×
Ad

ಅರ್ನಾಬ್ ಗೋಸ್ವಾಮಿ ಜೋಕುಗಳು

Update: 2016-07-30 23:50 IST

► ಚಂದ್ರನೊಳಗೆ ನಿಂತು ಏಶ್ಯಾ ಖಂಡದ ಕಡೆಗೆ ನೋಡಿದರೆ ಒಂದು ವಸ್ತು ಕಾಣಿಸುತ್ತದೆ ಮತ್ತು ಒಂದು ವಸ್ತು ಕೇಳಿಸುತ್ತದೆ. ಕಾಣಿಸುವುದು ಚೀನಾ ದೇಶದ ಬೃಹತ್ ಗೋಡೆ, ಕೇಳಿಸುವುದು ಅರ್ನಾಬ್ ಗೋಸ್ವಾಮಿಯ ಬೊಬ್ಬೆ.

► ಜಗತ್ತನ್ನು ಸೃಷ್ಟಿಸಿದ ದೇವರಿಗೆ, ಇಲ್ಲಿ ಯಾರು ಸರಿ ಯಾರು ತಪ್ಪುಎಂಬುದನ್ನು ಅಂತಿಮವಾಗಿ ತೀರ್ಮಾನಿಸಿ ಬಿಡಲಿಕ್ಕಾಗಿ ಏನಾದರೊಂದು ಏರ್ಪಾಡು ಮಾಡಬೇಕೆಂದು ತೋಚಿತು. ಕೊನೆಗೆ ಅವನು ಅರ್ನಾಬ್ ಗೋಸ್ವಾಮಿಯನ್ನು ಸೃಷ್ಟಿಸಿದನು. ಅರ್ನಾಬ್ ಭೂಮಿಗೆ ಕಾಲಿಟ್ಟೊಡನೆ, ದೇವರೊಡನೆ, ನೀನು ಜಗತ್ತನ್ನು ಸೃಷ್ಟಿ ಮಾಡಿದ್ದೇ ತಪ್ಪುಎಂಬ ತೀರ್ಪು ನೀಡಿ ಬಿಟ್ಟರು.

► ಈ ಲೋಕದಲ್ಲಿ ಪತ್ನಿಯೊಡನೆ ಜಗಳ ಮಾಡಿ ಗೆಲ್ಲಬಲ್ಲ ಏಕ ಮಾತ್ರ ವ್ಯಕ್ತಿ ಅರ್ನಾಬ್ ಗೋಸ್ವಾಮಿ.

 ► ಅರ್ನಾಬ್ ಗೊಸ್ವಾಮಿಯ ಗಂಟಲಲ್ಲಿ ಒಂದು ಟರ್ಬೈನ್ ಇಟ್ಟು ಬಿಟ್ಟರೆ ಸಾಕು. ಆತನ ಧ್ವನಿಯಿಂದ, ಟೈಮ್ಸ್ ಗ್ರೂಪ್ ನವರ ಎಲ್ಲ ಕಟ್ಟಡಗಳಿಗೆ ಸಾಕಾಗುವಷ್ಟು ವಿದ್ಯುತ್ ಉತ್ಪಾದಿಸ ಬಹುದು.

► ತನಗೆ ಮಾತನಾಡುವ ಯಾವ ಅವಕಾಶವೂ ಇಲ್ಲದ ಜಾಗದಲ್ಲಿ ಅರ್ನಾಬ್ ಗೋಸ್ವಾಮಿ ಏನು ಮಾಡುತ್ತಾರೆ ಗೊತ್ತೇ? ಅವರು ಮಾತನಾಡುತ್ತಾರೆ.

►ಒಮ್ಮೆ ಅರ್ನಾಬ್ ತನ್ನ ಪತ್ನಿಗೆ ಫೋನ್ ಮಾಡಿ ಮಾತನಾಡಲು ಆರಂಭಿಸಿದರು. ಸತತವಾಗಿ ಇಪ್ಪತ್ತು ನಿಮಿಷ ಮಾತನಾಡಿದ ಬಳಿಕ ಉಸಿರಾಡುವುದಕ್ಕಾಗಿ ಅರ್ನಾಬ್ ಅರೆಕ್ಷಣ ಮೌನವಾದರು. ಆಗ ಆ ಕಡೆಯಿಂದ ಇದು ರಾಂಗ್ ನಂಬರ್ ಎಂದು ಪುರುಷ ಧ್ವನಿಯೊಂದು ಕೇಳಿಸಿತು. ಮುಂದಿನ ಇಪ್ಪತ್ತು ನಿಮಿಷಗಳ ಕಾಲ ಅರ್ನಾಬ್, ಇತರರ ಮಾತುಗಳನ್ನು ಯಾಕೆ ಕೇಳಬಾರದು ಎಂಬ ಬಗ್ಗೆ ಆ ವ್ಯಕ್ತಿಗೆ ಉಪನ್ಯಾಸ ನೀಡಿದರು.

►ಟೈಮ್ಸ್ ನೌ ಕಚೇರಿಯಿಂದ ಹೊರಡುವ ಕಿರುಚಾಟದಿಂದ ದಿಲ್ಲಿಯಲ್ಲಿ ತೀವ್ರ ಶಬ್ದ ಮಾಲಿನ್ಯ ಉಂಟಾಗಿತ್ತು. ಇದನ್ನು ಗಮನಿಸಿದ ಮಾಲಿನ್ಯ ನಿರ್ಬಂಧ ನಿಗಮದವರು, ನಿಮ್ಮ ಕಚೇರಿಯನ್ನು ಯಾವುದಾದರೂ ನಿರ್ಜನ ಪ್ರದೇಶಕ್ಕೆ ವರ್ಗಾಯಿಸಿರಿ ಎಂದು ಅರ್ನಾಬ್ ಗೋಸ್ವಾಮಿಗೆ ನೋಟಿಸ್ ಜಾರಿ ಗೊಳಿಸಿದರು. ಈ ನೋಟಿಸ್‌ಗೆ ಪ್ರತಿಕ್ರಿಯೆಯಾಗಿ ಅರ್ನಾಬ್ ಎಷ್ಟು ತೀವ್ರವಾಗಿ ಕಿರುಚಾಡಿದರೆಂದರೆ, ಪ್ರಸ್ತುತ ನಿಗಮದವರು ದಿಲ್ಲಿಯ ಜನಸಂಖ್ಯೆಯನ್ನೇ ಬೇರೆಡೆಗೆ ಸ್ಥಳಾಂತರಿಸಲು ತೀರ್ಮಾನಿಸಿದರು.

►ವಿಮಾನ ನಿಯಂತ್ರಣ ಕೇಂದ್ರಗಳಿಂದ ವಿಮಾನಗಳಿಗೆಂದು ಕಳಿಸಲಾಗುವ ಸಿಗ್ನಲ್‌ಗಳಿಗೆ ಅರ್ನಾಬ್ ಅವರ ಕಿರುಚಾಟದಿಂದಾಗಿ ತೀವ್ರ ಪ್ರತಿಕೂಲ ಪರಿಣಾಮ ಉಂಟಾಗುತ್ತಿರುವುದರಿಂದ, ಟೈಮ್ಸ್ ನೌ ಕಚೇರಿಯಿಂದ ಕೇವಲ 50 ಕಿ. ಮೀ. ದೂರ ಇದ್ದ ಪ್ರಸ್ತುತ ಕೇಂದ್ರವನ್ನು 200 ಕಿ. ಮೀ. ದೂರಕ್ಕೆ ಸ್ಥಳಾಂತರಿಸಲಾಗಿದೆ.

►ಅಂತಾರಾಷ್ಟ್ರೀಯ ಫೊಟೋಗ್ರಫಿ ಎಸೋಸಿಯೇಶನ್‌ನವರು ಅರ್ನಾಬ್ ಗೊಸ್ವಾಮಿಯ ಸಾವಿರಾರು ಫೋಟೊಗಳನ್ನು ಪರಿಶೀಲಿಸಿದ್ದು, ಬಾಯಿ ಮುಚ್ಚಿರುವ ಭಂಗಿಯಲ್ಲಿ ಆತನ ಒಂದೇ ಒಂದು ಫೋಟೊ ಅವರಿಗೆ ಈ ತನಕ ಸಿಕ್ಕಿಲ್ಲ. ಆದ್ದರಿಂದ ಅವರು, ತೀರಾ ಅಪರೂಪಕ್ಕೆ ಬಾಯಿ ಮುಚ್ಚುವ ಅರ್ನಾಬ್ ರನ್ನು ಬಾಯಿ ಮುಚ್ಚಿರುವ ಭಂಗಿಯಲ್ಲಿ ಚಿತ್ರೀಕರಿಸುವವರಿಗೆ ಒಂದು ಮಿಲಿಯನ್ ಡಾಲರ್ ಬಹುಮಾನ ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News