೆ ಈ ಮಸೂದೆಯಲ್ಲಿ ಮನೆಯ ಕೆಲಸದ ಬಗ್ಗೆ ಅಷ್ಟೊಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ?
ಯಾಕೆಂದರೆ ಮಸೂದೆಯ ಉದ್ದೇಶ ಕೇವಲ ಮನೆಯಲ್ಲಿ ಮಾಡುವ ದೈನಂದಿನ ಕೆಲಸವನ್ನು ಸಮರ್ಥಿಸುವುದಲ್ಲ ಬದಲಿಗೆ ಮನೆಯಲ್ಲೇ ಮಾಡುವಂತಹ ಬೀಡಿ ಕಟ್ಟುವುದು, ಬಿಂದಿ ಮತ್ತು ಬಳೆಗಳ ತಯಾರಿಕೆ, ಅಗರಬತ್ತಿ ಮತ್ತು ಹಪ್ಪಳ ತಯಾರಿಕೆ, ಜರಿ ಮತ್ತು ಕಸೂತಿ ಕೆಲಸಗಳು, ಲೇಬಲ್ ಅಂಟಿಸುವುದು, ಚಪ್ಪಲಿ ತಯಾರಿಕೆ, ಕರಕುಶಲ ಕೆಲಸ ಮತ್ತು ಇತರ ಹಲವು ಉದ್ಯೋಗಳಲ್ಲಿ ಮಿಲಿಯನ್‌ಗಟ್ಟಲೆ ಮಕ್ಕಳು ಮನೆಯವರಿಗೆ ಸಹಾಯ ಮಾಡುತ್ತಾರೆ. ಎಲ್ಲಾ ಕೆಲಸಗಳಲ್ಲಿ ಕಚ್ಚಾವಸ್ತುಗಳನ್ನು ನೀಡಿ ನಂತರ ತಯಾರಾದ ವಸ್ತುಗಳನ್ನು ಕೊಂಡೊಯ್ಯುವ ಗುತ್ತಿಗೆದಾರನ ಬೇಡಿಕೆಗೆ ತಕ್ಕಂತೆ ಉತ್ಪಾದನೆಗಳನ್ನು ಮಾಡಲು ಇಡೀ ಕುಟುಂಬ ಸದಸ್ಯರ ನೆರವಿನ ಅಗತ್ಯ ಬೀಳುತ್ತದೆ.

ಅನಿಯಂತ್ರಿತ ಕಾರ್ಮಿಕ ಸ್ಥಿತಿಯಡಿ ಇವೆಲ್ಲವೂ ಮಕ್ಕಳ ಮೇಲಿನ ಪರೋಕ್ಷ ಶೋಷಣೆಗಳಾಗಿದ್ದು, ಇವುಗಳಲ್ಲಿ ಬಡತನ ಮತ್ತು ಸೀಮಿತಗೊಳಿಸಲ್ಪಟ್ಟ ಅಸಂಖ್ಯಾತ ಮಕ್ಕಳು ದುಡಿಯುತ್ತಿದ್ದಾರೆ. ಇದೊಂಥರ, ಜಮೀನು ಹೊಂದಿರುವ ಬಡವರು ಸಾಲಗಾರನ ಬಲೆಯಲ್ಲಿ ಸಿಲುಕಿ ಆತ ನೀಡುವ ಬೀಜ ಮತ್ತು ಗೊಬ್ಬರಗಳನ್ನು ಪಡೆದು, ಆತ ನಿಗದಿಪಡಿಸಿದ ದೀರ್ಘಕಾಲದ ಪ್ರತಿಕೂಲ ಷರತ್ತುಗಳನ್ನು ಹೊಂದಿರುವ ಒಪ್ಪಂದಕ್ಕೆ ಒಳಗಾಗಿ ತಮ್ಮ ಇಡೀ ಕುಟುಂಬವೇ ತಮ್ಮದೇ ಜಮೀನಿನಲ್ಲಿ ಅಗ್ಗದ ಕಾರ್ಮಿಕರಾಗಿ ದುಡಿಯಲು ಒತ್ತಡ ಹೇರಿದಂತೆ. ಜಮೀನು ಕಾರ್ಮಿಕನಂತೆ ಮಕ್ಕಳು ಕೂಡಾ ಇಡೀ ಕುಟುಂಬದ ಜೊತೆ ತುಳಿತ ಮತ್ತು ಕೆಲಸದ ವಿಷಕಾರಿ ಸಂಕೋಲೆಯಲ್ಲಿ ಬಲಾತ್ಕಾರವಾಗಿ ಸಿಲುಕುತ್ತಾರೆ, ಬೇಡಿಕೆ ಹೆಚ್ಚಾಗಿರುವ ಸಮಯಗಳಲ್ಲಿ ಮಕ್ಕಳು ತಮ್ಮ ವಿದ್ಯಾಭ್ಯಾಸವನ್ನು ಕಡೆಗಣಿಸಬೇಕಾಗಿಯೂ ಬರುತ್ತದೆ. ಕೆಲಸಗಳು ಹೇಗೆಯೆಂದರೆ ಇವುಗಳು ಶಾಲಾ ಸಮಯದ ಮೊದಲು ಮತ್ತು ನಂತರ ಆರಂಭವಾಗುತ್ತದೆ ಮತ್ತು ತಡರಾತ್ರಿಯವರೆಗೆ ಸಾಗುತ್ತದೆ, ಹಾಗಾಗಿ ಮಕ್ಕಳು ತರಗತಿಗಳಲ್ಲಿ ಪಾಠದ ಮೇಲೆ ಗಮನ ನೀಡಲು ಅಶಕ್ತರಾಗುತ್ತಾರೆ ಮತ್ತು ಶಾಲೆಯಲ್ಲಿ ಇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಅಸಮರ್ಥರಾಗುತ್ತಾರೆ.

ಇದರಿಂದಾಗಿ ಅವರ ಕಲಿಕೆ ನಿಧಾನವಾಗುತ್ತದೆ. ಶಾಲೆ ಮತ್ತು ಕೆಲಸದ ಮಧ್ಯೆ ಹೊಂದಾಣಿಕೆ ಮಾಡಲು ಸಾಧ್ಯವಾಗದೆ ಕೊನೆಗೆ ವಿದ್ಯಾಭ್ಯಾಸಕ್ಕೆ ತಿಲಾಂಜಲಿಯಿಡುತ್ತಾರೆ. ಸಾಮಾನ್ಯವಾಗಿ ಮಕ್ಕಳನ್ನು ಶಾಲೆಯಲ್ಲಿ ಹಿಡಿದಿಟ್ಟುಕೊಳ್ಳಲು ವಿಫಲವಾಗಿರುವುದಕ್ಕೆ ಶಿಕ್ಷಣದ ಗುಣಮಟ್ಟವನ್ನು ದೂಷಿಸಿದರೂ, ಮನೆಯಲ್ಲಿ ಮಾಡುವ ಕೆಲಸ ಮತ್ತು ಶಾಲೆಯ ಮಧ್ಯೆ ಹೊಂದಾಣಿಕೆ ಮಾಡಿಕೊಳ್ಳಲಾಗದೆ ಅನೇಕ ಮಕ್ಕಳು ಶಾಲೆ ತ್ಯಜಿಸುತ್ತಾರೆ ಎಂಬುದನ್ನು ಬಹುತೇಕ ನಿರ್ಲಕ್ಷಿಸಲಾಗಿದೆ.

ಇಂತಹ ಕೆಲಸಗಳು ಮಕ್ಕಳನ್ನು ಕುಟುಂಬದ ಕೆಲಸದಲ್ಲೇ ಶಾಶ್ವತ ನೆಲೆಗೊಳ್ಳುವಂತೆ ಮಾಡುತ್ತದೆ ಮತ್ತು ಯಥಾಸ್ಥಿತಿಯನ್ನು ಮುಂದುವರಿಸುವ ಮೂಲಕ ಜಾತಿಯಾಧಾರಿತ ಅನುವಂಶಿಯತೆ ಶಾಶ್ವತವಾಗುಳಿಯುತ್ತದೆ. ಹಾಗಾಗಿ ಇದನ್ನು ಸೈದ್ಧಾಂತಿಕವಾಗಿ ಹೇಳುವುದಾದರೆ ಓರ್ವ ಕುಂಬಾರನ ಮಗ ಕುಂಬಾರನಾಗಿಯೇ ಉಳಿಯುತ್ತಾನೆ, ಒಬ್ಬ ನೇಕಾರನ ಮಗ ನೇಕಾರನಾಗಿ ಮತ್ತು ಒಬ್ಬ ಕೃಷಿಕಾರ್ಮಿಕನ ಮಗ ಕೃಷಿಕಾರ್ಮಿಕನಾಗಿಯೇ ಉಳಿದು ಬಿಡುತ್ತಾನೆ. ಹೀಗೆ ಕುಟುಂಬ ಆಧಾರಿತ ಕೆಲಸಗಳಲ್ಲಿ ಮಕ್ಕಳು ದುಡಿಯು ವುದನ್ನು ಕಾನೂನಾತ್ಮಕಗೊಳಿಸುವುದರಿಂದ ಬಾಲಕಾರ್ಮಿಕತೆಯನ್ನೇ ಕಾಣದಂತೆ ಮಾಡುತ್ತದೆ. ಮಕ್ಕಳಿಗೆ ನಿಜವಾಗಿಯೂ ಅನುಕೂಲವಾಗುತ್ತದೆಯೇ?

ವಂಚಿತ ಜಾತಿ ಮತ್ತು ಸಮುದಾಯಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಸೂಕ್ಷ್ಮತೆಯೇ ಇಲ್ಲದ ಈ ಮಸೂದೆಯು ತನ್ನ ಮೂಲೊದ್ದೇಶವಾದ ಮಕ್ಕಳನ್ನು ಅವರ ಶಿಕ್ಷಣದ ಹಕ್ಕನ್ನು ಸವಿಯಲು ಬಿಡುವುದರಿಂದಲೇ ವಿಮುಖವಾಗಿಬಿಡುತ್ತದೆ. ಮಕ್ಕಳು ಶಾಲಾ ಸಮಯದ ಮೊದಲು ಮತ್ತು ನಂತರ ಕೆಲಸಗಳಲ್ಲಿ ಭಾಗವಹಿಸುವುದಕ್ಕೆ ಅವಕಾಶ ನೀಡುವ ಮೂಲಕ ಆ ಮಕ್ಕಳು ಉಳ್ಳವರ ಕುಟುಂಬದ ಮಕ್ಕಳಂತೆ ಅಭಿವೃದ್ಧಿ ಮತ್ತು ಪ್ರಜೆಗಳಾಗಿ ಆನಂದಿಸುವ ಆಯ್ಕೆ ಮತ್ತು ಅವಕಾಶಗಳಿಂದ ವಂಚಿತರಾಗುತ್ತಾರೆ. ಇಂತಹ ನಿಯಮ ಸದ್ಯ ಸಮಾಜದಲ್ಲಿರುವ ಇರುವ ಅಸಮಾನತೆ ಮತ್ತು ತಾರತಮ್ಯವನ್ನು ಹೆಚ್ಚಿಸಲು ನೆರವಾಗುತ್ತದೆ.

ಇದು ಸಂವಿಧಾನ ಮತ್ತು ಭಾರತವೂ ಸಹಿದಾರನಾಗಿರುವ ಸಂಯುಕ್ತರಾಷ್ಟ್ರದ ಮಕ್ಕಳ ಹಕ್ಕು ಸಮಾವೇಶವು ದೃಢಪಡಿಸುವ ಎಲ್ಲಾ ಮಕ್ಕಳಿಗೆ ನ್ಯಾಯಸಮ್ಮತ ಬಾಲ್ಯ ಮತ್ತು ಘನತೆಯಿಂದ ಬದುಕುವ ಹಕ್ಕಿಗೆ ವಿರುದ್ಧವಾಗಿದೆ.
ಅದರ ಬದಲು ಮಸೂದೆಯು ಮಕ್ಕಳು ಅವರ ಶಾಲಾ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡುವ ಮತ್ತು ಅವರ ಒಟ್ಟಾರೆ ಸ್ವಾಭಿಮಾನ ಮತ್ತು ಘನತೆಯನ್ನು ಹೆಚ್ಚು ಮಾಡುವಂತಹ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸಬೇಕಿತ್ತು.

ಯಾರ ಹಿತಾಸಕ್ತಿಗಾಗಿ ಈ ಮಸೂದೆ?

ಮಕ್ಕಳನ್ನು ಸಂಪೂರ್ಣವಾಗಿ ಕೆಲಸದಿಂದ ತೆಗೆಯದಂತೆ ನೋಡಿ ಕೊಳ್ಳುವ ಈ ಪ್ರತಿರೋಧ ಅಷ್ಟಕ್ಕೂ ಬಂದಿದ್ದಾದರೂ ಎಲ್ಲಿಂದ? ಶೇ. 99 ಮಕ್ಕಳನ್ನು ಶಾಲೆಗಳಲ್ಲಿ ದಾಖಲು ಮಾಡಿರುವುದರಿಂದ ವಂಚಿತ ಸಮುದಾಯಗಳ ಹೆತ್ತವರೂ ಕೂಡಾ ತಮ್ಮ ಮಕ್ಕಳನ್ನು ಸುಶಿಕ್ಷಿತರಾಗಿ ಮಾಡಲು ಬಯಸಿದ್ದಾರೆ ಎಂಬುದು ಸ್ಪಷ್ಟ ಮತ್ತು ತಮ್ಮ ಮಕ್ಕಳನ್ನು ಶಾಲೆಯಲ್ಲಿ ಉಳಿಸಲು ಅವರು ಎಲ್ಲಾ ತ್ಯಾಗವನ್ನೂ ಮಾಡುತ್ತಾರೆ. ಹಾಗಾಗಿ ಮಕ್ಕಳು ಶಾಲಾ ಸಮಯದ ನಂತರ ದುಡಿಯಬಹುದು ಎಂಬ ಷರತ್ತನ್ನು ಇಡಬೇಕು ಎಂಬ ಒತ್ತಾಯ ಬಡವರ್ಗದಿಂದ ಬರಲು ಸಾಧ್ಯವಿಲ್ಲ. ಇದರ ಲಾಭವನ್ನು ಪಡೆಯುವವರು ಗುಡಿಕೈಗಾರಿಕೆಯಂತಹ ಅನೌಪಚಾರಿಕ ಕ್ಷೇತ್ರದಲ್ಲಿ ಹಣ ಮಾಡುತ್ತಿರುವ ಮಾಲಕರು ಮತ್ತು ಗುತ್ತಿಗೆದಾರರು. ಹಾಗಾದರೆ ಇದು ಗುಡಿಕೈಗಾರಿಕೆಯ ಜನಬಲದ ಮೇಲೆ ಅವಲಂಬಿತವಾಗಿರುವ ಖಾಸಗಿ ಕ್ಷೇತ್ರದ ಒತ್ತಡದ ಪರಿಣಾಮವಾಗಿರಬಹುದೇ? ಅಥವಾ ಮಕ್ಕಳ ಹಕ್ಕಿನ ಬಗ್ಗೆ ಸೂಕ್ಷ್ಮತೆಯೇ ಇಲ್ಲದ ಮತ್ತು ಸಾಂಪ್ರದಾಯಿಕ ಕೌಶಲ್ಯ ಮತ್ತು ಕಲೆಗಳನ್ನು ಶಾಶ್ವತಗೊಳಿಸಲು ಒತ್ತಾಯಿಸುವ ಮತ್ತು ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಎರಡನೇ ಬಾರಿ ಯೋಚಿಸದ ನಮ್ಮ ರಾಜಕಾರಣಿಗಳ ಕೈವಾಡವಿರಬಹುದೇ?

ತರುಣ ಬಾಲಕಾರ್ಮಿಕರಿಗೆ ಅನ್ಯಾಯ

ಈ ಮಸೂದೆಯಲ್ಲಿ ತರುಣ ಬಾಲಕಾರ್ಮಿಕರು ಅಂದರೆ 14-18ರ ಹರೆಯದ ಮಕ್ಕಳೂ ಉದ್ಯೋಗದಲ್ಲಿ ಪಾಲ್ಗೊಳ್ಳುವುದನ್ನು ನಿಷೇಧಿಸಲಾಗಿದೆ. ಕಾಯ್ದೆಯಡಿ ಪ್ರಾಯದ ಮಿತಿಯನ್ನು ವಿಸ್ತರಿಸಿರುವುದು ಒಂದು ಗುಣಾತ್ಮಕ ಅಂಶವಾಗಿ ನೋಡಬೇಕು. ಆದರೆ ಇದು ಬಾಲಕಾರ್ಮಿಕರು 1948ರ ಫ್ಯಾಕ್ಟರಿ ಕಾಯ್ದೆಯಡಿ ಉಲ್ಲೇಖವಾಗಿರುವಂತೆ ಗಣಿಗಳಲ್ಲಿ, ಉರಿಯುವ ವಸ್ತುಗಳ ತಯಾರಿಕೆಯಲ್ಲಿ ಅಥವಾ ಸ್ಫೋಟಕ ತಯಾರಿಕೆಗಳಲ್ಲಿ ಮತ್ತು ಇತರ ಅಪಾಯಕಾರಿ ಕೆಲಸಗಳನ್ನು ಮಾಡದಂತೆ ನಿಷೇಧಿಸುತ್ತದೆ. ಹಾಗಾಗಿ ಇದು ವಾಸ್ತವದಲ್ಲಿ ತಾರುಣ್ಯದ ಬಾಲಕಾರ್ಮಿಕರು ಇತರೆಲ್ಲ ಕ್ಷೇತ್ರಗಳಲ್ಲಿ ದುಡಿಯಲು ಅನುಮತಿ ನೀಡಿದೆ. ಯುವ ಬಾಲಕಾರ್ಮಿಕರು ಕಟ್ಟಡ ಕಾಮಗಾರಿಯಿಂದ ಹಿಡಿದು ಗಿರಣಿ ಅಂಗಡಿಗಳು ಮತ್ತು ಗದ್ದೆಗಳಲ್ಲಿ ಹಾಗೂ ಇತರೆಡೆಗಳಲ್ಲಿ ಅನುಭವಿಸುವ ಶೋಷಣೆ ಮತ್ತು ಕಿರುಕುಳ ಹೆಚ್ಚಾಗಿದ್ದು, ತಮ್ಮ ಮೂಲಭೂತ ಅಗತ್ಯ ಮತ್ತು ಉಳಿವಿನ ಹೋರಾಟದಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸುತ್ತಾರೆ.

ಅಂತಹ ಮಕ್ಕಳು ಅನಾರೋಗ್ಯಪೀಡಿತರಾಗಿದ್ದು ತಮ್ಮ ಸಾಮರ್ಥ್ಯವು ಸಂಪೂರ್ಣವಾಗಿ ಕ್ಷೀಣಿಸುವವರೆಗೂ ದುಡಿಯುತ್ತಲೇ ಇರುತ್ತಾರೆ. ಹೆತ್ತವರಿಗೆ ಸಾಮಾಜಿಕ ರಕ್ಷಣೆ, ಆಹಾರ ಭದ್ರತೆ, ಉದ್ಯೋಗ, ಜಾಗತಿಕ ಆರೋಗ್ಯರಕ್ಷೆ, ಸಾಲದ ಸವಲತ್ತು ಮತ್ತು ಬೆಂಬಲ ನೀಡಲು ಸರಕಾರ ವಿಫಲವಾಗಿರುವ ಕಾರಣ ಅವರ ಹೊರೆ ಮಕ್ಕಳ ಮೇಲೆ ಬಿದ್ದಿದೆ. ಸರಕಾರದ ನಿಷ್ಕ್ರಿಯತೆಯು ಯುವಮಕ್ಕಳ ಇಡೀ ತಲೆಮಾರು ಮತ್ತಷ್ಟು ಸೀಮಿತತೆಗೊಳಪಟ್ಟು ಸರಕಾರದ ಸಂಪನ್ಮೂಲ ಮತ್ತು ಕ್ರಿಯೆಯ ಅಧಿಕಾರಯುತ ಭಾಗವನ್ನು ಪಡೆಯುವುದರಿಂದ ವಂಚಿತವಾಗುತ್ತದೆ. ಪೋಲು ಮಾಡಿದ ಅವಕಾಶ

ಯುವಬಾಲಕರನ್ನು ಅಪಾಯಕಾರಿ ಉದ್ಯೋಗಗಳಲ್ಲಿ ನಿಷೇಧಿಸಿರುವ ಉದ್ದೇಶ ಮತ್ತು ಕಾರಣಗಳ ಬಗ್ಗೆ ಮಸೂದೆಯಲ್ಲಿ ಹೇಳಿಕೆ ನೀಡುತ್ತಾ ಅದು ಕನಿಷ್ಠ ಪ್ರಾಯದ ಬಗೆಗಿನ ಐಎಲ್‌ಒ ಸಮಾವೇಶ 138 (1973) ಮತ್ತು ಬಾಲಕಾರ್ಮಿಕತೆಯ ಕೆಟ್ಟ ವಿಧಗಳ ಬಗೆಗಿನ ಸಮಾವೇಶ (1999) 182ರ ಅನ್ವಯವಾಗಿರುತ್ತದೆ ಎಂದು ತಿಳಿಸಲಾಗಿತ್ತು. ಭಾರತ ಮತ್ತು ಎಸ್ಟೋನಿಯಾ, ಈ ಎರಡು ದೇಶಗಳು ಸಮಾವೇಶ 182ರನ್ನು ಇನ್ನೂ ಕೂಡಾ ಅಂಗೀಕರಿಸಿಲ್ಲ ಮತ್ತು ಸಮಾವೇಶ 138ನ್ನು ಅಂಗೀಕರಿಸದ 15 ದೇಶಗಳಲ್ಲಿ ಭಾರತವೂ ಒಂದು.
ಯುವಮಕ್ಕಳನ್ನು ಉದ್ಯೋಗದಿಂದ ಬಿಡುಗಡೆ ಮಾಡುವಂತಹ ಸಂಕೀರ್ಣ ವಿಷಯವನ್ನು ಪ್ರಸ್ತಾಪಿಸಲು ಪೂರ್ಣಮನಸ್ಸಿನಿಂದ ಮಾಡಿದಂತಹ ಕಾನೂನಾತ್ಮಕ ರೂಪುರೇಷೆಯ ಅಗತ್ಯವಿದ್ದು, ಕೇವಲ ಅಂತಾರಾಷ್ಟ್ರೀಯ ಬಾಧ್ಯತೆಯನ್ನು ತೃಪ್ತಿಪಡಿಸಲು ತೋರಿಕೆಯ ಪ್ರಯತ್ನ ಮಾಡಿದರೆ ಸಾಲದು.

ಕುಟುಂಬದಲ್ಲಿ ಮಕ್ಕಳು ಶಾಲಾಸಮಯದ ನಂತರ ದುಡಿಯಬಹುದು ಮತ್ತು ಯುವಬಾಲಕಾರ್ಮಿಕತೆಯನ್ನು ಕಾನೂನಾತ್ಮಕಗೊಳಿಸುವ ಈ ಮಸೂದೆಯ ಪರಿಣಾಮವಾಗಿ ಭಾರತೀಯ ಮಕ್ಕಳು ಘನತೆ ಮತ್ತು ಸ್ವಾತಂತ್ರ್ಯ ಜೀವನಕ್ಕಾಗಿ ನಡೆಸುತ್ತಿರುವ ಹೋರಾಟದಲ್ಲಿ ಮತ್ತೊಮ್ಮೆ ಸೋಲನ್ನನುಭವಿಸಿದ್ದಾರೆ. ಖಂಡಿತವಾಗಿಯೂ, ಭಾರತದ ಪ್ರಜಾಪ್ರಭುತ್ವದಲ್ಲಿ ಅತ್ಯಂತ ಸೀಮಿತಗೊಳಿಸಲ್ಪಟ್ಟ ಮಕ್ಕಳಿಗೆ ನ್ಯಾಯ ಒದಗಿಸುವ ಅವಕಾಶವನ್ನು ಇದರಿಂದಾಗಿ ಕಳೆದುಕೊಂಡಂತಾಗಿದೆ.
ಮಕ್ಕಳು ಶಾಲಾಸಮಯದ ನಂತರ ದುಡಿಯಲು ಅವಕಾಶ ನೀಡುವ ಮಸೂದೆ ಬಗ್ಗೆ ವಿರೋಧ ವ್ಯಕ್ತಪಡಿಸದಿರುವುದು ಮತ್ತು ಯುವಮಕ್ಕಳು ಸೇರಿದಂತೆ ಎಲ್ಲಾ ಮಕ್ಕಳನ್ನು ಕಾರ್ಮಿಕತೆಯಿಂದ ಮುಕ್ತಗೊಳಿಸುವಂತೆ ನಮ್ಮ ಸಂಸದರು ಸರಕಾರವನ್ನು ಕೇಳದಿರುವುದು ನಾಚಿಕೆಗೇಡು. ಬಾಲಕಾರ್ಮಿಕತೆಯನ್ನು ಒಮ್ಮೆಲೇ ತೆಗೆದುಹಾಕುವುದು ಮತ್ತು ಬಾಲಕಾರ್ಮಿಕ ಪದ್ಧತಿಯನ್ನು ಭಾರತದ ಇತಿಹಾಸದ ಭಾಗವಾಗಿ ಮಾಡುವುದು ಇನ್ನೂ ಕೂಡಾ ಮರೀಚಿಕೆಯಾಗಿಯೇ ಉಳಿದಿದೆ.

Writer - ಶಾಂತ ಸಿನ್ಹಾ

contributor

Editor - ಶಾಂತ ಸಿನ್ಹಾ

contributor

Similar News