ಕೊಣಾಜೆಯಲ್ಲಿ ಜೆಸಿಐ ವತಿಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನೆ ಕಾರ್ಯಕ್ರಮ

Update: 2016-07-31 14:55 GMT

ಕೊಣಾಜೆ,ಜು.31: ಆರ್ಥಿಕವಾಗಿ ಹಿಂದುಳಿದವರು, ಬಡವರ ಸಂಕಷ್ಟಗಳಿಗೆ ಸ್ಪಂದಿಸಿ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಾ ಮುನ್ನಡೆಯುತ್ತಿರುವ ಜೆಸಿಐ ಸಂಸ್ಥೆಯ ಕಾರ್ಯ ಇತರ ಸಂಘ-ಸಂಸ್ಥೆಗಳಿಗೆ ಮಾದರಿ ಎಂದು ಮಂಗಳೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಶ್ಲಾಘಿಸಿದರು.

ಜೆಸಿಐ ಮಂಗಳಗಂಗೋತ್ರಿ ಇದರ ವತಿಯಿಂದ ಶನಿವಾರ ಕೊಣಾಜೆ ವಿಶ್ವಮಂಗಳ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆದ ಪರೀಕ್ಷಾಪೂರ್ವ ಸಿದ್ಧತಾ ತರಬೇತಿ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಡೆದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಹಲವು ಸಂಘ-ಸಂಸ್ಥೆಗಳು ನಮ್ಮ ಮುಂದಿದ್ದು ಹೆಚ್ಚಿನವು ಕೇವಲ ವೇದಿಕೆಗಳಲ್ಲಿ ಕಾರ್ಯಕ್ರಮ ನಡೆಸಲು ಸೀಮಿತ ಎನಿಸಿದೆ, ಅಂತಹ ಸಂಸ್ಥೆಗಳ ಮಧ್ಯೆ ಶಿಕ್ಷಕರೇ ಹೆಚ್ಚಿನ ಸಂಖ್ಯೆಯಲ್ಲಿರುವ ಕೊಣಾಜೆ ಜೆಸಿಐ ಬಡವರಿಗೆ ಮನೆ ನಿರ್ಮಿಸಿ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದು, ಮುಡಿಪುವಿನಲ್ಲಿ ಕನ್ನಡ ಶಾಲೆ ದತ್ತು ಸ್ವೀಕರಿಸಿ ಮಾದರಿಯನ್ನಾಗಿ ರೂಪಿಸಿದ ಕೀರ್ತಿ ಹೊಂದಿದೆ. ಇಂತಹ ಸಂಸ್ಥೆಗಳ ಬೆಳವಣಿಗೆ, ಕಾರ್ಯಕ್ರಮಗಳಿಗೆ ಎಲ್ಲರೂ ಕೈಜೋಡಿಸಿ ಸಹಕರಿಸಬೇಕು ಎಂದು ಹೇಳಿದರು.

ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹಾಜಿ ಕೆ.ಎ.ಮುನೀರ್ ಬಾವ ಮಾತನಾಡಿ, ಶೈಕ್ಷಣಿಕ, ಸಾಮಾಜಿಕ ಸೇವೆಯ ಮುಂಚೂಣಿಯಲ್ಲಿರುವ ಜೆಸಿಐ ಸರ್ಕಾರದ ವಿವಿಧ ಇಲಾಖೆಗಳಿಂದ ವಿದ್ಯಾರ್ಥಿಗಳಿಗೆ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಬೇಕಿದೆ ಎಂದು ಕಿವಿಮಾತು ಹೇಳಿದರು.

ಜೆಸಿಐ ಮಂಗಳಗಂಗೋತ್ರಿ ಅಧ್ಯಕ್ಷ ಬಾದುಶಾ ಸಾಂಬಾರ್‌ತೋಟ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಶ್ವಮಂಗಳ ವಿದ್ಯಾಸಂಸ್ಥೆಯ ಅಧ್ಯಕ್ಷ ಪ್ರೊ.ಇಸ್ಮಾಯಿಲ್, ತಾಲೂಕು ಪಂಚಾಯಿತಿ ಸದಸ್ಯೆ ಪದ್ಮಾವತಿ ಪೂಜಾರಿ, ಮಂಗಳೂರು ವಿವಿ ಮಾಜಿ ಸಿಂಡಿಕೇಟ್ ಸದಸ್ಯ ಪಿ.ವಿ.ಮೋಹನ್, ಜೆಸಿಐ ಮಾಜಿ ಅಧ್ಯಕ್ಷರಾದ ವಲೇರಿಯನ್ ಡಿಸೋಜ ಪಾವೂರು, ತ್ಯಾಗಂ ಹರೇಕಳ, ಸಲಹೆಗಾರ ಆನಂದ ಕೆ.ಅಸೈಗೋಳಿ, ಸಿದ್ದೀಕ್ ದೇರಳಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.

ಜೆಸಿಐ ಮಾಜಿ ಅದ್ಯಕ್ಷ ಪ್ರಭಾಕರ ಜೋಗಿ ಪ್ರತಿಭಾನ್ವಿತ ವಿದ್ಯಾರ್ಥಿಗಳ ಹೆಸರು ಓದಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News