×
Ad

ಹೀಗೆ ಹೇಳಿದ ಆಧುನಿಕ ಅಮೆರಿಕದ ಮೊದಲ ಅಧ್ಯಕ್ಷೀಯ ಅಭ್ಯರ್ಥಿ!

Update: 2016-08-02 20:21 IST

ಕೊಲಂಬಸ್, ಆ. 2: ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಕ್ರಮ ನಡೆಸಲು ಯೋಜನೆ ರೂಪಿಸಲಾಗುತ್ತಿರಬಹುದು ಎಂಬ ಭೀತಿಯನ್ನು ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ವ್ಯಕ್ತಪಡಿಸಿದ್ದಾರೆ.


ಆಧುನಿಕ ಅಮೆರಿಕದ ಇತಿಹಾಸದಲ್ಲಿ ಅಧ್ಯಕ್ಷೀಯ ಅಭ್ಯರ್ಥಿಯೊಬ್ಬರು ಇಂಥ ಭೀತಿಯನ್ನು ವ್ಯಕ್ತಪಡಿಸುತ್ತಿರುವುದು ಇದೇ ಮೊದಲು!
ಈ ಆರೋಪಗಳಿಗೆ ಟ್ರಂಪ್ ತಕ್ಷಣಕ್ಕೆ ಯಾವುದೇ ಪುರಾವೆ ಒದಗಿಸಿಲ್ಲ. ಅವರ ಈ ಆರೋಪ ಶಾಂತಿಯುತ ಚುನಾವಣಾ ಸಂಪ್ರದಾಯವನ್ನು ಬೆದರಿಸುವಂತಿದೆ ಹಾಗೂ ನ್ಯಾಯೋಚಿತ ಪ್ರಜಾಸತ್ತಾತ್ಮಕ ಪ್ರಕ್ರಿಯೆಯ ಮೂಲ ಆಶಯವನ್ನೇ ಪ್ರಶ್ನಿಸುವಂತಿದೆ.


‘‘ಚುನಾವಣೆಯಲ್ಲಿ ಅಕ್ರಮ ಎಸಗುವ ಸಾಧ್ಯತೆಯಿದೆ ಎಂಬ ಭೀತಿ ನನಗಿದೆ, ಈ ವಿಷಯದಲ್ಲಿ ನಾನು ಪ್ರಾಮಾಣಿಕನಾಗಿರಬೇಕಾಗಿದೆ’’ ಎಂದು ಓಹಿಯೊ ರಾಜ್ಯದ ಕೊಲಂಬಸ್‌ನ ಟೌನ್‌ಹಾಲ್‌ನಲ್ಲಿ ತನ್ನ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್ ನುಡಿದರು. ಚುನಾವಣೆಯಲ್ಲಿ ನ್ಯಾಯೋಚಿತವಾಗಿ ಸ್ಪರ್ಧಿಸಲು ಸಾಧ್ಯವಿಲ್ಲ ಎಂಬ ಬಗ್ಗೆ ತನು ಹೆಚ್ಚು ಹೆಚ್ಚು ಸುದ್ದಿಗಳನ್ನು ಕೇಳುತ್ತಿದ್ದೇನೆ ಎಂದು ಹೇಳಿದರಾದರೂ, ಅದಕ್ಕೆ ಪುಷ್ಟಿ ನೀಡುವ ಗೋಜಿಗೆ ಹೋಗಲಿಲ್ಲ.


ಡೆಮಾಕ್ರಟ್‌ಗಳು ತಮ್ಮ ಪ್ರೈಮರಿ ಚುನಾವಣೆಯನ್ನು ಫಿಕ್ಸ್ ಮಾಡಿದ್ದಾರೆ, ಹಾಗಾಗಿಯೇ ಬರ್ನೀ ಸ್ಯಾಂಡರ್ಸ್‌ರನ್ನು ಸೋಲಿಸಲು ಹಿಲರಿ ಕ್ಲಿಂಟನ್‌ಗೆ ಸಾಧ್ಯವಾಯಿತು ಎಂಬುದಾಗಿ ಟ್ರಂಪ್ ಈ ಹಿಂದೆ ಹೇಳಿದ್ದರು.


► ಮಾಧ್ಯಮಗಳ ಮೇಲೆ ಹರಿಹಾಯ್ದ ಟ್ರಂಪ್  

►ಸಿಎನ್‌ಎನ್ ಎಂದರೆ ಕ್ಲಿಂಟನ್ ನ್ಯೂಸ್ ನೆಟ್‌ವರ್ಕ್!


ವಾಶಿಂಗ್ಟನ್, ಆ. 2: ಸಿಕ್ಕಿದವರ ಮೇಲೆಲ್ಲ ಹರಿಹಾಯುತ್ತಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಈ ಬಾರಿ ಮಾಧ್ಯಮಗಳನ್ನು ಗುರಿಯಾಗಿಸಿದ್ದಾರೆ.

ಸಿಎನ್‌ಎನ್ ಎಂದರೆ ‘ಕ್ಲಿಂಟನ್ ನ್ಯೂಸ್ ನೆಟ್‌ವರ್ಕ್’ ಎಂದು ಬಣ್ಣಿಸಿದ ಟ್ರಂಪ್, ‘ನ್ಯೂಯಾರ್ಕ್ ಟೈಮ್ಸ್’ ‘ಅಪ್ರಾಮಾಣಿಕ’ ಎಂದು ಜರಿದರು. ಅದು ತನ್ನ ಪ್ರತಿಸ್ಪರ್ಧಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಪರವಾಗಿ ನಿಂತಿದೆ ಎಂದು ಆರೋಪಿಸಿದರು.


‘‘ನ್ಯೂಯಾರ್ಕ್ ಟೈಮ್ಸ್ ನಿಜವಾಗಿಯೂ ಅಪ್ರಾಮಾಣಿಕವಾಗಿದೆ ಹಾಗೂ ಅದು ಕುಸಿಯುತ್ತಿದೆ. ಇನ್ನು ಎರಡು ಅಥವಾ ಮೂರು ವರ್ಷಗಳಿಗಿಂತ ಹೆಚ್ಚು ಅವರು ಈ ವೃತ್ತಿಯಲ್ಲಿ ಇರುವುದಿಲ್ಲ ಎಂದು ನನಗನಿಸುತ್ತದೆ. ಅವುಗಳ ಪ್ರಸಾರ ಸಂಖ್ಯೆಯನ್ನೊಮ್ಮೆ ನೋಡಿ. ಈ ಮಾಧ್ಯಮಗಳು ವಿಫಲವಾಗುತ್ತಿವೆ’’ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News