ಜಾನಕಿ ಬ್ರಹ್ಮಾವರಗೆ ‘ವಿಶುಕುಮಾರ್’ ಪ್ರಶಸ್ತಿ ಪ್ರದಾನ

Update: 2016-07-31 14:41 GMT

ಉಡುಪಿ, ಜು.31: ತುಳು ಮತ್ತು ಕನ್ನಡದ ಖ್ಯಾತ ಸಾಹಿತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕೆ ಎಂ.ಜಾನಕಿ ಬ್ರಹ್ಮಾವರ ಅವರಿಗೆ ಮಂಗಳೂರಿನ ಯುವವಾಹಿನಿ ಕೇಂದ್ರ ಸಮಿತಿ ವತಿಯಿಂದ 2016ನೇ ಸಾಲಿನ ‘ವಿಶುಕುಮಾರ್ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಅಜ್ಜರಕಾಡಿನಲ್ಲಿರುವ ಆರೂರು ಲಕ್ಷ್ಮೀನಾರಾಯಣ ರಾವ್ ಸಭಾಂಗಣ (ಪುರಭವನ)ದಲ್ಲಿ ನಡೆದ ಯುವವಾಹಿನಿಯ 29ನೇ ವಾರ್ಷಿಕ ಸಮಾವೇಶದ ಸಂದರ್ಭದಲ್ಲಿ ಜಾನಕಿ ಬ್ರಹ್ಮಾವರ ಅವರಿಗೆ ವಿಶುಕುಮಾರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಹಿರಿಯ ತುಳು ಜನಪದ ವಿದ್ವಾಂಸ, ಧರ್ಮಸ್ಥಳ ರಾಮಕ್ಷೇತ್ರ ಉಡುಪಿ ಸಮಿತಿ ಎಜುಕೇಷನ್ ಟ್ರಸ್ಟ್‌ನ ಕಾರ್ಯಾಧ್ಯಕ್ಷರಾದ ಬನ್ನಂಜೆ ಬಾಬು ಅಮೀನ್ ಅವರು ಜಾನಕಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಬನ್ನಂಜೆ ಬಾಬು ಅಮೀನ್, ಬಿಲ್ಲವ ಸಮಾಜಕ್ಕೆ ಇಂದು ನಾಯಕತ್ವದ ಕೊರತೆ ಇದೆ. ಯುವಕರು ಶಿಕ್ಷಣ ಪಡೆಯುವ ಮೂಲಕ ಸ್ವತಂತ್ರ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಜಾನಕಿ ಬ್ರಹ್ಮಾವರ,ಬಿಲ್ಲವ ಯುವಕರು ಯಾರದೋ ಪ್ರಚೋದನೆಗೆ ಒಳಗಾಗಿ ತಮ್ಮ ಜೀವನವನ್ನು ಹಾಳುಮಾಡಿ ಕೊಳ್ಳುವ ಬದಲು ಯುವವಾಹಿನಿಯಂಥ ಸಂಘಟನೆ ಜೊತೆ ಸೇರಿ ಸಮಾಜಕ್ಕೆ ಉಪಯುಕ್ತರಾಗಿ ಬದುಕುವುದಕ್ಕೆ ಮುಂದಾಬೇಕು ಎಂದು ಕಿವಿಮಾತು ಹೇಳಿದರು.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಹಾಗೂ ನಿವೃತ್ತ ಪ್ರಾಂಶುಪಾಲ ರಾದ ಡಾ.ಮಾಧವಿ ಭಂಡಾರಿ ಹಾಗೂ ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ.ಸುವರ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಸಂತೋಷ ಕುಮಾರ್ ಸ್ವಾಗತಿಸಿದರೆ, ಟಿ.ಶಂಕರ ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಲೇಖಕಿ ಬಿ.ಎಂ. ರೋಹಿಣಿ ಪ್ರಶಸ್ತಿಯ ಕುರಿತು ಮಾತನಾಡಿದರೆ, ಸಾಧು ಪೂಜಾರಿ ಸನ್ಮಾನಿತರನ್ನು ಪರಿಚಯಿಸಿದರು. ನರೇಂದ್ರ ಕೆರೆಕಾಡು ಹಾಗೂ ಅಮಿತಾಂಜಲಿ ಕಿರಣ್ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News