ನೀರಿನಲ್ಲಿ 2,958 ಕೋ.ರೂ.ಗಳ ಹೋಮ ಮಾಡಿತೇ ಕೇಂದ್ರ ಸರಕಾರ?

Update: 2016-08-02 15:59 GMT


 ಹೊಸದಿಲ್ಲಿ,ಆ.2: ಗಂಗಾ ನದಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ ಭಾವನಾತ್ಮಕ ನಂಟನ್ನು ಗುರಿಯಾಗಿಸಿಕೊಂಡು ಕುಟುಕುತ್ತಿರುವುದು ಪ್ರತಿಪಕ್ಷ ಮಾತ್ರವಲ್ಲ. ಬಿಜೆಪಿಯ ಎರಡು ವರ್ಷಗಳ ಆಡಳಿತದಲ್ಲಿ ನಿಗದಿಯಾಗಿದ್ದ 3,703 ಕೋ.ರೂ.ಗಳ ಪೈಕಿ 2,958 ಕೋ.ರೂ.ಗಳನ್ನು ವ್ಯಯಿಸಿಯೂ ಪವಿತ್ರ ನದಿಯ ಸ್ಥಿತಿಯನ್ನು ಉತ್ತಮಗೊಳಿಸುವಲ್ಲಿ ಯಾವುದೇ ಎದ್ದು ಕಾಣುವ ಪ್ರಗತಿಯಾಗಿಲ್ಲ ಎಂದು ಅಂಕಿಅಂಶಗಳೂ ಬೆಟ್ಟು ಮಾಡಿವೆ.


 ಭಾರೀ ಪ್ರಚಾರವನ್ನು ಪಡೆದುಕೊಂಡಿದ್ದ ‘ನಮಾಮಿ ಗಂಗೆ ’ಯೋಜನೆಯು ಹಿಂದಿನ 30 ವರ್ಷಗಳಲ್ಲಿ ಘೋಷಿಸಲಾಗಿದ್ದ ಯೋಜನೆಗಳಂತೆ ಕಾಗದದಲ್ಲಿ ಮಾತ್ರ ಉಳಿದುಕೊಂಡಿದೆ ಎನ್ನುವುದನ್ನು ನಗರದ 10ನೇ ತರಗತಿಯ ವಿದ್ಯಾರ್ಥಿನಿ ಐಶ್ವರ್ಯಾ ಶರ್ಮಾ ಮಾಹಿತಿ ಹಕ್ಕು ಕಾಯ್ದೆಯಡಿ ಪ್ರಧಾನಿ ಕಚೇರಿಗೆ ಸಲ್ಲಿಸಿದ್ದ ಅರ್ಜಿಗೆ ದೊರಕಿರುವ ಉತ್ತರವು ಈ ವಿಷಯವನ್ನು ಬಹಿರಂಗಗೊಳಿಸಿದೆ.


ಮೇ 9ರ ತನ್ನ ಅರ್ಜಿಯಲ್ಲಿ ಗಂಗಾ ಶುದ್ಧೀಕರಣ ಯೋಜನೆಗೆ ಸಂಬಂಧಿಸಿದಂತೆ ಏಳು ಪ್ರಶ್ನೆಗಳಿಗೆ ಲಕ್ನೋ ಮೂಲದ ಐಶ್ವರ್ಯಾ ಉತ್ತರವನ್ನು ಬಯಸಿದ್ದಳು. ಪ್ರಧಾನಿ ಕಚೇರಿಯು ಅರ್ಜಿಯನ್ನು ಕೇಂದ್ರ ಜಲ ಸಂಪನ್ಮೂಲಗಳು,ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಸಚಿವಾಲಯಕ್ಕೆ ಕಳುಹಿಸಿತ್ತು.
ಸಚಿವಾಲಯವು ಜು.4ರಂದು ನೀಡಿರುವ ಉತ್ತರವು,ಮೋದಿಯವರನ್ನು ಜನತೆಗೆ...ವಿಶೇಷವಾಗಿ ವಾರಣಾಸಿಯ ಜನತೆಗೆ ಹತ್ತಿರವಾಗಿಸಿದ್ದ ‘ಗಂಗಾ ಮಯ್ಯಿ ನೆ ಬುಲಾಯಾ ಹೈ(ಗಂಗಾಮಾತೆ ನನ್ನನ್ನು ಕರೆಸಿಕೊಂಡಿದ್ದಾಳೆ)’ಎಂಬ ಅವರ ಘೋಷಣೆಯು ಜನರ ಭಾವನೆಗಳನ್ನು ಬಡಿದೆಬ್ಬಿಸಿ ಮತಗಳಿಕೆಯ ತಂತ್ರ ಮಾತ್ರವಾಗಿತ್ತು ಎನ್ನುವುದನ್ನು ಸ್ಪಷ್ಟಪಡಿಸಿದೆ.


ಕಳೆದೆರಡು ವರ್ಷಗಳಲ್ಲಿ ಕೇಂದ್ರ ಸರಕಾರವು ಗಂಗಾ ಶುದ್ಧೀಕರಣಕ್ಕಾಗಿ ಮೊದಲು ನಿಗದಿಗೊಳಿಸಿದ್ದ ಮೊತ್ತವನ್ನು ಕಡಿತಗೊಳಿಸಿದ್ದಲ್ಲದೆ ಅದರಲ್ಲಿ ಹೆಚ್ಚಿನ ಹಣವನ್ನು ಬಳಸಿಕೊಳ್ಳಲೇ ಇಲ್ಲ ಎನ್ನುವುದನ್ನು ಆರ್‌ಟಿಐ ಉತ್ತರವು ವಿಷದಗೊಳಿಸಿದೆ.


ಈ ಬಗ್ಗೆ ತೀವ್ರ ನಿರಾಸೆಯನ್ನು ವ್ಯಕ್ತಪಡಿಸಿರುವ ಐಶ್ವರ್ಯಾ, ಗಂಗಾ ಶುದ್ಧೀಕರಣದ ಬಗ್ಗೆ ಮೋದಿ ಅಂಕಲ್ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಹೇಳಿದ್ದ ಮತುಗಳನ್ನು ನೆನಪಿಸಿಕೊಂಡರೆ ಈ ವಾಸ್ತವ ಅಂಶವು ನನ್ನನ್ನು ಕಕ್ಕಾಬಿಕ್ಕಿಯಾಗಿಸಿದೆ ಎಂದು ಹೇಳಿದಳು.


2016-17ನೇ ಸಾಲಿಗೆ ನಿಗದಿಗೊಳಿಸಲಾಗಿರುವ 2,500 ಕೋ.ರೂ.ಗಳ ಪೈಕಿ ವೆಚ್ಚವಾಗಿರುವ ಹಣದ ಯಾವುದೇ ವಿವರಗಳು ಸರಕಾರದ ಬಳಿಯಿಲ್ಲ.
ಈ ಮಹತ್ವದ ಯೋಜನೆಯ ಬಗ್ಗೆ ‘ಮೋದಿ ಅಂಕಲ್’ ಏಕೆ ಗಂಭೀರವಾಗಿಲ್ಲ ಎನ್ನುವುದನ್ನು ತಿಳಿಯಲು ಈ 14ರ ಬಾಲೆ ಬಯಸಿದ್ದಾಳೆ.


 ಗಂಗೆಯನ್ನು ಶುದ್ಧಗೊಳಿಸಲು ಮುಂದಿನ ಐದು ವರ್ಷಗಳಲ್ಲಿ 20,000 ಕೋ.ರೂ.ಗಳನ್ನು ವ್ಯಯಿಸುವುದಾಗಿ ಭರವಸೆಯನ್ನು ನೀಡಿದ್ದ ಮೋದಿ ಸರಕಾರವು ತನ್ನ ಭರವಸೆಯನ್ನು ಈಡೇರಿಸುವುದೇ ಎನ್ನುವುದನ್ನು ಕಾಲವೇ ಹೇಳಬೇಕು. ಸದ್ಯಕ್ಕಂತೂ ‘ಗಂಗಾ ಮಯ್ಯನೆ ಬುಲಾಯಾ ಹೈ ’ ಎಂಬ ಮೋದಿಯರ ಘೋಷಣೆಯು ‘ಗಂಗಾ ಮಯ್ಯ ಕೊ ಭುಲಾಯಾ ಹೈ (ಗಂಗಾಮಾತೆಯನ್ನು ಮರೆತುಬಿಟ್ಟಿದ್ದೇನೆ)’ಎಂಬ ರೂಪವನ್ನು ಪಡೆದುಕೊಂಡಿರುವುದಂತೂ ಹೌದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News