ಗಾಂಧೀ ಹಂತಕರ ಕಾನೂನು ನೆರವಿಗೆ ನಿಧಿ ಸಂಗ್ರಹದಲ್ಲಿ ಬಿಜೆಪಿ ಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಪಾತ್ರ
ಹೊಸದಿಲ್ಲಿ, ಜು.30: ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹತ್ಯೆಯಲ್ಲಿ ಆರೆಸ್ಸೆಸ್ ಪಾತ್ರದ ಬಗ್ಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಒಂದು ಹೇಳಿಕೆ ಇತ್ತೀಚೆಗೆ ಸಾಕಷ್ಟು ಚರ್ಚೆಗೆ ಆಸ್ಪದ ನೀಡಿತ್ತು. ಗಾಂಧೀಜಿ ಹತ್ಯೆಯಲ್ಲಿ ಹಿಂದೂ ಮಹಾಸಭಾ ಕಾರ್ಯಕರ್ತರು ದೋಷಿಗಳೆಂದು ಪರಿಗಣಿತರಾಗಿದ್ದರೂ, ಆರೆಸ್ಸೆಸ್ ಹಾಗೂ ಹಿಂದೂ ಮಹಾಸಭಾ ನಡುವಿನ ಸಂಬಂಧದ ಬಗ್ಗೆ ಹಲವು ಪ್ರಶ್ನೆಗಳಿವೆ. ತಾನು ಮಹಾಸಭಾಗಿಂತ ಸೈದ್ಧಾಂತಿಕವಾಗಿ ಭಿನ್ನವೆಂದು ಆರೆಸ್ಸೆಸ್ ಹೇಳಿಕೊಳ್ಳುತ್ತಿದೆಯಾದರೂ ಎರಡು ಸಂಘಟನೆಗಳೂ ಆತ್ಮೀಯವಾಗಿದ್ದವೆಂದು ಇತಿಹಾಸದ ದಾಖಲೆಗಳು ತಿಳಿಸುತ್ತವೆ.
ಹಿರಿಯ ಬಿಜೆಪಿ ನಾಯಕ ಶ್ಯಾಮ್ ಪ್ರಸಾದ್ ಮುಖರ್ಜಿಯವರು ಗಾಂಧಿ ಹತ್ಯೆ ಆರೋಪಿಗಳಿಗೆ ಕಾನೂನು ನೆರವು ನೀಡಲು, ನಿಧಿ ಸಂಗ್ರಹಿಸಲು ತಮ್ಮ ಪಕ್ಷದ ಮೂಲಕ ಪ್ರಯತ್ನಿಸಿದ್ದರು ಎಂದು ತಿಳಿದು ಬರುತ್ತದೆ. ಈ ಬಗ್ಗೆ ಮುಖರ್ಜಿ ಮೇ 4,1948 ರಲ್ಲಿ ಸರ್ದಾರ್ ಪಟೇಲ್ ಅವರಿಗೆ ಪತ್ರವೊಂದನ್ನೂ ಬರೆದು ಗಾಂಧೀಜಿ ಹತ್ಯೆ ನಂತರ ಬಂಧಿತರಾಗಿದ್ದ ಹಿಂದೂ ಮಹಾಸಭಾ ಸದಸ್ಯರನ್ನು ಬಿಡುಗಡೆಗೊಳಿಸುವಂತೆ ವಿನಂತಿಸಿದ್ದರಲ್ಲದೆ, ಆರೆಸ್ಸೆಸ್ ಕಾರ್ಯಕರ್ತರ ಭವಿಷ್ಯದ ಬಗ್ಗೆಯೂ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದು ಹೇಳಿದ್ದರು.
ಆರೆಸ್ಸೆಸ್ ಹಾಗೂ ಹಿಂದೂ ಮಹಾಸಭಾ ನಡುವೆ ಸೈದ್ಧಾಂತಿಕ ಹಾಗೂ ಸಂಘಟನಾತ್ಮಕ ಸಂಬಂಧಗಳಿರದೇ ಹೋಗಿದ್ದಲ್ಲಿ ಮುಖರ್ಜಿ ಈ ಬಗ್ಗೆ ಬರೆಯುತ್ತಿದ್ದರೇ ಎಂಬುದು ಈಗಿನ ಪ್ರಶ್ನೆಯಾಗಿದೆ ಎಂದು ಕ್ಯಾಚ್ ನ್ಯೂಸ್ ವರದಿಯೊಂದು ತಿಳಿಸಿದೆ.
ಮುಖರ್ಜಿ ಪತ್ರಕ್ಕೆ ತಮ್ಮ ಉತ್ತರದಲ್ಲಿ ಪಟೇಲ್ ಸೆಪ್ಟೆಂಬರ್ 1948 ರಲ್ಲಿ ಬರೆದ ಪತ್ರದಲ್ಲಿ ಮಹಾಸಭಾದ ಸಾಕಷ್ಟು ಸದಸ್ಯರು ದುರಂತದ ಬಗ್ಗೆ ಸಂತಸ ವ್ಯಕ್ತಪಡಿಸಿ ಸಿಹಿತಿಂಡಿ ವಿತರಿಸಿದ್ದರು ಎಂಬ ಬಗ್ಗೆ ನಾವು ಕಣ್ಣು ಮುಚ್ಚಿ ಕುಳಿತುಕೊಳ್ಳಲು ಸಾಧ್ಯವಿಲ್ಲ, ಎಂದು ಬರೆದಿದ್ದರು.
ದಿಲ್ಲಿ ಪೊಲೀಸರ ನವೆಂಬರ್ 29, 1947ಸಿಐಡಿ ಇಲಾಖೆ ವರದಿಯೊಂದರಲ್ಲಿ ಬರೆದಿರುವಂತೆ ಆರೆಸ್ಸೆಸ್ ಹಾಗೂ ಮಹಾಸಭಾ ಮುಂದಿನ ಅಸೆಂಬ್ಲಿ ಚುನಾವಣೆಗಳಲ್ಲಿ ದೇಶದ ವಿವಿಧೆಡೆ ಜಂಟಿಯಾಗಿ ಸ್ಪರ್ಧಿಸಲಿವೆ ಎಂದು ಹೇಳಲಾಗಿತ್ತು. ಈ ಮೈತ್ರಿ ನಡೆದಿತ್ತೇ ಅಥವಾ ಇಲ್ಲವೇ ಎಂಬುದು ತಿಳಿದಿಲ್ಲವಾದರೂ ಎರಡೂ ಸಂಘಟನೆಗಳೂ ಜತೆಯಾಗಿಯೇ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ಯೋಚಿಸುತ್ತಿದ್ದುದು ನಿಜ, ಎಂದು ಕ್ಯಾಚ್ ನ್ಯೂಸ್ ವರದಿ ಹೇಳಿದೆ.
ಎರಡೂ ಸಂಘಟನೆಗಳ ನಡುವೆ ಇರುವ ಗೆಳೆತನದ ಬಗ್ಗೆ ಸಿಪಿಐನ ಧನ್ವಂತರಿ ಹಾಗೂ ಪಿ.ಸಿ. ಜೋಷಿಯವರು 1947 ರಲ್ಲಿ ಪ್ರಕಟಿಸಿದ್ದ ಲೇಖನ ಬ್ಲೀಡಿಂಗ್ ಪಂಜಾಬ್ ವಾರ್ನ್ಸ್ ನಲ್ಲೂ ಉಲ್ಲೇಖಗೊಂಡಿತ್ತು.