ರಾಬಿತಾ ಸೂಸೈಟಿಯ 'ಕ್ಲೀನ್ ಭಟ್ಕಳ ಗ್ರೀನ್ ಭಟ್ಕಳ' ಮತ್ತು ರಸ್ತೆ ಸುರಕ್ಷಾ ಯೋಜನೆಗೆ ಚಾಲನೆ

Update: 2016-07-31 14:49 GMT

ಭಟ್ಕಳ,ಜು.31: ಇಲ್ಲಿನ ಅನಿವಾಸಿ ಭಾರತೀಯರ ರಾಬಿತಾ ಸೂಸೈಟಿಯು ತನ್ನ ಬಹು ಮಹತ್ವಕಾಂಕ್ಷಿಯ 'ಕ್ಲೀನ್ ಭಟ್ಕಳ ಗ್ರೀನ್ ಭಟ್ಕಳ' ಮತ್ತು ರಸ್ತೆ ಸುರಕ್ಷಾ ಯೋಜನೆಗೆ ಶಾಸಕ ಮಾಂಕಾಳ್ ವೈದ್ಯ ರವಿವಾರ ಸಂಜೆ ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲಾ ಮೈದಾನದಲ್ಲಿ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು "ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದ್ದು, ಇದನ್ನು ನಾಗರಿಕರು ಅರಿತುಕೊಂಡು ತಮ್ಮ ತಮ್ಮ ಪರಿಸರ ಸ್ವಚ್ಚವಾಗಿಟ್ಟುಕೊಳ್ಳುವಲ್ಲಿ ಪ್ರಯತ್ನಶೀಲರಾಗಬೇಕು" ಎಂದು ಕರೆ ನೀಡಿದರು. ರಾಬಿತಾ ಸಂಸ್ಥೆಯು ಭಟ್ಕಳವನ್ನು ಸ್ವಚ್ಚ ಹಾಗೂ ರಸ್ತೆ ಅಪಘಾತ ಮುಕ್ತ ನಗರವನ್ನಾಗಿ ಮಾಡಲು ಪಣ ತೊಟ್ಟಿದ್ದು ನಾವೆಲ್ಲರೂ ಇದಕ್ಕೆ ಕೈಜೋಡಿಸಬೇಕಾಗಿದೆ. ಮನುಷ್ಯನ ಪ್ರಾಣಕ್ಕೆ ಯಾವುದೇ ಬೆಲೆಕಟ್ಟಲು ಸಾಧ್ಯವಿಲ್ಲ. ಇಂತಹ ಮೌಲ್ಯಯುತ ಜೀವವನ್ನು ರಕ್ಷಣೆ ಮಾಡಿಕೊಳ್ಳುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದ ಅವರು ಅಸುರಕ್ಷ ಚಾಲನೆ ಗಂಭೀರ ಪರಿಣಾಮ ಬೀರಬಲ್ಲುದು ಎಂದು ಎಚ್ಚರಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖಂಡ ಡಾ.ಎಸ್.ಎಂ.ಸೈಯ್ಯದ್ ಖಲಿಲುರ್ರಹ್ಮಾನ್ ನಾವು ಅನಿವಾಸಿ ಭಾರತೀಯರು ವಿದೇಶದ ಸ್ವಚ್ಚ ವಾತವರಣದಲ್ಲಿ ಇದ್ದು ಬರುತ್ತೇವೆ. ಆದರೆ ನಾವು ನಮ್ಮ ತಾಯ್ನಾಡಿಗೆ ಮರಳಿದಾಗ ಇಲ್ಲಿ ಎಲ್ಲೆಲ್ಲೋ ಕಸ ತುಂಬಿರುವುದು ಕಂಡರೆ ತುಂಬಾ ಬೇಸರವೆನಿಸುತ್ತದೆ. ಇಸ್ಲಾಮ್ ಧರ್ಮ ಸ್ವಚ್ಚತೆಗೆ ಹೆಚ್ಚಿನ ಆಧ್ಯತೆ ನೀಡಿದ್ದು ನಾವೇಕೆ ಇದನ್ನು ಮರೆತಿದ್ದೇವೆ. ಎಲ್ಲಿ ಕಸ ಹಾಕಬೇಡಿ ಎಂಬ ಸೂಚನಾ ಫಲಕ ಇರುತ್ತದೋ ಅಲ್ಲಿಯೇ ನೂರಾರು ಪ್ಲಾಸ್ಟಿಕ್ ಚೀಲಗಳಲ್ಲಿ ಕಸ ಬಿದ್ದಿರುವುದನ್ನು ನಾನು ಕಣ್ಣಾರೆ ನೋಡಿದ್ದೇನೆ. ಇಂತಹ ಸ್ಥಿತಿ ಬದಲಾಗಬೇಕಾದರೆ ನಾನು ಮೊದಲು ನಮ್ಮನ್ನು ಬದಲಾಯಿಸಿಕೊಳ್ಳಬೇಕು ನಮ್ಮ ಜೀವನ ಪದ್ದತಿಯನ್ನು ಬದಲಾಯಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ತಂಝೀಮ್ ಉಪಾಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಪುರಸಭೆಯ ಉಪಾಧ್ಯಕ್ಷ ಡಾ.ಎಸ್.ಎಂ.ಸೈಯ್ಯದ್ ಸಲೀಮ್ ಮಾತನಾಡಿದರು.

ರಾಬಿತಾ ಸೂಸೈಟಿಯ ಪ್ರಧಾನ ಕಾರ್ಯದರ್ಶಿ ಮುಹಿದ್ದೀನ್ ರುಕ್ನುದ್ದೀನ್ ಯೋಜನೆ ಕುರಿತಂತೆ ಮಾಹಿತಿ ನೀಡಿದರು. ತಂಝೀಮ್ ಅಧ್ಯಕ್ಷ ಮುಝಮ್ಮಿಲ್ ಕಾಝಿಯಾ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಮಾರ್ ಶಾಬಂದ್ರಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಅರ್ಪಿಸಿದರು.

ಮೌಲಾನ ಇರ್ಷಾದ್ ಆಫ್ರಿಕಾ ಕುರಾನ್ ಪಠಿಸಿದರು. ಪತ್ರಕರ್ತ ಎಂ.ಆರ್.ಮಾನ್ವಿ ಕನ್ನಡ ಅನುವಾದ ಮಾಡಿ ಪವಿತ್ರಕುರಾನ್ ಮನುಷ್ಯನ ಪ್ರತಿಯೊಂದು ರಂಗದಲ್ಲಿ ಮಾರ್ಗದರ್ಶನ ನೀಡುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News