ಬಡ ಕಾರ್ಮಿಕರ ಮೇಲೆ ದೌರ್ಜನ್ಯವೆಸಗುವವರು...
ಮಾನ್ಯರೇ,
ಕರ್ನಾಟಕದಲ್ಲಿ ಕಾರ್ಮಿಕರ ಕೊರತೆ ವಿಪರೀತ ಆಗಿರುವುದರಿಂದ ಅಸ್ಸಾಂ ರಾಜ್ಯದ ಬಡ ಕಾರ್ಮಿಕರು ಕರ್ನಾಟಕದ ಕೃಷಿಕರ ಪಾಲಿಗೆ ವರದಾನವಾಗಿದ್ದಾರೆ. ಇವರಲ್ಲಿ ಹೆಚ್ಚಿನವರು ಹಿಂದೂ ಬುಡಕಟ್ಟು ಜನಾಂಗದವರು. ಅವರ ದುಡಿಮೆಯಿಂದಾಗಿಯೇ ಮಲೆನಾಡು ಮತ್ತು ಕರಾವಳಿಯಲ್ಲಿ ಹೆಚ್ಚಿನ ಕಾಫಿ ತೋಟ ಹಾಗೂ ಅಡಿಕೆ ತೋಟಗಳು ಸರಿಯಾಗಿ ನಡೆಯುತ್ತಿವೆ. ಆದರೂ ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲೆಯ ಅಲ್ದೂರಿನಲ್ಲಿ ಕಾಫಿ ತೋಟದ ಕೂಲಿಗಾಗಿ ಬಂದ ಅಸ್ಸಾಂನ ಕೂಲಿಯಾಳುಗಳಿಗೂ ಅವರು ಬಾಂಗ್ಲಾ ಮುಸ್ಲಿಮರೆಂದು ಆರೋಪಿಸಿ ಬಜರಂಗಿಗಳು ಅಮಾನುಷವಾಗಿ ಬಡಿದಿದ್ದಾರೆ. ಬಜರಂಗಿಗಳು ಇಂತಹ ಶ್ರಮಿಕ ವರ್ಗದವರನ್ನು ಅಮಾನುಷವಾಗಿ ಬಡಿಯುವುದು ಅವರ ಗುಪ್ತ ಅಜೆಂಡಾದ ಭಾಗವಾಗಿರುವಂತಿದೆ.
ಹಾಗಾದರೆ ಈ ಹೊರ ರಾಜ್ಯದ ಕೂಲಿಗಳ ಜಾಗದಲ್ಲಿ ಸ್ಥಳೀಯ ಬಜರಂಗಿಗಳು ಬಂದು ಕಾಫಿ ತೋಟದಲ್ಲಿ ಕೂಲಿ ಮಾಡುತ್ತಾರೆಯೇ? ಮಾನವತೆಯಿಲ್ಲದ ಇಂತಹ ಕೇಸರಿ ಪಡೆಗಳಿಗೆ ಧಿಕ್ಕಾರ. ಇಂತಹವರಿಗೆ ಧೈರ್ಯ ಇದ್ದರೆ ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲಿನ ರಾಷ್ಟ್ರೀಕೃತ ಬ್ಯಾಂಕ್ ಶಾಖೆಯಲ್ಲೂ ತುಂಬಿ ಕೊಂಡಿರುವ ಹಿಂದಿವಾಲರನ್ನು ಮುಟ್ಟಿ ನೋಡಲಿ, ಇಡೀ ದೇಶದಲ್ಲಿ ಕನ್ನಡಿಗರ ವಿರುದ್ಧ ಆಕ್ರೋಶ ವ್ಯಕ್ತವಾಗುವುದು ಖಂಡಿತ. ಈಗ ಹೆಚ್ಚಿನ ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ (ಕರ್ನಾಟಕ ಮೂಲದ ಬ್ಯಾಂಕುಗಳೂ ಸೇರಿ) ಬಿಹಾರ, ಉತ್ತರ ಪ್ರದೇಶ ಕಡೆಯ ಹಿಂದಿವಾಲಾಗಳೇ ತೂರಿಕೊಂಡಿದ್ದಾರೆ. ಕೆಳಹಂತದ ಗುಮಾಸ್ತ ಹುದ್ದೆಗಳನ್ನೂ ಅವರೇ ಕಬಳಿಸಿದ್ದಾರೆ. ಕೇವಲ ಚಪರಾಸಿ ಹುದ್ದೆಗಳು ಮಾತ್ರ ಕನ್ನಡಿಗರಿಗೆ ಸಿಗುತ್ತಿವೆ. ಕನ್ನಡಿಗರಿಗೆ ಈಗ ಕರ್ನಾಟಕದಲ್ಲಿಯೇ ಬ್ಯಾಂಕ್ ಗುಮಾಸ್ತ ನೌಕರಿಯೂ ಸಿಗುತ್ತಿಲ್ಲ. ಕನ್ನಡಿಗ ಪದವೀಧರರಿಗೂ ಯಾವುದೋ ಅಂಗಡಿಯಲ್ಲಿ ಜುಜುಬಿ ಐದು ಸಾವಿರ ರೂಪಾಯಿ ಸಂಬಳದ ಸೇಲ್ಸ್‌ಮ್ಯಾನ್ ಅಥವಾ ಡೆಲಿವೆರಿ ಬಾಯ್ ಕೆಲಸವೇ ಗತಿ.
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಗ್ರಾಹಕರು ಕನ್ನಡದಲ್ಲಿ ಮಾತನಾಡಿದರೆ ಈ ಹಿಂದಿವಾಲಾಗಳು ಕನ್ನಡಿಗರಿಗೆ ರಾಷ್ಟ್ರಭಾಷೆ ಹಿಂದಿಯಲ್ಲಿ ಮಾತನಾಡಬೇಕೆಂದು ರೋಪು ಹಾಕುತ್ತಾರೆ. ಹಾಗಿದ್ದರೂ ನಮ್ಮ ಬಜರಂಗಿಗಳಿಗೆ ಈ ಹಿಂದಿ ಬ್ಯಾಂಕ್ ಕರ್ಮಚಾರಿಗಳ ವಿರುದ್ಧ ಪ್ರತಿಭಟಿಸಲು ಧೈರ್ಯವಿಲ್ಲ. ತಮ್ಮದೇ ಮಾತೃಭಾಷೆ ಕನ್ನಡ ಅವರಿಗೆ ಗೌಣವಾಗಿದೆ. ಕೈಲಾಗದ ಬಡಕೂಲಿಯಾಳುಗಳ ವಿರುದ್ಧ ತಮ್ಮ ಪೌರುಷ ತೋರಿಸುತ್ತಿದ್ದಾರೆ.