ವಿಂಡೀಸ್ ವಿರುದ್ಧದ 2ನೆ ಟೆಸ್ಟ್‌ನಲ್ಲಿ ರಾಹುಲ್‌ಗೆ ಅವಕಾಶ

Update: 2016-07-30 18:20 GMT

ಜಮೈಕಾ, ಜು.30: ವೆಸ್ಟ್‌ಇಂಡೀಸ್ ವಿರುದ್ಧ ಇಲ್ಲಿನ ಸಬೀನಾ ಪಾರ್ಕ್‌ನಲ್ಲಿ ಶನಿವಾರ ಆರಂಭವಾದ ಎರಡನೆ ಟೆಸ್ಟ್ ಪಂದ್ಯದಲ್ಲಿ ಗಾಯಗೊಂಡಿರುವ ಭಾರತದ ಆರಂಭಿಕ ಆಟಗಾರ ಮುರಳಿ ವಿಜಯ್ ಬದಲಿಗೆ ಕನ್ನಡಿಗ ಲೋಕೇಶ್ ರಾಹುಲ್ ಅವಕಾಶ ಪಡೆದಿದ್ದಾರೆ.

ಆ್ಯಂಟಿಗುವಾದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ವೇಳೆ ವಿಂಡೀಸ್ ವೇಗಿ ಗ್ಯಾಬ್ರಿಯೆಲ್ ಬೌಲಿಂಗ್‌ನಲ್ಲಿ ವಿಜಯ್ ಹೆಬ್ಬೆರಳಿಗೆ ಗಾಯವಾಗಿತ್ತು. ಈವರೆಗೆ ಐದು ಟೆಸ್ಟ್ ಪಂದ್ಯಗಳಲ್ಲಿ ಆಡಿರುವ ರಾಹುಲ್ ಎರಡು ಶತಕ ಬಾರಿಸಿದ್ದಾರೆ. ವಿಜಯ್ ಬದಲಿಗೆ ಆಡಲಿರುವ ರಾಹುಲ್ ಅವರು ಶಿಖರ್ ಧವನ್‌ರೊಂದಿಗೆ ಇನಿಂಗ್ಸ್ ಆರಂಭಿಸಲಿದ್ದಾರೆ.

‘‘ದುರದೃಷ್ಟವಶಾತ್ ವಿಜಯ್ ಗಾಯಗೊಂಡು ಎರಡನೆ ಟೆಸ್ಟ್‌ನಿಂದ ವಂಚಿತರಾಗಿದ್ದಾರೆ. ರಾಹುಲ್ ಸದ್ಯ ಉತ್ತಮ ಫಾರ್ಮ್‌ನಲ್ಲಿದ್ದಾರೆ. ವಿಂಡೀಸ್ ವಿರುದ್ಧದ ಅಭ್ಯಾಸ ಪಂದ್ಯಗಳಲ್ಲಿ ಅವರು ಸಾಕಷ್ಟು ರನ್ ಗಳಿಸಿದ್ದಾರೆ. ರಾಹುಲ್ ಅವಕಾಶಕ್ಕಾಗಿ ಕಾಯುತ್ತಿದ್ದರು. ಅವರ ಬ್ಯಾಟಿಂಗ್ ನಿಜಕ್ಕೂ ಉತ್ತಮವಾಗಿದೆ. ಅವರು ದೊಡ್ಡ ಸ್ಕೋರ್ ಗಳಿಸಲು ಬಯಸುತ್ತಿದ್ದಾರೆ. ಅವರ ಸಾಮರ್ಥ್ಯ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ’’ಎಂದು ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

 ವಿಕೆಟ್‌ಕೀಪಿಂಗ್‌ನಲೂ ನಿಪುಣರಾಗಿರುವ ರಾಹುಲ್ ಈ ವರ್ಷಾರಂಭದಲ್ಲಿ ಆಸ್ಟ್ರೇಲಿಯ ವಿರುದ್ಧ ಸಿಡ್ನಿಯಲ್ಲಿ ಆಡಿದ್ದ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿ ಮಿಂಚಿದ್ದರು. ಆಗಸ್ಟ್‌ನಲ್ಲಿ ಶ್ರೀಲಂಕಾದ ವಿರುದ್ಧ ಎರಡನೆ ಟೆಸ್ಟ್ ಶತಕ ಬಾರಿಸಿದ್ದರು.

‘‘ರಾಹುಲ್ ಉತ್ತಮ ಆರಂಭಿಕ ಆಟಗಾರ ಮಾತ್ರವಲ್ಲ, ಉತ್ತಮ ಫೀಲ್ಡರ್ ಕೂಡ ಹೌದು. ವೃದ್ದಿಮಾನ್ ಸಹಾಗೆ ಏನಾದರೂ ಆದರೆ, ರಾಹುಲ್‌ಗೆ ವಿಕೆಟ್‌ಕೀಪಿಂಗ್ ಜವಾಬ್ದಾರಿಯನ್ನು ನೀಡಬಹುದು’’ ಎಂದು ಕೊಹ್ಲಿ ಇದೇ ವೇಳೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News