ಶತಮಾನ ಕಳೆದರೂ ಬಿಲ್ಲವ ಸಮಾಜ ಇನ್ನೂ ಹಿಂದುಳಿದ ವರ್ಗವಾಗಿ ಗುರುತಿಸಿಕೊಳ್ಳುತ್ತಿರುವುದು ಖೇದಕರ : ಹರಿಕೃಷ್ಣ ಬಂಟ್ವಾಳ

Update: 2016-07-31 15:11 GMT

ಬಂಟ್ವಾಳ,ಜು.31: ಚರಿತ್ರೆಯಲ್ಲಿಯೂ ಕರಾವಳಿಯ ಬಿಲ್ಲವರಿಗೆ ಮಹತ್ವದ ಸ್ಥಾನಮಾನವಿದೆ, ಆದರೆ ಶತಮಾನ ಕಳೆದರೂ ಬಿಲ್ಲವ ಸಮಾಜ ಇನ್ನೂ ಹಿಂದುಳಿದ ವರ್ಗವಾಗಿ ಗುರುತಿಸಿಕೊಳ್ಳುತ್ತಿರುವುದು ಖೇದಕರ ಸಂಗತಿಯಾಗಿದ್ದು, ಈ ಕುರಿತು ಇಡೀ ಬಿಲ್ಲವ ಸಮಾಜ ಜಾಗೃತವಾಗಬೇಕಿದೆ ಎಂದು ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ವಕ್ತಾರರಾದ ಹರಿಕೃಷ್ಣ ಬಂಟ್ವಾಳ ಹೇಳಿದರು.

ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಭಾನುವಾರ ಬಿ.ಸಿ.ರೋಡಿನ ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ನಡೆದ "ಜಾಗೋ ಬಿಲ್ಲವಾಸ್" ಬಿಲ್ಲವ ಬ್ರಿಗೇಡ್ ನ ಉದ್ಘಾಟನಾ ಕಾರ್ಯಕ್ರಮ ದಲ್ಲಿ ಮಾರ್ಗದರ್ಶನ ಭಾಷಣ ಮಾಡಿದರು.ಬಿಲ್ಲವರು ಯಾರಹಕ್ಕನ್ನೂ ಕದಿಯುವವರಲ್ಲ, ಮತ್ತೊಬ್ಬರ ಮೇಲೆ ಹೇರುವ ಸ್ವಾರ್ಥ ಚಿಂತನೆ ಯವರಲ್ಲ,ಹಾಗಾಗಿಯೇ ಬಿಲ್ಲವ ಸಮಾಜ ರಾಜಕೀಯವಾಗಿ ಹಿಂದುಳಿದಿದೆ . ನಾರಾಯಣ ಗುರುಗಳ ಆದರ್ಶವನ್ನೇಮುಂದಿಟ್ಟುಕೊಂಡು ಇಡೀ ಬಿಲ್ಲವ ಸಮಾಜ ಮುಂದಿನ ದಿನಗಳಲ್ಲಿ ವಿಧಾನ ಸೌಧ ಮತ್ತು ಲೋಕಸಭೆಯತ್ತ ಕಣ್ಣಿಟ್ಟೇ ರಾಜಕೀಯದಲ್ಲಿ ಮುಂದುವರಿಯೋಣ ಎಂದವರು ಕರೆ ನೀಡಿದರು.

ಭಾರತಕ್ಕೆ ಸಂವಿಧಾನ ಕೊಟ್ಟ ಡಾ.ಬಿ.ಆರ್.ಅಂಬೇಡ್ಕರ್ ರೂ ಕೂಡ ಜಾತಿಪ್ರಜ್ಞೆ ಇಲ್ಲದ ಹೊರತು ಮುನ್ನಡೆ ಅಸಾಧ್ಯಎಂಬುದನ್ನು ಪ್ರತಿಪಾದಿಸಿದ್ದರು ಎಂದು ನೆನಪಿಸಿದರು.ಸೂಜಿ ಮತ್ತು ಕತ್ತರಿಯ ಕುರಿತಾಗಿ ಉಲ್ಲೇಖಿಸಿದ ಅವರು ಬಿಲ್ಲವರು ಕತ್ತರಿ ಹಿಡಿದ ನಾಯಕರ ಹಿಂದೆ ಹೋಗಿ ಛಿದ್ರಛಿದ್ರವಾಗುತ್ತಿದ್ದಾರೆ, ಹಾಗಾಗಿ ಬಿಲ್ಲವ ಸಮಾಜವನ್ನು ಒಗ್ಗೂಡಿಸುವ ಸೂಜಿಯ ನಿಯತ್ತನ್ನು ಪಾಲಿಸೋಣ ಎಂದರು.

ಜಾತಿವ್ಯವಸ್ಥೆ ಇಂದು ದೇಶದಲ್ಲಿ ಆಳವಾಗಿ ಬೇರೂರಿದ್ದು ಇದರ ಹೊರತಾದ ರಾಜಕೀಯ ಅಸಾಧ್ಯ ಎಂದ ಅವರು, ಆಮಿಷಗಳನ್ನು ಒಡ್ಡುವ ಮೂಲಕ ಬಿಲ್ಲವ ಸಮಾಜವನ್ನು ದಾರಿತಪ್ಪಿಸುವ ಮನಸ್ಸುಗಳ ಬಗ್ಗೆ ಎಚ್ಚರ ವಹಿಸಬೇಕು ಎಂದರು. ಅಸ್ತಿತ್ವದಲ್ಲಿರುವ ಹಲವು ಬಿಲ್ಲವ ಸಂಘಟನೆಗಳು ಕೇವಲ

ಗುರುಪೂಜೆ ಗಷ್ಟೇ ಸೀಮಿತವಾಗುತ್ತಿದೆ, ಆದರೆ ರಾಜಕೀಯಶಕ್ತಿಯನ್ನು ಕ್ರೋಡೀಕರಿಸಿ ಮೆರೆಯುವ ದಿನ ಆದಷ್ಟು ಬೇಗ ಬರಲಿ ಎಂದ ಅವರು, ಕೀಳರಿಮೆಯನ್ನು ಬಿಟ್ಟು ಇಚ್ಛಾಶಕ್ತಿಯಿಂದ ಮುನ್ನಡೆದಾಗ  ಯಶಸ್ಸು ಸಾಧ್ಯ ಎಂದರು.

ಬಿಲ್ಲವರ ಜೊತೆಯಲ್ಲಿ ಹಿಂದುಳಿದವರ್ಗದವರೆಂದು ಗುರುತಿಸಿಕೊಂಡಿರುವ ಕುಲಾಲರು, ಗಾಣಿಗರು,ವಿಶ್ವಕರ್ಮರು ಮತ್ತು ಭಂಡಾರಿ ಸಮುದಾಯ ತಮ್ಮ ತಮ್ಮ ಜಾತಿವ್ಯವಸ್ಥೆಯಲ್ಲಿ ಪ್ರಬಲರಾಗುವ ಕುರಿತು ಚಿಂತನೆ ನಡೆಸಬೇಕೆಂದರು. ಬಿಲ್ಲವ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು.ಮಾಜಿಶಾಸಕ ಎ.ರುಕ್ಮಯ ಪೂಜಾರಿ, ಪ್ರಮುಖರಾದ ರಾಘವ ಅಮೀನ್ , ಮಹಿಳಾ ಸಂಘದ ಅಧ್ಯಕ್ಷೆ ಭಾರತಿ ಬಿ.ಕುಂದರ್, ಶಂಕರ್ ಕಾಯರ್ ಮಾರ್, ಮಹಾಬಲ ಬಂಗೇರ, ತಿಮ್ಮಪ್ಪ ಪೂಜಾರಿ ವೇದಿಕೆಯಲ್ಲಿದ್ದರು. ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ಬೇಬಿ ಕುಂದರ್ ಸ್ವಾಗತಿಸಿದರು, ಗೋಪಾಲ ಅಂಚನ್ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News