ಅಲೆಪ್ಪೊ: ಬಂಡುಕೋರರಿಂದ ಸರಕಾರಿ ಪಡೆಗಳ ಮೇಲೆ ಹೊಸದಾಗಿ ದಾಳಿ
ಡಮಾಸ್ಕಸ್, ಆ. 1: ಪೂರ್ವ ಅಲೆಪ್ಪೊದಲ್ಲಿ ಸರಕಾರಿ ಪಡೆಗಳು ಹಾಕಿರುವ ಮುತ್ತಿಗೆಯನ್ನು ಹಿಮ್ಮೆಟ್ಟಿಸಲು ಸಿರಿಯದ ಬಂಡುಕೋರರು ಹೊಸದಾಗಿ ದಾಳಿ ನಡೆಸಿದ್ದಾರೆ.
ಅಲೆಪ್ಪೊದಲ್ಲಿ ಸುಮಾರು ಮೂರು ಲಕ್ಷ ಜನರು ಸಿಕ್ಕಿಹಾಕಿಕೊಂಡಿದ್ದಾರೆ ಎಂಬುದಾಗಿ ವಿಶ್ವಸಂಸ್ಥೆ ಅಂದಾಜಿಸಿದೆ. ಆದರೆ, ಇಲ್ಲಿ ಆಹಾರ ಮತ್ತು ವೈದ್ಯಕೀಯ ಪೂರೈಕೆಗಳ ಮಟ್ಟ ಕುಸಿಯುತ್ತಿದೆ ಎಂಬ ಭೀತಿಯನ್ನು ಅದು ವ್ಯಕ್ತಪಡಿಸಿದೆ.
ಬಂಡುಕೋರ ನಿಯಂತ್ರಣದ ಪ್ರದೇಶಗಳಿಗೆ ಸರಕಾರಿ ಪಡೆಗಳು ಹಾಕಿರುವ ಮುತ್ತಿಗೆಯನ್ನು ಹಿಮ್ಮೆಟ್ಟಿಸುವ ಉದ್ದೇಶದಿಂದ ದಾಳಿ ಆರಂಭಿಸಿದ ಮೊದಲ ಕೆಲವು ಗಂಟೆಗಳಲ್ಲೇ ಹಲವು ಸೇನಾ ನೆಲೆಗಳನ್ನು ವಶಪಡಿಸಿಕೊಂಡಿರುವುದಾಗಿ ಬಂಡುಕೋರ ಗುಂಪು ಅಹ್ರರ್ ಶಾಮ್ ಹೇಳಿದೆ.
ಬಂಡುಕೋರರು ದಾಳಿ ನಡೆಸಿರುವುದನ್ನು ಸಿರಿಯ ಸೇನೆ ಸರಕಾರಿ ಮಾಧ್ಯಮದಲ್ಲಿ ಖಚಿತಪಡಿಸಿದೆ. ಆದರೆ, ಬಂಡುಕೋರರನ್ನು ವಾಯುಪಡೆ ಶಸ್ತ್ರಾಸ್ತ್ರ ನೆಲೆಯಿಂದ ಹಿಂದಕ್ಕೆ ಅಟ್ಟಿರುವುದಾಗಿ ಅದು ಹೇಳಿದೆ ಹಾಗೂ ಬಂಡುಕೋರರು ಹಿಕ್ಮಾ ಶಾಲೆಯನ್ನು ವಶಪಡಿಸಿಕೊಂಡಿದ್ದಾರೆ ಎಂಬುದನ್ನು ನಿರಾಕರಿಸಿದೆ.
ವಿಭಜಿತ ನಗರ ಅಲೆಪ್ಪೊದ ಹೊರವಲಯದಲ್ಲಿ ಹಲವು ಕಡೆಗಳಲ್ಲಿ ಬಂಡುಕೋರರು ಮತ್ತು ಸರಕಾರಿ ಪಡೆಗಳ ನಡುವೆ ಕಾಳಗ ನಡೆಯುತ್ತಿದೆ ಎಂದು ಬ್ರಿಟನ್‌ನಲ್ಲಿ ನೆಲೆಸಿರುವ ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ತಿಳಿಸಿದೆ.