ತೀರ್ಪು ಯಾಕೆ ನಮ್ಮ ವಿರುದ್ಧವಾಯಿತು..?
ಮಹಾದಾಯಿ ನ್ಯಾಯಾಧಿಕರಣದ ಮಧ್ಯಾಂತರ ತೀರ್ಪು ನಮ್ಮ ವಿರುದ್ಧವಾಗಿದೆ..!? ಕರ್ನಾಟಕ ನೆಲ, ಜಲ, ನದಿ, ವನಗಳ ಬಗ್ಗೆ ಕಾಳಜಿ ಇಟ್ಟುಕೊಂಡ ಒಬ್ಬ ವಕೀಲನಾಗಿ ನನಗನಿಸಿದ್ದನ್ನು ನಿಮ್ಮೆಡನೆ ಹಂಚಿಕೊಳ್ಳುತ್ತಿದ್ದೇನೆ.
ಕಾವೇರಿ ನ್ಯಾಯಾಧಿಕರಣವಾಗಲಿ, ಮಹಾದಾಯಿ ನ್ಯಾಯಾಧಿಕರಣವಾಗಲಿ ಅಥವಾ ಸುಪ್ರೀಂ ಕೋರ್ಟ್ ಅಥವಾ ಯಾವುದೇ ಹೈಕೋರ್ಟುಗಳಲ್ಲಿ ಸಹಜವಾಗಿ ಸದಾ ಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾಗಿ ಯಾಕೆ ತೀರ್ಪು ಬರುತ್ತೆ? ಎನ್ನುವುದನ್ನು ಪರಾಮರ್ಶಿಸಿ ನೋಡಿ.. ನಿಮಗೆ ಸತ್ಯ ದರ್ಶನವಾಗುತ್ತದೆ..
ಕಾವೇರಿ ಇಷ್ಯೂ ತೆಗೆದುಕೊಳ್ಳಿ
ಎಂದಾದರೂ ನಮ್ಮ ವಕೀಲರು ಸಮರ್ಪಕವಾಗಿ ವಾದ ಮಂಡಿಸಿದ್ದಾರೆಯೇ..? ನ್ಯಾಯಾಲಯ ಕೇಳಿದ ದಾಖಲೆಗಳನ್ನು ನೀಡಿದ್ದಾರೆಯೇ? ಪ್ರತಿ ಸರಕಾರ ಬಂದಾಗಲೂ ವಕೀಲರು ಬದಲಾಗುತ್ತಿರುತ್ತಾರೆ.. ನಮ್ಮ ಪರ ವಾದ ಮಾಡುವವರು ಸದಾ ಕರ್ನಾಟಕದವರಲ್ಲದ ವಕೀಲರೇ..!?
ತಮಿಳುನಾಡಿನ ಪರ ಸದಾ ಪರಾಶರನ್ ಎಂಬ ಹಿರಿಯ ಮುತ್ಸದ್ದಿಯೇ ವಾದಿಸುತ್ತಾರೆ. ಯಾವುದೇ ಸರಕಾರವಿದ್ದರೂ ಕಾವೇರಿ ವಿಷಯ ಬಂದಾಗ ಇವರೇ ಶಾಶ್ವತ ವಕೀಲರು! ರಾಜ್ಯದ ಹಿತಾಸಕ್ತಿ ಬಂದಾಗ ಪರಾಶರನ್ ತಮ್ಮ ರಾಜ್ಯಕ್ಕಾಗಿ ಕಾಳಜಿಯಿಂದ ವಾದಿಸಿದರೆ ನಮ್ಮ ಹೊರರಾಜ್ಯ ವಕೀಲರು ಕೇವಲ ಫೀಜ್ ಗಾಗಿ ವಾದಿಸುತ್ತಾರೆ!!
ತಮಿಳುನಾಡಿನ ಅಧಿಕಾರಿಗಳು ಎಲ್ಲಾ ದಾಖಲಾತಿಗಳನ್ನು ವ್ಯವಸ್ಥಿತವಾಗಿ ತಮ್ಮ ವಕೀಲರಿಗೆ ಒದಗಿಸಿದರೆ ನಮ್ಮವರು ಕಾಟಾಚಾರಕ್ಕೆ ಬಂದವರಂತಿರುತ್ತಾರೆ!
ನಮ್ಮ ವಕೀಲರು ಆಗಾಗ ಬದಲಾಗುವುದರಿಂದ ಸಮಸ್ಯೆಯ ಆಳ ಅವರ ಅರಿವಿಗೆ ಪರಿಚಯವಾಗಿರುವುದೇ ಇಲ್ಲ. ಈ ಎಲ್ಲದರಿಂದಾಗಿ ನಮ್ಮ ವಾದವನ್ನು ಸಮರ್ಥವಾಗಿ ಮಂಡಿಸಲಾರದೆ, ದಾಖಲಾತಿಗಳನ್ನು ಒದಗಿಸಲಾರದೆ ಹಿಮ್ಮೆಟ್ಟುತಿದ್ದೇವೆ. ಈ ಸತ್ಯ ಅರಿಯದ ನಾವು ನ್ಯಾಯಾದಿಕರಣಗಳನ್ನು ದೂರುತ್ತೇವೆ.
ಈಗಿನ ಮಹಾದಾಯಿ ಮಧ್ಯಾಂತರ ತೀರ್ಪನ್ನೇ ನೋಡಿ.. ನ್ಯಾಯಾಧಿಕರಣಗಳು ಪಟ್ಟಿ ಮಾಡಿರುವ ನಮ್ಮ ದೌರ್ಬಲ್ಯಗಳನ್ನು ಗಮನಿಸಿ..
1. ಯೋಜನೆಗೆ ಸಂಬಂಧಿಸಿದ ತಾಂತ್ರಿಕ ಯೋಜನಾ ವರದಿ ಹಾಗೂ ತಾಂತ್ರಿಕ ಸಾಧ್ಯಾಸಾಧ್ಯತಾ ವರದಿಯನ್ನು ನ್ಯಾಯಾಧಿಕರಣಕ್ಕೆ ಸಲ್ಲಿಸಿಲ್ಲ.
2. ಪರಿಸರ ಇಲಾಖೆಯ ಅನುಮೋದನೆಯನ್ನೇ ಪಡೆಯದೆ ಸರಕಾರ ಯೋಜನೆಯ ಅನುಷ್ಠಾನಕ್ಕೆ ಮುಂದಾಗಿರುವುದು ಆಕ್ಷೇಪಾರ್ಹ.
3. ನೀರು ಪಡೆಯುವ ಸಂದರ್ಭದಲ್ಲಿ ಬರಗಾಲ ಇದೆ ಎನ್ನುವುದನ್ನು ಕರ್ನಾಟಕ ಹೇಗೆ ಸಾಬೀತುಪಡಿಸುತ್ತದೆ? ಮಳೆಯನ್ನು ಆಧರಿಸಿಯೋ ಅಥವಾ ಡ್ಯಾಂನಲ್ಲಿ ನೀರಿನ ಪ್ರಮಾಣವನ್ನು ಗಮನಿಸಿಯೋ ಎನ್ನುವುದು ಸ್ಪಷ್ಟವಾಗಿಲ್ಲ.
4. ಹೆಚ್ಚುವರಿ ನೀರಿನ ಲಭ್ಯತೆ ಇದೆ ಎನ್ನುವುದನ್ನು ಸಾಬೀತುಪಡಿಸಲು ಅಗತ್ಯ ಸಾಕ್ಷಾಧಾರಗಳನ್ನು ಒದಗಿಸಿಲ್ಲ.
5. ತಿರುವು ಯೋಜನೆಯ ಸಾಧಕ-ಬಾಧಕಗಳ ಕುರಿತು ವೈಜ್ಞಾನಿಕ ಅಧ್ಯಯನ ನಡೆಸಿಲ್ಲ. (ಆಧಾರ: ಕನ್ನಡ ಪ್ರಭ)
ಈಗ ಹೇಳಿ ನ್ಯಾಯಾಧಿಕರಣದ ತೀರ್ಪು ಯಾವ ಕಾರಣದಿಂದಾಗಿ ನಮ್ಮ ವಿರುದ್ದವಾಯಿತು..? ಇದಕ್ಕೆ ನೇರ ಹೊಣೆ ಸರಕಾರ ಮತ್ತು ನಮ್ಮ ಕಾನೂನು ಪಂಡಿತರಲ್ಲವೆ..?
ರಾಜ್ಯವೊಂದಕ್ಕೆ ತನ್ನ ನೆಲ, ಜಲ, ನದಿ, ಕಾನನಗಳನ್ನು ಕಾಪಾಡಿಕೊಳ್ಳುವ ಬಗ್ಗೆ ಕನಿಷ್ಠ ಕಾಳಜಿ, ಅವನ್ನು ನಾಡಿಗಾಗಿ ಉಳಿಸಬೇಕಾದ ಇಚ್ಛಾಶಕ್ತಿಗಳಿಲ್ಲದಿದ್ದರೆ ಜನನಾಡಿಗೆ ಇಂತಹ ಕಷ್ಟ ತಪ್ಪಿದ್ದಲ್ಲ. ಅದು ಯಾವುದೇ ಪಕ್ಷದ ಸರಕಾರವಾಗಿರಲಿ.. ಎಲ್ಲರಿಗೂ ಅನ್ವಯಿಸುತ್ತೆ.. ಇದು ನಮ್ಮ ನಾಚಿಕೆಗೇಡು.